ಸ್ತ್ರೀಯರು ಪುರುಷರಿಗೆ ಸರಿಸಮಾನರು: ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್
ವಾಶಿಂಗ್ಟನ್,ಮಾ.19: ಮಹಿಳೆಯರು ಸಂಪೂರ್ಣವಾಗಿ ಪುರುಷರಿಗೆ ಸರಿಸಮಾನರೆಂದು ಸೌದಿ ಆರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಸೋಮವಾರ ಯುವರಾಜ ಸಲ್ಮಾನ್ ಅವರು ಅಮೆರಿಕಕ್ಕೆ ಆಗಮಿಸಲಿರುವ ಕೆಲವೇ ತಾಸುಗಳ ಮೊದಲು ಸಿಬಿಎಸ್ ಸುದ್ದಿವಾಹಿನಿಯ ‘‘60 ಮಿನಿಟ್ಸ್’ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
1979ರ ಬಳಿಕ ಸೌದಿ ಆರೇಬಿಯದಲ್ಲಿ ಹರಡಿದ ಕರ್ಮಠವಾದದಿಂದಾಗಿ ನಮ್ಮ ತಲೆಮಾರು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಯಿತೆಂದು ಸಲ್ಮಾನ್ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಭ್ರಷ್ಟಾಚಾರದ ವಿರುದ್ಧ ತನ್ನ ಅಭಿಯಾನದ ಬಗ್ಗೆ ಮಾತನಾಡಿದ ಸೌದಿಯ ಯುವರಾಜ, ಇತ್ತೀಚೆಗೆ ಭ್ರಷ್ಟಾಚಾರದ ಆರೋಪದಲ್ಲಿ 380 ರಾಜಕುಮಾರರನ್ನು, ಉದ್ಯಮಿಗಳನ್ನು ಹಾಗೂ ಮಾಜಿ ಸರಕಾರಿ ಅಧಿಕಾರಿಗಳನ್ನು ಬಂಧಿಸಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಬಂಧಿತರ ಆಸ್ತಿಗಳನ್ನು ಸರಕಾರವು ವಶಪಡಿಸಿಕೊಳ್ಳುವುದಕ್ಕಾಗಿ ಅವರ ಮೇಲೆ ದೈಹಿಕ ದೌರ್ಜನ್ಯಗಳನ್ನು ನಡೆಸಲಾಗಿದೆಯೆಂಬ ಆರೋಪಗಳನ್ನು ಸಲ್ಮಾನ್ ನಿರಾಕರಿಸಿದ್ದಾರೆ.
ತನ್ನ ಖಾಸಗಿ ವೆಚ್ಚಗಳನ್ನು ಸಮರ್ಥಿಸಿಕೊಂಡ ಅವರು ನಾನೋರ್ವ ಶ್ರೀಮಂತ ವ್ಯಕ್ತಿಯೇ ಹೊರತು ಬಡವನಲ್ಲ ಎಂದರು. ಸರಳವಾದ ಜೀವನಶೈಲಿಯನ್ನು ಅನುಸರಿಸಲು ತಾನು ಗಾಂಧಿ ಅಥವಾ ಮಂಡೇಲಾ ಅಲ್ಲವೆಂದು ಅವರು ತಿಳಿಸಿದರು.