ಏರಿಕೆಯಾಗುತ್ತಿದೆ ಆರ್‌ಟಿಐ ಕಾರ್ಯಕರ್ತರ ಕೊಲೆಗಳ ಸಂಖ್ಯೆ!

Update: 2018-03-20 18:38 GMT

ಈಗ, 21ನೇ ಶತಮಾನದಲ್ಲಿ ಯಾವುದು ಸರಿಯೆಂದು ನಿರ್ಧರಿಸುವವರು ಯಾರು? ತನ್ನ ಭ್ರಷ್ಟ ಚಟುವಟಿಕೆಗಳನ್ನು ಶತಾಯ ಗತಾಯ ಮುಚ್ಚಿಡಲು ಪ್ರಯತ್ನಿಸುವ ಒಬ್ಬ ಸಾರ್ವಜನಿಕ ಅಧಿಕಾರಿಗೆ, ಅವನ ಭ್ರಷ್ಟಾಚಾರವನ್ನು ಬಯಲು ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರ ಚಟುವಟಿಕೆಗಳು ‘ಸರಿಯಾದುದನ್ನೇ ಮಾಡು’ವುದಕ್ಕೆ ಒಂದು ಉದಾಹರಣೆ ಅಲ್ಲದಿರಬಹುದು. ‘ಸರಿಯಾದುದನ್ನೆ ಮಾಡುವುದು’ ಎಂದರೆ ಏನು ಎಂದೂ ಒಂದು ಸರಕಾರವೇ ನಿರ್ಧರಿಸುವುದು ಇದಕ್ಕಿಂತ ಹೆಚ್ಚು ಅಪಾಯಕಾರಿ.

ಪಾರದರ್ಶಕತೆ ಬೇಕು ಎಂದದ್ದಕ್ಕಾಗಿ ಗುಜರಾತ್‌ನಲ್ಲಿ ಇತ್ತೀಚೆಗೆ ಇನ್ನೊಬ್ಬ ಆರ್‌ಟಿಐ (ಮಾಹಿತಿ ಹಕ್ಕು) ಕಾರ್ಯಕರ್ತ ಜೀವತೆತ್ತಿದ್ದಾನೆ. ಮಾರ್ಚ್ 9ರಂದು, ರಾಜ್‌ಕೋಟ್ ಜಿಲ್ಲೆಯ ಕೊಟ್‌ದಾ ಸಂಗಾನಿಯ ಮಾನೆಕ್ವಾಡಾ ಹಳ್ಳಿಯ ನಿವಾಸಿ ನಂಜೀಭಾಯಿ ಸೊಂದರ್ವಾನನ್ನು ಆರು ಮಂದಿ ದೊಣ್ಣೆಗಳಿಂದ ಬಡಿದು ಕೊಂದರೆನ್ನಲಾಗಿದೆ. ತನ್ನ ಹಳ್ಳಿಯಲ್ಲಿ ರಸ್ತೆ ನಿರ್ಮಾಣವೊಂದಕ್ಕೆ ಸಂಬಂಧಿಸಿ ವೆಚ್ಚ ಮಾಡಲಾದ ಮೊತ್ತದ ಬಗ್ಗೆ ಪಾರದರ್ಶಕತೆ ಬೇಕೆಂದು ಮಾಹಿತಿ ಹಕ್ಕು ಅರ್ಜಿಯೊಂದನ್ನು ಸಲ್ಲಿಸಿದ ಸ್ವಲ್ಪವೇ ಸಮಯದಲ್ಲಿ ತನ್ನ ಮಗನ ಮೇಲೆ ದಾಳಿ ನಡೆಯಿತೆಂದು ಮೃತನ ತಂದೆ ಹೇಳಿದ್ದಾರೆ.

ಇದು ಸೊಂದರ್ವಾರ ಮೇಲೆ ನಡೆದ ಮೊದಲ ದಾಳಿಯಲ್ಲ. ಒಂದೂವರೆ ವರ್ಷದ ಹಿಂದೆ ಹಳ್ಳಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳಲ್ಲಿ ಹಣದ ದುರ್ವ್ಯವಹಾರ ನಡೆದಿದೆಯೆಂದು ಬಹಿರಂಗಪಡಿಸಲು ಆತ ಮಾಹಿತಿ ಹಕ್ಕು ಅರ್ಜಿ ಬಳಸಿದ್ದರು. ಇದರಿಂದ ಕ್ರುದ್ಧನಾದ ಹಳ್ಳಿಯ ಸರಪಂಚ ಸೊಂದರ್ವಾ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ದಾಳಿ ಮಾಡಿಸಿದ್ದ. ಅಭಿವೃದ್ಧಿಯ ‘ಗುಜರಾತ್ ಮಾದರಿ’ ಬಗ್ಗೆ ಮಾಹಿತಿ ಕೇಳುವುದು ತುಂಬಾ ದುಬಾರಿ

‘ಗುಜರಾತ್ ಮಾದರಿ’ ಯನ್ನು ಪ್ರಶ್ನಿಸಲು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದ್ದಕ್ಕಾಗಿ ಕೊಲೆಯಾದವರ ಸಂಖ್ಯೆ ಈಗ 11ಕ್ಕೆ ಏರಿದೆ. ಇತ್ತೀಚೆಗೆ ನಡೆದ ದಾಳಿ, ಸೊಂದರ್ವಾರ ಹತ್ಯೆ, ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಗುಜರಾತ್ ಸರಕಾರಕ್ಕೆ ನಿರ್ದೇಶವೊಂದನ್ನು ನೀಡಿದ ಮೂರು ತಿಂಗಳ ಬಳಿಕ ಇದು ನಡೆದಿದೆ. 2015ರ ಅಕ್ಟೋಬರ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಹತ್ತು ವರ್ಷಗಳ ಆಚರಣೆ ಸಂಬಂಧ ಕೇಂದ್ರ ಮಾಹಿತಿ ಆಯೋಗವು ರಾಷ್ಟ್ರೀಯ ಅಧಿವೇಶನ ನಡೆಸುವ ಒಂದು ದಿನ ಮೊದಲು, ರಾಜ್ಯದ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದ್ದ 30ರ ಹರೆಯದ ಮಾಹಿತಿ ಹಕ್ಕು ಕಾರ್ಯಕರ್ತ ರತನ್‌ಸಿಂಗ್ ಚೌಧರಿಯ ಕೊಲೆ ನಡೆದಿತ್ತು. ಆ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಮೋದಿ ನೀಡಿದ ಕರೆ

ಮಾರ್ಚ್ 6ರಂದು ದಿಲ್ಲಿಯಲ್ಲಿ ಆ ಸಮಾರಂಭವನ್ನು ಉದ್ಘಾಟಿಸುತ್ತ ಪ್ರಧಾನಿ ಮೋದಿಯವರು, ದೇಶದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಇನ್ನಷ್ಟು ಪಾರದರ್ಶಕತೆಯನ್ನು ತರಲು ಕೇಂದ್ರ ಸರಕಾರದ ಅನೇಕ ಇಲಾಖೆಗಳು ಮತ್ತು ಏಜನ್ಸಿಗಳು ನಡೆಸುತ್ತಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲಿದರು. ಅವರ ಭಾಷಣದ ಕೊನೆಯಲ್ಲಿ ಅವರು ‘‘ನಮ್ಮ ದೇಶದಲ್ಲಿ ಇರುವ ಆರ್‌ಟಿಐ ಕಾಯ್ದೆಯ ಹಾಗೆಯೇ, ಸರಿಯಾಗಿ ನಡೆದುಕೊಳ್ಳುವುದು (ಆ್ಯಕ್ಟ್ ರೈಟ್) ಕೂಡ ಅಗತ್ಯ. ಇದಕ್ಕೂ ನಾವು ಗಮನ ನೀಡುವ ಆವಶ್ಯಕತೆ ಇದೆ ಎಂದು ಹೇಳಿದರು.

 ಸಂವಿಧಾನದ 51ಎ ಪರಿಚ್ಛೇದದಲ್ಲಿ ಹೇಳಲಾಗಿರುವ ‘ಹಕ್ಕು’ಗಳಿಗೆ, ನಿರ್ದಿಷ್ಟವಾಗಿ, ‘ಮೂಲಭೂತ ಹಕ್ಕು’ಗಳಿಗೆ ಮತ್ತು ನಮ್ಮ ‘ಹಕ್ಕು’ಗಳಿಗೆ ತಳಕು ಹಾಕುವ, ಜೋಡಿಸುವ, ಲಿಂಕ್ ಮಾಡುವ ಆವಶ್ಯಕತೆಯ ಬಗ್ಗೆ ಅವರು ದೇಶದ ಜನತೆಯ ಗಮನ ಸೆಳೆದರು.

ಈ ಪರಿಚ್ಛೇದ ಪಟ್ಟಿ ಮಾಡುವ 11 ಅಧಿನಿಯಮಗಳ ಮೂಲ ಆಶಯದಂತೆ, ಅದು ಹೇಳುವ ಕರ್ತವ್ಯಗಳಿಗೂ ಮಾಹಿತಿ ಹಕ್ಕು ಕಾರ್ಯಕರ್ತರ ಪ್ರಯತ್ನಗಳಿಗೂ ನೇರ ಸಂಬಂಧವಿದೆ. ಪಾರದರ್ಶಕತೆ ಮತ್ತು ಉತ್ತರದಾಯುತ್ವಕ್ಕೆ ಹಕ್ಕೊತ್ತಾಯ ಸಲ್ಲಿಸುವ ಮೂಲಕ ಈ ಕಾರ್ಯಕರ್ತರು ಕಾನೂನು ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದಂತಹ ಸಾಂವಿಧಾನಿಕ ವೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದಾರೆ ಮತ್ತು ಸಾರ್ವಜನಿಕ ಹಣಕಾಸಿನ ವಿನಿಯೋಗದ ಮೇಲೆ ನಿಗಾ ಇಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುತ್ತಿದ್ದಾರೆ.

ಅಂತಹ ಉತ್ತಮ ಉದ್ದೇಶ ಹೊಂದಿರುವ ಪ್ರಜ್ಞಾವಂತ ನಾಗರಿಕರೂ ‘ಸರಿಯಾದುದನ್ನೇ ಮಾಡಿದುದಕ್ಕಾಗಿ’ (ಆ್ಯಕ್ಟಿಂಗ್ ರೈಟ್‌ಲಿ) ಅವರ ಮೇಲೆ ದಾಳಿ ನಡೆದಾಗ, ಅವರನ್ನು ರಕ್ಷಿಸಲು ಸಾಕಷ್ಟು ಕ್ರಮ ತೆಗೆದುಕೊಳ್ಳದಿರುವ ಮೂಲಕ ಸರಕಾರ ‘ಸರಿಯಾದುದನ್ನೇ ಮಾಡು’ತ್ತಿದೆಯೇ?

ಮಾನವ ಹಕ್ಕು ಕಾರ್ಯಕರ್ತರು, ಈ ಹಕ್ಕುಗಳನ್ನು ಕರ್ತವ್ಯಗಳ ಜೊತೆ ಜೋಡಿಸುವುದನ್ನು ಪ್ರಶ್ನಿಸಲೇಬೇಕಾಗಿದೆ. 1997ರಲ್ಲಿ ಗುಜರಾತಿಗೆ ಸಂಬಂಧಿಸಿ ಇಂತಹ ಜೋಡಣೆಯನ್ನು ಮಾಡಲಾಗಿತ್ತು. ಮಾನವ ಹಕ್ಕುಗಳ ವಿಶ್ವಘೋಷಣೆಯನ್ನು ವಿಶ್ವಸಂಸ್ಥೆ ಚರ್ಚಿಸುತ್ತಿದ್ದಾಗ ಮಹಾತ್ಮಾ ಗಾಂಧಿ ಹೇಳಿದ್ದರು. ‘ನಾವು ವಿಶ್ವ ನಾಗರಿಕತ್ವದ ಕರ್ತವ್ಯವನ್ನು ಮಾಡಿದಾಗಲಷ್ಟೆ ನಮಗೆ ಬದುಕುವ ಹಕ್ಕು ಬರುತ್ತದೆ’’ ಹಾಗೆಯೇ, ಡಾ. ಬಿ. ಆರ್. ಅಂಬೇಡ್ಕರ್ ಜಾತಿ ವ್ಯವಸ್ಥೆಯನ್ನು ಖಂಡಿಸುವಾಗ ಕೂಡ ಅತ್ಯಂತ ಕೆಳ ಜಾತಿಯವರಿಗೆ ಹಾನಿಯಾಗುವಂತಹ ರೀತಿಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಾನಮಾನದೊಂದಿಗೆ ಕರ್ತವ್ಯಗಳನ್ನು ಜೋಡಿಸುವುದರ ಅಪಾಯಗಳ ಕಡೆಗೆ ಜನರ ಗಮನ ಸೆಳೆದಿದ್ದರು. ಈಗ, 21ನೇ ಶತಮಾನದಲ್ಲಿ ಯಾವುದು ಸರಿಯೆಂದು ನಿರ್ಧರಿಸುವವರು ಯಾರು? ತನ್ನ ಭ್ರಷ್ಟ ಚಟುವಟಿಕೆಗಳನ್ನು ಶತಾಯ ಗತಾಯ ಮುಚ್ಚಿಡಲು ಪ್ರಯತ್ನಿಸುವ ಒಬ್ಬ ಸಾರ್ವಜನಿಕ ಅಧಿಕಾರಿಗೆ, ಅವನ ಭ್ರಷ್ಟಾಚಾರವನ್ನು ಬಯಲು ಮಾಡುವ ಮಾಹಿತಿ ಹಕ್ಕು ಕಾರ್ಯಕರ್ತರ ಚಟುವಟಿಕೆಗಳು ‘ಸರಿಯಾದುದನ್ನೇ ಮಾಡು’ವುದಕ್ಕೆ ಒಂದು ಉದಾಹರಣೆ ಅಲ್ಲದಿರಬಹುದು. ‘ಸರಿಯಾದುದನ್ನೇ ಮಾಡುವುದು’ ಎಂದರೆ ಏನು ಎಂದೂ ಒಂದು ಸರಕಾರವೇ ನಿರ್ಧರಿಸುವುದು ಇದಕ್ಕಿಂತ ಹೆಚ್ಚು ಅಪಾಯಕಾರಿ.

ಗೋಮಾಂಸ ತಿಂದದ್ದಕ್ಕಾಗಿ ಅಥವಾ ಜಾನುವಾರುಗಳನ್ನು ಸಾಗಣೆ ಮಾಡಿದ್ದಕ್ಕಾಗಿ ಜನರ ಮೇಲೆ ದಾಳಿ ಮಾಡುವುದು, ‘ಲವ್ ಜಿಹಾದ್’ ಹೆಸರಿನಲ್ಲಿ ಅಂತರ್ ಧರ್ಮೀಯ ವಿವಾಹವಾಗುವವರನ್ನು ಸದೆಬಡಿಯುವುದು, ಪಂಥೀಯ ಭಾವನೆಗಳಿಗೆ ನೋವಾಗುತ್ತದೆಂದು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದು ಮತ್ತು ಕಲಾವಿದರ ಹಾಗೂ ಚಲನಚಿತ್ರ ನಟರ ತಲೆ- ಕಡಿಯುವವರಿಗೆ ಬೃಹತ್ ಮೊತ್ತದ ಬಹುಮಾನ ಘೋಷಿಸುವುದು, ತಮ್ಮ ಸಿದ್ಧಾಂತ ವಿರೋಧಿಸುವ ರಾಜಕೀಯ ಪಕ್ಷಗಳ ಸದಸ್ಯರ ಕೊಲೆ ಮಾಡುವುದು ಅಥವಾ ಪ್ರತಿಮೆಗಳನ್ನು ಭಗ್ನಗೊಳಿಸುವುದು ಅಥವಾ ಸತತವಾಗಿ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುವುದು- ಇದೆಲ್ಲ ‘ಸರಿಯಾದ್ದನ್ನೆ ಮಾಡುವುದೇ’?

‘‘ಸರಿಯಾದುದನ್ನೇ ಮಾಡಿ’’ ಎಂಬ ಉಪದೇಶದ ಬಗ್ಗೆ ದೇಶಾದ್ಯಂತ ಗಂಭೀರ ಚರ್ಚೆ ನಡೆಯುವ ಅಗತ್ಯವಿದೆ.

ಕೃಪೆ: thewire.in

Writer - ವೆಂಕಟೇಶ ನಾಯಕ್

contributor

Editor - ವೆಂಕಟೇಶ ನಾಯಕ್

contributor

Similar News

ಜಗದಗಲ
ಜಗ ದಗಲ