ಐಸಿಸಿ ನಿಷೇಧದಿಂದ ಪಾರಾದ ರಬಾಡ
ಕೇಪ್‌ಟೌನ್, ಮಾ.20: ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ಎರಡು ಪಂದ್ಯಗಳ ನಿಷೇಧದಿಂದ ಪಾರಾಗಿದ್ದು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಡಲಿದ್ದಾರೆ. ಐಸಿಸಿ ನೀತಿ ಸಂಹಿತೆಯ ಲೆವೆನ್-2ನ್ನು ಉಲ್ಲಂಘನೆ ಮಾಡಿ ಎರಡು ಟೆಸ್ಟ್ ಪಂದ್ಯಗಳಿಂದ ನಿಷೇಧಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ನಿಷೇಧ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಪೋರ್ಟ್ ಎಲಿಝಬೆತ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಭುಜದ ಮೇಲೆರಗಿದ್ದ ರಬಾಡಗೆ ಐಸಿಸಿ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್ಸ್ ನ್ನು ನೀಡಿತ್ತು. 2 ಪಂದ್ಯಗಳ ನಿಷೇಧ ವಿರುದ್ಧ ರಬಾಡ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಂಗ ಆಯುಕ್ತ ಮೈಕಲ್ ಹೆರಾನ್, ‘ರಬಾಡ ನಡವಳಿಕೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದುದು’ ಎಂದು ಅಭಿಪ್ರಾಯಪಟ್ಟರಲ್ಲದೆ, ಪಂದ್ಯಶುಲ್ಕವನ್ನು ಶೇ.50ರಿಂದ 25ಕ್ಕೆ, ಡಿಮೆರಿಟ್ ಪಾಯಿಂಟ್ಸ್ ನ್ನು ಮೂರರಿಂದ 1ಕ್ಕೆ ಕಡಿತಗೊಳಿಸಿದರು.
ಡಿಮೆರಿಟ್ ಪಾಯಿಂಟ್ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳೆದ 24 ತಿಂಗಳಲ್ಲಿ ರಬಾಡ ಗಳಿಸಿದ ಡಿಮೆರಿಟ್ ಪಾಯಿಂಟ್ಸ್ ಏಳಕ್ಕೆ ಕುಸಿಯಿತು. ರಬಾಡ ಕೇವಲ ಒಂದು ಅಂಕದಿಂದ ಎರಡು ಪಂದ್ಯಗಳಿಂದ ನಿಷೇಧಗೊಳ್ಳುವ ಭೀತಿಯಿಂದ ಪಾರಾದರು. ಇದೀಗ ವಿಶ್ವದ ನಂ.1 ಬೌಲರ್ ಆಗಿರುವ ರಬಾಡ ಗುರುವಾರ ಕೇಪ್‌ಟೌನ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದಿದ್ದಾರೆ. ಆಸ್ಟ್ರೇಲಿಯ-ದಕ್ಷಿಣ ಆಫ್ರಿಕ ನಡುವಿನ ಸರಣಿಯು 1-1 ರಿಂದ ಸಮಬಲದಲ್ಲಿದೆ.
ರಬಾಡ ಸರಣಿಯಲ್ಲಿ ಈತನಕ 16.80ರ ಸರಾಸರಿಯಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿದ್ದು, ಸರಣಿಯಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.