ಬಿಜೆಪಿ ಹೇಳುವಂತೆ 'ಜಿಹಾದಿ'ಗಳು 23 ಹಿಂದುತ್ವ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆಯೇ?

Update: 2018-03-23 18:49 GMT

(ನಿನ್ನೆಯ ಸಂಚಿಕೆಯಿಂದ)

scroll.in23 ಹಿಂದುತ್ವ ಕಾರ್ಯಕರ್ತರನ್ನು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯು ಆರೋಪಿಸಿದೆ. ಅದು ಪಟ್ಟಿ ಮಾಡಿರುವ ಪ್ರಕರಣಗಳ ಸಂಬಂಧ ಸುದ್ದಿ ಜಾಲತಾಣ ನ ವರದಿಗಾರರಾದ ಶೃತಿಸಾಗರ್ ಯಮುನನ್ ಕರ್ನಾಟಕದಾದ್ಯಂತ ಪ್ರವಾಸ ಮಾಡಿ ತನಿಖೆ ನಡೆಸಿ ತನಿಖಾ ವರದಿಯೊಂದನ್ನು ಪ್ರಕಟಿಸಿ ಪ್ರಕರಣಗಳ ಸತ್ಯಾಸತ್ಯತೆಗಳನ್ನು ಬಯಲಿಗೆಳೆದಿದ್ದಾರೆ.

ಗ್ಯಾಂಗ್ ರಾಜಕೀಯ

ಬಂಡಿ ರಮೇಶ್ ಮನೆಗೆ ದಾರಿ ಕೇಳುವಾಗಲೇ ಬಳ್ಳಾರಿ ಜಿಲ್ಲೆಯ ಗುಗ್ಗರಹಟ್ಟಿಯ ಜನರಲ್ಲಿ ಆತಂಕವಿರುವುದು ಕಂಡುಬಂತು. ಒಬ್ಬ ಅಂಗಡಿಯವನು ದಾರಿ ಹೇಳಲು ನಿರಾಕರಿಸಿದ. ''ಯಾರು ನಿಮಗೆ ಹೇಳಿದರು ಎಂದು ಅವರು ನಿಮ್ಮನ್ನು ಕೇಳಿದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ'' ಎಂದು ಆತ ಹೇಳಿದ. ರಮೇಶ್ ಸಾವಿನ ಬಗ್ಗೆ ಕೇಳಿದಾಗ ಆತನ ಸಂಬಂಧಿ ಕೂಡಾ ಇಂಥದ್ದೇ ಪ್ರಶ್ನೆ ಕೇಳಿದರು. ಆ ಮನೆಯನ್ನು ಜರ್ಮನ್ ಶೆಫರ್ಡ್ ನಾಯಿ ಕಾಯುತ್ತಿತ್ತು.

ರಮೇಶ್ ಜಿಲ್ಲಾ ಬಿಜೆಪಿಯ ಎಸ್ಟಿ ಮೋರ್ಚಾ ಉಪಾಧ್ಯಕ್ಷನಾಗಿದ್ದು, ಆತನ ವಿರುದ್ಧ ಹಲವು ಅಪರಾಧ ಪ್ರಕರಣಗಳಿದ್ದವು. ಅವುಗಳಲ್ಲಿ ಹತ್ಯೆ ಪ್ರಯತ್ನ ಕೂಡಾ ಒಂದು ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಆತ ರಿಯಲ್ ಎಸ್ಟೇಟ್ ಹಾಗೂ ಭೂಕಬಳಿಕೆ ದಂಧೆ ನಡೆಸುತ್ತಿದ್ದ ಎನ್ನುವುದು ಸ್ಥಳೀಯರ ಆರೋಪ. 2017ರ ಜೂನ್ 22ರ ಮಧ್ಯಾಹ್ನ ಪವನ್ ಡಾಬಾದಲ್ಲಿ ಊಟ ಮಾಡುತ್ತಿದ್ದಾಗ, 20 ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಈತನನ್ನು ಸಾಯಿಸಿದ್ದರು.

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಈ ಪೈಕಿ ಒಬ್ಬ ಮುಸ್ಲಿಂ ಆಗಿದ್ದ. ಹಂತಕರು ಬಂದಿದ್ದ ವಾಹನವನ್ನು ಈತ ಚಲಾಯಿಸುತ್ತಿದ್ದ ಎನ್ನಲಾಗಿದೆ. ಯಾವ ಆರೋಪಿಯೂ ಪಿಎಫ್‌ಐ ಜತೆ ಸಂಬಂಧ ಹೊಂದಿಲ್ಲ. ಎಂಟು ಮಂದಿ ಆರೋಪಿಗಳು ಎಲ್ಲರಿಗೂ ತಿಳಿದ ಕ್ರಿಮಿನಲ್‌ಗಳು. ಇದು ಪ್ರತೀಕಾರದ ಹತ್ಯೆ ಎಂದು ಪೊಲೀಸರು ಹೇಳುತ್ತಾರೆ. ಮುಖ್ಯ ಆರೋಪಿ ಬಿಜೆಪಿ ಸದಸ್ಯ ಜಗದೀಶ್ ಅಲಿಯಾಸ್ ಜಗ್ಗ. ಈತ ರಮೇಶ್ ಜತೆಗೆ ದೀರ್ಘಕಾಲದಿಂದ ದ್ವೇಷ ಹೊಂದಿದ್ದ ಎನ್ನಲಾಗಿದೆ. ಈ ಹತ್ಯೆಗೆ ಮುನ್ನ ಬಿಜೆಪಿ ನಾಯಕರು ಇಬ್ಬರ ನಡುವೆ ರಾಜಿಮಾಡಿಸುವ ಪ್ರಯತ್ನ ನಡೆಸಿದರೂ ಅದು ವಿಫಲವಾಗಿತ್ತು.
''ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿರುವು ದರಿಂದ ನಾವು ಭೀತಿಯಲ್ಲಿದ್ದೇವೆ'' ಎಂದು ರಮೇಶ್ ಸಂಬಂಧಿಕರು ತಿಳಿಸಿದರು. ಮೊದಲು ವೈದ್ಯಕೀಯ ಕಾರಣ ನೀಡಿ ಮೂವರು ಮಹಿಳೆಯರನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಎಲ್ಲರೂ ಬಿಡುಗಡೆ ಹೊಂದಿದ್ದಾರೆ.

ಇಂಥದ್ದೇ ಪ್ರಕರಣ ಧಾರವಾಡದ ಹೊರವಲಯದ ಗೋವನಕೊಪ್ಪದಲ್ಲೂ ನಡೆದಿದೆ. ಬಿಜೆಪಿ ಮುಖಂಡ ಹಾಗೂ ಜಿಲ್ಲಾಪಂಚಾಯತ್ ಸದಸ್ಯ ಯೋಗೀಶ ಗೌಡರ್‌ನನ್ನು ಜಿಮ್ ಎದುರು 2016ರ ಜೂನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಎಫ್‌ಐಆರ್ ಹೇಳುತ್ತದೆ.

ಬಂಡಿ ರಮೇಶ್‌ನಂತೆ ಯೋಗೀಶ್ ಗೌಡರ್ ಕೂಡಾ ಭೂ ವ್ಯವಹಾರ ನಡೆಸುತ್ತಿದ್ದ. ಈತನ ಹತ್ಯೆ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಯಾರೂ ಮುಸ್ಲಿಮರಿಲ್ಲ. ಮುಖ್ಯ ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಬಸವರಾಜ್.
ಗೌಡರ್ ಕೊಲೆ ನಡೆದ ಒಂದು ವರ್ಷದ ಬಳಿಕ 2017ರ ನವೆಂಬರ್‌ನಲ್ಲಿ ಆತನ ಕುಟುಂಬದ ಸದಸ್ಯರು ಆಪಾದಿಸಿದಂತೆ ಈ ಕೊಲೆಯ ಹಿಂದೆ ಸಚಿವ ವಿನಯ್ ಕುಲಕರ್ಣಿಯವರ ಕೈವಾಡವಿದೆ. ಯೋಗೀಶ್ ಗೌಡರ್ ಸಹೋದರ ಗುರುನಾಥ್ ಗೌಡರ್ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಕಂಡುಬರುವಂತೆ ಗುರುನಾಥ್, ಕುಲಕರ್ಣಿ ಜತೆ ದೂರವಾಣಿಯ ಲ್ಲಿ ಮಾತನಾಡುತ್ತಿದ್ದರು. ಕುಲಕರ್ಣಿ, ಗುರುನಾಥ್ ಗೌಡರ್‌ಗೆ ಈ ಸಂಬಂಧ ರಾಜಿ ಸಂಧಾನ ನಡೆಸುವಂತೆ ಕೇಳಿದ್ದರು ಎನ್ನಲಾಗಿದೆ.

ಆದರೆ ''ಚುನಾವಣೆ ಸಮೀಪಿಸುತ್ತಿರುವುದರಿಂದ ಇದು ಬಿಜೆಪಿ ಹೂಡಿರುವ ತಂತ್ರ. ತನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ'' ಎಂದು ಸಚಿವರು ಹೇಳಿದ್ದಾರೆ. ವೀಡಿಯೊ ತುಣುಕಿನ ಬಗ್ಗೆ ಮಾತನಾಡಲು ಕುಟುಂಬ ಕೂಡಾ ನಿರಾಕರಿಸಿದೆ.

ಯೋಗೀಶ್‌ಗೌಡರ್ ಪತ್ನಿ ಮಲ್ಲಮ್ಮ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರ ಮನೆಗೆ ಪೊಲೀಸ್ ಕಾವಲು ಇದೆ.

ಮುಚ್ಚಿದ ಬಾಗಿಲು

ಬೆಂಗಳೂರಿನ ಹಗ್ಗೇನಹಳ್ಳಿಯಲ್ಲಿ 30 ವರ್ಷದ ಕಲ್ಪನಾ ಗೌಡ ಬಾಗಿಲು ತೆರೆಯಲು ನಿರಾಕರಿಸಿದರು. ಸಂದರ್ಶಕ ನೈಜ ವ್ಯಕ್ತಿ ಎಂದು ಕೆಳಗಿನ ಸಿದ್ಧ ಉಡುಪುಗಳ ಅಂಗಡಿ ನಡೆಸುವ ಸಂಬಂಧಿಕರು ಖಾತ್ರಿಪಡಿಸಿದ ಬಳಿಕವಷ್ಟೇ ಬಾಗಿಲು ತೆರೆದರು. ಇವರ ಕುಟುಂಬ 2016ರ ನವೆಂಬರ್ 9ರಂದು ಹೊಸ ಮನೆಗೆ ಬಂದು, ಗೃಹಪ್ರವೇಶದ ಸಿದ್ಧತೆಯಲ್ಲಿದ್ದಾಗಲೇ ಕಲ್ಪನಾಳ ಗಂಡ ಚಿಕ್ಕತಿಮ್ಮೇಗೌಡ ಬಾಡಿಗೆ ಹಂತಕರಿಂದ ಹತ್ಯೆಯಾಗಿದ್ದರು.

ಮರುದಿನವೇ ಮನೆಮುಂದೆ ಪೊಲೀಸರನ್ನು ನಿಯೋಜಿಸ ಲಾಯಿತು. ಉಗ್ರಗಾಮಿ ಮುಸ್ಲಿಮರು ಈ ಹತ್ಯೆಯ ಹಿಂದಿರ ಬೇಕು ಎಂದು ಮನೆಗೆ ಭೇಟಿ ನೀಡಿದ ಹಿಂದೂ ಮುಖಂಡರು ಹೇಳಿದರು. ಆದರೆ ಗೌಡರ ಕುಟುಂಬಕ್ಕೆ ಇದ್ದ ಅನುಮಾನ ಬೇರೆ. ಕೆಲವೇ ತಿಂಗಳ ಹಿಂದೆ, ಅವರ ಹಳೆಮನೆಯ ಮುಂದೆಯೂ ಚಿಕ್ಕತಿಮ್ಮೇಗೌಡ ಮೇಲೆ ಹಲ್ಲೆ ನಡೆದಿತ್ತು. ಪೊಲೀಸರ ಪ್ರಕಾರ, ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಪೆಪ್ಪರ್‌ಸ್ಪ್ರೇ ಎರಚಿದ್ದರು. ಅವರು ಕಿರುಚಿಕೊಂಡಾಗ ನೆರೆಯವರು ಸಹಾಯಕ್ಕೆ ಬಂದರು. ಸಂಚುಕೋರರು ಪರಾರಿಯಾಗಿದ್ದರು. ಈತನ ಹತ್ಯೆ ನಡೆದಿರುವುದು ಕೂಡಾ ರಾಜಕೀಯ ದ್ವೇಷದಿಂದ ಎನ್ನುವುದು ಪೊಲೀಸರ ವಾದ.
2016ರವರೆಗೆ ಚಿಕ್ಕತಿಮ್ಮೇಗೌಡ ಜೆಡಿಎಸ್‌ನಲ್ಲಿದ್ದರು ಹಾಗೂ ಗೋವಿಂದೇಗೌಡ ಎಂಬ ಸ್ಥಳೀಯ ನಾಯಕರಿಗೆ ಆಪ್ತರಾಗಿದ್ದರು. ಆದರೆ ಚಿಕ್ಕತಿಮ್ಮೇಗೌಡ ಬಿಜೆಪಿಗೆ ಸೇರಿ, ಗೋವಿಂದೇಗೌಡರ ಪತ್ನಿಯ ವಿರುದ್ಧ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಆಕೆ ಸೋಲು ಅನುಭವಿಸಿದ್ದರು. ಗೋವಿಂದೇಗೌಡ ಕುಟುಂಬ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿತ್ತು ಎನ್ನಲಾಗಿದ್ದು, ಸೋಲಿನಿಂದ ಕ್ರೋಧಗೊಂಡಿದ್ದರು. ಗೋವಿಂದೇಗೌಡ ಹಾಗೂ ಪತ್ನಿ ಬಾಡಿಗೆ ಹಂತಕರಿಗೆ 30 ಲಕ್ಷ ನೀಡಿ ಚಿಕ್ಕತಿಮ್ಮೇಗೌಡನನ್ನು ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ಕೆಲ ತಿಂಗಳ ಬಳಿಕ, ಗೋವಿಂದೇಗೌಡ ಆತ್ಮಹತ್ಯೆ ಮಾಡಿ ಕೊಂಡರು. ಕಲ್ಪನಾಗೌಡರ ಭಾವನನ್ನು ಪ್ರಮುಖ ಆರೋಪಿಯಾಗಿ ಬಂಧಿಸಲಾಯಿತು.
''ಬಿಜೆಪಿ ಮುಖಂಡರು ಸಂಪೂರ್ಣವಾಗಿ ನನ್ನನ್ನು ನಿರ್ಲಕ್ಷಿಸಿ ದ್ದಾರೆ'' ಎಂದು ಕಲ್ಪನಾಗೌಡ ದೂರಿದರು. ''ದೊಡ್ಡ ಮೊತ್ತದ ಸಾಲ ಮಾಡಿ ಹೊಸ ಮನೆ ಕಟ್ಟಿದ್ದರಿಂದ ದೊಡ್ಡ ಹೊರೆ ಬಿದ್ದಿದೆ'' ಎಂದು ಹೇಳಿದರು. ಇಬ್ಬರು ಮಕ್ಕಳನ್ನು ಹೊಂದಿದ ಇವರನ್ನು ಗಂಡ ಬೇರೆ ಜಾತಿಯವರು ಎಂಬ ಕಾರಣಕ್ಕೆ ಕುಟುಂಬದವರು ಹೊರಗಟ್ಟಿದ್ದಾರೆ. ಆದರೆ ಯಾವ ಬಿಜೆಪಿ ಸದಸ್ಯ ಕೂಡಾ ಕನಿಷ್ಠ ಬೆಂಬಲ ಸೂಚಿಸಲು ಭೇಟಿ ಮಾಡಿಲ್ಲ. ತನ್ನ ಪತಿ ಯಡಿಯೂರಪ್ಪ ಅವರ ಜತೆ 2015ರಲ್ಲಿ ತೆಗೆಸಿಕೊಂಡಿದ್ದ ಫೋಟೊ ತೋರಿಸುತ್ತಾ, ''ಯಾವುದೇ ರಾಜಕೀಯ ಪಕ್ಷ ಸೇರದಂತೆ ನಾನು ಜನರನ್ನು ಮನವಿ ಮಾಡುತ್ತೇನೆ. ಅವರು ನಿಮ್ಮನ್ನು ಬಳಸಿಕೊಂಡು ಎಸೆಯುತ್ತಾರೆ'' ಎಂದು ಹೇಳುತ್ತಾರೆ.

ರಿಯಲ್ ಎಸ್ಟೇಟ್ ದ್ವೇಷ

2014ರ ಮಾರ್ಚ್‌ನಲ್ಲಿ ಸಿ.ಎನ್.ಶ್ರೀನಿವಾಸ್ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಹತ್ಯೆಗೀಡಾದರು. ಇವರ ಪತ್ನಿ ಮಂಜುಳಾದೇವಿ ಬಿಜೆಪಿ ಮುಖಂಡೆ ಹಾಗೂ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸದಸ್ಯೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಹತ್ಯೆ ನಡೆದ ಹಿನ್ನೆಲೆಯಲ್ಲಿ, ಬಿಜೆಪಿ ಈ ಪ್ರಕರಣವನ್ನು ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರ ಬಳಿ ಒಯ್ದಿತು. ಸದಾನಂದಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಮತದಾರರಲ್ಲಿ ಭೀತಿ ಹುಟ್ಟಿಸಲು ಮೂಲಭೂತವಾದಿಗಳನ್ನು ಕಾಂಗ್ರೆಸ್ ಸರಕಾರ ಬೆಂಬಲಿಸುತ್ತಿದೆ ಎಂದು ದೂರಿದರು. ಸುತ್ತಮುತ್ತಲಿನ ಆರು ಪೊಲೀಸ್ ಠಾಣೆಗಳ ಹಿರಿಯ ಅಧಿಕಾರಿಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂದೂ ಆಪಾದಿಸಿದರು.
ಶ್ರೀನಿವಾಸ್ ಹತ್ಯೆಯನ್ನೂ ಜಿಹಾದಿ ಶಕ್ತಿಗಳು ಮಾಡಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪತ್ರ ವಿವರಿಸುತ್ತದೆ. ಆದರೆ ಪೊಲೀಸ್ ತನಿಖೆಯಿಂದ ತಿಳಿದುಬಂದಂತೆ, ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ದ್ವೇಷ ಇದರ ಹಿಂದಿದೆ.
ಎಚ್.ಕೆ.ಪ್ರತಾಪ್ ಎಂಬ ರಿಯಲ್ ಎಸ್ಟೇಟ್ ಡೀಲರ್ ಬಾಡಿಗೆ ಹಂತಕರ ಸಹಾಯದಿಂದ ಇವರನ್ನು ಹತ್ಯೆ ಮಾಡಿಸಿದ್ದಾನೆ. ಪ್ರತಾಪ್ ಹಾಗೂ ಶ್ರೀನಿವಾಸ್ ನಡುವೆ ಭೂವ್ಯವಹಾರದಲ್ಲಿ ಪರಸ್ಪರ ದ್ವೇಷ ಇತ್ತು. ಶ್ರೀನಿವಾಸ್ ಕುಟುಂಬದವರು ಹೇಳುವಂತೆ, ಪ್ರತಾಪ್‌ಗೆ ಕಾಂಗ್ರೆಸ್ ಮುಖಂಡರ ಬೆಂಬಲವಿದೆ. ಆದರೆ ಮಂಜುಳಾದೇವಿ ಈ ಬಗ್ಗೆ ಮಾತನಾಡಲು ನಿರಾಕರಿಸಿದರು. ಆಕೆ 2017ರಲ್ಲಿ ಕಾಂಗ್ರೆಸ್ ಸೇರಿದ್ದಾರೆ ಎಂದು ಅವರ ತಾಯಿ ಹೇಳಿದರು.

ನ್ಯಾಯಾಲಯ ಪ್ರಕರಣ

ಬೆಂಗಳೂರಿನ ಹೊರವಲಯ ಕಿತ್ತಗಾನಹಳ್ಳಿಯಲ್ಲಿ ಶ್ರೀನಿವಾಸ್ ಪ್ರಸಾದ್ ಮುಂಜಾನೆ ವಾಯುವಿಹಾರ ಹೋಗುತ್ತಿದ್ದಾಗ 2017ರ ಮಾರ್ಚ್ 14ರಂದು ಕಾರಿನಲ್ಲಿ ಬಂದ ಒಂದು ಗ್ಯಾಂಗ್ ಈ ಬಿಜೆಪಿ ಸದಸ್ಯನನ್ನು ಸ್ಥಳದಲ್ಲೇ ಹತ್ಯೆ ಮಾಡಿತು. ಪ್ರಸಾದ್ ಅವರ ಪತ್ನಿ ಶೈಲಜಾ, ಬೆಂಗಳೂರು ನಗರ ಜಿಲ್ಲಾಪಂಚಾಯತ್ ಸದಸ್ಯೆ. ತನ್ನ ಪತಿಯ ಹತ್ಯೆಗೆ ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ದ್ವೇಷ ಕಾರಣ ಎಂದು ಅವರು ಹೇಳುತ್ತಾರೆ. ಕಾಂಗ್ರೆಸ್ ಮುಖಂಡೆ ಸರೋಜಮ್ಮ ಸೇರಿದಂತೆ ಹಲವು ಮಂದಿ ವಿರೋಧಿಗಳಿದ್ದರು. ಸರೋಜಮ್ಮ ದಲಿತೆ ಎನ್ನುವುದನ್ನು ಪ್ರಸಾದ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಈ ಪ್ರಕರಣದಲ್ಲಿ ಸರೋಜಮ್ಮ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಯಾರೂ ಮುಸ್ಲಿಮರಿಲ್ಲ ಅಥವಾ ಮುಸ್ಲಿಂ ಸಂಘಟನೆಗಳು ಶಾಮೀಲಾಗಿಲ್ಲ.

ಮೀನಿನ ದ್ವೇಷ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಆರ್.ಹರೀಶ್ ಎಂಬ ಬಿಜೆಪಿ ಯುವ ಮೋರ್ಚಾ ಸದಸ್ಯ 2017ರ ಜೂನ್‌ನಲ್ಲಿ ಹತ್ಯೆಯಾ ಗಿದ್ದರು. ಇವರ ಭಾವ ವೇಣು ಗೋಪಾಲನ್ ನಗರಸಭೆ ಅಧ್ಯಕ್ಷ.
ಇದನ್ನು ಕೋಮುದ್ವೇಷ ಎಂದು ಬಿಂಬಿಸಲಾಗಿದ್ದರೂ, ಇದು ದ್ವೇಷದಿಂದ ನಡೆದ ಹತ್ಯೆ. ಪ್ರಕರಣದ ಕಡತಗಳ ಪ್ರಕಾರ, ಸ್ಥಳೀಯವಾಗಿ ಮೀನುಗಾರಿಕೆ ಗುತ್ತಿಗೆ ಬಗ್ಗೆ ಇವರಿಗೆ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಸಂಬಂಧಿಯ ಜತೆ ಜಗಳ ಇತ್ತು. ಹರೀಶ್ ಹಾಗೂ ಅವರ ಸಹಚರರ ಜೊತೆ ನೆರೆಯ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಆರೋಪಿ ಜಗಳ ಮಾಡಿದ್ದರು. ಇದರಿಂದ ಕೋಪಗೊಂಡ ಹರೀಶ್, ಆರೋಪಿ ರಾಜುಗೆ ಹೊಡೆದಿದ್ದ.
ಪೊಲೀಸರ ಪ್ರಕಾರ ಆರೋಪಿಯ ಗ್ಯಾಂಗ್ ಹರೀಶ್ ಅವರನ್ನು ಬೆನ್ನಟ್ಟಿ, ಕಣ್ಣಿಗೆ ಮೆಣಸಿನಪುಡಿ ಎರಚಿ ಸಾಯುವ ತನಕ ಹೊಡೆದಿದ್ದರು.ಹತ್ಯೆಗೆ ರಾಜಕೀಯ ದ್ವೇಷ ಕಾರಣ ಎಂದು ವೇಣುಗೋಪಾಲನ್ ಹೇಳುತ್ತಾರೆ. ಈ ಪ್ರಕರಣದ ಆರೋಪಿಗಳಲ್ಲೂ ಮುಸ್ಲಿಮರಿಲ್ಲ.

ಸ್ಥಳೀಯ ಸಂಸ್ಥೆ ಚುನಾವಣೆ

ಆನೇಕಲ್ ತಾಲೂಕಿನ ಚಿಕ್ಕದಾಸರಹಳ್ಳಿಯಲ್ಲಿ ಸಿಎಂ ಅಶ್ವತ್ಥ್ ಕುಮಾರ್ ಮನೆಯಲ್ಲಿ ಹಲವು ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. 2014ರ ಎಪ್ರಿಲ್‌ನಲ್ಲಿ ಅವರ ಹತ್ಯೆ ನಡೆದ ಬಳಿಕ ಕುಟುಂಬ ಇವುಗಳನ್ನು ಅಳವಡಿಸಿದೆ. ಸಂಸದೆ ಶೋಭಾ ಕರಂದ್ಲಾಜೆ ಪಟ್ಟಿಯಲ್ಲಿ ಸೇರಿಸಿದ ಹೆಸರುಗಳ ಪೈಕಿ ಕುಮಾರ್ ಅವರ ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ವರದಿಗಾರರು ಮನೆಗೆ ಭೇಟಿ ನೀಡಿದಾಗ ಮನೆಯವರು ಹೊರಹೋಗಿದ್ದರು. ಮನೆ ದುರಸ್ತಿ ಮತ್ತು ಬಣ್ಣ ಹಚ್ಚುವ ಕಾರಣದಿಂದ ಸಂಬಂಧಿಕರ ಮನೆಗೆ ಹೋಗಿರಬೇಕು ಎಂದು ನೆರೆಯವರು ಹೇಳಿದರು. ಪೊಲೀಸ್ ಆರೋಪಪಟ್ಟಿಯ ಪ್ರಕಾರ, ಕೇಶವಮೂರ್ತಿ ಗ್ಯಾಂಗ್ ಕುಮಾರ್ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದೆ. ಇದಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆ ಕಾರಣ. ಬಿಜೆಪಿಯಲ್ಲಿ ಮುಂಚೂಣಿ ನಾಯಕರಾಗಿದ್ದ ಕುಮಾರ್ ಗ್ರಾಮಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಆದರೆ ಈ ಹತ್ಯೆಯಲ್ಲಿ ಕೂಡಾ ಯಾವುದೇ ಕೋಮು ಹಿನ್ನೆಲೆ ಇಲ್ಲ ಎಂದು ಗ್ರಾಮಸ್ಥರು ಹೇಳಿದರು.

ಮದಿರೆ..ಮಾನಿನಿ..

ತುಮಕೂರು ಜಿಲ್ಲೆ ತಿಪಟೂರಿನಿಂದ 30 ಕಿಲೋಮೀಟರ್ ದೂರದಲ್ಲಿ ಮಗೇನಹಳ್ಳಿ ಗ್ರಾಮ ಇದೆ. 2017ರ ಅಕ್ಟೋಬರ್‌ನಲ್ಲಿ ಎಸ್.ತಿಪ್ಪೇಶ್ ಎಂಬ ಬಿಜೆಪಿ ಕಾರ್ಯಕರ್ತ ಹತ್ಯೆಗೀಡಾದ. ಆತನ ತಲೆಗೆ ದೊಡ್ಡ ಕಲ್ಲು ಹಾಕಿ ಸಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಿಪ್ಪೇಶ್‌ಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಗ್ರಾಮಸ್ಥರ ಜತೆ ಚರ್ಚೆ ನಡೆಸಿದ ಬಳಿಕ ಮಲ್ಲಿಕಾರ್ಜುನ ಎಂಬ ಸ್ಥಳೀಯನನ್ನು ಬಂಧಿಸಲಾಗಿತ್ತು. ತಿಪ್ಪೇಶ್‌ಗೆ ಮದ್ಯಪಾನದ ಚಟ ಇತ್ತು ಹಾಗೂ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ವಾಪಸ್ಸಾಗುತ್ತಿದ್ದ. ಆಗ ಆರೋಪಿ ಹಾಗೂ ತಿಪ್ಪೇಶ್ ನಡುವೆ ವಾಗ್ವಾದ ನಡೆದು ಇದು ಹತ್ಯೆಗೆ ಕಾರಣವಾಗಿತ್ತು. ಮಲ್ಲಿಕಾರ್ಜುನನ ಪತ್ನಿ ಜತೆಗೆ ತಿಪ್ಪೇಶ್‌ಗೆ ಸಂಬಂಧ ಇತ್ತು ಎನ್ನಲಾಗಿದೆ. ಇಲ್ಲಿ ಕೂಡಾ ಹಿಂದೂ- ಮುಸ್ಲಿಂ ಸಮಸ್ಯೆ ಇಲ್ಲ ಎನ್ನುವುದು ತಿಪ್ಪೇಶ್ ಸಹೋದರ ನವೀನ್‌ನ ಹೇಳಿಕೆ.

ಹಿಟ್ ಆ್ಯಂಡ್ ರನ್

2016ರ ನವೆಂಬರ್‌ನಲ್ಲಿ ಯುವ ಮೋರ್ಚಾ ಸದಸ್ಯ ಮಾಳಗಿ ರವಿ ಅನುಮಾನಾಸ್ಪದವಾಗಿ ಮೈಸೂರು ಜಿಲ್ಲೆ ಪಿರಿಯಾ ಪಟ್ಟಣದಲ್ಲಿ ಸಾವಿಗೀಡಾಗಿದ್ದರು. ಟಿಪ್ಪುಜಯಂತಿ ಆಚರಣೆ ವಿರುದ್ಧ ಆರೆಸ್ಸೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ವಾಪಸಾಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಬಂದ್ ಆಚರಿಸಿದ್ದರು. ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪಿಎಫ್‌ಐ ಮುಖಂಡರು ಈ ಹತ್ಯೆಗೆ ಕಾರಣ. ಅವರನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಆರಂಭದಲ್ಲಿ ಕೊಲೆ ಪ್ರಕರಣ ದಾಖಲಿಸಿದರೂ, ಬಳಿಕ ನಿರ್ಲಕ್ಷ್ಯದಿಂದಾದ ಸಾವು ಎಂದು ಬದಲಿಸಿದರು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿ, ವಾಹನ ಢಿಕ್ಕಿಹೊಡೆದು ರವಿ ಮೃತಪಟ್ಟಿದ್ದಾರೆ ಎಂಬ ನಿರ್ಣಯಕ್ಕೆ ಬರಲಾಗಿತ್ತು. ಆದರೆ ಈ ವರದಿ ಹಂಚಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು. ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಅಧಿಕಾರಿಗಳು ಹೇಳುವಂತೆ ಈ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮರಾಗಳಿಲ್ಲ.
ಆದರೆ ಪೊಲೀಸ್ ಹೇಳಿಕೆಯನ್ನು ರವಿ ತಾಯಿ ಗೌರಮ್ಮ ಅಲ್ಲಗಳೆಯುತ್ತಾರೆ. ಬೈಕ್ ಹಾಗೂ ರವಿಯ ಫೋನ್ ಇನ್ನೂ ಪೊಲೀಸರ ಬಳಿ ಇದೆ ಎಂದು ಅವರು ಹೇಳುತ್ತಾರೆ. ಬೈಕ್ ಹಾಗೂ ಫೋನ್‌ಗೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ನೋಡಲು ಬಿಡುತ್ತಿಲ್ಲ ಎಂದು ಅವರು ಹೇಳುತ್ತಾರೆ.
ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ