ನೀರವ್ ಮೋದಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಕ್ಕಿದ್ದೇನು ?

Update: 2018-03-24 13:33 GMT

ಹೊಸದಿಲ್ಲಿ, ಮಾ. 24: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಜ್ರೋದ್ಯಮಿ ನೀರವ್ ಮೋದಿ ಅವರ ಮುಂಬೈಯ ಅಪಾರ್ಟ್‌ಮೆಂಟ್‌ನಿಂದ ಜಾರಿ ನಿರ್ದೇಶನಾಲಯ 26 ಕೋ. ರೂ.ನ ಪುರಾತನ ಜ್ಯುವೆಲ್ಲರಿ, ದುಬಾರಿ ವಾಚು ಹಾಗೂ ಎಂ.ಎಫ್. ಹುಸೈನ್, ಅಮೃತಾ ಶೇರ್‌ಗಿಲ್ ಅವರ ಪೈಂಟಿಂಗ್‌ಗಳನ್ನು ವಶಪಡಿಸಿಕೊಂಡಿದೆ.

ಮೋದಿಯ ಮುಂಬೈಯ ವರ್ಲಿ ಪ್ರದೇಶದಲ್ಲಿರುವ ಐಷಾರಾಮಿ ಫ್ಲಾಟ್ ಸಮುದ್ರ ಮಹಲ್‌ನಲ್ಲಿ ಮಾರ್ಚ್ 22ರಂದು ಜಾರಿ ನಿರ್ದೇಶನಾಲಯ ಸಿಬಿಐಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 15 ಕೋ. ರೂ. ಮೌಲ್ಯದ ಪ್ರಾಚೀನ ಜ್ಯುವೆಲ್ಲರಿ, 1.4 ಕೋ. ರೂ. ಮೌಲ್ಯದ ವಾಚ್‌ಗಳು ಹಾಗೂ ಅಮೃತಾ ಶಾರ್‌ಗಿಲ್, ಎಂ.ಎಫ್. ಹುಸೈನ್, ಕೆ.ಕೆ. ಹೆಬ್ಬಾರ್‌ರ 10 ಕೋ. ರೂ. ಮೌಲ್ಯದ ಪೈಂಟಿಂಗ್‌ಳನ್ನು ಕಳೆದ ಮೂರು ದಿನಗಳಲ್ಲಿ ಹಣವಂಚನೆ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಗ್ರಹದಲ್ಲಿದ್ದ ಒಂದು ವಜ್ರದ ಉಂಗುರ 10 ಕೋ. ರೂ. ಮೌಲ್ಯ ಹೊಂದಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 1,200 ಕೋ. ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನೀರವ್ ಮೋದಿ ಹಾಗೂ ಗೀತಾಂಜಲಿ ಜೆಮ್ಸ್ ಪ್ರವರ್ತಕ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಹಣ ವಂಚನೆಗೆ ಸಂಬಂಧಿಸಿದ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಈ ವರ್ಷಾರಂಭದಲ್ಲಿ ದೇಶ ತ್ಯಜಿಸಿದ ಬಳಿಕ ಹಾಗೂ ನೋಟಿಸು ಜಾರಿ ಮಾಡಿದ ಬಳಿಕವೂ ತನಿಖಾ ಸಂಸ್ಥೆ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಇಬ್ಬರ ವಿರುದ್ಧ ಜಾಗತಿಕ ಬಂಧನಾದೇಶದ ಸೂಚನೆಯನ್ನು ಇಂಟರ್‌ಪೋಲ್‌ಗೆ ನೀಡಿದೆ. ಜಾರಿ ನಿರ್ದೇಶನಾಲಯದ ಮನವಿ ಬಳಿಕ ಮುಂಬೈ ವಿಶೇಷ ನ್ಯಾಯಾಲಯ ಇಬ್ಬರಿಗೂ ಜಾಮೀನುರಹಿತ ಬಂಧನಾದೇಶ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News