ಬುಲೆಟ್ ರೈಲಿನಿಂದ 300 ಎಕರೆ ಕೃಷಿಭೂಮಿ ನಾಶ

Update: 2018-03-24 13:49 GMT

ಥಾಣೆ(ಮಹಾರಾಷ್ಟ್ರ),ಮಾ.24: ಜಿಲ್ಲೆಯ ದಿವಾ ಗ್ರಾಮದ ಮೂಲಕ ಹಾದುಹೋಗುವ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಮಾರ್ಗ ಯೋಜನೆಗೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಿಂದಾಗಿ 300 ಎಕರೆವರೆಗೆ ಕೃಷಿಭೂಮಿಯನ್ನು ತಾವು ಕಳೆದುಕೊಳ್ಳ ಬೇಕಾಗುತ್ತದೆ ಎಂದು ಹೇಳಿರುವ ಅವರು, ಇದರ ಬದಲಿಗೆ ವಸಯಿ-ಥಾಣೆ ಖಾರಿಯ ಮೂಲಕ ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ.

ಬುಲೆಟ್ ರೈಲುಮಾರ್ಗವು ತಮ್ಮ ಗ್ರಾಮದ ಮೂಲಕ ಹಾದು ಹೋಗುತ್ತದೆ ಎನ್ನುವುದು ತಿಳಿದಾಗಿನಿಂದ ದಿವಾದ ಗ್ರಾಮಸ್ಥರು ಯೋಜನೆಯಿಂದಾಗಿ ತಮ್ಮ ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಬದುಕುತ್ತಿದ್ದಾರೆ. ಹಳಿಗಳ ಸ್ಥಾಪನೆಗಾಗಿ 100 ಎಕರೆಗೂ ಅಧಿಕ ಭೂಮಿ ಮತ್ತು ಕಾರ್‌ಶೆಡ್‌ಗಾಗಿ 300ರಿಂದ 400 ಎಕರೆ ಭೂಮಿ ಅಗತ್ಯ ವಾಗುತ್ತದೆ. ಅಂದರೆ ಸಾವಿರಾರು ಜನರು, ವಿಶೇಷವಾಗಿ ರೈತರು ತಮ್ಮ ಕೃಷಿಭೂಮಿಗಳನ್ನು ಮತ್ತು ಮನೆಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ಆಗ್ರಿ ಯುವಕ ಸಂಘಟನಾ, ಮಹಾರಾಷ್ಟ್ರ ಇದರ ಅಧ್ಯಕ್ಷ ಗೋವಿಂದ ಭಗತ್ ಹೇಳಿದರು.

ಪಾಲಘರ್, ಭಿವಂಡಿ, ಬೇಟಾವಾಡೆ ಸೇರಿದಂತೆ ಹಲವಾರು ಗ್ರಾಮಗಳ ರೈತರು ಬುಲೆಟ್ ರೈಲು ಯೋಜನೆಗಾಗಿ ಸರಕಾರದ ಭೂ ಸ್ವಾಧೀನ ಕ್ರಮವನ್ನು ವಿರೋಧಿಸಿದ್ದಾರೆ. ಥಾಣೆ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಕಳೆದ ಫೆಬ್ರವರಿ ಯಲ್ಲಿ ಭೂಮಿಯ ಸರ್ವೆ ಕಾರ್ಯ ನಡೆಸಿದಾಗ ಸಹಕರಿಸಲು ನಿರಾಕರಿಸಿದ್ದ ರೈತರು ಸ್ಥಳದಲ್ಲಿ ಉಪಸ್ಥಿತರಿರಲಿಲ್ಲ. ಯೋಜನೆಗೆ ತಮ್ಮ ಭೂಮಿಯನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ.

ಆದರೆ ಯಾರಿಗೂ ತೊಂದರೆಯಾಗದ ಪರ್ಯಾಯ ಮಾರ್ಗವೊಂದನ್ನು ರೈತರು ಸೂಚಿಸಿದ್ದಾರೆ.

ವಸಯಿ ಮತ್ತು ಥಾಣೆ ಖಾರಿಯಿಂದ ಮುಲುಂಡ್ ಮೂಲಕ ಮಾರ್ಗವನ್ನು ನಿರ್ಮಿಸಿ ಬಾಂಬೆ ಪೋರ್ಟ್ ಟ್ರಸ್ಟ್(ಬಿಪಿಟಿ) ನಲ್ಲಿ ಅಂತ್ಯಗೊಳಿಸಬಹುದು. ವಸಯಿ ಮತ್ತು ಥಾಣೆ ಖಾರಿ ಹಸಿರು ವಲಯದಲ್ಲಿದ್ದು, ಬಿಪಿಟಿಯಲ್ಲಿ ಕಾರ್‌ಶೆಡ್‌ಗಾಗಿ ಸಾಕಷ್ಟು ಜಾಗ ಸರಕಾರಕ್ಕೆ ಲಭ್ಯವಿದೆ. ಹೀಗಿರುವಾಗ ಅವರು ನಮ್ಮನ್ನು ಚಿಂತೆಗೆ ತಳ್ಳುವುದಾದರೂ ಏಕೆ ಎಂದು ಭಗತ್ ಪ್ರಶ್ನಿಸಿದರು.

ಭೂಸ್ವಾಧೀನವನ್ನು ವಿರೋಧಿಸಿ ಕಳೆದ ವಾರ ಥಾಣೆ ಜಿಲ್ಲಾಧಿಕಾರಿ ಡಾ.ಮಹೇಂದ್ರ ಕಲ್ಯಾಣಕರ ಅವರಿಗೆ ಪತ್ರವನ್ನು ಬರೆದಿರುವ ರೈತರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಇಂತಹ ಯಾವುದೇ ಪ್ರತಿಭಟನೆಯ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿರುವ ಕಲ್ಯಾಣಕರ, ರೈತರು ಮಾ.22ರಂದು ನಮ್ಮ ಉಪವಿಭಾಗಾಧಿಕಾರಿಗಳೊಂದಿಗೆ ಶಾಂತಿಯುತ ಮಾತುಕತೆಗಳನ್ನು ನಡೆಸಿದ್ದಾರೆ. ಅಂತಹ ಯಾವುದೇ ವಿರೋಧ ಕಂಡು ಬಂದಿರಲಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News