ಉತ್ತರ ಪ್ರದೇಶ| 2016ರ ಸಾಮೂಹಿಕ ಅತ್ಯಾಚಾರ ಪ್ರಕರಣ: 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ | Photo Credit : freepik
ಲಕ್ನೋ, ಡಿ. 22: ಬುಲಂದ್‌ಶಹರ್ ಎನ್‌ಎಚ್-91 ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳಿಗೆ, ಒಂಭತ್ತು ವರ್ಷಗಳ ಕಾನೂನು ಪ್ರಕ್ರಿಯೆಯ ಬಳಿಕ ಸ್ಥಳೀಯ ನ್ಯಾಯಾಲಯವೊಂದು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 1.81 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ (ಪೋಕ್ಸೊ) ಓಮ್ ಪ್ರಕಾಶ್ ಈ ತೀರ್ಪು ನೀಡಿದರು.
2016 ಜುಲೈ 29ರಂದು ಐವರು ಸದಸ್ಯರ ಕುಟುಂಬವೊಂದು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ನೋಯಿಡದಿಂದ ಶಹಜಹಾನ್‌ಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಭಯಾನಕ ಘಟನೆ ಸಂಭವಿಸಿತ್ತು. ಕಾರು ರಾಷ್ಟ್ರೀಯ ಹೆದ್ದಾರಿ 91ರಲ್ಲಿ ದೋಸ್ತ್‌ಪುರ ಗ್ರಾಮದ ಸಮೀಪ ತಲುಪಿದಾಗ ದುಷ್ಕರ್ಮಿಗಳು ಯಾವುದೋ ವಸ್ತುವೊಂದನ್ನು ಕಾರಿನತ್ತ ಎಸೆದರು. ಕಾರಿಗೆ ಏನು ಬಿದ್ದಿದೆ ಎಂದು ನೋಡಲು ಕುಟುಂಬದ ಒಬ್ಬ ಸದಸ್ಯ ಕೆಳಗಿಳಿದಾಗ ಆರೇಳು ಜನರು ಅವರ ಮೇಲೆ ದಾಳಿ ಮಾಡಿ ಕಾರನ್ನು ನಿಲ್ಲಿಸಿದರು. ಬಳಿಕ ಕಾರಿನಲ್ಲಿದ್ದ ಐವರನ್ನು ಕೆಳಗಿಳಿಸಿ ಸಮೀಪದ ಗದ್ದೆಗೆ ಕರೆದೊಯ್ದರು. ಅಲ್ಲಿ ದುಷ್ಕರ್ಮಿಗಳು ಓರ್ವ ಮಹಿಳೆ ಮತ್ತು ಅವರ ಮಗಳ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮಾಡಿದರು. ಕುಟುಂಬದ ಇತರ ಸದಸ್ಯರನ್ನು ಒತ್ತೆಯಾಳುಗಳಾಗಿ ಇಡಲಾಗಿತ್ತು.
ಪಾತಕಿಗಳು ಬಳಿಕ ಅವರ ಚಿನ್ನಾಭರಣಗಳು ಮತ್ತು ಹಣವನ್ನು ದರೋಡೆಗೈದು ಪರಾರಿಯಾದರು.
ಪ್ರಕರಣಕ್ಕೆ ಸಂಬಂಧಿಸಿ, ಆರಂಭದಲ್ಲಿ 11 ಮಂದಿಯನ್ನು ಆರೋಪಿಗಳು ಎಂಬುದಾಗಿ ಹೆಸರಿಸಲಾಗಿತ್ತು. ಪ್ರಮುಖ ಆರೋಪಿ ಸಲೀಮ್ ಬವರಿಯ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ 2019ರಲ್ಲಿ ಮೃತಪಟ್ಟಿದ್ದಾನೆ. ಇತರ ಇಬ್ಬರು ಆರೋಪಿಗಳು ಎಸ್‌ಟಿಎಫ್ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೃತಪಟ್ಟಿದ್ದಾರೆ.
ಬಳಿಕ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ತನ್ನ ತನಿಖೆಯ ವೇಳೆ, ಮೂವರು ಆರೋಪಿಗಳು ಅಮಾಯಕರು ಎಂಬುದಾಗಿ ಕಂಡುಕೊಂಡಿತು ಹಾಗೂ ಆರೋಪಿಗಳ ಪಟ್ಟಿಯಿಂದ ಅವರ ಹೆಸರುಗಳನ್ನು ಕೈಬಿಟ್ಟಿತು.
ಸೋಮವಾರ ಧರ್ಮವೀರ, ನರೇಶ್, ಸುನೀಲ್, ಜುಬೇರ್ ಮತ್ತು ಸಾಜಿದ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.