ಮಿಯಾಮಿ ಮಾಸ್ಟರ್ಸ್: ಪ್ರಧಾನ ಸುತ್ತಿಗೆ ಭಾಂಬ್ರಿ ಪ್ರವೇಶ

Update: 2018-03-21 18:32 GMT

ಮಿಯಾಮಿ, ಮಾ.21: ಭಾರತದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಸತತ ಎರಡನೇ ಬಾರಿ ಎಟಿಪಿ ಮಿಯಾಮಿ ಮಾಸ್ಟರ್ಸ್‌ನಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಇಲ್ಲಿ ಬುಧವಾರ ನಡೆದ ಎರಡನೇ ಹಾಗೂ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾಂಬ್ರಿ ಸ್ವೀಡನ್‌ನ ಇಲಿಯಾಸ್ ಯಮೆರ್‌ರನ್ನು 7-5, 6-2 ನೇರ ಸೆಟ್‌ಗಳಿಂದ ಮಣಿಸಿದರು.

25ರ ಹರೆಯದ ಭಾಂಬ್ರಿ ಇದೀಗ ಎರಡನೇ ಬಾರಿ ವಿಶ್ವದ ನಂ.133ನೇ ಆಟಗಾರ ಯಮೆರ್‌ರನ್ನು ಎದುರಿಸಿದ್ದು, 2015ರಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಯಮೆರ್ ಅವರು ಭಾಂಬ್ರಿ ಅವರನ್ನು ಸೋಲಿಸಿದ್ದರು.

ಇತ್ತೀಚೆಗೆ ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ನಲ್ಲಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದ ಭಾಂಬ್ರಿ ಎರಡನೇ ಸುತ್ತಿನಲ್ಲಿ ವಿಶ್ವದ ನಂ.12ನೇ ಆಟಗಾರ ಲುಕಾಸ್ ಪೌಲಿರನ್ನು ಸೋಲಿಸಿ ಶಾಕ್ ನೀಡಿದ್ದರು.

ಭಾಂಬ್ರಿ ಮೊದಲ ಸುತ್ತಿನಲ್ಲಿ ಬೋಸ್ನಿಯ ಆಟಗಾರ ಮಿರ್ಝಾ ಬಾಸಿಕ್‌ರನ್ನು ಎದುರಿಸಲಿದ್ದಾರೆ. ಈ ಇಬ್ಬರು ಆಟಗಾರರು ಎರಡನೇ ಬಾರಿ ಮುಖಾಮುಖಿಯಾಗಲಿದ್ದಾರೆ. 2016ರಲ್ಲಿ ನಡೆದ ಸೋಫಿಯಾ ಓಪನ್‌ನಲ್ಲಿ ಬಾಸಿಕ್ ಜಯ ಸಾಧಿಸಿದ್ದರು. ಒಂದು ವೇಳೆ ಭಾಂಬ್ರಿ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರೆ ಎರಡನೇ ಸುತ್ತಿನಲ್ಲಿ ಅಮೆರಿಕದ 8ನೇ ಶ್ರೇಯಾಂಕದ ಆಟಗಾರ ಜಾಕ್ ಸಾಕ್‌ರನ್ನು ಎದುರಿಸಲಿದ್ದಾರೆ. ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಅವರು ಎಡ್ವರ್ಡ್ ವ್ಯಾಸೆಲಿನ್ ಜೊತೆಗೂಡಿ ಅಮೆರಿಕದ ಅಡ್ರಿಯನ್ ಮನ್ನಾರಿಯೊ ಹಾಗೂ ಡೇನಿಯಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News