ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪರವಾನಿಗೆ ಕಳೆದುಕೊಂಡ ಪಡಿತರ ಅಂಗಡಿ ಮಾಲಿಕ; ವರದಿ

Update: 2024-04-27 10:33 GMT

ಸಾಂದರ್ಭಿಕ ಚಿತ್ರ

 

ಜಮ್ಮು: ಜಮ್ಮು ವಿಭಾಗದ ರಂಬಾನ್‌ನ ಪಡಿತರ ಅಂಗಡಿಯ ಮಾಲಿಕರೋರ್ವರು ಕೇವಲ ಚುನಾವಣಾ ರ್‍ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದಕ್ಕಾಗಿ ತನ್ನ ಅಂಗಡಿಯ ಪರವಾನಿಗೆಯನ್ನೇ ಕಳೆದುಕೊಂಡಿದ್ದಾರೆ.

ಘಟನೆ ಈ ತಿಂಗಳ ಆರಂಭದಲ್ಲಿ ನಡೆದಿದ್ದು, ರಂಬಾನ್‌ನಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿರುವ ಬಶೀರ್ ಅಹ್ಮದ್ ಉಧಮಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬನಿಹಾಲ್‌ನಲ್ಲಿ ನಡೆದಿದ್ದ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಅವರ ಅಂಗಡಿಯ ಪರವಾನಿಗೆಯನ್ನು ಅಮಾನತುಗೊಳಿಸಿದ್ದು ಮಾತ್ರವಲ್ಲ,ಅವರ ವಿರುದ್ಧ ವಿಚಾರಣೆಗೂ ಆದೇಶಿಸಲಾಗಿದ್ದು 10 ದಿನಗಳಲ್ಲ ವರದಿಯನ್ನು ಸಲ್ಲಿಸುವಂತೆ ರಂಬಾನ್‌ನ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸೂಚಿಸಲಾಗಿದೆ. ಅವರು ರ್‍ಯಾಲಿಯಲ್ಲಿ ಭಾಗವಹಿಸಿದ್ದನ್ನು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ ಎಂದು telegraphindia.com ವರದಿ ಮಾಡಿದೆ.

ಸರಕಾರಿ ನ್ಯಾಯಬೆಲೆ ಅಂಗಡಿ ಮಾಲಿಕರು ನಿರ್ದಿಷ್ಟ ಪ್ರಾದೇಶಿಕ ವ್ಯಾಪ್ತಿಯಲ್ಲಿನ ಜನರಿಗೆ ವಿತರಿಸಲು ತಮಗೆ ನೀಡಲಾಗಿರುವ ಆಹಾರ ಧಾನ್ಯಗಳ ಪಾಲಕರಾಗಿರುವುದರಿಂದ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಪರ ಒಲವು ತೋರಿಸುವ ಆತಂಕವಿದೆ. ಚುನಾವಣಾ ನೀತಿಸಂಹಿತೆಯು ಜಾರಿಯಲ್ಲಿರುವಾಗ ಇಂತಹ ಕೃತ್ಯವು ಭಾರತೀಯ ಚುನಾವಣಾ ಆಯೋಗವು ಪ್ರಕಟಿಸಿರುವ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಜನ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆಗಾಗಿ ಅಹ್ಮದ್ ಅವರ ಪರವಾನಿಗೆಯನ್ನು ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಎ.೧೩ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಗುರುವಾರ ದಿಲ್ಲಿಯಲ್ಲಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿರುವ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಮಾಲಿಕರ ಒಕ್ಕೂಟವು, ಈ ವಿಷಯದಲ್ಲಿ ಅವರ ಹಸ್ತಕ್ಷೇಪವನ್ನು ಕೋರಿದೆ. ಅಹ್ಮದ್ ಕೇವಲ ರ್‍ಯಾಲಿಯಲ್ಲಿ ಭಾಗವಹಿಸಿದ್ದರು,ಅವರು ಯಾವುದೇ ರಾಜಕೀಯ ಚಟುವಟಕೆಯಲ್ಲಿ ತೊಡಗಿರಲಿಲ್ಲ ಎಂದು ಒಕ್ಕೂಟವು ವಾದಿಸಿದೆ.

ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು-ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿಯಿಂದ ಈ ವಿಷಯದಲ್ಲಿ ಇತ್ತೀಚಿನ ಮಾಹಿತಿಯನ್ನು ಕೋರಿದ್ದಾರೆ ಎಂದು ಒಕ್ಕೂಟವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News