ಜಯಲಲಿತಾ ದಾಖಲಾದ ದಿನದಿಂದ ಅಪೋಲೋ ಆಸ್ಪತ್ರೆಯಲ್ಲಿ ನಡೆದದ್ದೇನು?

Update: 2018-03-22 12:25 GMT

ಚೆನ್ನೈ, ಮಾ.22: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು  ಡಿಸೆಂಬರ್ 5, 2016ರಂದು ಕೊನೆಯುಸಿರೆಳೆಯುವುದಕ್ಕಿಂತ 75 ದಿನಗಳ ಮುಂಚೆ ಅಪೋಲೋ ಆಸ್ಪತ್ರೆಗೆ ದಾಖಲಾದಂದಿನಿಂದ ಅಲ್ಲಿನ ಐಸಿಯುವಿನಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು ಎಂದು ಆಸ್ಪತ್ರೆಯ ಅಧ್ಯಕ್ಷ ಡಾ ಪ್ರತಾಪ್ ಸಿ ರೆಡ್ಡಿ ಹೇಳಿದ್ದಾರೆ.

ಅಪೋಲೋ ಇಂಟರ್ ನ್ಯಾಷನಲ್ ಕೊಲೆರೆಕ್ಟಲ್ ಸಮ್ಮೇಳನ 2018 ಅಂಗವಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ಜಸ್ಟಿಸ್ ಎ. ಅರುಮುಘಸ್ವಾಮಿ ಆಯೋಗಕ್ಕೆ ಎಲ್ಲಾ ಅಗತ್ಯ ದಾಖಲೆಗಳನ್ನು ಆಸ್ಪತ್ರೆ ನೀಡಿದೆ ಎಂದು ಹೇಳಿದ ಅವರು ಸಿಸಿಟಿವಿ ದಾಖಲೆಗಳ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ನುಡಿದರು.

ಆಸ್ಪತ್ರೆಯ 24 ಹಾಸಿಗೆಗಳ ಐಸಿಯುವಿನಲ್ಲಿ ಜಯಲಲಿತಾ ಏಕೈಕ ರೋಗಿಯಾಗಿದ್ದರು ಎಂದೂ ಅವರು ತಿಳಿಸಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದಂದಿನಿಂದ ಎಲ್ಲರಿಗೂ ಐಸಿಯುವಿಗೆ ಪ್ರವೇಶ ನಿರಾಕರಿಸಲಾಯಿತು. ಇತರ ರೋಗಿಗಳನ್ನು ಇನ್ನೊಂದು ಐಸಿಯುವಿಗೆ ಸ್ಥಳಾಂತರಿಸಲಾಯಿತು. ಅಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ತೆಗೆಯಲಾಯಿತು ಎಂದು ಅವರು ತಿಳಿಸಿದರು.

ಆಸ್ಪತ್ರೆ ತನ್ನ ಕೈಲಾದಷ್ಟು ಶ್ರಮಿಸಿದ್ದರೂ ಜಯಲಲಿತಾ ಅವರನ್ನು ಉಳಿಸಲಾಗಿಲ್ಲ ಎಂದು ತಿಳಿಸಿದ ಡಾ.ರೆಡ್ಡಿ ಈ ಪ್ರಕರಣ ತನಿಖೆಯಲ್ಲಿರುವುದರಿಂದ ಹೆಚ್ಚಿಗೇನನ್ನೂ ಹೇಳಿಲ್ಲ. "ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಆಕೆಯನ್ನು ಚೆನ್ನಾಗಿ ನೋಡಿಕೊಂಡರು. ವಿದೇಶಗಳಿಂದಲೂ ಆಕೆಗಾಗಿ  ವೈದ್ಯರು ಆಗಮಿಸಿದ್ದರು.   ಆಕೆ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವೂ ನಮಗೆಲ್ಲಾ ಇತ್ತು. ಆಕೆ ಆರೋಗ್ಯದಿಂದಿದ್ದಾರೆ ಎಂದೂ ನಾನು ಒಮ್ಮೆ ಹೇಳಿದ್ದೆ,'' ಎಂದು ಡಾ ರೆಡ್ಡಿ ನೆನಪು ಮಾಡಿಕೊಂಡರು.

ಆಸ್ಪತ್ರೆಗೆ ಸಮನ್ಸ್ ಬಂದರೆ ತನಿಖೆಗೆ ಹಾಜರಾಗುವುದು ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News