ಚರ್ಚೆಗಳಿಲ್ಲದೆ ಬಜೆಟ್ ಅಂಗೀಕಾರ ಎಷ್ಟು ಸರಿ?

Update: 2018-03-24 04:13 GMT

ಅನೇಕ ಸಂದರ್ಭದಲ್ಲಿ ಲೋಕಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಒಂದು ಅಘೋಷಿತ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತವೆ. ‘‘ನಾನು ಹೊಡೆದಂತೆ ಮಾಡುತ್ತೇನೆ...ನೀನು ಅತ್ತಂತೆ ಮಾಡು’’. ನಾವೆಲ್ಲ ಪ್ರಹಸನವನ್ನು ನಿಜವೆಂದು ವೀಕ್ಷಿಸತೊಡಗುತ್ತೇವೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸದನದಲ್ಲಿ ನಡೆಯುಸುತ್ತಿರುವ ಗದ್ದಲಗಳನ್ನೇ ಅಚ್ಚರಿಗಣ್ಣಲ್ಲಿ ನೋಡುತ್ತಿರುವಾಗ, ಅತ್ತ ಸರಕಾರ ತನಗೆ ಬೇಕಾದ ನಿರ್ಣಯಗಳನ್ನು ಗುಟ್ಟಾಗಿ ಜಾರಿಗೊಳಿಸಿರುತ್ತದೆ. ಗದ್ದಲ ಗಲಾಟೆಗಳಲ್ಲ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ದುರುದ್ದೇಶ ಹೊಂದಿರುತ್ತದೆ. ಇದು ವಿರೋಧ ಪಕ್ಷಗಳ ಅಗತ್ಯವೂ ಆಗಿರುತ್ತದೆ.

ಯಾವುದೇ ಬಜೆಟ್‌ಗಳು, ಮಸೂದೆಗಳು, ಕಾಯ್ದೆಗಳನ್ನು ತಿದ್ದುಪಡಿ ಮಾಡುವುದು, ಅಂಗೀಕರಿಸುವುದಕ್ಕೆ ಮುನ್ನ ಅದು ಚರ್ಚೆಗೊಳಗಾಗಬೇಕು. ಅದರ ಸಾಧಕ ಬಾಧಕಗಳು ಚರ್ಚೆಯಾಗದೆ ಏಕ ಪಕ್ಷೀಯವಾಗಿ ಅಂಗೀಕರಿಸುವುದೆಂದರೆ ದೇಶವನ್ನು ದಾರಿ ತಪ್ಪಿಸಿದಂತೆ. ಇಂತಹ ವಂಚನೆಗಳು ನಿರಂತರವಾಗಿ ಲೋಕಸಭೆಯಲ್ಲಿ ನಡೆಯುತ್ತಲೇ ಬರುತ್ತಿವೆ. ದೇಶದ ಜನರ ಗಮನಕ್ಕೆ ಇದು ಬರುವಾಗ ಸಮಯ ದಾಟಿರುತ್ತದೆ. ಈ ಬಾರಿಯ ಅಧಿವೇಶನದಲ್ಲೂ ಇದು ಮುಂದುವರಿದಿದೆ. ಯಾವ ಚರ್ಚೆಯೂ ಇಲ್ಲದೆ ಬಜೆಟ್‌ನ್ನು ಅಂಗೀಕರಿಸಲಾಗಿದೆ.

ಮಾಧ್ಯಮಗಳು ಇದನ್ನು ಪ್ರಶ್ನಿಸಲೇ ಇಲ್ಲ. ಜೊತೆಗೆ ಪ್ರಮುಖ ರಾಜಕೀಯ ಪಕ್ಷಗಳೂ ಈ ಬಗ್ಗೆ ವೌನವಾಗಿವೆೆ. ಅವುಗಳಿಗೂ ಸಹ, ಇದೇ ಬೇಕಾಗಿತ್ತು. ಮಾರ್ಚ್ 14ರಂದು ವಿರೋಧಪಕ್ಷಗಳ ತೀವ್ರ ಗದ್ದಲದ ನಡುವೆಯೂ ಲೋಕಸಭೆಯಲ್ಲಿ 2018ರ ಆರ್ಥಿಕ ಕಾಯ್ದೆಗೆ 21 ತಿದ್ದುಪಡಿಗಳನ್ನು ಮಾಡಲಾಯಿತು. ಈ ಪೈಕಿ, ರಾಜಕೀಯ ಪಕ್ಷಗಳಿಗೆ ಸಾಗರೋತ್ತರ ಸಂಸ್ಥೆಗಳು ದೇಣಿಗೆ ನೀಡುವುದನ್ನು ನಿರ್ಬಂಧಿಸುವ 2010ರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಕೂಡಾ ಒಂದಾಗಿದೆ. 1976ರಿಂದ ರಾಜಕೀಯ ಪಕ್ಷಗಳು ಪಡೆದಿರುವ ವಿದೇಶಿ ನಿಧಿಯ ಪರಿಶೀಲನೆಯ ಮೇಲೆ ನಿಯಂತ್ರಣ ಹೇರುವ ಮಸೂದೆ ಇದಾಗಿದೆ.

ರಾಜಕೀಯ ಪಕ್ಷಗಳು ವಿದೇಶಿ ನಿಧಿಯನ್ನು ಪಡೆಯುವುದಕ್ಕೆ ಕಾನೂನು ಅಷ್ಟು ಸುಲಭವಾಗಿ ಅವಕಾಶ ನೀಡುವುದಿಲ್ಲ. ಚುನಾವಣೆಗಳಿಗೆ ನೀತಿನಿಯಮಗಳನ್ನು ರೂಪಿಸುವ ಜನರ ಪ್ರಾತಿನಿಧ್ಯ ಕಾಯ್ದೆಯು ಇದಕ್ಕೆ ದೊಡ್ಡ ತಡೆಯಾಗಿದೆ. ಇದು ಬಿಜೆಪಿಯವರಿಗೆ ಮಾತ್ರವಲ್ಲ, ಕಾಂಗ್ರೆಸ್‌ಗೂ ಇರಿಸುಮುರಿಸಿನ ವಿಷಯವಾಗಿತ್ತು. 2016ರ ಆರ್ಥಿಕ ಮಸೂದೆಯ ಮೂಲಕ ಎಫ್‌ಸಿಆರ್‌ಎ ಕಾಯ್ದೆಗೆ ತಿದ್ದುಪಡಿ ತಂದ ಬಿಜೆಪಿ ಸರಕಾರವೂ ರಾಜಕೀಯ ಪಕ್ಷಗಳು ವಿದೇಶಿ ನಿಧಿಯನ್ನು ಪಡೆಯುವುದನ್ನು ಈಗಾಗಲೇ ಸುಲಭಗೊಳಿಸಿದೆ. ಇದನ್ನು ರಾಷ್ಟ್ರೀಯ ಪಕ್ಷಗಳೆಲ್ಲವೂ ವೌನವಾಗಿ ಒಪ್ಪಿಕೊಂಡಿವೆ. ಇದೀಗ ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವ ಮೂಲಕ 1976ರಿಂದ ರಾಜಕೀಯ ಪಕ್ಷಗಳು ಪಡೆದಿರುವ ವಿದೇಶಿ ನಿಧಿಯ ಪರಿಶೀಲನೆಯನ್ನು ನಡೆಸುವುದರ ಮೇಲೆಯೇ ತಡೆ ಹೇರಿದೆ.ಈ ತಿದ್ದುಪಡಿಯಿಂದ ಎಫ್‌ಸಿಆರ್‌ಎ ಕಾಯ್ದೆಯನ್ನು ಉಲ್ಲಂಘಿಸಿವೆ ಎಂದು 2014ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಪ್ಪಿಸಿಕೊಳ್ಳಲಿವೆ.

1976ರಲ್ಲಿ ಜಾರಿಗೆ ತರಲಾದ ಎಫ್‌ಸಿಆರ್‌ಎ ಕಾಯ್ದೆಯಲ್ಲಿ, ವಿದೇಶದಲ್ಲಿ ನೋಂದಾಯಿತ ಭಾರತೀಯ ಅಥವಾ ವಿದೇಶಿ ಸಂಸ್ಥೆ ಅಥವಾ ಅದರ ಅಂಗಸಂಸ್ಥೆಯಿಂದ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸುವಂತಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಬಳಿಕ ಅದನ್ನು 2010ರ ಎಫ್‌ಸಿಆರ್‌ಎ ಕಾಯ್ದೆಯಿಂದ ಬದಲಾಯಿಸಲಾಗಿತ್ತು. ಬಿಜೆಪಿ ಸರಕಾರವು 2016ರ ಆರ್ಥಿಕ ಮಸೂದೆಯಲ್ಲಿ, ಶೇ. 50ಕ್ಕಿಂತ ಕಡಿಮೆ ಪಾಲುದಾರಿಕೆ ಹೊಂದಿರುವ ವಿದೇಶಿ ಕಂಪೆನಿಗಳನ್ನು ಇನ್ನು ಮುಂದೆ ವಿದೇಶಿ ಮೂಲಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸುವ ಮೂಲಕ ವಿದೇಶಿ ಸಂಸ್ಥೆಯ ವ್ಯಾಖ್ಯಾನವನ್ನೇ ಬದಲಿಸಿದೆ.

ಕಳೆದ ವಾರ ಈ ಬದಲಾವಣೆಗೆ ಅನುಮೋದನೆ ದೊರಕುವುದಕ್ಕೂ ಮೊದಲು ಎಫ್‌ಸಿಆರ್‌ಎ ಅನುಷ್ಠಾನಕ್ಕೆ ತರಲಾದ 2010ರ ಸೆಪ್ಟಂಬರ್ 26ರಕ್ಕೂ ಮೊದಲು ರಾಜಕೀಯ ಪಕ್ಷಗಳು ಪಡೆದುಕೊಂಡಿದ್ದ ವಿದೇಶಿ ದೇಣಿಗೆಯು ಪರಿಶೀಲನೆಗೆ ಅರ್ಹವಾಗಿತ್ತು. ಆರ್ಥಿಕ ಕಾಯ್ದೆ 2016ರ 233ನೇ ವಿಧಿ ಅಂಗೀಕಾರವಾದ ತಕ್ಷಣ ಬಿಜೆಪಿ ಮತ್ತು ಕಾಂಗ್ರೆಸ್ ತಾವು ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಏಕಕಾಲದಲ್ಲಿ ವಾಪಸ್ ಪಡೆದುಕೊಂಡಿದ್ದವು. ಭಾರತದಲ್ಲಿ ಸಂಗ್ರಹವಾಗಿರುವ ನಿಧಿಯನ್ನು ಬಳಸಲು ಸರಕಾರಿ ಇಲಾಖೆಗಳಿಗೆ ಅಧಿಕಾರ ನೀಡುವ ವಿನಿಯೋಗ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ಬುಧವಾರದಂದು ಲೋಕಸಭೆಯು 2018-19 ಸಾಲಿನ ವಾರ್ಷಿಕ ಬಜೆಟ್‌ನ್ನು ಅಳವಡಿಸಿಕೊಂಡಿತು. ಜೊತೆಗೆ ತೆರಿಗೆ ಪ್ರಸ್ತಾವನೆಗಳನ್ನು ಹೊಂದಿರುವ ಆರ್ಥಿಕ ಮಸೂದೆಯನ್ನೂ ಅಂಗೀಕರಿಸಲಾಯಿತು. ಪ್ರಸಕ್ತ ಬಜೆಟ್ ಅಧಿವೇಶನ ಮುಗಿಯಲು ಇನ್ನು ಮೂರು ವಾರಗಳಷ್ಟೇ ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ಯಾವುದೇ ಚರ್ಚೆ ನಡೆಸದೆ ಈ ಮಸೂದೆಗಳನ್ನು ಅಂಗೀಕರಿಸಲಾಯಿತು.

 ಒಂದು ರೀತಿಯಲ್ಲಿ ಇದು ಗದ್ದಲಗಳ ಮರೆಯಲ್ಲಿ ನಡೆಸಿದ ಹುನ್ನಾರಗಳಾಗಿವೆ. ಆರ್ಥಿಕ ಕಾಯ್ದೆಗೆ ಸುಮಾರು 21 ತಿದ್ದುಪಡಿಗಳನ್ನು ಮಾಡುವುದು ಮತ್ತು ಯಾವುದೇ ಚರ್ಚೆಗಳಿಲ್ಲದೆ ಅವುಗಳು ಅಂಗೀಕಾರವಾಗುತ್ತದೆ ಎಂದ ಮೇಲೆ ಅಧಿವೇಶನಗಳ ಉದ್ದೇಶವಾದರೂ ಏನು? ಅದರ ಸಾಧಕ ಬಾಧಕಗಳು ಚರ್ಚೆಯಾಗದೆ ತಮ್ಮ ತಮ್ಮ ಮೂಗಿನ ನೇರಕ್ಕೆ ತಿದ್ದುಪಡಿಗಳನ್ನು ಮಾಡುತ್ತಾ, ಚರ್ಚೆಗಳಿಲ್ಲದೆ ಅದನ್ನು ಅಂಗೀಕರಿಸುತ್ತಾ ಹೋದರೆ ಇದನ್ನು ಪ್ರಜಾಸತ್ತಾತ್ಮಕ ಆಡಳಿತ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಇದಕ್ಕಾಗಿ ನಾವು ಕೇವಲ ಆಡಳಿತ ಪಕ್ಷವನ್ನಷ್ಟೇ ದೂರಿ ಫಲವಿಲ್ಲ. ವಿರೋಧ ಪಕ್ಷಗಳೂ ಪರೋಕ್ಷವಾಗಿ ಇವುಗಳಿಗೆ ಸಹಕರಿಸುತ್ತಿವೆ.

ಚರ್ಚೆಗಳಾಗುವುದು ವಿರೋಧ ಪಕ್ಷಗಳಿಗೂ ಬೇಕಾಗಿಲ್ಲ. ಗದ್ದಲಗಳು, ಸಭಾ ತ್ಯಾಗಗಳಿಂದ ಜನಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುವಂತಿಲ್ಲ. ಅಧಿವೇಶನದಲ್ಲಿ ಸರಕಾರ ತಮ್ಮ ಮೂಗಿನ ನೇರಕ್ಕೆ ಕಾನೂನುಗಳನ್ನು ತಿದ್ದುಪಡಿ ಮಾಡುವಾಗ ಆ ಬಗ್ಗೆ ಚರ್ಚಿಸಿ, ಜನರ ಗಮನ ಸೆಳೆಯುವುದು ವಿರೋಧ ಪಕ್ಷಗಳ ಹೊಣೆಗಾರಿಕೆ. ಆದರೆ ದುರದೃಷ್ಟವಶಾತ್ ಕಲಾಪಗಳು ನಿರಂತರವಾಗಿ ಪೋಲಾಗುತ್ತಿವೆ. ಇವುಗಳ ನಡುವೆ ಸರಕಾರ ತನಗೇನು ಮಾಡಬೇಕು ಅದನ್ನು ಯಾವ ಆತಂಕವೂ ಇಲ್ಲದೆ ಮಾಡಿ ಮುಗಿಸುತ್ತಿದೆ. ಇದು ಸಂಸತ್ತಿಗೆ ನಮ್ಮನ್ನಾಳುವವರು ಮಾಡುತ್ತಿರುವ ಕಳಂಕ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News