ವಿಶ್ವದ ಅತಿ ಉದ್ದದ ಮರಳುಶಿಲೆ ಗುಹೆ ಪತ್ತೆ

Update: 2018-03-20 03:37 GMT

ಶಿಲ್ಲಾಂಗ್, ಮಾ.20: ವಿಶ್ವದ ಅತಿ ಉದ್ದದ ಮರಳುಶಿಲೆಯ ಗುಹೆ ಮೇಘಾಲಯದಲ್ಲಿ ಪತ್ತೆಯಾಗಿದೆ. 24,583 ಮೀಟರ್ ಉದ್ದದ ಈ ಗುಹೆ ಸಂಕೀರ್ಣ ಗುಹೆ ವ್ಯವಸ್ಥೆಯಲ್ಲಿ ಬೆಟ್ಟದ ತಗ್ಗುಪ್ರದೇಶದಲ್ಲಿ ಪತ್ತೆಯಾಗಿದೆ.

ಕ್ರೇಮ್‌ಪುರಿ ಹೆಸರಿನ ಈ ಗುಹೆ 2016ರಲ್ಲಿ ಪತ್ತೆಯಾಗಿತ್ತು. ಆದರೆ ಈ ಗುಹೆಯ ವಾಸ್ತವ ಉದ್ದ ನಿಖರವಾಗಿ ತಿಳಿದುಬಂದಿರುವುದು ಮೇಘಾಲಯ ಅಡ್ವೆಂಚರ್ಸ್‌ ಅಸೋಸಿಯೇಶನ್ (ಎಂಎಎ) ಕೈಗೊಂಡ ಸಾಹಸಯಾತ್ರೆಯ ಬಳಿಕ. ಈ ಯಾತ್ರೆಯಲ್ಲಿ ಫೆಬ್ರವರಿ 5ರಿಂದ ಮಾರ್ಚ್ 1ರವರೆಗೆ ಈ ಗುಹೆಯ ಅಳತೆ ಮತ್ತು ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸದಸ್ಯ ಬ್ರಿಯಾನ್ ದಲೆ ಖರ್ಪ್ರನ್ ಹೇಳಿದ್ದಾರೆ.

ಈ ಭೂಗತ ಗುಹೆ ವಿಶ್ವದ ಅತಿ ಉದ್ದದ ಗುಹೆ ಎಂಬ ದಾಖಲೆ ಹೊಂದಿರುವ ವೆನೆಜುವೆಲಾದ ಕ್ಯೇವಾ ದೆಲ್ ಸಮನ್‌ಗಿಂತ ಆರು ಸಾವಿರ ಮೀಟರ್‌ನಷ್ಟು ಅಧಿಕ ಉದ್ದ ಹೊಂದಿದೆ. ವೆನೆಜುವೆಲಾ ಗುಹೆಯ ಉದ್ದ 18,200 ಮೀಟರ್‌ಗಳು. ಇದೀಗ ಪತ್ತೆಯಾಗಿರುವ ಗುಹೆಯು ಭಾರತದ ಗುಹೆಗಳಲ್ಲಿ ಎರಡನೇ ಅತಿ ಉದ್ದದ ಗುಹೆ ಎನಿಸಿಕೊಂಡಿದೆ. ಕ್ರೆಮ್ ಲಿಯಾತ್ ಪ್ರಹ್ ಉಮಿಲ್ ಲ್ಯಾಬಿಟ್ ವ್ಯವಸ್ಥೆಯ ಸುಣ್ಣದ ಕಲ್ಲಿನ ಗುಹೆ ಮೇಘಾಲಯದ ಜೈಂತಿಯಾ ಬೆಟ್ಟದಲ್ಲಿದ್ದು, ಇದರ ಉದ್ದ 31 ಕಿಲೋಮೀಟರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News