ಪತ್ನಿಯನ್ನು ಪರಿತ್ಯಜಿಸುವ ಎನ್‌ಆರ್‌ಐಗಳಿಗೆ ಕಠಿಣ ಶಿಕ್ಷೆ: ಮೇನಕಾ ಪ್ರಸ್ತಾವಕ್ಕೆ ತೊಡಕು

Update: 2018-03-20 03:43 GMT

ಹೊಸದಿಲ್ಲಿ, ಮಾ.20: ಪತ್ನಿಯರನ್ನು ಪರಿತ್ಯಜಿಸುವ ಅನಿವಾಸಿ ಭಾರತೀಯರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಗೆ ತರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಮುಂದಿಟ್ಟಿರುವ ಪ್ರಸ್ತಾವಕ್ಕೆ ಕೆಲ ಕಾನೂನಾತ್ಮಕ ತಡೆಗಳು ಎದುರಾಗಿವೆ. ಇತರ ಶಿಕ್ಷೆಯ ಜತೆಗೆ ಅವರ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಸ್ತಾವ ಕಾನೂನು ಸಚಿವಾಲಯದ ಮುಂದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

1978ರಲ್ಲಿ ಸ್ವತಃ ಮೇನಕಾ ಗಾಂಧಿಯವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಎನ್‌ಆರ್‌ಐಗಳ ಪಾಸ್‌ಪೋರ್ಟ್ ರದ್ದುಪಡಿಸಲು ಅಥವಾ ಮುಟ್ಟುಗೋಲು ಹಾಕಿಕೊಳ್ಳಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಅನುಸರಿಸಬೇಕು ಎಂದು ಆದೇಶಿಸಿರುವುದು ದೊಡ್ಡ ತಡೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1978ರಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಿ ಮೇನಕಾ ಗಾಂಧಿಯವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿತ್ತು. ಭಾರತದ ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 10 (3)ರ ಅನ್ವಯ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವುದು ಸಂವಿಧಾನದ 14 ಮತ್ತು 21ನೇ ವಿಧಿ ಅನ್ವಯ ಸಮಾನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದು ಮೇನಕಾ ಗಾಂಧಿ ಹಾಗೂ ಭಾರತ ಸರ್ಕಾರ ನಡುವಿನ ದೊಡ್ಡ ಕಾನೂನು ಹೋರಾಟವಾಗಿ ಬಿಂಬಿತವಾಗಿತ್ತು.

ಪತ್ನಿ ತ್ಯಜಿಸುವ ಎನ್‌ಆರ್‌ಐಗಳ ಪಾಸ್‌ಪೋರ್ಟ್ ರದ್ದತಿ, ಭಾರತದಲ್ಲಿರುವ ಅವರ ಸಂಬಂಧಿಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದೂ ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಕಳೆದ ವರ್ಷ ಮೇನಕಾ ಗಾಂಧಿ ಆಗ್ರಹಿಸಿದ್ದರು.

ಆದರೆ ಈ ಪ್ರಸ್ತಾವವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕಾನೂನು ಸಚಿವಾಲಯ ತಳ್ಳಿಹಾಕಿದೆ. ಏಕೆಂದರೆ ಸಂಬಂಧಿಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಸಮರ್ಥನೀಯವಲ್ಲ ಎಂದು ಕಾನೂನು ಸಚಿವಾಲಯ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ಅವಕಾಶವಿದೆ.

ಆದರೆ ಪತ್ನಿಯನ್ನು ಪರಿತ್ಯಜಿಸುವುದು ಸಿವಿಲ್ ವಿಚಾರವಾಗಿದ್ದು, ಹಿಂದೂ ವಿವಾಹ ಕಾಯ್ದೆಯ ಅನ್ವಯ ಇದರ ವಿಚಾರಣೆ ನಡೆಯಬೇಕಾಗುತ್ತದೆ. ಜತೆಗೆ ಪಾಸ್‌ಪೋರ್ಟ್ ರದ್ದು ಮಾಡುವುದು ಮತ್ತೊಂದು ದೇಶದಲ್ಲಿ ಆಶ್ರಯ ಕೋರಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ವಕೀಲ ಸುನೀಲ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮೇನಕಾ ಗಾಂಧಿಯವರು ಈ ಸಂಬಂಧ ಅಗತ್ಯ ಕಾನೂನು ತಿದ್ದುಪಡಿ ತರುವ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಚರ್ಚೆ ಮುಂದುವರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News