ಶ್ರೀಕಾಂತ್, ಸೋಮ್‌ದೇವ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

Update: 2018-03-20 18:13 GMT

ಹೊಸದಿಲ್ಲಿ, ಮಾ.20: ಬ್ಯಾಡ್ಮಿಂಟನ್‌ನ ಸಿಂಗಲ್ಸ್ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಮಾಜಿ ಏಷ್ಯನ್ ಗೇಮ್ಸ್ ಚಾಂಪಿಯನ್ ಟೆನಿಸ್ ಆಟಗಾರ ಸೋಮ್‌ದೇವ್ ದೇವ್‌ವರ್ಮನ್ ಮಂಗಳವಾರ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಹಾಗೂ ಸೋಮ್‌ದೇವ್‌ರಲ್ಲದೆ, ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ಮುರಳೀಕಾಂತ್ ಪೇಟ್ಕರ್ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಈ ವರ್ಷ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ವಿಶ್ವ ಚಾಂಪಿಯನ್ ಸ್ನೂಕರ್ ಪಂಕಜ್ ಅಡ್ವಾಣಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2017ರ ವರ್ಲ್ಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್(48 ಕೆಜಿ ವಿಭಾಗ) ಸೈಖೋಮ್ ಮೀರಾಬಾಯ್ ಚಾನು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂವರು ವಿವಿಧ ಕಾರಣಗಳಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ.

ಇದೀಗ ಬಿಡಬ್ಲುಎಫ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದಿರುವ ಶ್ರೀಕಾಂತ್ ಕಳೆದ ವರ್ಷ ನಾಲ್ಕು ಸೂಪರ್ ಸರಣಿ ಪ್ರಶಸ್ತಿ ಸಹಿತ ಒಟ್ಟು ಆರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. 24ರ ಹರೆಯದ ಶ್ರೀಕಾಂತ್ ಅವರು ಫ್ರೆಂಚ್ ಓಪನ್, ಡೆನ್ಮಾರ್ಕ್ ಓಪನ್, ಆಸ್ಟ್ರೇಲಿಯನ್ ಓಪನ್, ಇಂಡೋನೇಷ್ಯಾ ಓಪನ್, ಇಂಡಿಯಾ ಓಪನ್ ಹಾಗೂ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದರು.

  ಮುರಳೀಕಾಂತ್ ಪೇಟ್ಕರ್ ಜರ್ಮನಿಯಲ್ಲಿ 1972ರಲ್ಲಿ ನಡೆದ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 50 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 37.33 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದ್ದರು. ಅದೇ ಗೇಮ್ಸ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್‌ಗೆ ತಲುಪಿದ್ದರು. ಧೋನಿ 2008 ಹಾಗೂ 2009ರಲ್ಲಿ ವರ್ಷದ ಐಸಿಸಿ ಏಕದಿನ ಆಟಗಾರ ಪ್ರಶಸ್ತಿ ಪಡೆದಿದ್ದರು. ಎರಡು ಬಾರಿ ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರ ಎನಿಸಿಕೊಂಡಿದ್ದರು. 2007ರಲ್ಲಿ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಹಾಗೂ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.

ಅಡ್ವಾಣಿ 2006ರಲ್ಲಿ ದೋಹಾ ಹಾಗೂ 2010ರ ಗ್ವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಹಲವು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.

ಮಣಿಪುರದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಪ್ರಸಿದ್ಧಿಗೆ ಬಂದಿದ್ದರು. ಕಳೆದ ವರ್ಷ ಅಮೆರಿಕದಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 194 ಕೆಜಿ ತೂಕ (85 ಕೆಜಿ ಸ್ನಾಚ್, 109 ಕೆಜಿ ಜರ್ಕ್)ಎತ್ತಿ ಹಿಡಿದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಎಲ್ಲರ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News