ಐನ್ ಸ್ಟೀನ್ ಗಿಂತಲೂ ಉತ್ತಮ ಸಿದ್ಧಾಂತ ವೇದಗಳಲ್ಲಿದೆ ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದರೇ?

Update: 2018-03-17 06:50 GMT

"ಹಿಂದೂಗಳ ಪ್ರತಿಯೊಂದು ಪದ್ಧತಿ ಮತ್ತು ಸಂಪ್ರದಾಯದಲ್ಲಿ ವಿಜ್ಞಾನ ಅಡಕವಾಗಿದ್ದು, ಪ್ರತಿಯೊಂದು ಆಧುನಿಕ ಭಾರತದ ಸಾಧನೆ ನಮ್ಮ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳ ಮುಂದುವರಿದ ಭಾಗವಾಗಿದೆ. ನಾವು ಇತ್ತೀಚೆಗೆ ಖ್ಯಾತ ವಿಜ್ಞಾನಿ ಹಾಗೂ ಕಾಸ್ಮಾಲಜಿಸ್ಟ್ ಸ್ಟೀಫನ್ ಹಾಕಿಂಗ್ ಅವರನ್ನು ಕಳೆದುಕೊಂಡಿದ್ದೇವೆ. ಅವರು ಕೂಡ  ನಮ್ಮ ವೇದಗಳು ಐನ್‍ಸ್ಟೀನ್ ಅವರ  ಇ=ಎಂಸಿ^2 ಸಿದ್ಧಾಂತಕ್ಕಿಂತ ಉನ್ನತವಾಗಿರಬಹುದೆಂದು  ಹೇಳಿದ್ದರು''...... ಇದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷ ವರ್ಧನ್  ಅವರು ಇಂಫಾಲ್ ನಲ್ಲಿ ನಡೆದ 105ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಾ ನೀಡಿದ ಹೇಳಿಕೆ.

ಸಚಿವರ ಈ ಹೇಳಿಕೆ ಹಲವರಲ್ಲಿ ಗೊಂದಲ ಸೃಷ್ಟಿಸಿದೆ. ಆದರೆ ತಮ್ಮ ಹೇಳಿಕೆಯ ಬಗ್ಗೆ ಡಾ.ಹರ್ಷವರ್ಧನ್ ಅವರಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ಅವರು ಹಾರಿಕೆಯ ಉತ್ತರ ನೀಡಿದ್ದಾರೆ. ಐನ್ ಸ್ಟೀನ್ ಸಿದ್ಧಾಂತಕ್ಕಿಂತಲೂ ಉನ್ನತ ಸಿದ್ದಾಂತಗಳು ವೇದಗಳಲ್ಲಿದೆ ಎಂದು ಹಾಕಿಂಗ್ ಹೇಳಿದ್ದಾರೆಯೇ?, ಇದಕ್ಕೆ ದಾಖಲೆಗಳಿವೆಯೇ?, ಕೇಂದ್ರ ಸಚಿವರ ಹೇಳಿಕೆಯಲ್ಲಿ ಸತ್ಯಾಂಶಗಳಿವೆಯೇ ಎನ್ನುವ ಬಗ್ಗೆ altnews.in ವರದಿ ಪ್ರಕಟಿಸಿದೆ.

ಐನ್‍ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತಕ್ಕಿಂತಲೂ ಉನ್ನತವಾದ ಜ್ಞಾನ ವೇದಗಳಲ್ಲಿದೆ ಎಂಬ ವಿಚಾರ ಹೊಸತೇನಲ್ಲ ಹಾಗೂ  ಕೆಲ ಸಮಯದಿಂದ ಚಾಲ್ತಿಯಲ್ಲಿದೆ ಎಂದು altnews.in ಕಂಡುಕೊಂಡಿದೆ. www.serveveda.org ಎಂಬ ವೆಬ್‍ಸೈಟ್ ತನ್ನನ್ನು 'ಇನ್ ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ಆನ್ ವೇದಾಸ್' ಎಂದು ಕರೆದುಕೊಳ್ಳುತ್ತಿದೆ. ಅದು ನವೆಂಬರ್ 2013ರಲ್ಲಿ ಈ ಕೆಳಗಿನ ಪೋಸ್ಟ್ ಮಾಡಿತ್ತು. ಇದರಲ್ಲಿ ಡಾ.ಶಿವರಾಂಬಾಬು ಎಂಬವರು (ಸಂಘಟನಾ ಕಾರ್ಯದರ್ಶಿ ಐ-ಸರ್ವ್)  ಬರೆದ ವೇದ ವಿಜ್ಞಾನ ಕೃತಿಗಳನ್ನು ಉಲ್ಲೇಖಿಸಿ ವೇದಗಳು ಐನ್‍ ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತಕ್ಕಿಂತಲೂ ಉನ್ನತವಾಗಿರಬಹುದು ಎಂದು ಸ್ಟೀಫನ್ ಹಾಕಿಂಗ್   ಹೇಳಿದ್ದರೆಂದು ಬರೆಯಲಾಗಿದೆ.

ಆದರೆ 2011ಕ್ಕಿಂತ ಮುಂಚೆ ಹಾಕಿಂಗ್  ಈ  ಬಗ್ಗೆ ಏನಾದರೂ ಹೇಳಿದ್ದಾರಾ ಎಂದು ತಿಳಿಯಲು ಪ್ರಯತ್ನಿಸಿದಾಗ hari.scientist ಎಂಬ ಫೇಸ್ಬುಕ್ ಪುಟದಲ್ಲಿ ಮೂಲ ವಿಚಾರ ಪತ್ತೆಯಾಯಿತು. ಇದನ್ನು ಆನ್‍ಲೈನ್ ಸುದ್ದಿ ತಾಣ 'ದಿ ಪ್ರಿಂಟ್'ನ ವಿಜ್ಞಾನ ಸಂಪಾದಕ @ಸ್ಯಾಂಡಿಗ್ರೈನ್ಸ್ ಬೊಟ್ಟು ಮಾಡಿ ತೋರಿಸಿದ್ದರು.  www.serveveda.org ಲೇಖನವನ್ನು ಕೂಡ ಫೇಸ್ ಬುಕ್ ಮೂಲಕವೇ ಪತ್ತೆ ಹಚ್ಚಲಾಯಿತು.

ಸ್ಟೀಫನ್ ಹಾಕಿಂಗ್ ಅವರ ವೆಬ್ ಸೈಟನ್ನು ಪರಿಶೀಲಿಸಿದರೂ ಅಲ್ಲಿ ವೇದಗಳ ಬಗ್ಗೆ ಒಂದೇ ಒಂದು ಉಲ್ಲೇಖವಿರಲಿಲ್ಲ. ಮೇಲೆ ತಿಳಿಸಲಾದ ಫೇಸ್ ಬುಕ್ ಪುಟವೊಂದಕ್ಕೆ ಕೇವಲ 1500 ಫಾಲೋವರ್ಸ್ ಇದ್ದು, ಅದು ಹಾಕಿಂಗ್ ಅವರ ಫೇಸ್ ಬುಕ್ ಪುಟ ಎಂಬಂತೆ ಪೋಸು ನೀಡುತ್ತದೆ. ಆದರೆ ಆ ಪೇಜಿನ ಹ್ಯಾಂಡಲ್ ನಲ್ಲಿ @hari.scientist ಎಂದಿದೆ. ಆದುದರಿಂದ ಇದು ಸ್ಟೀಫನ್ ಹಾಕಿಂಗ್ ಅವರ ಅಧಿಕೃತ ಪುಟವಲ್ಲವೆಂಬುದು ಸ್ಪಷ್ಟ.

ಈ ಕೆಳಗೆ ನೀಡಲಾದ ಫೇಸ್ ಬುಕ್ ಪೋಸ್ಟ್ ನವೆಂಬರ್ 10, 2011ರದ್ದಾಗಿದೆ. ಅದು ಡಾ.ಸಕಮುರಿ ಶಿವರಾಂ ಬಾಬು ಅವರ ಸಾಧನೆ ಬಗ್ಗೆ ಹಾಗೂ ವೇದಗಳು ಐನ್‍ ಸ್ಟೀನ್ ಸಿದ್ಧಾಂತಕ್ಕಿಂತಲೂ ಉನ್ನತವಾಗಿರಬಹುದು ಎಂದು ಹೇಳುತ್ತದೆ. ಈ ಫೇಸ್ ಬುಕ್ ಪುಟವು www.serveveda.org ಲೇಖನದಲ್ಲಿಯೂ ಉಲ್ಲೇಖಗೊಂಡಿದೆ. "ಇದು ನಿಜವಾದ ಖಾತೆ ಎಂದು ನಾನ್ಯಾವತ್ತೂ ಹೇಳಿಲ್ಲ. ಅವರ ಹೆಸರಲ್ಲಿ ಖಾತೆ ತೆರೆದಿದ್ದೇನಷ್ಟೇ" ಎಂದು ಆ ಪೇಜ್ ನ ಅಡ್ಮಿನ್  ಹೇಳಿಕೊಂಡಿದ್ದಾರೆ.

ಐನ್‍ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವು  ಕ್ರಾಂತಿಕಾರಕವಾಗಿದೆಯಲ್ಲದೆ ಮಾನವರು ಖಗೋಳಶಾಸ್ತ್ರ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನಲ್ಲಿ ಹರ್ಷವರ್ಧನ್ ಅವರು ನೀಡಿರುವ ಹೇಳಿಕೆ ವಿಪರ್ಯಾಸವಲ್ಲದೆ ಮುಜುಗರ ಸೃಷ್ಟಿಸುವಂತಹದ್ದೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News