×
Ad

ಲೋಕಸಭೆ: ಗದ್ದಲದ ಮಧ್ಯೆಯೇ 2 ಮಸೂದೆ ಅಂಗೀಕಾರ

Update: 2018-03-15 23:40 IST

ಹೊಸದಿಲ್ಲಿ, ಮಾ.15: ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಸತತ 9ನೇ ದಿನವೂ ವಿರೋಧ ಪಕ್ಷಗಳು ಪಟ್ಟುಬಿಡದೆ ಪ್ರತಿಭಟನೆ ಮುಂದುವರಿಸಿದ್ದು, ಲೋಕಸಭೆಯಲ್ಲಿ ಗದ್ದಲದ ಮಧ್ಯೆಯೇ ಗುರುವಾರ ಎರಡು ಮಸೂದೆಗಳಿಗೆ ಅಂಗೀಕಾರ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಪಿಎನ್‌ಬಿ ವಂಚನೆ ಹಗರಣ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ಬಜೆಟ್ ಅನುದಾನ ಹೆಚ್ಚಳ ಇತ್ಯಾದಿ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಗುರುವಾರ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಿ ಗದ್ದಲ ಎಬ್ಬಿಸಿದಾಗ ಎನ್‌ಡಿಎ ಕೂಟದ ಮಿತ್ರಪಕ್ಷಗಳಾದ ಟಿಆರ್‌ಎಸ್ ಹಾಗೂ ಟಿಡಿಪಿ ಸದಸ್ಯರೂ ಸೇರಿಕೊಂಡರು. ಈ ಹಂತದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದರು. ಗದ್ದಲದ ನಡುವೆಯೇ ಸರಕಾರ ಗ್ರಾಚ್ಯುವಿಟಿ ಪಾವತಿ(ತಿದ್ದುಪಡಿ) ಮಸೂದೆ ಹಾಗೂ ನಿರ್ದಿಷ್ಟ ಪರಿಹಾರ ತಿದ್ದುಪಡಿ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಿತು. ಗದ್ದಲ ಮುಂದುವರಿದಾಗ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸುಗಮ ಕಾರ್ಯಕಲಾಪಕ್ಕೆ ಅನುವು ಮಾಡಿಕೊಡಬೇಕು ಎಂದು ಸದಸ್ಯರಿಗೆ ಮನವಿ ಮಾಡಿಕೊಂಡರಲ್ಲದೆ ಸ್ವಸ್ಥಾನಕ್ಕೆ ಮರಳುವಂತೆ ಕಾಂಗ್ರೆಸ್ ಸದಸ್ಯರನ್ನು ವಿನಂತಿಸಿದರು.

ಸಂಸತ್ ದೇಶದ ಜನರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚೆ ಮಾಡುವ ಮಹಾಪಂಚಾಯತ್ ಆಗಿದೆ. ಇಲ್ಲಿ ಚರ್ಚೆ ನಡೆಯಲಿ. ಗದ್ದಲ ಎಬ್ಬಿಸುವುದು ಬೇಡ ಎಂಬ ಅವರ ಮನವಿಗೆ ಗದ್ದಲ ನಿರತ ಸದಸ್ಯರು ಕಿವಿಗೊಡಲಿಲ್ಲ. ಆಗ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ಗ್ರಾಚ್ಯುವಿಟಿ ಪಾವತಿ(ತಿದ್ದುಪಡಿ) ಮಸೂದೆಯಲ್ಲಿ ಹೆರಿಗೆ ರಜೆಯನ್ನು ಸೇವಾವಧಿ ಭಾಗ ಎಂದು ಪರಿಗಣಿಸಲು ಹಾಗೂ ಕಾಯ್ದೆಗೆ ತಿದ್ದುಪಡಿ ತಾರದೆ ಗ್ರಾಚ್ಯುವಿಟಿಗೆ ಗರಿಷ್ಟ ಪರಿಮಿತಿ ಸೂಚಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ನಿರ್ದಿಷ್ಟ ಪರಿಹಾರ ತಿದ್ದುಪಡಿ ಮಸೂದೆಯಲ್ಲಿ ವ್ಯವಹಾರ ಒಪ್ಪಂದವನ್ನು ಉಲ್ಲಂಘಿಸುವ ಪ್ರಕರಣದಲ್ಲಿ ಒಂದು ಸಂಸ್ಥೆಯು ಮತ್ತೊಂದು ಸಂಸ್ಥೆಯಿಂದ ನೇರವಾಗಿ (ನ್ಯಾಯಾಲಯದ ಪ್ರಕ್ರಿಯೆ ದೀರ್ಘಕಾಲ ನಡೆಯುವುದರಿಂದ ) ಪರಿಹಾರ ಪಡೆಯುವ ಅಧಿಕಾರವನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News