ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರ ಸಾವು

Update: 2018-03-24 15:44 GMT

ಶ್ರೀನಗರ, ಮಾ.24: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ದೂರು ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ದೂರು ಪ್ರದೇಶದಲ್ಲಿರುವ ಶಿಸ್ತಾರ್‌ಗ್ರಾಮ ಹಳ್ಳಿಯಲ್ಲಿ ಉಗ್ರರ ಗುಂಪು ಅಡಗಿ ಕುಳಿತಿದೆ ಎಂಬ ಮಾಹಿತಿಯನ್ನಾಧರಿಸಿ ಸೇನೆಯ ರಾಷ್ಟ್ರೀಯ ರೈಫಲ್ಸ್ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣಾ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಎನ್‌ಕೌಂಟರ್ ನಡೆದ ಸ್ಥಳದಿಂದ ಎರಡು ಎಕೆ 47, ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಪರಿಣಾಮವಾಗಿ ಸ್ಥಳೀಯಾಡಳಿತವು ಮುನ್ನೆಚ್ಚರಿಕಾ ಕ್ರಮವಾಗಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತು. ಬೇಸಿಗೆ ಆಗಮಿಸುತ್ತಿರುವ ಕಾರಣ ನಿಯಂತ್ರಣ ರೇಖೆಯ ಸಮೀಪ ಮಂಜು ಕರಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರರ ನುಸುಳುವಿಕೆ ಹೆಚ್ಚಾಗಲಿರುವುದರಿಂದ ನೂತನ ಭದ್ರತಾ ತಂತ್ರವನ್ನು ಚರ್ಚಿಸುವ ಸಲುವಾಗಿ ಸೇನೆ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಸಭೆ ಸೇರಿದ್ದರು. ಈ ಸಭೆಯಲ್ಲಿ ಭದ್ರತಾ ವ್ಯವಸ್ಥೆಯ ಎರಡು ಅಂಗಗಳಾದ ಸೇನೆ ಮತ್ತು ಪೊಲೀಸ್ ಇಲಾಖೆಯ ಮಧ್ಯೆ ಉತ್ತಮ ಸಹಕಾರ ಮತ್ತು ಸಂಬಂಧವನ್ನು ಕಾಪಾಡುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಯಿತು. ಆಮೂಲಕ ಭದ್ರತಾ ಪಡೆಯಲ್ಲಿ ಕನಿಷ್ಟ ಸಾವುಗಳು ಸಂಭವಿಸುವಂತೆ ನೋಡಿಕೊಳ್ಳುವ ನಿರ್ಧಾರವನ್ನು ತಳೆಯಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News