50 ಲಕ್ಷ ಮಾಜಿ ಯೋಧರ ಮಾಹಿತಿಯೊಂದಿಗೆ ಖಾಸಗಿ ವ್ಯಕ್ತಿ ಪರಾರಿ?

Update: 2018-03-24 08:19 GMT

ಹೊಸದಿಲ್ಲಿ, ಮಾ.24: 50 ಲಕ್ಷ ಮಾಜಿ ಯೋಧರ ವೈಯಕ್ತಿಕ ಮಾಹಿತಿಯೊಂದಿಗೆ ಖಾಸಗಿ ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಖಚಿತವಾಗಿ ಏನೂ ಹೇಳಲಾಗದು ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಈ ಮಾಹಿತಿಯ ಪ್ರತಿಯನ್ನು ಕಂಪನಿ ಉಳಿಸಿಕೊಂಡಿದೆಯೇ ಎಂದು ಹೇಳಲಾಗದು ಎಂದೂ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯೊಂದಕ್ಕೆ ಸಚಿವಾಲಯ ಉತ್ತರಿಸಿದೆ.

ಮೂರು ತಿಂಗಳ ಕಾಲ ಈ ವಿಚಾರದಲ್ಲಿ ದಿವ್ಯ ಮೌನ ತಾಳಿದ್ದ ಸಚಿವಾಲಯ ಅಂತಿಮವಾಗಿ ಆರ್ ಟಿಐ ಕಾರ್ಯಕರ್ತ ಹಾಗೂ ನಿವೃತ್ತ ಕಮೊಡೋರ್ ಲೋಕೇಶ್ ಬಿ.ಬಾತ್ರಾ ಅವರು ಕೇಳಿದ ಪ್ರಶ್ನೆಗೆ ಮಾರ್ಚ್ 22ರಂದು ಉತ್ತರಿಸಿದೆ. ಈ ಮಾಹಿತಿ ಮಾಜಿ ಯೋಧರ ದೇಣಿಗೆ ಆರೋಗ್ಯ ಯೋಜನೆಗೆ ಸಂಬಂಧಿಸಿದ್ದು ಎನ್ನಲಾಗಿದೆ.

ಬಯೋಮೆಟ್ರಿಕ್ ಮಾಹಿತಿ

ಇಸಿಎಚ್‍ಎಸ್ ನಲ್ಲಿ ಮಾಜಿ ಯೋಧರ ಮಾಹಿತಿಗಳ ನಿರ್ವಹಣೆಯ ಬಗ್ಗೆ ಬಾತ್ರಾ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಜಂಟಿ ನಿರ್ದೇಶಕ (ಮಾಹಿತಿ ತಂತ್ರಜ್ಞಾನ). "2015ರ ಮೇ ತಿಂಗಳವರೆಗೆ ಸ್ಮಾರ್ಟ್‍ಕಾರ್ಡ್ ವ್ಯವಸ್ಥೆ ಗೊಂದಲಮಯವಾಗಿತ್ತು. ಬಯೋಮೆಟ್ರಿಕ್ ಡಾಟಾ ಸ್ಮಾರ್ಟ್ ಕಾರ್ಡ್‍ಗಳಲ್ಲಿ ಸಂಗ್ರಹವಾಗಿತ್ತು" ಎಂದು ಹೇಳಿದ್ದಾರೆ. ಸ್ಮಾರ್ಟ್‍ಕಾರ್ಡ್ ಮಾಜಿ ಯೋಧರ ಬಳಿ ಇದ್ದು, ಸಿಸ್ಟಂನಲ್ಲಿ ಯಾವುದೇ ಈ ಮಾಹಿತಿಯನ್ನು ದಾಸ್ತಾನು ಮಾಡಿಲ್ಲ ಎಂದು ಇಸಿಎಚ್‍ಎಸ್ ಹೇಳಿದೆ. ಆದರೆ, ಈ ಮಾಹಿತಿಗಳನ್ನು ಕಂಪನಿ ಉಳಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮಾಹಿತಿಗಳು ದುರ್ಬಳಕೆಯಾಗುವುದಿಲ್ಲ ಎಂಬ ಖಾತ್ರಿ ಇಲ್ಲ ಎಂದು ಬಾತ್ರಾ ಹೇಳುತ್ತಾರೆ. ಕಮಡೋರ್  ಬಾತ್ರಾ ಅವರು ಎತ್ತಿದ ಪ್ರಶ್ನೆಯ ಬಗ್ಗೆ ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಲುವಂತೆ ಮಾಜಿ ಸೈನಿಕರ ಕಲ್ಯಾಣ ಇಲಾಖೆಯ ಕಮಾಂಡಿಂಗ್ ಅಧಿಕಾರಿಗೆ ರಕ್ಷಣಾ ಇಲಾಖೆ ಕಾರ್ಯದರ್ಶಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ವಿಷಯ ಚಾಲ್ತಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News