×
Ad

ಸಿರಿಯದಲ್ಲಿ ಸರಕಾರಿ ಪಡೆಗಳಿಂದ ಯುದ್ಧಾಸ್ತ್ರವಾಗಿ ಅತ್ಯಾಚಾರ

Update: 2018-03-16 23:12 IST

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಮಾ. 16: ಪ್ರತಿಪಕ್ಷಗಳಿಗೆ ಬೆಂಬಲ ನೀಡುವವರನ್ನು ಶಿಕ್ಷಿಸುವ ಕ್ರಮವೆಂಬಂತೆ, ಸಿರಿಯದ ಸರಕಾರಿ ಪಡೆಗಳು ಹಾಗೂ ಸರಕಾರದ ಪರವಾಗಿ ಹೋರಾಡುವ ಬಾಡಿಗೆ ಸೈನಿಕರು ಮಹಿಳೆಯರು, ಬಾಲಕಿಯರು ಮತ್ತು ಪುರುಷರ ಮೇಲೆ ಅತ್ಯಾಚಾರ ಮಾಡಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಗುರುವಾರ ಹೇಳಿದ್ದಾರೆ.

ಸರಕಾರಿ ಸೈನಿಕರ ಈ ಕೃತ್ಯಗಳು ಯುದ್ಧಾಪರಾಧಗಳು ಮತ್ತು ಮಾನವತೆ ವಿರುದ್ಧದ ಅಪರಾಧಕ್ಕೆ ಸಮವಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಅದೇ ವೇಳೆ, ಸಿರಿಯದ ಸುದೀರ್ಘ ಆಂತರಿಕ ಯುದ್ಧದಲ್ಲಿ ಬಂಡುಕೋರ ಗುಂಪುಗಳೂ ಲೈಂಗಿಕ ಹಿಂಸಾಚಾರದ ಕೃತ್ಯಗಳಲ್ಲಿ ತೊಡಗಿವೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಸಲ್ಲಿಸಿದ ಭಯಾನಕ ವರದಿ ಹೇಳಿದೆ. ಆದಾಗ್ಯೂ, ಸರಕಾರಿ ಪಡೆಗಳು ನಡೆಸಿರುವ ಹಿಂಸಾಚಾರಗಳಿಗೆ ಹೋಲಿಸಿದರೆ, ಬಂಡುಕೋರರು ನಾಗರಿಕರ ಮೇಲೆ ನಡೆಸಿರುವ ಹಿಂಸಾಚಾರ ತುಂಬಾ ಕಡಿಮೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಟರ್ಕಿ ದಾಳಿಯಲ್ಲಿ 18 ನಾಗರಿಕರು ಬಲಿ

  ಉತ್ತರ ಸಿರಿಯದ ಅಫ್ರಿನ್‌ನಲ್ಲಿರುವ ಕುರ್ದಿಶ್ ಪ್ರಾಬ್ಲಲ್ಯದ ಪ್ರದೇಶವೊಂದರ ಮೇಲೆ ಟರ್ಕಿ ಶುಕ್ರವಾರ ನಡೆಸಿದ ಫಿರಂಗಿ ದಾಳಿಯಲ್ಲಿ ಕನಿಷ್ಠ 18 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

‘‘ಅಫ್ರಿನ್ ನಗರದ ಮೇಲೆ ಟರ್ಕಿ ನಡೆಸುತ್ತಿರುವ ಫಿರಂಗಿ ದಾಳಿಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ಐವರು ಮಕ್ಕಳು ಸೇರಿದಂತೆ 18 ನಾಗರಿಕರು ಮೃತಪಟ್ಟಿದ್ದಾರೆ’’ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News