2017ರಲ್ಲಿ ದಲಿತ, ಮುಸ್ಲಿಮರ ವಿರುದ್ಧ 200ಕ್ಕೂ ಅಧಿಕ ದ್ವೇಷಾಧಾರಿತ ದಾಳಿಗಳು

Update: 2018-03-17 06:20 GMT

ಬೆಂಗಳೂರು, ಮಾ.17: ದಲಿತರು ಮತ್ತು ಮುಸ್ಲಿಮರ ವಿರುದ್ಧ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಯಂತಹ ದ್ವೇಷಾಧಾರಿತ ಅಪರಾಧಗಳ ಪ್ರಕರಣಗಳ ಸಂಖ್ಯೆ 2017ರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಹೇಳಿದೆ.

ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ವೆಬ್‌ಸೈಟ್ ‘ಹಾಲ್ಟ್‌ದಿ ಹೇಟ್’ನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದ ಬಳಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆಕಾರ್ ಪಟೇಲ್ ಈ ವಿವರಗಳನ್ನು ನೀಡಿದರು.

ಒಂದು ನಿರ್ದಿಷ್ಟ ಗುಂಪಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ದ್ವೇಷಾಧಾರಿತ ದೌರ್ಜನ್ಯ ನಡೆಸುವುದನ್ನು ತಡೆಯುವುದು ಮತ್ತು ಅವರಿಗೆ ನ್ಯಾಯ ಒದಗಿಸುವುದಕ್ಕಾಗಿ ಅಂತಹ ಘಟನೆಗಳನ್ನು ಬಹಿರಂಗಪಡಿಸಬೇಕು. ಇಂತಹ ಅಪರಾಧಗಳನ್ನು ಗುರುತಿಸಿ ದಾಖಲಿಸುವ ಮತ್ತು ಜನರ ಗಮನ ಸೆಳೆಯುವ ಉದ್ದೇಶವನ್ನು ‘ಹಾಲ್ಟ್ ದಿ ಹೇಟ್’ ವೆಬ್‌ಸೈಟ್ ಹೊಂದಿದೆ ಎಂದು ಆಕಾರ್ ತಿಳಿಸಿದರು.

ಮೀಸೆ ಬಿಟ್ಟದ್ದಕ್ಕಾಗಿ ದಲಿತರ ಮೇಲೆ ದಾಳಿ ಮಾಡಲಾಗುತ್ತದೆ ಮತ್ತು ಜಾನುವಾರುಗಳನ್ನು ಸಾಗಿಸಿದ್ದಕ್ಕಾಗಿ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತಿದೆ. ದಲಿತ ಮಹಿಳೆಯರನ್ನು ವೇಶ್ಯೆಯೆಂದು ಕರೆದು ಅತ್ಯಾಚಾರಗೈದು ಹತ್ಯೆಗೈಯಲಾಗುತ್ತಿದೆ. ಆದರೆ ಭಾರತದಲ್ಲಿ ದ್ವೇಷಾಧಾರಿತ ಅಪರಾಧದ ತೀವ್ರತೆಯ ಅರಿವಿಲ್ಲ. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿ ಕಾನೂನು ಇದನ್ನು ಪ್ರತ್ಯೇಕ ಅಪರಾಧ ವಿಭಾಗ ಎಂದು ಪರಿಗಣಿಸುವುದಿಲ್ಲ ಎಂದು ಅವರು ವಿಷಾದಿಸಿದರು.

ಇಂತಹ ಪ್ರಕರಣಗಳ ಕುರಿತಂತೆ ಮುಖ್ಯವಾಹಿನಿಯ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳ ವರದಿಗಳನ್ನು 'ಹಾಲ್ಟ್ ದಿ ಹೇಟ್' ವೆಬ್‌ಸೈಟ್ ದಾಖಲಿಸುತ್ತದೆ. ದಲಿತರ ವಿರುದ್ಧದ 141 ಮತ್ತು ಮುಸ್ಲಿಮರ ವಿರುದ್ಧದ 44 ದ್ವೇಷಾಧಾರಿತ ಆಪರಾಧಗಳ ಆರೋಪವನ್ನು 2017ರಲ್ಲಿ ಇದು ದಾಖಲಿಸಿದೆ. ಕನಿಷ್ಠ 146 ಜನರನ್ನು ಹತ್ಯೈಯಲಾಗಿದೆ. 35 ಘಟನೆಗಳಲ್ಲಿ ಈ ಸಮೂಹದ ಮಹಿಳೆಯರು ಅಥವಾ ಲಿಂಗಪರಿವರ್ತಿತರು ಲೈಂಗಿಕ ದೌರ್ಜನ್ಯ ಎದುರಿಸಿದ್ದಾರೆ ಎಂದು ಆಕಾರ್ ಪಟೇಲ್ ವಿವರಿಸಿದರು.

2016 ಮತ್ತು 2017ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ವರದಿಯಾಗಿವೆ. 2016ರಲ್ಲಿ 237 ದ್ವೇಷಪೂರಿತ ದಾಳಿ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ, ಹರ್ಯಾಣ, ತಮಿಳುನಾಡು, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಹೆಚ್ಚಿನ ಸಂಖ್ಯೆಯ ಘಟನೆಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News