ಅಂಕಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ಗೆ ಅಗ್ರಸ್ಥಾನ
ಹರಾರೆ, ಮಾ.20: ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ಅಂಕಪಟ್ಟಿಯಲ್ಲಿ ವೆಸ್ಟ್‌ಇಂಡೀಸ್ ಅಗ್ರ ಸ್ಥಾನದಲ್ಲಿದೆ. ಸೂಪರ್ ಸಿಕ್ಸ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ. ಆತಿಥೇಯ ಝಿಂಬಾಬ್ವೆ ವಿರುದ್ಧ ರೋಚಕ ಜಯ ಸಾಧಿಸಿರುವ ವೆಸ್ಟ್‌ಇಂಡೀಸ್ ಬುಧವಾರ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ವಿಂಡೀಸ್ 4 ಪಂದ್ಯಗಳಲ್ಲಿ 3ರಲ್ಲಿ ಜಯ, 1ರಲ್ಲಿ ಸೋಲನುಭವಿಸಿ ಒಟ್ಟು 6 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ರವಿವಾರ ಐರ್ಲೆಂಡ್ ವಿರುದ್ಧ ಸೋಲುವ ತನಕ ಸ್ಕಾಟ್ಲೆಂಡ್ ಟೂರ್ನಿಯಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿತ್ತು. ಒಟ್ಟು 5 ಅಂಕ ಗಳಿಸಿರುವ ಸ್ಕಾಟ್ಲೆಂಡ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಒಂದು ವೇಳೆ ಎರಡು ಬಾರಿಯ ಚಾಂಪಿಯನ್ ವಿಂಡೀಸ್ ಸೋತರೆ ಗುರುವಾರ ನಡೆಯಲಿರುವ ಯುಎಇ ಹಾಗೂ ಝಿಂಬಾಬ್ವೆ ನಡುವಿನ ಪಂದ್ಯದ ಫಲಿತಾಂಶವನ್ನು ಕಾದುನೋಡಬೇಕಾಗುತ್ತದೆ. ಈ ಪಂದ್ಯದಲ್ಲಿ ಝಿಂಬಾಬ್ವೆ ಸೋತರೆ ವಿಂಡೀಸ್‌ಗೆ ಅವಕಾಶ ಲಭಿಸಲಿದೆ.
ಝಿಂಬಾಬ್ವೆ: ಝಿಂಬಾಬ್ವೆ 4 ಪಂದ್ಯಗಳಲ್ಲಿ 2ರಲ್ಲಿ ಜಯ, 1ರಲ್ಲಿ ಸೋಲು, 1ರಲ್ಲಿ ಟೈ ಸಾಧಿಸಿ 5 ಅಂಕ ಗಳಿಸಿದೆ. ಒಂದು ವೇಳೆ, ವಿಂಡೀಸ್ ತಂಡ ಸ್ಕಾಟ್ಲೆಂಡ್‌ನ್ನು ಮಣಿಸಿದರೆ ಝಿಂಬಾಬ್ವೆ-ಸ್ಕಾಟ್ಲೆಂಡ್ ಅಂಕ 5-5 ರಿಂದ ಸಮಬಲಗೊಳ್ಳಲಿದೆ. ಆಗ ನೆಟ್ ರನ್‌ರೇಟ್ ಗಣನೆಗೆ ಬರುತ್ತದೆ. ಸ್ಕಾಟ್ಲೆಂಡ್: ಸ್ಕಾಟ್ಲೆಂಡ್ ತಂಡ ನಾಲ್ಕನೇ ಬಾರಿ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಬೇಕಾದರೆ ವಿಂಡೀಸ್‌ನ್ನು ಮಣಿಸಲೇಬೇಕಾಗಿದೆ. ಒಂದು ವೇಳೆ ಸೋತರೆ, ಉಳಿದ ಪಂದ್ಯಗಳ ಫಲಿತಾಂಶ ತನ್ನ ಪರವಾಗಿರುವಂತೆ ನಿರೀಕ್ಷಿಸಬೇಕಾಗುತ್ತದೆ. ಯುಎಇ ತಂಡ ಝಿಂಬಾಬ್ವೆಯನ್ನು ಸೋಲಿಸಿದರೆ, ಐರ್ಲೆಂಡ್ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಸ್ಕಾಟ್ಲೆಂಡ್‌ಗೆ ಲಾಭವಾಗಲಿದೆ. ಐರ್ಲೆಂಡ್
: ರವಿವಾರ ಸ್ಕಾಟ್ಲೆಂಡ್ ತಂಡವನ್ನು 25 ರನ್‌ಗಳಿಂದ ಸೋಲಿಸುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚಿ ಸಿಕೊಂಡಿರುವ ಐರ್ಲೆಂಡ್ ಶುಕ್ರವಾರ ಸೂಪರ್ ಸಿಕ್ಸ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಯುಎಇ ತಂಡ ಎಲ್ಲ ಶಕ್ತಿ ಬಳಸಿ ಝಿಂಬಾಬ್ವೆಯನ್ನು ಸೋಲಿಸಿದರೆ, ವೆಸ್ಟ್‌ಇಂಡೀಸ್ ತಂಡ ಸ್ಕಾಟ್ಲೆಂಡ್‌ನ್ನು ಮಣಿಸಿದರೆ ಐರ್ಲೆಂಡ್ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಮುಂದಿನ ಸುತ್ತಿಗೆ ಏರಲಿದೆ. 4 ಪಂದ್ಯಗಳಲ್ಲಿ 2ರಲ್ಲಿ ಜಯ, 2ರಲ್ಲಿ ಸೋತಿರುವ ಐರ್ಲೆಂಡ್ ಒಟ್ಟು 4 ಅಂಕ ಗಳಿಸಿದೆ. ಅಫ್ಘಾನಿಸ್ತಾನ:
ವೆಸ್ಟ್‌ಇಂಡೀಸ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಮುಂದಿನ ಸುತ್ತಿಗೇರುವ ವಿಶ್ವಾಸ ಉಳಿಸಿಕೊಂಡಿರುವ ಅಫ್ಘಾನಿಸ್ತಾನ ತಂಡ ಮಂಗಳವಾರ ಯುಎಇ ವಿರುದ್ಧ ನಡೆಯಲಿರುವ ಪಂದ್ಯ ಸಹಿತ ಇನ್ನೆರಡು ಪಂದ್ಯ ಆಡಲಿದೆ. ಅಫ್ಘಾನಿಸ್ತಾನ 3 ಪಂದ್ಯಗಳಲ್ಲಿ 1ರಲ್ಲಿ ಜಯ ಹಾಗೂ 2ರಲ್ಲಿ ಸೋತಿದೆ. ಯುಎಇ: ಈ ತನಕ 3 ಪಂದ್ಯಗಳಲ್ಲಿ ಆಡಿರುವ ಯುಎಇ ಗೆಲುವಿನ ಖಾತೆ ತೆರೆಯಲು ವಿಫಲವಾಗಿದೆ. ಮಂಗಳವಾರ ಅಫ್ಘಾನ್ ತಂಡವನ್ನು ಎದುರಿಸಲಿರುವ ಯುಎಇ ಗುರುವಾರ ಝಿಂಬಾಬ್ವೆಯನ್ನು ಎದುರಿಸಲಿದೆ.