ಬ್ಯಾಂಕ್ ವಂಚಕರ ಪಾಸ್‌ಪೋರ್ಟ್ ರದ್ದುಗೊಳಿಸಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಇಡಿ ಮನವಿ

Update: 2018-03-22 12:40 GMT

 ಹೊಸದಿಲ್ಲಿ, ಮಾ.22: ಆಂಧ್ರ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಸಮೂಹಕ್ಕೆ ಸುಮಾರು 10,000 ಕೋಟಿ ರೂ. ವಂಚಿಸಿ ಸದ್ಯ ದೇಶದಿಂದ ಪರಾರಿಯಾಗಿರುವ ನಿತಿನ್ ಮತ್ತು ಚೇತನ್ ಸಂದೇಸರ ಎಂಬ ಇಬ್ಬರು ಉದ್ಯಮಿಗಳ ಪಾಸ್‌ಪೋರ್ಟನ್ನು ರದ್ದುಗೊಳಿಸುವಂತೆ ಜಾರಿ ನಿರ್ದೇಶನಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರದ ಮೂಲಕ ಮನವಿ ಮಾಡಿದೆ.

ಬ್ಯಾಂಕ್‌ಗಳಿಗೆ ಹಣ ವಂಚನೆ ಆರೋಪದಲ್ಲಿ ಕಳೆದ ವರ್ಷ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ತಮ್ಮ ವಿರುದ್ಧ ದೂರು ದಾಖಲಾದ ನಂತರ ನಿತಿನ್ ಮತ್ತು ಚೇತನ್ ಕುಟುಂಬ ಸಮೇತ ದೇಶ ಬಿಟ್ಟು ಪರಾರಿಯಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆರೋಪಿಗಳ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವಂತೆ ಮುಂಬೈಯಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಮನವಿ ಮಾಡಲಾಗಿತ್ತು. ಆದರೆ ಪ್ರಾದೇಶಿಕ ಕಚೇರಿಯು ಆರೋಪಿಗಳ ಪಾಸ್‌ಪೋರ್ಟನ್ನು ರದ್ದುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ವಿದೇಶಾಂಗ ಸಚಿವಾಲಯಕ್ಕೆ ಹಲವು ಬಾರಿ ಪತ್ರ ಬರೆದು, ಇದೇ ಮಾದರಿಯ ಹಲವು ವಂಚನಾ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದವು.

ಈ ಪ್ರಕರಣಗಳಲ್ಲಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯ ಪ್ರಕರಣವೂ ಸೇರಿಕೊಂಡಿತ್ತು. ಆರ್ಥಿಕ ಅಪರಾಧದಡಿ ತನಿಖಾ ಸಂಸ್ಥೆಗಳು ದೂರು ದಾಖಲಿಸಿದ ನಂತರ ದೇಶವನ್ನು ತ್ಯಜಿಸಿರುವ 31 ಮಂದಿ ಪ್ರತಿಷ್ಠಿತ ವ್ಯಕ್ತಿಗಳ ಪೈಕಿ ನಿತಿನ್ ಮತ್ತು ಚೇತನ್ ಸಂದೇಸರ ಕೂಡಾ ಸೇರಿದ್ದಾರೆ. ವಡೋದರ ಮೂಲದ ಉದ್ಯಮಿಗಳಾಗಿರುವ ಆರೋಪಿಗಳಿಗೆ ಪ್ರಮುಖ ರಾಜಕಾರಣಿ ಜೊತೆಗಿರುವ ಸಂಬಂಧದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ರಾಜಕಾರಣಿಯ ಅಳಿಯ ಕೂಡಾ ಬ್ಯಾಂಕ್ ವಂಚನಾ ಜಾಲದಲ್ಲಿ ಶಾಮೀಲಾಗಿದ್ದಾನೆ ಎಂದು ಸಿಬಿಐ ಆರೋಪಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮೂಲದ ಉದ್ಯಮಿ ಗಗನ್ ಧವನ್ ಎಂಬಾತನನ್ನು ಈಗಾಗಲೇ ಇಡಿ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News