ದಿನೇಶ್ ಕಾರ್ತಿಕ್ ಭಾರತದ ಹೊಸ ಮ್ಯಾಚ್ ಫಿನಿಶರ್ ?

Update: 2018-03-20 18:38 GMT

ಚೆನ್ನೈ, ಮಾ.20: ದಿನೇಶ್ ಕಾರ್ತಿಕ್ ಕಳೆದ 14 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ರವಿವಾರ ನಿದಾಸ್ ಟ್ರೋಫಿ ಟ್ವೆಂಟಿ-20 ತ್ರಿಕೋನ ಸರಣಿಯ ಫೈನಲ್‌ನಲ್ಲಿ 8 ಎಸೆತಗಳಲ್ಲಿ 29 ರನ್ ಸಿಡಿಸಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

     ದಿನೇಶ್ ಕಾರ್ತಿಕ್ ಅವರನ್ನು ಭಾರತದ ಸೀಮಿತ ಓವರ್‌ಗಳ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಖಾಯಂ ಆಗಿ ನೇಮಕ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಇದೀಗ ಮಹೇಂದ್ರ ಸಿಂಗ್ ಧೋನಿ ತಂಡದ ಖಾಯಂ ವಿಕೆಟ್ ಕೀಪರ್ ಆಗಿದ್ದಾರೆ. ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಧೋನಿ ತಂಡದ ವಿಕೆಟ್ ಕೀಪರ್ ಆಗಿರುತ್ತಾರೆ. ಅವರು ವಿಶ್ರಾಂತಿ ಬಯಸಿದರೆ ಮಾತ್ರ ಕಾರ್ತಿಕ್ ಸೇರಿದಂತೆ ಇತರ ವಿಕೆಟ್ ಕೀಪರ್‌ಗಳಿಗೆ ಅವಕಾಶ ದೊರೆಯಲು ಸಾಧ್ಯ. ಧೋನಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ದಿನೇಶ್ ಕಾರ್ತಿಕ್ ಅವರು ಧೋನಿ ಅವರಂತೆ ಮ್ಯಾಚ್ ಫಿನಿಶರ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಸಾವಿರಕ್ಕೂ ಅಧಿಕ ರನ್ ದಾಖಲಿಸಿರುವ ದಿನೇಶ್ ಕಾರ್ತಿಕ್ ಅವರನ್ನು 2019ರ ವಿಶ್ವಕಪ್ ತಂಡದ ಆಯ್ಕೆ ವೇಳೆ ಪರಿಗಣಿಸುವಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಿಸಿದ್ದಾರೆ. ದಿನೇಶ್ ಕಾರ್ತಿಕ್ ಅವರು ನಂ.5 ಕ್ರಮಾಂಕದಲ್ಲಿ ಚೆನ್ನಾಗಿ ಆಡುತ್ತಾರೆ. ಭಾರತ ಇದೀಗ ಮ್ಯಾಚ್ ಫಿನಿಶರ್‌ನ ಶೋಧ ನಡೆಸುತ್ತಿದೆ. ಕಾರ್ತಿಕ್ ಈ ಸ್ಥಾನ ತುಂಬಲು ಸಮರ್ಥ ಆಟಗಾರ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಅನಿಸಿಕೆ.

ದಿನೇಶ್ ಕಾರ್ತಿಕ್ ಸೆಪ್ಟಂಬರ್ 2004ರಲ್ಲಿ ಏಕದಿನ ಕ್ರಿಕೆಟ್ , ನವೆಂಬರ್ 2004ರಲ್ಲಿ ಟೆಸ್ಟ್ ಕ್ರಿಕೆಟ್ ಮತ್ತು ಡಿಸೆಂಬರ್ 2006ರಲ್ಲಿ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು.

ತಮಿಳುನಾಡಿನ 32ರ ಹರೆಯದ ಹಿರಿಯ ಆಟಗಾರ ಕಾರ್ತಿಕ್ ಅವರು ಕಳೆದ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಔಟಾಗದೆ 50, 37, ಔಟಾಗದೆ 64, ಔಟಾಗದೆ 4,0 ಮತ್ತು ಔಟಾಗದೆ 26 ರನ್ ಗಳಿಸಿದ್ದರು. ಆದರೆ ದಕ್ಷಿಣ ಆಫ್ರಿಕ ವಿರುದ್ಧ 6 ಪಂದ್ಯಗಳ ಪೈಕಿ ಒಂದರಲ್ಲೂ ಆಡುವ ಅವಕಾಶ ಸಿಗಲಿಲ್ಲ. ಕಳೆದ 8 ಟ್ವೆಂಟಿ-20 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಔಟಾಗಿದ್ದಾರೆ. ಟೀಮ್ ಇಂಡಿಯಾಕ್ಕೆ ಕಾರ್ತಿಕ್ ಟೆಸ್ಟ್ ನಲ್ಲಿ 4 ಬಾರಿ, ಏಕದಿನ 13 ಮತ್ತು ಟ್ವೆಂಟಿ -20 ಕ್ರಿಕೆಟ್‌ನಲ್ಲಿ 6 ಬಾರಿ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News