ಚಾಲಕರಹಿತ ಕಾರುಗಳು ಹೇಗೆ ಕೆಲಸ ಮಾಡುತ್ತವೆ?

Update: 2018-03-20 14:39 GMT

ವಿವಿಧ ತಂತ್ರಜ್ಞಾನ ಕಂಪನಿಗಳು ಮತ್ತು ಸಾಂಪ್ರದಾಯಿಕ ವಾಹನ ತಯಾರಿಕೆ ಸಂಸ್ಥೆಗಳು ಸ್ವಾಯತ್ತ ವಾಹನಗಳು ಅಥವಾ ಚಾಲಕರಹಿತ ಕಾರುಗಳನ್ನು ಅಭಿವೃದ್ಧಿಗೊಳಿಸುತ್ತಿವೆ.

ಚಾಲಕರಹಿತ ಕಾರನ್ನು ನಿಯಂತ್ರಿಸುವಲ್ಲಿ ಹಲವಾರು ಬಿಡಿಭಾಗಗಳು ಒಂದಾಗಿ ಕಾರ್ಯ ನಿರ್ವಹಿಸುತ್ತವೆ. ಕಾರಿನ ಸುತ್ತಲೂ ರಾಡಾರ್ ಸೆನ್ಸರ್‌ಗಳು, ವೀಡಿಯೊ ಕ್ಯಾಮೆರಾಗಳು, ಲಿಡಾರ್ ಸೆನ್ಸರ್‌ಗಳು ಇತ್ಯಾದಿಗಳನ್ನು ಅಳವಡಿಸಲಾಗಿರುತ್ತದೆ.

ಚಾಲಕರಹಿತ ಕಾರಿನ ಸುತ್ತಲಿನ ಇತರ ವಾಹನಗಳ ಸ್ಥಾನಗಳ ಮೇಲೆ ನಿಗಾ ಇರಿಸಲು ರಾಡಾರ್ ಸೆನ್ಸರ್‌ಗಳನ್ನು ಕಾರಿನ ಸುತ್ತ ವ್ಯೆಹಾತ್ಮಕವಾಗಿ ಅಳವಡಿಸಲಾಗಿರುತ್ತದೆ.

ಟ್ರಾಫಿಕ್ ದೀಪಗಳನ್ನು ಗುರುತಿಸಲು, ರಸ್ತೆ ಸಂಕೇತಗಳನ್ನು ಓದಲು ಮತ್ತು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ಇತರ ಅಡೆತಡೆಗಳನ್ನು ಗಮನಿಸಲು ನೆರವಾಗುವ ವೀಡಿಯೊ ಕ್ಯಾಮೆರಾಗಳನ್ನು ಚಾಲಕರಹಿತ ಕಾರು ಹೊಂದಿರುತ್ತದೆ.

 ಲಿಡಾರ್ ಸೆನ್ಸರ್‌ಗಳು ರಸ್ತೆಗಳ ಅಂಚುಗಳು, ಕಾಲುದಾರಿಗಳು, ಫುಟ್‌ಪಾತ್‌ಗಳು ಮತ್ತು ಲೇನ್ ಮಾರ್ಕಿಂಗ್‌ಗಳನ್ನು ಪತ್ತೆ ಹಚ್ಚುತ್ತವೆ. ಕಾರಿನ ಸುತ್ತಲೂ ನಿರಂತರವಾಗಿ ಬೆಳಕಿನ ಕಿರಣಗಳನ್ನು ಹೊಮ್ಮಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಈ ಸೆನ್ಸರ್‌ಗಳು ಕಾರಿನ ಸುತ್ತಲಿನ ಸ್ಥಿತಿಯ ಮೂರು ಆಯಾಮಗಳ ಚಿತ್ರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ವೇಮೊ ಸೆಲ್ಫ್-ಡ್ರೈವಿಂಗ್ ಕಾರು ಯೋಜನೆಯಡಿ ಗೂಗಲ್ ಚಾಲಕರಹಿತ ಕಾರನ್ನು ಅಭಿವೃದ್ಧಿಗೊಳಿಸುತ್ತಿದೆ.

   ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ತನ್ನ ಚಾಲಕರಹಿತ ಕಾರುಗಳಲ್ಲಿ ಅಳವಡಿಸಲು  ಟೆಸ್ಲಾ ಆಟೋಪೈಲಟ್ ಅನ್ನು ರೂಪಿಸಲು ಶ್ರಮಿಸುತ್ತಿದೆ. ಈ ವ್ಯವಸ್ಥೆಯು ಕಾರಿನ ವೇಗ ನಿಯಂತ್ರಣ, ಸ್ವಯಂ ಚಾಲನೆ, ಸ್ವಯಂ ಪಾರ್ಕಿಂಗ್ ಇತ್ಯಾದಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ಕಂಪನಿಯು ಹೇಳಿದೆ.

ಆ್ಯಪ್ ಆಧಾರಿತ ಕ್ಯಾಬ್ ಸೇವೆಯನ್ನೊದಗಿಸುವ ಉಬರ್ ಕೂಡ ತನ್ನ ಚಾಲಕರಹಿತ ಕಾರುಗಳನ್ನು ಪರೀಕ್ಷೆಗೊಳಪಡಿಸುತ್ತಿದೆ. ತನ್ನ ಚಾಲಕರಹಿತ ಕಾರಿನ 32 ಲಕ್ಷಕ್ಕೂ ಅಧಿಕ ಕಿ.ಮೀ.ಗಳ ಪ್ರಾಯೋಗಿಕ ಓಡಾಟವನ್ನು ಪೂರ್ಣಗೊಳಿಸಿರುವುದಾಗಿ ಕಂಪನಿಯು ಹೇಳಿಕೊಂಡಿದೆ. ಈ ಕಾರು ಅಪಘಾತಗಳಿಗೂ ಸಿಲುಕಿದೆ ಮತ್ತು ಈ ಅಪಘಾತಗಳಲ್ಲಿ ಒಂದು ಸಾವು ಕೂಡ ಸಂಭವಿಸಿದೆ.

ಜರ್ಮನಿಯ ಕಾರು ತಯಾರಿಕೆ ಕಂಪನಿ ಬಿಎಂಡಬ್ಲೂ ಕೂಡ ಸಿರೀಸ್ 5ರಲ್ಲಿ ತನ್ನದೇ ಆದ ಚಾಲಕರಹಿತ ಕಾರುಗಳನ್ನು ಪರೀಕ್ಷೆಗೊಳಪಡಿಸಿದೆ. 2021ರ ವೇಳೆಗೆ ಸಂಪೂರ್ಣ ಸ್ವಾಯತ್ತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅದು ಉದ್ದೇಶಿಸಿದೆ.

 ಈಝಿ ರೈಡ್ ಟ್ಯಾಕ್ಸಿ ಸೇವೆ ಯೋಜನೆಯಡಿ ಚಾಲಕರಹಿತ ಕಾರುಗಳನ್ನು ಪರಿಚಯಿಸಲು ಜಪಾನಿನ ಕಾರು ತಯಾರಿಕೆ ಸಂಸ್ಥೆ ನಿಸಾನ್ ತನ್ನ ಲೀಫ್ ಮಾದರಿಯ ಕಾರುಗಳನ್ನು ಅಭಿವೃದ್ಧಿಗೊಳಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News