ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ತಗ್ಗಿಸಲು ಬಯಸಿದ್ದೇವೆ ಎಂದ ಕಾನೂನು ಸಚಿವ!

Update: 2018-03-22 16:23 GMT

ಹೊಸದಿಲ್ಲಿ,ಮಾ.22: ತನ್ನ ನಾಯಕರಿಗೆ ಕ್ಷಮಾದಾನ ನೀಡಲು ಪ್ರಯತ್ನಿಸುತ್ತಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಮುಝಫ್ಫರ್‌ನಗರ ದಂಗೆಗಳಿಗೆ ಸಂಬಂಧಿಸಿದ 131 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಹವಣಿಸುತ್ತಿದೆ. ಈ ಎಲ್ಲ ಪ್ರಕರಣಗಳು ಒಂದೇ ಸಮುದಾಯದ ಸದಸ್ಯರ ವಿರುದ್ಧ ದಾಖಲಾಗಿವೆ. ಗುರುವಾರ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಜ್ಯದ ಕಾನೂನು ಸಚಿವ ಬೃಜೇಶ್ ಪಾಠಕ್ ಅವರು, ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ನಾವು ನಿರ್ಧರಿಸಿದ್ದೇವೆ. ರಾಜ್ಯದಲ್ಲಿಯ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ನಾವು ಬಯಸಿದ್ದೇವೆ ಎಂದು ಸಮಜಾಯಿಷಿ ನೀಡಿದರು.

ಆದರೆ ನಿರ್ದಿಷ್ಟ ಪ್ರಕರಣಗಳ ಕುರಿತು ವಿವರಗಳನ್ನು ನೀಡಲು ನಿರಾಕರಿಸಿದ ಅವರು, ಆ ಕಡತಗಳು ತನ್ನ ಬಳಿಯಿಲ್ಲ. ಆದರೆ ಜನರಿಗೆ ತೊಂದರೆಯನ್ನುಂಟು ಮಾಡಲು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಇಂತಹ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ನಾವು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.

ಇವೆಲ್ಲ ಹಳೆಯ ಮತ್ತು ಗಂಭೀರವಲ್ಲದ ಪ್ರಕರಣಗಳು ಎಂದು ಮುಖ್ಯಮಂತ್ರಿಗಳು ಈಗಾಗಲೇ ಬಣ್ಣಿಸಿದ್ದಾರೆ. ಆದರೆ ಈ ಪೈಕಿ ಕೆಲವು ದಂಗೆ, ಬೆಂಕಿ ಹಚ್ಚುವಿಕೆ, ಕೊಲೆಯತ್ನ....ಅಷ್ಟೇ ಏಕೆ, ಕೊಲೆಯಂತಹ ಗಂಭೀರ ಆರೋಪಗಳನ್ನು ಹೊಂದಿವೆ.

ಕಳೆದ ತಿಂಗಳು ಶಾಸಕ ಉಮೇಶ ಮಲಿಕ್ ಅವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 150ಕ್ಕೂ ಅಧಿಕ ಪ್ರಕರಣಗಳ ವಾಪಸಾತಿಗಾಗಿ ಅಹವಾಲು ಮಂಡಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಮುಝಫ್ಫರ್‌ನಗರದ ಹಾಲಿ ಸಂಸದ ಸಂಜೀವ ಬಲ್ಯಾನ್ ಅವರು ಈ ಪ್ರಕರಣಗಳು ಗಂಭೀರವಾಗಿವೆ ಎನ್ನುವುದನ್ನು ನಿರಾಕರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ. ಕಳೆದ ಐದು ವರ್ಷಗಳಿಂದಲೂ ಅವರು ನ್ಯಾಯಾಲಯಗಳಿಗೆ ಅಲೆದಾಡು ತ್ತಿದ್ದಾರೆ ಎಂದರು.

2013ರ ಮುಝಫ್ಫರ್‌ನಗರ ಕೋಮು ದಂಗೆಗಳಲ್ಲಿ 60ಕ್ಕೂ ಹೆಚ್ಚಿನ ಜನರು ಕೊಲ್ಲಲ್ಪಟ್ಟಿದ್ದು, ಪೊಲೀಸರು 150ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಬಲ್ಯಾನ್, ಮಲಿಕ್ ಮತ್ತು ಸುರೇಶ ರಾಣಾ ಸೇರಿದಂತೆ ಹಲವಾರು ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

     ರಾಜಕಾರಣಿಗಳಿಗೆ ಅವರ ವಿರುದ್ಧದ ಱಗಂಭೀರವಲ್ಲದ ೞಪ್ರಕರಣಗಳಲ್ಲಿ ಕ್ಷಮಾದಾನವನ್ನು ಒದಗಿಸುವ ವಿವಾದಾತ್ಮಕ ಕಾನೂನನ್ನು ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಬಳಿಕ ಆದಿತ್ಯನಾಥ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ನಿಧಾನವಾಗಿ ಹಿಂದೆಗೆದುಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News