ಮಹಿಳೆಯರಲ್ಲಿ ಹೃದಯಾಘಾತದ ಎಚ್ಚರಿಕೆಯ ಈ ಸಂಕೇತಗಳು ನಿಮಗೆ ಗೊತ್ತೇ...?

Update: 2018-03-24 10:55 GMT

ಹೃದಯಾಘಾತ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹೃದಯಾಘಾತದ ಅಪಾಯವನ್ನು ಬಿಂಬಿಸುವ ಸಂಕೇತಗಳು ಬಿಡಿ, ಹೃದಯಾಘಾತವಾಗಿರುವುದೇ ಹೆಚ್ಚಿನ ಮಹಿಳೆಯರಿಗೆ ಗೊತ್ತಿರುವುದಿಲ್ಲ. ಈ ಸಂಕೇತಗಳನ್ನು ತಿಳಿದುಕೊಂಡರೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಅಪಾಯದಿಂದ ಪಾರಾಗಲು ಸಾಧ್ಯವಿದೆ.

ಮಹಿಳೆ ಸದಾ ಕಾರ್ಯಗಳಲ್ಲಿ ವ್ಯಸ್ತವಾಗಿರುವ ಜೊತೆಗೆ ಕುಟುಂಬ ನಿರ್ವಹಣೆಯ ಹೊಣೆಯನ್ನೂ ಹೊತ್ತಿರುತ್ತಾಳೆ. ಹೀಗಾಗಿ ಒತ್ತಡದಲ್ಲಿಯೇ ಮಹಿಳೆಯ ಬದುಕು ಸಾಗುತ್ತಿರುತ್ತದೆ. ಗೃಹಿಣಿಯಿರಲಿ, ಉದ್ಯೋಗಸ್ಥ ಮಹಿಳೆಯಿರಲಿ ಅಥವಾ ನಮ್ಮ ಸುತ್ತುಮುತ್ತಲಿನ ಯಾವುದೇ ಮಹಿಳೆಯಿರಲಿ....ಹೃದಯಾಘಾತದ ಅಪಾಯ ಸದ್ದಿಲ್ಲದೆ ತನ್ನನ್ನು ಕಾಡುತ್ತಿದೆ ಎಂದು ಆಕೆಗೆ ಗೊತ್ತೇ ಇರುವುದಿಲ್ಲ. ಚಲನಚಿತ್ರಗಳಲ್ಲಿ ತೋರಿಸುವಂತೆ ಹೃದಯಾಘಾತ ಏಕಾಏಕಿ ಸಂಭವಿಸುವುದಿಲ್ಲ. ಆದರೆ ಹೃದಯಾಘಾತದ ಅಪಾಯವನ್ನು ಸೂಚಿಸಬಹುದಾದ ಹಲವಾರು ಸಂಕೇತಗಳು ಕಾಣಿಸಿಕೊಳ್ಳು ತ್ತಿರಬಹುದು.

ಮಹಿಳೆಯರಲ್ಲಿ ಹೃದಯಾಘಾತದ ಮೊದಲ ಲಕ್ಷಣಗಳೇನು?

ಹೃದಯಾಘಾತ ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿ ಉಂಟಾಗುತ್ತದೆ. ಮಹಿಳೆಯರಲ್ಲಿ ಹೃದಯಾಘಾತದ ಅತ್ಯಂತ ಸಾಮಾನ್ಯವಾದ ಆರು ಲಕ್ಷಣಗಳ ಮಾಹಿತಿಯಿಲ್ಲಿದೆ.....

► ಎದೆಯಲ್ಲಿ ಆರಂಭಗೊಂಡು ತೋಳುಗಳು, ಕುತ್ತಿಗೆ, ಬೆನ್ನಿಗೆ ಹರಡುವ ನೋವು

ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಎದೆಯಲ್ಲಿ ಕಾಣಿಸಿಕೊಳ್ಳುವ ನೋವು ನಿರ್ದಿಷ್ಟವಾಗಿ ತೋಳುಗಳು, ಕುತ್ತಿಗೆ ಮತ್ತು ಬೆನ್ನಿಗೆ, ಅಷ್ಟೇ ಏಕೆ...ದವಡೆಗೂ ಹರಡುತ್ತದೆ. ಈ ನೋವು ಹೆಚ್ಚಾಗಿ ಸೊಂಟದ ಮೇಲಿನ ಯಾವುದೇ ಅಂಗದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಆಗಾಗ್ಗೆ ಕಡಿಮೆಯಾಗಿದೆ ಎಂದು ಅನ್ನಿಸುವ ಈ ನೋವು ನಂತರ ಎಷ್ಟೊಂದು ತೀವ್ರಗೊಳ್ಳುತ್ತದೆ ಎಂದರೆ ನಿದ್ರೆಯಲ್ಲಿಯೂ ಏಳುವಂತಾಗುತ್ತದೆ. ಮಹಿಳೆಯರಲ್ಲಿ ಈ ನೋವು ಪುರುಷರಂತೆ ಎದೆಯ ಎಡಭಾಗದಲ್ಲಿ ಕಾಣಿಸಿಕೊಂಡು ಎಡತೋಳಿಗೆ ವ್ಯಾಪಿಸಬೇ ಕೆಂದೇನಿಲ್ಲ. ಆದರೆ ಈ ನೋವು ನಿಜಕ್ಕೂ ತುಂಬ ಕಷ್ಟವನ್ನು ನೀಡುತ್ತದೆ.

► ಹೊಟ್ಟೆಯಲ್ಲಿ, ವಿಶೇಷವಾಗಿ ಹೊಕ್ಕುಳಿನ ಮೇಲ್ಭಾಗದಲ್ಲಿ ನೋವು

ಇಂತಹ ನೋವು ಎದೆಯ ಭಾಗದಲ್ಲಿ ತೀವ್ರ ಉರಿಯೊಂದಿಗೆ ಗುರುತಿಸಿಕೊಂಡಿರಬಹುದು ಮತ್ತು ಇದನ್ನು ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಅಲ್ಸರ್ ಅಥವಾ ಫ್ಲೂ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ರೋಗಿಗೆ ಹೊಟ್ಟೆಯ ಭಾಗದಲ್ಲಿ ತೀವ್ರ ಒತ್ತಡ ಅಥವಾ ಭಾರ ಹೇರಿದ ಅನುಭವವಾಗುತ್ತದೆ.

► ತಣ್ಣನೆಯ ಬೆವರು, ವಾಕರಿಕೆ, ತಲೆ ಸುತ್ತುವಿಕೆ ಮತ್ತು ಉಸಿರಾಟದ ತೊಂದರೆ

ಯಾವುದೇ ಕಾರಣ ತಿಳಿಯದೆ ಉಸಿರಾಟದಲ್ಲಿ ತೊಂದರೆ, ಏಕಾಏಕಿ ಭೀತಿ ಮತ್ತು ಆತಂಕ ಕಾಣಿಸಿಕೊಳ್ಳುವುದು, ಬಹಳ ದೂರ ಓಡಿದಂತಹ ಆಯಾಸ ಮತ್ತು ಶರೀರದ ತುಂಬ ತಣ್ಣನೆಯ ಬೆವರು...ಇವೆಲ್ಲ ಹೃದಯಾಘಾತದ ಸ್ಪಷ್ಟ ಲಕ್ಷಣಗಳಾಗಿವೆ.

► ದಿಢೀರ್ ಬಳಲಿಕೆ

 ಯಾವುದೇ ಕೆಲಸ ಮಾಡುತ್ತಿಲ್ಲವಾದರೂ ಏಕಾಏಕಿ ಸಾಮಾನ್ಯವಲ್ಲದ ಮತ್ತು ವಿವರಿಸಲಾಗದ ಬಳಲಿಕೆ, ತೀವ್ರ ದಣಿವಿನ ಅನುಭವ, ನಿದ್ರೆಯಲ್ಲಿ ವ್ಯತ್ಯಯವಾಗಿ ಎಚ್ಚರಿಕೆ ಮತ್ತು ಎದೆಯಲ್ಲಿ ನೋವಿನ ಅನುಭವ ಇವು ಹೃದಯಾಘಾತದ ಅಪಾಯವನ್ನು ಸೂಚಿಸುತ್ತವೆ.

► ದಿಢೀರ್ ಆತಂಕ ಅಥವಾ ಭೀತಿ ದಿಢೀರನೆ ಆತಂಕ ಅಥವಾ ಭೀತಿಯೊಂಂದಿಗೆ ಉಸಿರಾಟ ಭಾರವಾಗು ವಿಕೆ, ಮೈಯಲ್ಲಿ ನಡುಕ ಮತ್ತು ಬೆವರುವಿಕೆ ಇವು ಹೃದಯಾಘಾತ ವಾದಾಗ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳಾಗಿವೆ.

► ತೀವ್ರಗೊಳ್ಳುತ್ತಲೇ ಹೋಗುವ ಅಸಾಧಾರಣ ತಲೆನೋವು

ತಲೆಯು ಹಗುರವಾದಂತೆ ಭಾಸವಾಗುವ ಜೊತೆಗೆ ತೀವ್ರ ನೋವು ಕಾಣಿಸಿಕೊಳ್ಳುವುದು ಮತ್ತು ವಾಕರಿಕೆಯಾಗುವುದು ಇವು ಹೃದಯಾಘಾತದ ಸಂಕೇತಗಳಾಗಿವೆ. ಇವು ಅಲ್ಪಸಮಯ ಮಾಯವಾಗಿ ಮತ್ತೆ ಮೊದಲಿಗಿಂತ ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ಕಣ್ಣು ಕತ್ತಲಾದ ಅನುಭವವೂ ಆಗಬಹುದು.

ಇವು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳಾಗಿರುವುದರಿಂದ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ಆದರೆ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಹೃದಯಕ್ಕೆ ಅಥವಾ ಅದರ ಸ್ನಾಯುಗಳಿಗೆ ಯಾವುದೇ ಹಾನಿಯನ್ನು ತಪ್ಪಿಸಲು ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿದೆ.

 ಪುರುಷರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಸ್ವರೂಪಗಳು ಬೇರೆ ಬೇರೆಯಾಗಿವೆ. ಋತುಚಕ್ರ ನಿಂತಿರುವ ಮಹಿಳೆಯರ ಶರೀರದಲ್ಲಿ ಎಸ್ಟ್ರೋಜಿನ್ ಹಾರ್ಮೋನ್ ಮಟ್ಟವು ತ್ವರಿತವಾಗಿ ಕಡಿಮೆಯಾಗುತ್ತಿರುವುದರಿಂದ ಸಮಾನ ವಯಸ್ಸಿನ ಪುರುಷರಿಗಿಂತ ಹೆಚ್ಚಿನ ಹೃದಯಾಘಾತದ ಅಪಾಯವನ್ನು ಎದುರಿಸುತ್ತಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News