ಮಾಲಕನ ಮಾರ್ದನಿ!

Update: 2018-03-21 18:50 GMT

ಹಾಗೆ ನೋಡಿದಲ್ಲಿ, ಭಾರತವು ವಾರ್ತಾ ಮತ್ತು ಪ್ರಸಾರ ಇಲಾಖೆಯೆಂಬ ಒಂದು ಇಲಾಖೆಯನ್ನೇಕೆ ಹೊಂದಿದೆ ಎಂಬ ಪ್ರಶ್ನೆಯನ್ನೂ ಸಹ ಖಂಡಿತ ಕೇಳಲೇಬೇಕಾಗುತ್ತದೆ. ಸರಕಾರದ ಪ್ರಚಾರವನ್ನು ಮಾಡುವುದು ಮತ್ತು ಖಾಸಗಿ ಪ್ರಸಾರ ಸಂಸ್ಥೆಗಳಿಗೆ ಪರವಾನಿಗೆಯನ್ನು ನೀಡುವುದನ್ನು ಬಿಟ್ಟು ಅದು ಬೇರೇನು ಮಾಡುತ್ತಿದೆ? ಸರಕಾರದ ಬಳಿ ತನ್ನ ಪ್ರಚಾರಕ್ಕೆ ಈಗಾಗಲೇ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳಿವೆ ಹಾಗೂ ಪರವಾನಿಗೆಯನ್ನು ನೀಡಲು ಬೇರೆ ಒಂದು ಸಂಸ್ಥೆಯನ್ನು ರಚಿಸಬಹುದು. ಒಂದು ಪ್ರಜಾಸತ್ತೆಯಲ್ಲಿ ಇಂತಹ ಒಂದು ಇಲಾಖೆ ಅಸ್ತಿತ್ವದಲ್ಲಿರುವುದೇ ಒಂದು ಅಪಭ್ರಂಶವಲ್ಲವೇ?

ಒಂದು ಸ್ವತಂತ್ರ ಮತ್ತು ಸ್ವಾಯತ್ತ ಸಾರ್ವಜನಿಕ ಪ್ರಸಾರ ಮಾಧ್ಯಮವು ಅಸ್ತಿತ್ವದಲ್ಲಿರಬೇಕೆಂಬ ಆಶಯ ಹಾಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರಕ್ಕಾಗಲೀ, ಅಥವಾ ಈ ಹಿಂದಿನ ಯಾವುದೇ ಸರಕಾರಗಳಿಗಾಗಲೀ ಖಂಡಿತಾ ಇರಲಿಲ್ಲವೆಂಬುದು ಸರ್ವವಿಧಿತ. ಆದರೂ ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿ ಮತ್ತು ಸರಕಾರದ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉದ್ಭವಿಸಿದಾಗಲೆಲ್ಲಾ ಪ್ರಸಾರ ಭಾರತಿಯ ಸ್ವಾಯತ್ತೆಯ ಬಗೆಗಿನ ಚರ್ಚೆಗಳು ಜೀವ ಪಡೆದುಕೊಳ್ಳುತ್ತವೆ. ಪ್ರಸಾರ ಭಾರತಿ ಸಂಸ್ಥೆಗೆ ವೃತ್ತಿಪರ ಪರಿಣಿತರನ್ನು ನೇಮಿಸಿಕೊಳ್ಳುವ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮತ್ತೆ ಅಂಥದ್ದೊಂದು ಭಿನ್ನಾಭಿಪ್ರಾಯವು ಪ್ರಸಾರ ಭಾರತಿ ಮಂಡಳಿ ಮತ್ತು ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಡುವೆ ತಲೆದೋರಿದೆ. ಪ್ರಸಾರ ಭಾರತಿಯು ತನ್ನ ಅಧಿಕಾರವನ್ನು ಪ್ರತಿಪಾದಿಸುವ ಮೂಲಕ ಒಂದು ಸಣ್ಣ ಕದನಕ್ಕೆ ವೇದಿಕೆಯನ್ನು ಕಲ್ಪಿಸಿಬಿಟ್ಟಿದೆ. ಹೀಗಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಉದ್ಯೋಗಿಗಳ ವೇತನಕ್ಕಾಗಿ ಕೊಡಬೇಕಾದ ಹಣವನ್ನು ಬಿಡುಗಡೆ ಮಾಡದಿರುವುದನ್ನು ವಾರ್ತಾ ಇಲಾಖೆಯು ತಮ್ಮ ನಿಗಮದ ವಿರುದ್ಧ ತೆಗೆದುಕೊಳ್ಳುತ್ತಿರುವ ಪ್ರತೀಕಾರದ ಕ್ರಮವೆಂದು ಅದು ಬಣ್ಣಿಸಿದೆ. ಆದರೆ, ನಿರೀಕ್ಷಿಸಿದಂತೆ ಕುಟುಂಬದ ಒಳಗಿನ ಸಣ್ಣ ವ್ಯಾಜ್ಯವೇನೋ ಎಂಬಂತೆ ಈ ವಿವಾವೂ ಕೂಡಾ ನಿಧಾನವಾಗಿ ತಣ್ಣಗಾಗಿದೆ.
1975-77ರ ಅವಧಿಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದಾಗ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳನ್ನು ಸರಕಾರದ ಪ್ರಚಾರ ಸಾಧನಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಅತಿರೇಕಗಳ ಹಿನ್ನೆಲೆಯಲ್ಲಿ ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಾರ್ವಜನಿಕ ಪ್ರಸಾರ ನಿಗಮದ ಪರಿಕಲ್ಪನೆಯು ಹುಟ್ಟಿಕೊಂಡಿತು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರವು ಇಂತಹ ಒಂದು ನಿಗಮಕ್ಕೆ ಬೇಕಾದ ನೀಲನಕ್ಷೆಯನ್ನು ರೂಪಿಸಲು ಹಿರಿಯ ಸಂಪಾದಕ ಮತ್ತು ಪತ್ರಕರ್ತ ಬಿ.ಜಿ. ವರ್ಗೀಸ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಭಾರತವು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಮಾದರಿಯನ್ನು ಅನುಸರಿಸಬಹುದೆಂದು ತೀರ್ಮಾನಿಸಲಾಯಿತು. ವರ್ಗೀಸ್ ಸಮಿತಿಯ ಶಿಫಾರಸುಗಳನ್ನು ಆಧರಿಸಿ 1990ರಲ್ಲಿ ಪ್ರಸಾರ ಭಾರತಿ (ಭಾರತೀಯ ಪ್ರಸಾರ ನಿಗಮ) ಕಾಯ್ದೆಯನ್ನು ರೂಪಿಸಿ ಜಾರಿ ಮಾಡಲಾಯಿತು. ಅದಾದ ನಂತರವೂ ಪ್ರಸಾರ ಭಾರತಿ ನಿಗಮವು ಏರ್ಪಾಡಾಗಲು ಭರ್ತಿ ಏಳು ವರ್ಷಗಳೇ ಬೇಕಾಯಿತು.
ಆದರೂ ಆ ಕಾಯ್ದೆಯಲ್ಲಿರುವ ಮುಖ್ಯ ಅಂಶಗಳನ್ನು ಈವರೆಗೆ ಯಾವ ಸರಕಾರಗಳೂ ಪರಿಗಣನೆಗೇ ತೆಗೆದುಕೊಂಡಿಲ್ಲ. ಉದಾಹರಣೆಗೆ ಆಳುವ ಸರಕಾರದ ಮಧ್ಯಪ್ರವೇಶದಿಂದ ಪ್ರಸಾರ ಭಾರತಿಯನ್ನು ರಕ್ಷಿಸಲು ಪ್ರಸಾರ ಭಾರತಿ ಕಾಯ್ದೆಯು 22 ಸಂಸತ್ ಸದಸ್ಯರ ಒಂದು ಉಸ್ತುವಾರಿ ಸಮಿತಿಯೊಂದನ್ನು ರಚಿಸಬಹುದೆಂಬ ಮುಂದಾಲೋಚನೆಯುಳ್ಳ ಪ್ರಸ್ತಾಪವನ್ನು ಮಾಡಿದೆ. ಅದರೆ ಈ ಸಮಿತಿಯ ರಚನೆಯೂ ಆಗಿಲ್ಲ. ಮತ್ತು ಯಾವ ಪಕ್ಷಗಳೂ ಅದರ ರಚನೆಗೆ ಒತ್ತಾಯಿಸಿಯೂ ಇಲ್ಲ. ಈ ಹಿಂದಿನ ಸರಕಾರವು ನೇಮಿಸಿದ್ದ ಸಾಮ್ ಪಿತ್ರೋಡ ಸಮಿತಿಯು ಸಹ ಈ ಪ್ರಮುಖ ಲೋಪವನ್ನು ಎತ್ತಿ ತೋರಿಸಿತ್ತು. ವಾಸ್ತವವಾಗಿ ಅಂಥ ಒಂದು ಶಾಸನಾತ್ಮಕ ಅವಕಾಶವು ಎಷ್ಟು ಪರಿಣಾಮಕಾರಿಯಾಗಿರಬಲ್ಲದು ಎಂಬುದು 2011ರಲ್ಲಿ ರಾಜ್ಯಸಭಾ ಟಿವಿ ವಾಹಿನಿಯು ಅಸ್ತಿತ್ವಕ್ಕೆ ಬಂದಾಗ ಸಾಬೀತುಗೊಂಡಿತು. ಆಗ ಭಾರತದ ಉಪರಾಷ್ಟ್ರಪತಿಯಾದ ಹಾಮಿದ್ ಅನ್ಸಾರಿಯವರು ಅದರ ಮುಖ್ಯಸ್ಥರಾಗಿದ್ದರು ಮತ್ತು ಆ ವಾಹಿನಿಯ ಮೇಲ್ವಿಚಾರಣೆಗೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಯಿತು. ವಾಸ್ತವವಾಗಿ ಆ ವಾಹಿನಿಯು ದೇಶದ ಅಸಂಖ್ಯಾತ ಖಾಸಗಿ ಸುದ್ದಿ ವಾಹಿನಿಗಳು ನಡೆಸುತ್ತಿರುವ ವಿವೇಕ ಶೂನ್ಯ ಸದ್ದು ಗದ್ದಲಗಳಿಂದ ಭಿನ್ನವಾದ ಗುಣಮಟ್ಟದ ಚರ್ಚೆ ಮತ್ತು ಸಂವಾದಗಳನ್ನು ತನ್ನ ವಾಹಿನಿಯಲ್ಲಿ ನಡೆಸುವ ಮೂಲಕ ಒಂದು ನೈಜವಾದ ಸಾರ್ವಜನಿಕ ಪ್ರಸಾರ ಸಂಸ್ಥೆಯೊಂದು ಎಂತಹ ಕೊಡುಗೆ ನೀಡಬಲ್ಲದೆಂಬುದನ್ನು ಭಾರತದ ಜನತೆಗೆ ಸ್ವಲ್ಪ ಸಮಯವಾದರೂ ತೋರಿಸಿಕೊಟ್ಟಿತು. ಆದೆ ಆ ಪ್ರಯೋಗ ದೀರ್ಘಕಾಲ ನಡೆಯಲಿಲ್ಲ.
ಆ ಕಾಯ್ದೆಯು ರಾಷ್ಟ್ರಪತಿಯವರ ಅಧ್ಯಕ್ಷತೆಯಲ್ಲಿ ಸಂಸತ್ತಿನ ಎರಡೂ ಮನೆಗಳ ತಲಾ ನಾಲ್ವರು ಸದಸ್ಯರುಳ್ಳ ಸಮಿತಿಯನ್ನು ರಚಿಸಿ, ಅದರ ಮೂಲಕ ಸಾರ್ವಜನಿಕ ವಲಯದ 11 ಜನ ಪರಿಣತರನ್ನುಳ್ಳ ಒಂದು ಪ್ರಸಾರ ಪರಿಷತ್ತನ್ನು ನೇಮಿಸುವ ಅವಕಾಶವನ್ನು ಕಲ್ಪಿಸಿದೆ. ಪ್ರಸಾರ ಭಾರತಿಯು ಪ್ರಸಾರ ಮಾಡುವ ಅಂಶಗಳ ಸಾರದ ಬಗ್ಗೆ ಇರಬಹುದಾದ ದೂರುಗಳನ್ನು ಈ ಪರಿಷತ್ತಿಗೆ ಸಾರ್ವಜನಿಕರು ಸಲ್ಲಿಸಬಹುದಿತ್ತು. ಆದರೂ ಅಂತಹ ಒಂದು ಸಮಿತಿಯನ್ನು ಈವರೆಗೆ ರಚಿಸಲಾಗಿಲ್ಲ. ಹಾಗೆಯೇ ಆ ಕಾಯ್ದೆಯ ಪ್ರಕಾರ ಈ ಅಗತ್ಯಗಳಿಗಾಗಿ ಭಾರತೀಯ ಪ್ರಸಾರ ಭಾರತಿ ನಿಗಮವನ್ನು ರಚಿಸಬೇಕಿತ್ತು. ಆದರೆ ಅದನ್ನೂ ರಚಿಸಲಾಗಿಲ್ಲ.


ಅವುಗಳೆಲ್ಲರ ಬದಲಿಗೆ ಈಗ ಆಸ್ತಿತ್ವದಲ್ಲಿರುವುದು ಸಾರ್ವಜನಿಕ ಪ್ರಸಾರ ನಿಗಮದ ಹೆಸರೇ ಹೊರತು ಪ್ರಸಾರವಲ್ಲ. ವಾಸ್ತವವಾಗಿ ಈ ಹಿಂದೆ ಯಾವ ರೀತಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳನ್ನು ನೇರವಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ನಿಯಂತ್ರಿಸಲಾಗುತ್ತಿತ್ತೋ ಅದೇ ಪರಿಸ್ಥಿತಿಯೇ ಈಗಲೂ ಮುಂದುವರಿದಿದೆ. ಅಷ್ಟು ಮಾತ್ರವಲ್ಲ ಈಗಿರುವ ಪ್ರಸಾರ ಭಾರತಿ ಮಂಡಳಿಯನ್ನು ಖಂಡಿತಾ ಒಂದು ಸ್ವತಂತ್ರ ವ್ಯವಸ್ಥೆಯೆಂದು ಹೇಳಲಾಗುವುದಿಲ್ಲ. ಆಳುವ ಸರಕಾರಗಳ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರೇ ಅದರ ಸದಸ್ಯರಾಗುತ್ತಾರೆ. ಈಗಿನ ಅಧ್ಯಕ್ಷರು ಮತ್ತು ಸದಸ್ಯರು ಕೂಡಾ ಈ ನಿಯಮಕ್ಕೆ ಹೊರತೇನೂ ಅಲ್ಲ. ಈಗ ಸರಕಾರ ಮತ್ತು ಪ್ರಸಾರ ಭಾರತಿ ನಿರ್ದೇಶನಾಯಲದ ನಡುವೆ ತಲೆದೋರಿರುವ ಬಿಕ್ಕಟ್ಟಿನಲ್ಲಿ ಸೈದ್ಧಾಂತಿಕವಾದದ್ದೇನೂ ಇಲ್ಲ. ಹೆಚ್ಚೆಂದರೆ ಅವು ತಮ್ಮ ನಡುವಿನ ಅಧಿಕಾರ ವ್ಯಾಪ್ತಿಗೆ ಸಂಬಂಧಪಟ್ಟವಷ್ಟೆ ಆಗಿವೆ. ಹೀಗಾಗಿ ಈಗಿರುವ ಪ್ರಸಾರ ಭಾರತಿ ಸಂಸ್ಥೆಯನ್ನು ಒಂದು ಸಾರ್ವಜನಿಕ ಸ್ವತಂತ್ರ ಸಂಸ್ಥೆಯೆಂದು ಕರೆಯುವುದೇ ತಪ್ಪು. ಏಕೆಂದರೆ ಅದು ಹಿಂದಿನಂತೆ ಒಂದು ಸರಕಾರಿ ಪ್ರಸಾರ ಸಂಸ್ಥೆಯಾಗಿಯೇ ಮುಂದುವರಿದಿದೆ.
ಅಷ್ಟು ಮಾತ್ರವಲ್ಲ. ಒಂದು ವೇಳೆ ರೂಪಿಸಲಾಗಿರುವ ನಿಯಮಾವಳಿಯ ಪ್ರಕಾರವೇ ಒಂದು ಸಂಸ್ಥೆಯನ್ನು ರಚಿಸಲಾದರೂ ಎಲ್ಲಿಯ ತನಕ ಅದರ ನಡಾವಳಿಯಲ್ಲಿ ಸರಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಧ್ಯಪ್ರವೇಶಕ್ಕೆ ಅವಕಾಶವಿರುತ್ತದೋ ಅಲ್ಲಿಯವರೆಗೆ ಅದನ್ನು ಒಂದು ಸ್ವಾಯತ್ತ ಸಂಸ್ಥೆಯೆಂದು ಕರೆಯಲಾಗುವುದಿಲ್ಲ. ಹಾಗೆ ನೋಡಿದಲ್ಲಿ, ಭಾರತವು ವಾರ್ತಾ ಮತ್ತು ಪ್ರಸಾರ ಇಲಾಖೆಯೆಂಬ ಒಂದು ಇಲಾಖೆಯನ್ನೇಕೆ ಹೊಂದಿದೆ ಎಂಬ ಪ್ರಶ್ನೆಯನ್ನೂ ಸಹ ಖಂಡಿತ ಕೇಳಲೇಬೇಕಾಗುತ್ತದೆ. ಸರಕಾರದ ಪ್ರಚಾರವನ್ನು ಮಾಡುವುದು ಮತ್ತು ಖಾಸಗಿ ಪ್ರಸಾರ ಸಂಸ್ಥೆಗಳಿಗೆ ಪರವಾನಿಗೆಯನ್ನು ನೀಡುವುದನ್ನು ಬಿಟ್ಟು ಅದು ಬೇರೇನು ಮಾಡುತ್ತಿದೆ? ಸರಕಾರದ ಬಳಿ ತನ್ನ ಪ್ರಚಾರಕ್ಕೆ ಈಗಾಗಲೇ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋಗಳಿವೆ ಹಾಗೂ ಪರವಾನಿಗೆಯನ್ನು ನೀಡಲು ಬೇರೆ ಒಂದು ಸಂಸ್ಥೆಯನ್ನು ರಚಿಸಬಹುದು. ಒಂದು ಪ್ರಜಾಸತ್ತೆಯಲ್ಲಿ ಇಂತಹ ಒಂದು ಇಲಾಖೆ ಅಸ್ತಿತ್ವದಲ್ಲಿರುವುದೇ ಒಂದು ಅಪಭ್ರಂಶವಲ್ಲವೇ?
ಆದರೆ ನೈಜವಾದ ಒಂದು ಸ್ವಾಯತ್ತ ಸಾರ್ವಜನಿಕ ಪ್ರಸಾರ ಸಂಸ್ಥೆಯೊಂದನ್ನು ಕಟ್ಟುವುದಂತೂ ಅತ್ಯಗತ್ಯವಾಗಿದೆ. ನೋಡುಗರ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ ಎಂಬ ಕಾರಣಕಾಗಿ ಖಾಸಗಿ ಪ್ರಸಾರ ಸಂಸ್ಥೆಗಳು ನಿರ್ಲಕ್ಷಿಸುವ ಸಾಕಷ್ಟು ವಿಷಯಗಳನ್ನು ಈ ಸಂಸ್ಥೆಯು ಸಾರ್ವಜನಿಕರ ಗಮನಕ್ಕೆ ತರಬಹುದು. ಅಲ್ಲದೆ ಸದ್ಯ ಹಲವಾರು ಖಾಸಗಿ ವಾಹಿನಿಗಳು ನಡೆಸುವ ಸಮಕಾಲೀನ ವಿಷಯಗಳ ಬಗೆಗಿನ ಕಾರ್ಯಕ್ರಮಗಳ ಅಬ್ಬರದ ಗದ್ದಲಗಳಲ್ಲಿ ಕೊಚ್ಚಿಹೋಗುತ್ತಿರುವ ಸಂವಾದ ಮತ್ತು ಚರ್ಚೆಗಳಿಗೆ ಈ ಸಂಸ್ಥೆಯು ಅವಕಾಶಗಳನ್ನು ಕಲ್ಪಿಸಿಕೊಡಬಹುದು.
 ಅಂತಿಮವಾಗಿ ಅದು ಭಾರತದ ಶ್ರೀಮಂತ ವೈವಿಧ್ಯಗಳನ್ನು ಕಾಪಿಡುವ ಸಂಗ್ರಹಕಾರನೂ ಆಗಬಹುದು. ಈ ಹಿಂದೆ ಆಲ್ ಇಂಡಿಯಾ ರೇಡಿಯೋ ಸಂಸ್ಥೆಯು ಭಾರತದ ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಸಂಗ್ರಹಿಸಿಡುವ ಅತ್ಯುತ್ತಮ ಕೆಲಸವನ್ನು ಮಾಡಿತ್ತು. ಒಂದು ಸ್ವತಂತ್ರ ಮತ್ತು ಸ್ವಾಯತ್ತ ಪ್ರಸಾರ ಸಂಸ್ಥೆಯು ಇದಕ್ಕಿಂತ ಸಾಕಷ್ಟು ಗುಣಾತ್ಮಕವಾದವುಗಳನ್ನು ಮಾಡಬಹುದು. ಆದರೆ ಈಗಿರುವ ಪ್ರಸಾರ ಭಾರತಿ ಅಂಥಾ ಒಂದು ಸಂಸ್ಥೆಯ ಕೆಟ್ಟ ನಕಲಾಗಿಯೂ ಉಳಿದಿಲ್ಲ.
ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ