ಕ್ಷಯ ರೋಗ ಪತ್ತೆಗೆ ಸಿ.ಬಿ.ನ್ಯಾಟ್ ವಿಧಾನ

Update: 2018-03-24 05:12 GMT

► ದ.ಕ. ಜಿಲ್ಲೆಯಲ್ಲಿ 2017-18 ರಲ್ಲಿ 1,016 ಕ್ಷಯ ಪ್ರಕರಣ ದಾಖಲು

► ‘ನಾಯಕರು ಬೇಕಾಗಿದ್ದಾರೆ, ಕ್ಷಯ ರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ’ ಘೋಷವಾಕ್ಯ

ಮಂಗಳೂರು, ಮಾ.23: ಭಾರತ ಸರಕಾರದ ಆರೋಗ್ಯ ಸಚಿವಾಲಯವು ಕ್ಷಯರೋಗವನ್ನು ಪತ್ತೆ ಹಚ್ಚಲು ಸಿ.ಬಿ.ನ್ಯಾಟ್ (ಸಿಬಿಎನ್‌ಎಎಟಿ) ಎಂಬ ನೂತನ ವಿಧಾನವನ್ನು ಅಳವಡಿಸಿಕೊಂಡಿದೆ. ಅದರಂತೆ ಎಲ್ಲಾ ಜಿಲ್ಲೆಗಳಲ್ಲಿ ಸದರಿ ಸಿ.ಬಿ.ನ್ಯಾಟ್ ಯಂತ್ರಗಳನ್ನು ಕೇಂದ್ರ ಕ್ಷಯರೋಗ ಸಂಸ್ಥೆಯು ಹಂತ ಹಂತವಾಗಿ ಅಳವಡಿಸುವ ಕಾರ್ಯ ಕೈಗೊಂಡಿದೆ.

ದ.ಕ. ಜಿಲ್ಲೆಗೆ 2015ನೇ ಸಾಲಿನಲ್ಲಿ ಸಿ.ಬಿ.ನ್ಯಾಟ್ ಯಂತ್ರ ಮಂಜೂರಾಗಿದ್ದು, ನಗರದ ವೆನ್ಲಾಕ್ ಆಸ್ಪತ್ರೆ ಯಲ್ಲಿ ಅದನ್ನು ಅಳವಡಿಸಲಾಗಿದೆ. ಹಾಗೆಯೇ ಕಳೆದ ಡಿಸೆಂಬರ್‌ನಲ್ಲಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿ.ಬಿ.ನ್ಯಾಟ್ ಯಂತ್ರ ಅಳವಡಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ಕೇಂದ್ರ ಸರಕಾರ 2025ನೇ ಸಾಲಿಗೆ ಕ್ಷಯ ರೋಗ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಕ್ಷಯ ರೋಗ ಮುಕ್ತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮಾ.24ರಂದು ‘ನಾಯಕರು ಬೇಕಾಗಿದ್ದಾರೆ, ಕ್ಷಯ ರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ’ ಘೋಷ ವಾಕ್ಯದೊಂದಿಗೆ ನಡೆಯಲಿದೆ. ಇದುವರೆಗೆ ದೇಶದಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿ ಸೂಕ್ಷ್ಮದರ್ಶಕ ಮತ್ತು ಎಕ್ಸ್‌ರೇ ಮೂಲಕ ಕಫ ಪರೀಕ್ಷೆ ಮಾಡಿ ರೋಗವನ್ನು ಪತ್ತೆ ಹಚ್ಚಲಾಗುತ್ತಿತ್ತು. ಆದರೆ ಈಗ ಸಿ.ಬಿ.ನ್ಯಾಟ್‌ನಂತಹ ನೂತನ ಯಂತ್ರಗಳು ಬಂದಿದ್ದು, ಈ ಪರೀಕ್ಷೆಯಿಂದ ಸುಲಭವಾಗಿ ಚಿಕಿತ್ಸೆ ಮಾಡಬಹುದಾಗಿದೆ.

ಸಿ.ಬಿ.ನ್ಯಾಟ್ ಯಂತ್ರದಿಂದ ಕ್ಷಯರೋಗದ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಬಹುದಾಗಿದ್ದು, ಒಂದೇ ಅವಧಿಯಲ್ಲಿ ನಾಲ್ಕು ಮಾದರಿಗಳನ್ನು ಪರೀಕ್ಷಿ ಸಬಹುದು. ಸರಿಯಾದ ಚಿಕಿತ್ಸೆ ನೀಡಿದಲ್ಲಿ ಕ್ಷಯ ರೋಗವನ್ನು ನಿಯಂತ್ರಣದಲ್ಲಿಡಬಹುದು ಎಂದು ‘ವಾರ್ತಾಭಾರತಿ’ಗೆ ಜಿಲ್ಲಾ ಕ್ಷಯರೋಗ ನಿಯಂತ್ರ ಣಾಧಿಕಾರಿ ಡಾ.ಬದ್ರುದ್ದೀನ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ 32 ಕಫ ಪರೀಕ್ಷಾ ಕೇಂದ್ರಗಳಿದ್ದು, ಏಳು ಕ್ಷಯರೋಗ ಪರೀಕ್ಷಾ ಘಟಕಗಳಿವೆ. ಪ್ರತಿಯೊಂದು ಘಟಕಗಳಲ್ಲೂ ಆರೋಗ್ಯಾಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಸದರಿ ಘಟಕಗಳಲ್ಲಿ ಚಿಕಿತ್ಸೆ ಮತ್ತು ಲ್ಯಾಬ್ ವ್ಯವಸ್ಥೆ ಇದೆ. ಲ್ಯಾಬ್ ಪರೀಕ್ಷೆಯ ಬಗ್ಗೆ ಹಿರಿಯ ಆರೋಗ್ಯಾಧಿಕಾರಿಗಳು ಘಟಕ ಆರೋಗ್ಯಾ ಧಿಕಾರಿಗಳಿಗೆ ಔಷಧ, ಚಿಕಿತ್ಸೆ ನೀಡುವ ಬಗ್ಗೆ ಮಾರ್ಗ ದರ್ಶನ ನೀಡಲಾಗುತ್ತದೆ.

 ವಿಶೇಷವಾಗಿ ಕ್ಷಯರೋಗ ಹೆಚ್ಚು ಇರುವ ಪ್ರದೇಶಗಳಲ್ಲಿ ಸಮುದಾಯಗಳ ಸಭೆ ಕರೆದು ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು, ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಷಯರೋಗ ನಿಯಂತ್ರ ಣದ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನೂ ಕೈಗೊಳ್ಳ ಲಾಗಿದೆ ಎನ್ನುತ್ತಾರೆ ಡಾ.ಬದ್ರುದ್ದೀನ್.

ಕ್ಷಯರೋಗವು ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ 15ರಿಂದ 45 ವರ್ಷದವರಿಗೆ ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಇತ್ತೀಚೆಗೆ ಎಲ್ಲ ವಯಸ್ಸಿನವರಿಗೂ ಕ್ಷಯ ರೋಗ ಕಾಣಿಸಿಕೊಳ್ಳುತ್ತಿದೆ. ಎಚ್‌ಐವಿ, ಏಡ್ಸ್, ಮಧುಮೇಹ ರೋಗಿ ಗಳಿಗೆ ಈ ಸೋಂಕು ಬೇಗನೆ ಹರಡುವ ಸಾಧ್ಯತೆ ಹೆಚ್ಚು. ಸಾರ್ವಜನಿಕರು ಕೆಮ್ಮುವಾಗ, ಸೀನು ವಾಗ ಬಾಯಿಗೆ ಕೈವಸ್ತ್ರ ಹಿಡಿಯಬೇಕು. ಇದರಿಂದ ಅವರಲ್ಲಿರುವ ಬ್ಯಾಕ್ಟೀರಿಯಾ ಇನ್ನೊಬ್ಬರಿಗೆ ಹೋಗ ದಂತೆ ತಡೆಯಬಹುದಾಗಿದೆ. ಕ್ಷಯಕ್ಕೆ ಆರು ತಿಂಗಳ ಚಿಕಿತ್ಸೆ ಕಡ್ಡಾಯವಾಗಿದೆ. ಆದರೆ ಕೆಲವರಿಗೆ ಮಾಹಿತಿ ಇಲ್ಲದಿರುವುದರಿಂದ ಕ್ಷಯ ರೋಗಿಗಳು ಸಂಪೂರ್ಣ ವಾಗಿ ಚಿಕಿತ್ಸೆ ಪಡೆಯುತ್ತಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ ಎಂದು ಹಿರಿಯ ಆರೋಗ್ಯ ಸಹಾಯ ಅಧಿಕಾರಿ ವೆಂಕಟೇಶ್ ಹುದ್ದಾರ್ ಹೇಳಿದರು.

ಜಿಲ್ಲೆಯಲ್ಲಿ 1,016 ಕ್ಷಯ ಪ್ರಕರಣ ದಾಖಲು

ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಸುಳ್ಯದಲ್ಲಿ 7 ಕ್ಷಯರೋಗ ತಪಾಸಣಾ ಘಟಕಗಳಿವೆ. ದ.ಕ.ಜಿಲ್ಲೆಯಲ್ಲಿ 2017ರಿಂದ 2018ರ ಮಾ.22ರ ಮಾಹಿತಿ ಪ್ರಕಾರ, ಕ್ಷಯ ರೋಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,016 ಪ್ರಕರಣಗಳು ದಾಖಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿದ್ದಾರೆ.

ಮೊದಲ ವಿಭಾಗದಲ್ಲಿ 667 ಪ್ರಕರಣ ದಾಖಲಾಗಿದ್ದು, ಎರಡನೆ ವಿಭಾಗದಲ್ಲಿ 199 ಪ್ರಕರಣ ದಾಖಲಾಗಿವೆ. ಎಂಡಿಆರ್(ಬಹು ಔಷಧ ನಿರೋಧಕ) ವಿಭಾಗದಲ್ಲಿ 57 ಪ್ರಕರಣ ದಾಖಲಾಗಿವೆ. ಎಕ್ಸ್‌ಡಿಆರ್ (ವ್ಯಾಪಕ ಔಷಧ ನಿರೋಧಕ) ವಿಭಾಗದಲ್ಲಿ ಏಳು ಪ್ರಕರಣ ಹಾಗೂ ಐಎನ್‌ಎಚ್‌ನಲ್ಲಿ ಎಂಟು ಪ್ರಕರಣ ದಾಖಲಾಗಿವೆ. ಎಚ್‌ಐವಿ ಸೋಂಕು ಇದ್ದ 48 ಮಂದಿ ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಜಿಲ್ಲೆಯ 30 ಮಕ್ಕಳು ಕ್ಷಯ ರೋಗದಿಂದ ಬಳಲುವ ಪ್ರಕರಣ ದಾಖಲಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯು 2030ನೇ ಸಾಲಿಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಅನೇಕ ನೂತನ ರೂಪುರೇಷೆ ಗಳನ್ನು ಹಾಕಿಕೊಂಡು ಸಮರೋಪಾ ದಿಯಲ್ಲಿ ಈ ಕಾರ್ಯ ನಡೆಸುತ್ತಿದೆ. ಅದರಂತೆ ಭಾರತ ಸರಕಾರ ಕೂಡ 2025ನೇ ಸಾಲಿಗೆ ಕ್ಷಯರೋಗ ಮುಕ್ತ ಭಾರತವನ್ನಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಕ್ಷಯ ರೋಗ ವನ್ನು ನಿಯಂತ್ರಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಡಾ. ಬದ್ರುದ್ದೀನ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ

ಇಂದು ವಿಶ್ವ ಕ್ಷಯರೋಗ ದಿನಾಚರಣೆ

ದ.ಕ. ಜಿಲ್ಲಾಡಳಿತ, ದ.ಕ. ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ, ದ.ಕ. ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ ಹಾಗೂ ಲಕ್ಷ್ಮೀ ಮೆಮೋರಿಯಲ್ ನರ್ಸಿಂಗ್ ಕಾಲೇಜ್ ಬಲ್ಮಠ ಇದರ ಸಂಯುಕ್ತ ಆಶ್ರಯ ದಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ‘ವಿಶ್ವ ಕ್ಷಯರೋಗ ದಿನಾಚರಣೆ’ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News