ಉಡುಪಿಗೆ ಕುಡಿಯುವ ನೀರಿನ ಹೆಸರಲ್ಲಿ 122.5 ಕೋಟಿ ರೂ. ದುಂದುವೆಚ್ಚ

Update: 2018-03-21 04:10 GMT

ನಮ್ಮ ಪ್ರತಿನಿಧಿಯಿಂದ

ವಾರಾಹಿ ನೀರಾವರಿ ಯೋಜನೆಯ ಎಡದಂಡೆ ಕಾಲುವೆ ಬಾರ್ಕೂರು ತನಕವೂ ತಲುಪಲು ಕಾಮಗಾರಿಗಳು ಈಗಾಗಲೇ ವಿವಿಧ ಹಂತದಲ್ಲಿವೆ. ಉಡುಪಿಯ ದಿಕ್ಕಿನಲ್ಲಿ ಮುಂದೆ ಬಂದಿರುವ ಕಾಲುವೆಯಿಂದ ನೀರನ್ನು ಎತ್ತಿ ಉಡುಪಿಯ ಕಡೆಗೆ ಒಯ್ಯುವುದಕ್ಕೆ ಖರ್ಚು ಕಡಿಮೆ ಎನ್ನುವುದು ಸಾಮಾನ್ಯ ಜ್ಞಾನ. ಆದರೆ ಅದನ್ನು ಬಿಟ್ಟು ನೇರವಾಗಿ ದೂರದ ವಾರಾಹಿ ಹೊಳೆಯಿಂದಲೇ ಭರತ್ಕಲ್ ಎಂಬಲ್ಲಿ ನೀರನ್ನು ಜಾಕ್ ವೆಲ್ ಮೂಲಕ ಸಂಗ್ರಹಿಸಿ ಉಡುಪಿಗೆ ಪೈಪ್ ಲೈನ್ ಮೂಲಕ ಕಳುಹಿಸಲು ಯೋಜನೆ ರೂಪಿಸಲಾಗಿದೆ ಎಂಬ ಸಂಗತಿಯೇ ಇಲ್ಲಿ ಅನುಮಾನಾಸ್ಪದ ಅನ್ನಿಸುತ್ತದೆ. ಭರತ್ಕಲ್‌ನಿಂದ ಉಡುಪಿಗೆ ತಲುಪಲು ಅಂದಾಜು 38.5 ಕಿಲೋಮೀಟರ್ ದೂರಕ್ಕೆ ಭಾರೀ ವೆಚ್ಚದಲ್ಲಿ ಪೈಪ್ ಲೈನ್ ಹಾಕುವ ಅಗತ್ಯವಿದೆ.

ಇಂತಹದೊಂದು ‘ಕೊಂಕಣ ಸುತ್ತಿ ಮೈಲಾರಕ್ಕೆ ಬರುವ’ ಯೋಜನೆಯ ಹಿಂದಿರುವ ಸತ್ಯಗಳೇನು ಎಂದು ಹುಡುಕಲು ಹೊರಟಾಗ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ವಿದ್ಯುತ್ ಉತ್ಪಾದಕರ ಲಾಬಿಯ ಹಲವು ಹುನ್ನಾರಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ.

ನೀರಿದ್ದರೆ ವಿದ್ಯುತ್

ಹೊರಿಯಬ್ಬೆ ಬಳಿ ವಾರಾಹಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯಲ್ಲಿ ರೈತರಿಗೆ ಹತ್ತು ದಿನಗಳಿಗಾಗುವಷ್ಟು ನೀರನ್ನು ಸಂಗ್ರಹಿಸಿಡುವ ಸಾಮರ್ಥ್ಯ ಇದೆ. ವಾರಾಹಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್‌ನಿಂದ ಪ್ರತಿದಿನ ಹೊರಬರುವ 1,100 ಕ್ಯೂಸೆಕ್ಸ್ ನೀರನ್ನು ಈ ಅಣೆಯಲ್ಲಿ ಸಂಗ್ರಹಿಸಿಟ್ಟು, ಕುಂದಾಪುರ ಹಾಗೂ ಉಡುಪಿ ತಾಲೂಕುಗಳ 38,800 ಎಕರೆ ಕೃಷಿ ಭೂಮಿಗೆ ನೀರುಣಿಸಲು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ವಾರಾಹಿ ಕಾಲುವೆಯಿಂದ ಕುಂದಾಪುರ ನಗರ ಹಾಗೂ ಅಲ್ಲಿಗೆ ಹೋಗುವ ಹಾದಿಯಲ್ಲಿರುವ ಆರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲೂ ವಾರಾಹಿ ನೀರನ್ನು ಕುಡಿಯಲು ವಿತರಿಸಲಾಗುತ್ತಿದೆ.

ಈಗ ಹೊಸ ಯೋಜನೆಯ ಪ್ರಕಾರ ಉಡುಪಿಗೆ ನೀರು ವಿತರಿಸಲು ಭರತ್ಕಲ್‌ನಲ್ಲಿ ಬೇಸಿಗೆಯಲ್ಲೂ ನೀರು ಲಭ್ಯವಾಗಬೇಕಾದರೆ, ಪ್ರತಿದಿನ ನೀರನ್ನು ಅಣೆಕಟ್ಟೆಯಿಂದ ಬಿಡುಗಡೆ ಮಾಡಬೇಕಾಗುತ್ತದೆ. ಆಗ ದೊಡ್ಡ ಪ್ರಮಾಣದಲ್ಲಿ ನೀರು ಬಳಕೆಯಾಗದೇ ಸಮುದ್ರದತ್ತ ಸಾಗುತ್ತದೆ. ಹೀಗೆ ಸಮುದ್ರ ಸೇರುವ ಹಾದಿಯಲ್ಲಿರುವ ಖಾಸಗಿ ಜಲವಿದ್ಯುತ್ ಯೋಜನೆಯೊಂದಕ್ಕೆ ವಿದ್ಯುತ್ ಉತ್ಪಾದಿಸಲು ವರ್ಷದ ಎಲ್ಲ ದಿನಗಳಲ್ಲೂ ನೀರು ಲಭ್ಯವಾಗುತ್ತದೆ.

  ವಾಸ್ತವವೆಂದರೆ, ಈ ವಿವಾದಾಸ್ಪದ ಜಲವಿದ್ಯುತ್ ಯೋಜನೆಗೆ ಅನುಮತಿ ಇರುವುದು ಮಳೆಗಾಲದಲ್ಲಿ ಸಿಗುವ ಹೆಚ್ಚುವರಿ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದಕ್ಕೆ. ಸ್ಥಳೀಯ ರೈತರು ಹೇಳುವಂತೆ ಸಂಗ್ರಹವಾದ ನೀರನ್ನು ಹೊರೆಯಬ್ಬೆಯಿಂದ ಎಡದಂಡೆ ಕಾಲುವೆಗೆ ಹರಿಯಬಿಟ್ಟರೆ, ಅಲ್ಲಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿಗೆ ಅನುಕೂಲ ಆಗುತ್ತದೆ. ಆ ಭಾಗದ ಕೃಷಿ ಭೂಮಿಗೆ ಅಗತ್ಯ ಇರುವ 31.15 ಕ್ಯೂಸೆಕ್ಸ್ ನೀರು ಮಾತ್ರ ವಾರಾಹಿಯಲ್ಲೂ ಲಭ್ಯ ಇರುವುದು. ಹಾಗಾಗಿ ನೀರು ತಮಗೆ ಬೇಕಾದಷ್ಟೇ ಇದ್ದರೂ, ಹೆಚ್ಚುವರಿ ನೀರು ಇಲ್ಲದಿದ್ದರೂ, ಉಡುಪಿಯ ಜನ ಕುಡಿಯುವ ನೀರು ಕೇಳುತ್ತಿದ್ದಾರೆ ಹಾಗಾಗಿ ಕೊಡಬೇಕೆಂಬ ಮಾನವೀಯತೆಯಿಂದ ಯೋಜನೆಗೆ ಅಚ್ಚುಕಟ್ಟು ಪ್ರದೇಶದ ರೈತರ ಒಪ್ಪಿಗೆ ಸಿಕ್ಕಿತ್ತು. ಆದರೆ ಈಗ ಏಕಾಏಕಿ ಕಚ್ಚಾನೀರನ್ನು ಭರತ್ಕಲ್ ಬಳಿ ಹೊಳೆಯಿಂದಲೇ ಎತ್ತಿ ಉಡುಪಿಗೆ ಪೈಪ್ ಲೈನ್ ಮೂಲಕ ಪಂಪ್ ಮಾಡಲು ಯೋಜಿಸಲಾಗಿದೆ ಎನ್ನುವುದು ಆ ಭಾಗದ ರೈತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಸಾಮಾನ್ಯವಾಗಿ ನೀರನ್ನು ಪೈಪ್ ಲೈನ್ ಮೂಲಕ ಹರಿಸುವಾಗ ನದಿ ದಂಡೆಯಲ್ಲೇ ನೀರನ್ನು ಶುದ್ಧೀಕರಿಸಿ ಪೈಪ್ ಲೈನಿಗೆ ಬಿಡುವುದು ಸಹಜ ಕ್ರಮ ಮತ್ತು ಸರಕಾರದ ನೀತಿ. ಹಾಗೆ ಮಾಡಿದಾಗ ನೀರು ಹರಿಯುವ ಹಾದಿಯಲ್ಲಿರುವ ಎಲ್ಲ ಗ್ರಾಮ ಪಂಚಾಯತ್‌ಗಳಿಗೂ ಶುದ್ಧವಾದ ನೀರನ್ನು ಹಂಚಿಕೊಂಡು ಬರುವುದು ಸಾಧ್ಯವಿದೆ ಮತ್ತು ಪಂಚಾಯತ್‌ಗಳೂ ಯೋಜನೆಗೆ ತಮ್ಮ ಪಾಲು ಹಣವನ್ನು ನೀಡುವುದರಿಂದ ಯೋಜನಾ ವೆಚ್ಚ ಹಂಚಿಹೋಗುತ್ತದೆ. ಒಂದು ವೇಳೆ ಉಡುಪಿಗೆ ವಾರಾಹಿಯದ್ದೇ ನೀರು ಬೇಕೆಂದಿದ್ದಲ್ಲಿ ಅದರ ಎಡದಂಡೆ ಕಾಲುವೆ ಈಗಾಗಲೇ ಪೂರ್ಣಗೊಂಡಿರುವ ಯಡ್ತಾಡಿ ಗ್ರಾಮದ ಅಲ್ತಾರು, ವಡ್ಡರ್ಸೆ ಗ್ರಾಮದ ಮಧುವನ ಅಥವಾ ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಬಳಿ ಕಾಲುವೆಯಿಂದ ನೀರನ್ನು ಎತ್ತಿ ಕೊಂಡೊಯ್ದರೆ, ಬರೀ 20-25 ಕಿ.ಮೀ.ಗಳೊಳಗೆ ಉಡುಪಿಗೆ ನೇರ ತಲುಪಬಹುದಾಗಿದ್ದು, ದಾರಿಯಲ್ಲಿ ಸಿಗುವ ಎಲ್ಲ ಗ್ರಾಮ ಪಂಚಾಯತ್‌ಗಳಿಗೂ ಶುದ್ಧ ನೀರನ್ನು ಹಂಚುತ್ತಾ ಉಡುಪಿ ತಲುಪಬಹುದು.

ಯಾಕೆ ಕಚ್ಚಾನೀರು?

ಉಡುಪಿಗೆ ಭರತ್ಕಲ್‌ನಿಂದ ಕಚ್ಚಾ ನೀರನ್ನೇ ಒಯ್ದು, ಉಡುಪಿಯಿಂದ 15 ಕಿ.ಮೀ. ದೂರದಲ್ಲಿರುವ ಬಜೆಯಲ್ಲಿ ಸಂಗ್ರಹಿಸುವ ಹಿಂದಿರುವ ಗುಟ್ಟು ಏನೆಂದು ಅರಸಿ ಹೊರಟರೆ ಇನ್ನೊಂದು ಅಚ್ಚರಿ ಕಾದಿತ್ತು. ಬಜೆ ಬಳಿ ಇನ್ನೊಂದು ಖಾಸಗಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾಚರಿಸುತ್ತಿದ್ದು, ಅವರಿಗೂ ಈ ನೀರಿನಿಂದ ವರ್ಷಪೂರ್ತಿ ಬಿಟ್ಟಿ ಖರ್ಚಿನಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.

ಈ ಖಾಸಗಿ ವಿದ್ಯುತ್ ಉತ್ಪಾದಕರಿಗೆ ಎಷ್ಟೊಂದು ಪ್ರೋತ್ಸಾಹ ಈ ಹಿತಾಸಕ್ತಿಗಳಿಂದ ದೊರಕುತ್ತಿದೆ ಎಂದರೆ, ಸರಕಾರ ನಿರ್ಮಿಸಿರುವ ವೆಂಟೆಡ್ ಡ್ಯಾಮಿಗಿಂತ ಎತ್ತರದ ವೆಂಟೆಡ್ ಡ್ಯಾಮನ್ನು ಇವರು ನಿರ್ಮಿಸಿಕೊಂಡಿದ್ದು, ಸರಕಾರದ ವೆಂಟೆಡ್ ಡ್ಯಾಮ್ ಮುಳುಗಡೆ ಆಗಿರುವುದು ಗೊತ್ತಿದ್ದರೂ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ. ಜೊತೆಗೆ ಕುಡಿಯಲೆಂದು ತಂದ ವಾರಾಹಿ ನೀರನ್ನು ಶೀಂಬ್ರ ಬಳಿ, ಬೋಟಿಂಗ್-ಪ್ರವಾಸೋದ್ಯಮ ಎಂದು ಬಳಸುವ ಯೋಜನೆ ತಯಾರಾಗುತ್ತಿದೆ. ಯಾಕೆಂದರೆ, ಹಾಗೆ ನೀರು ಹಾದು ಹೋದಾಗಲಷ್ಟೇ ಖಾಸಗಿ ವಿದ್ಯುತ್ ಉತ್ಪಾದನಾ ಸ್ಥಾವರಕ್ಕೆ ಲಾಭ ಇರುವುದು!

ಒಂದು ವೇಳೆ ನೀರನ್ನು ವಾರಾಹಿ ನದಿಯ ದಂಡೆಯಲ್ಲೇ ಶುದ್ಧೀಕರಿಸಿ ಬಜೆಗೆ ಕೊಂಡೊಯ್ಯದೆ ನೇರವಾಗಿ ಉಡುಪಿಗೆ ತಂದರೆ, ಶುದ್ಧ ನೀರನ್ನು ಕುಡಿಯುವುದಕ್ಕೆ ಬಿಟ್ಟು ಬೇರೆ ಚಟುವಟಿಕೆಗಳಿಗೆ ಬಳಕೆ ಮಾಡಲು ಸರಕಾರದ ನೀತಿ ಅವಕಾಶ ಕೊಡುವುದಿಲ್ಲ. ಹಾಗಾಗಿ ಸರಕಾರಿ ಖರ್ಚಿನಲ್ಲಿ ಕಚ್ಚಾ ನೀರನ್ನೇ ತರಿಸಿಕೊಂಡರೆ ಬಜೆಯಲ್ಲೂ ಜಲವಿದ್ಯುತ್ ವರ್ಷಪೂರ್ತಿ ಉತ್ಪಾದನೆಯಾಗುತ್ತದೆ! ಒಟ್ಟಿನಲ್ಲಿ ಸರಕಾರದ ಅಧಿಕಾರಿಗಳ ಜೊತೆ ಶಾಮೀಲಾಗಿ, 122.5 ಕೋಟಿ ರೂಪಾಯಿ ಜನರ ತೆರಿಗೆ ಹಣದ ಖರ್ಚಿನಲ್ಲಿ ಖಾಸಗಿ ಜಲವಿದ್ಯುತ್ ಉತ್ಪಾದಕರ ಲಾಭಕ್ಕಾಗಿ ಕಚ್ಚಾನೀರು ತರಿಸಿಕೊಳ್ಳುವ ಮೂಲಕ ವಾರಾಹಿ ಅಚ್ಚುಕಟ್ಟು ಪ್ರದೇಶದ ರೈತರಿಗೂ, ಪೈಪ್ ಲೈನ್ ಹಾದುಬರುವ ಹಾದಿಯಲ್ಲಿರುವ ಎಲ್ಲ ಗ್ರಾಮಗಳಿಗೂ ಅವರ ಕುಡಿಯುವ ನೀರಿನ, ನೀರಾವರಿ ನೀರಿನ ನೈಸರ್ಗಿಕ ಹಕ್ಕಿಗೆ ಧಕ್ಕೆ ತರಲಾಗಿದೆ.

(ಮುಂದುವರಿಯುತ್ತದೆ) (ಮುಂದಿನ ಸಂಚಿಕೆಯಲ್ಲಿ: ರಸ್ತೆ ಅಗೆಯುವ ಜಾಣತನ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News