ಅಜ್ಮೀರ್ ಸಂದರ್ಶನಕ್ಕೆ ಯಾತ್ರಿಕರಿಗೆ ವೀಸಾ ನಿರಾಕರಣೆ
ಇಸ್ಲಾಮಾಬಾದ್,ಮಾ.19: ಅಜ್ಮೀರ್‌ನ ಪ್ರಸಿದ್ಧ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾವನ್ನು ಸಂದರ್ಶಿಸಲು ಬಯಸಿದ್ದ 500ಕ್ಕೂ ಅಧಿಕ ಪಾಕ್ ಯಾತ್ರಿಕರಿಗೆ ವೀಸಾಗಳನ್ನು ನೀಡದಿರುವುದಕ್ಕಾಗಿ ಭಾರತದ ವಿರುದ್ಧ ಪಾಕಿಸ್ತಾನವು ಅಸಮಾಧಾನ ವ್ಯಕ್ತಪಡಿಸಿದೆ.
2018ರ ಮಾರ್ಚ್ 19-20ರವರೆಗೆ ನಡೆಯುವ ಹಝ್ರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್‌ನಲ್ಲಿ ಭಾಗವಹಿಸುವುದಕ್ಕಾಗಿ 503 ಪಾಕಿಸ್ತಾನಿ ಯಾತ್ರಿಕರಿಗೆ ಭಾರತವು ವೀಸಾಗಳನ್ನು ನೀಡದಿರುವ ಬಗ್ಗೆ ಪಾಕಿಸ್ತಾನವು ತೀವ್ರ ಅಸಮಾಧಾನವನ್ನು ಹೊಂದಿದೆ’’ ಎಂದು ಪಾಕ್ ವಿದೇಶಾಂಗ ಇಲಾಖೆಯ ಕಾರ್ಯಾಲಯವು ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತ ನಿರ್ಧಾರದಿಂದಾಗಿ ಪಾಕಿಸ್ತಾನಿ ಯಾತ್ರಿಕರು ವಿಶೇಷ ಮಹತ್ವವಿರುವ ಈ ಉರೂಸ್‌ನಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗಿದ್ದಾರೆ ಎಂದು ಅದು ಹೇಳಿದೆ
1974ರಲ್ಲಿ ಭಾರತ-ಪಾಕ್ ನಡುವೆ ಏರ್ಪಟ್ಟ ಧಾರ್ಮಿಕ ಮಂದಿರಗಳಿಗೆ ಭೇಟಿಗಾಗಿನ ವಿಶೇಷ ಶಿಷ್ಟಾಚಾರ ಒಪ್ಪಂದದಡಿ ಅಜ್ಮೀರ್ ದರ್ಗಾದ ಉರೂಸ್ ಕಾರ್ಯಕ್ರಮಕ್ಕೆ ಪಾಕ್ ಯಾತ್ರಿಕರ ಭೇಟಿಗೆ ಅವಕಾಶ ದೊರೆಯುತ್ತಿತ್ತೆಂದು ಪಾಕ್ ವಿದೇಶಾಂಗ ಕಾರ್ಯಾಲಯ ಹೇಳಿದೆ.
ಇದಕ್ಕೂ ಮುನ್ನ ಜನವರಿ 1ರಿಂದ 8ರವರೆಗೆ ನಡೆದ ಹಝ್ರತ್ ಖ್ವಾಜಾ ನಿಝಾಮುದ್ದೀನ್ ಔಲಿಯಾ ದರ್ಗಾದ ಭೇಟಿಗೂ ಭಾರತವು ಪಾಕ್ ಯಾತ್ರಿಕರಿಗೆ ವೀಸಾಗಳನ್ನು ನೀಡಿರಲಿಲ್ಲವೆಂದು ಅದು ಹೇಳಿದೆ. 2017ರಲ್ಲಿ ಗುರುಅರ್ಜುನ್ ದೇವ್ ಅವರ ಬಲಿದಾನದ ವರ್ಷಾಚರಣೆ ಹಾಗೂ ಮಹಾರಾಜಾ ರಣಜಿತ್ ಸಿಂಗ್ ಅವರ ಪುಣ್ಯತಿಥಿಯಲ್ಲಿ ಭಾಗವಹಿಸುವ ಸಿಖ್ಖ್ ಯಾತ್ರಿಕರಿಗಾಗಿ ತಾನು ವಿಶೇಷ ರೈಲೊಂದನ್ನು ಕಳುಹಿಸುವ ಕೊಡುಗೆಯನ್ನು ನೀಡಿದ ಹೊರತಾಗಿಯೂ ಭಾರತವು ವಿಳಂಬ ಮಾಡಿತು. ಇದರಿಂದಾಗಿ ಸಿಖ್ಖ್ ಯಾತ್ರಿಕರಿಗೆ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ಹೇಳಿಕೆ ತಿಳಿಸಿದೆ.
ಭಾರತವು 1974ರ ದ್ವಿಪಕ್ಷೀಯ ಒಡಂಬಡಿ ಹಾಗೂ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿರುವ ಜೊತೆಗೆ, ಎರಡೂ ದೇಶಗಳ ನಡುವಿನ ಬಾಂಧವ್ಯದ ಸುಧಾರಣೆಗೆ, ಜನತೆಯ ನಡುವೆ ಒಡನಾಟವನ್ನು ಹೆಚ್ಚಿಸಲು ನಡೆಸಲಾಗುತ್ತಿರುವ ಪ್ರಯತ್ನಗಳನ್ನು ಭಾರತವು ಕಡೆಗಣಿಸಿದೆಯೆಂದು ಪಾಕ್ ವಿದೇಶಾಂಗ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದೆ.