ಕೇಂಬ್ರಿಜ್ ಅನಾಲಿಟಿಕಾ ಭಾರತದಲ್ಲಿ ಮಾಡಿದ್ದೇನು?

Update: 2018-03-24 16:58 GMT

Theprint.in ಎಕ್ಸ್ ಕ್ಲೂಸಿವ್ ವರದಿ 

ಕೇಂಬ್ರಿಜ್ ಅನಾಲಿಟಿಕಾ, ಬ್ರಿಟನ್‍ನ ವಿವಾದಾತ್ಮಕ ರಾಜಕೀಯ ಸಲಹಾ ಸಂಸ್ಥೆ ತನ್ನ ವೆಬ್‍ಸೈಟ್‍ನಲ್ಲಿ ಹೇಳಿಕೊಂಡಂತೆ, 2010ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದು, ಇದರ ಕಕ್ಷಿದಾರರು ಅದ್ಭುತ ಜಯ ಸಾಧಿಸಿದ್ದಾರೆ.

2013ರಲ್ಲಿ ರೂಪುಗೊಂಡ ಕೇಂಬ್ರಿಜ್ ಅನಾಲಿಟಿಕಾದ ಮಾತೃಸಂಸ್ಥೆ ಸ್ಟ್ರಾಟಜಿಕ್ ಕಮ್ಯುನಿಕೇಶನ್ ಲ್ಯಾಬೋರೇಟರೀಸ್ (ಎಸ್‍ಸಿಎಲ್). ಇದು ಭಾರತೀಯ ಕಂಪೆನಿಯಾದ ಸ್ಟ್ರಾಟಜಿಕ್ ಕಮ್ಯುನಿಕೇಶನ್ಸ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಭಾರತೀಯ ಕಂಪನಿಯ ಮೂಲಕ ಕಾರ್ಯ ನಿರ್ವಹಿಸಿದೆ. ಕಂಪೆನಿ ದಾಖಲೆಗಳ ಪ್ರಕಾರ, ಕಂಪೆನಿಗೆ ನಾಲ್ವರು ನಿರ್ದೇಶಕರಿದ್ದಾರೆ. ಅಲೆಗ್ಸಾಂಡರ್ ಜೇಮ್ಸ್ ಅಶ್ಬರ್ನರ್ ನಿಕ್ಸ್, ಅಲೆಗ್ಸಾಂಡರ್ ವ್ಯಾಡ್ಡಿಂಗ್‍ಟನ್ ಓಕ್ಸ್, ಅಮ್ರೀಶ್ ಕುಮಾರ್ ತ್ಯಾಗಿ ಹಾಗೂ ಅನ್ವೇಷ್ ಕುಮಾರ್ ರಾಯ್. ಮೊದಲ ಇಬ್ಬರು ಬ್ರಿಟಿಷ್ ನಾಗರಿಕರಾಗಿದ್ದು, ಇವರು 2005ರಲ್ಲಿ ಇಂಗ್ಲೆಂಡಿನಲ್ಲಿ ಎಸ್‍ಸಿಎಲ್‍ನ ನಾಲ್ವರು ಸಹ ಸಂಸ್ಥಾಪಕರಲ್ಲಿ ಸೇರಿದ್ದಾರೆ. ಅಮ್ರೀಶ್ ತ್ಯಾಗಿ, ಸಂಯುಕ್ತ ಜನತಾದಳದ ಮುಖಂಡ ಕೆ.ಸಿ.ತ್ಯಾಗಿಯ ಪುತ್ರ. ಇವರು ಓವ್ಲೆನೊ ಬ್ಯುಸಿನೆಸ್ ಇಂಟೆಲಿಜೆನ್ಸ್ ಎಂಬ ಘಟಕವನ್ನೂ ನಿರ್ವಹಿಸುತ್ತಿದ್ದಾರೆ. ಇದು ಈಗ ಭಾರತದಲ್ಲಿ ಕ್ಯಾಂಬ್ರಿಡ್ಜ್ ಅನಲೈಟಿಕಾ ಜತೆ ಕಾರ್ಯನಿರ್ವಹಿಸುತ್ತಿದೆ.

ಆದರೆ ಎಸ್‍ಸಿಎಲ್ ಇಂಡಿಯಾದ ನಾಲ್ಕನೇ ನಿರ್ದೇಶಕ ಅನ್ವೇಷ್ ಕುಮಾರ್ ರಾಯ್ ಯಾರು?

ಬಿಹಾರ ಮೂಲದ ರಾಯ್ ಚುನಾವಣಾ ಸಲಹೆಗಾರರಾಗಿ ಹಲವು ರಾಜಕಾರಣಿಗಳ ಜೊತೆಗೆ 1984ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಎಲೆಮರೆಯ ಕಾಯಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂಟರ್ ನೆಟ್ ನಲ್ಲಿ ಇವರ ಬಗ್ಗೆ ಏನೂ ತಿಳಿಯುವುದಿಲ್ಲ. 'ದ ಪ್ರಿಂಟ್'ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಗೆ ಎಸ್‍ಸಿಎಲ್ ಇಂಡಿಯಾ ಆರಂಭವಾಯಿತು, ಅದು ಏನು ಮಾಡುವ ಪ್ರಯತ್ನ ಮಾಡಿತು ಹಾಗೂ ಯಾಕೆ ವಿಫಲವಾಯಿತು ಎನ್ನುವುದನ್ನು ವಿವರಿಸಿದ್ದಾರೆ.

2009ರ ವಿಸ್ಮಯ
2009ರ ಲೋಕಸಭಾ ಚುನಾವಣೆಯಲ್ಲಿ ರಾಯ್, ಬಿಜೆಪಿ ಮುಖಂಡ ಹಾಗೂ ಪ್ರಸ್ತುತ ಸಂಸ್ಕೃತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆ) ರಾಗಿರುವ ಮಹೇಶ್ ಶರ್ಮಾ ಜತೆ ಕೆಲಸ ಮಾಡಿದರು. ಗೌತಮಬುದ್ಧ ನಗರದಿಂದ ಶರ್ಮಾ ಖಚಿತವಾಗಿ ಗೆಲ್ಲುತ್ತಾರೆ ಎನ್ನುವ ಖಾತ್ರಿ ರಾಯ್ ಅವರಿಗಿತ್ತು. ಆದರೆ ಬಹುಜನ ಸಮಾಜ ಪಕ್ಷದ ಸುರೇಂದ್ರ ಸಿಂಗ್ ನಾಗರ್ ವಿರುದ್ಧ 16 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಪರಾಜಿತರಾದರು.

ಶರ್ಮಾ ಹೇಗೆ ತಮ್ಮ ಕ್ಷೇತ್ರ ಕಳೆದುಕೊಂಡರು ಎನ್ನುವುದನ್ನು ಅರ್ಥೈಸಿಕೊಳ್ಳಲು ಶರ್ಮಾಗೆ ಸಾಧ್ಯವಾಗಲಿಲ್ಲ. ಈ ವಿಸ್ಮಯದ ಬಗ್ಗೆ ಲಂಡನ್ ಮೂಲದ ಸ್ನೇಹಿತರ ಜತೆ ಹೇಳಿಕೊಂಡರು. ಗೌತಮಬುದ್ಧ ನಗರಕ್ಕೆ ಬ್ರಿಟನ್‍ನ ರಾಜಕೀಯ ನಡವಳಿಕೆ ತಜ್ಞರನ್ನು ಕರೆಸಿಕೊಂಡು ಪತ್ತೆ ಮಾಡುವಂತೆ ಸಲಹೆ ಮಾಡಿದರು. ಹೀಗೆ ಬ್ರಿಟನ್‍ನ ಎಸ್‍ಸಿಎಲ್ ಸಂಸ್ಥೆಯ ಚುನಾವಣಾ ಮುಖ್ಯಸ್ಥರಾಗಿದ್ದ ಡಾನ್ ಮುರ್ಸನ್ ಅವರನ್ನು ರಾಯ್‍ಗೆ ಪರಿಚಯವಾಯಿತು.

ರೊಮೇನಿಯಾ ಪ್ರಜೆಯಾದ ಮುರ್ಸನ್, ಬಿಹೇವಿಯರಲ್ ಡೈನಾಮಿಕ್ಸ್ ಇನ್‍ಸ್ಟಿಟ್ಯೂಟ್‍ನ ಇತರ ಮೂವರು ತಜ್ಞರ ಜತೆ ಭಾರತಕ್ಕೆ ಆಗಮಿಸಿದರು. ಈ ಸಂಸ್ಥೆಯನ್ನು ನಿಜೆಲ್ ಓಕಾಸ್ 1993ರಲ್ಲಿ ಆರಂಭಿಸಿದರು. ಓಕಾಸ್ ಮತ್ತು ಅವರ ಸ್ನೇಹಿತ ಅಲೆಗ್ಸಾಂಡರ್ ಓಕಾಸ್ ಬಳಿಕ ಅಲೆಗ್ಸಾಂಡರ್ ನಿಕ್ಸ್ ಜತೆಗೆ ಎಸ್‍ಸಿಎಲ್‍ನ ಸಹಸಂಸ್ಥಾಪಕರಾದರು.
ಮುರ್ಸನ್ ತಂಡ, ಮಹೇಶ್ ಶರ್ಮಾ ಅವರಿಗೆ ಅನಿರೀಕ್ಷಿತವಾಗಿ ತೀರಾ ಕಡಿಮೆ ಮತ ಚಲಾವಣೆಯಾದ ಗೌತಮಬುದ್ಧನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜೇವಾರ್ ವಿಧಾನಸಭಾ ಕ್ಷೇತ್ರದಲ್ಲಿ ಭಾಷಾಂತರಕಾರರ ಸಹಾಯದೊಂದಿಗೆ ಸಂದರ್ಶನ ನಡೆಸಿತು.

ಒಂದು ತಿಂಗಳ ಅವಧಿಯ ಈ ಸಂಶೋಧನೆಯಲ್ಲಿ ವಿಡಿಯೊ ಮೂಲಕ ಮತದಾರರ ಜತೆಗೆ ಸಂದರ್ಶನ ನಡೆಸಲಾಯಿತು. ಬಳಿಕ ವಿಡಿಯೊ ಮೂಲಕ ಅವರು ಪ್ರಶ್ನೆಗಳಿಗೆ ಉತ್ತರಿಸುವಾಗ ಇದ್ದ ಮೌಖಿಕ ಅಭಿವ್ಯಕ್ತಿಯನ್ನು ವಿಶ್ಲೇಷಿಸಿ ಅವರು ಸುಳ್ಳು ಹೇಳುತ್ತಿದ್ದಾರೆಯೇ ಎಂದು ಪತ್ತೆ ಮಾಡಲಾಯಿತು. ಸಂಶೋಧನೆಯಿಂದ ತಿಳಿದುಬಂದಂತೆ ಜನರು ಶರ್ಮಾ ಅವರನ್ನು ರಾಜಕಾರಣಿ ಅಥವಾ ವೈದ್ಯರಾಗಿ ಕಾಣದೇ, ಶ್ರೀಮಂತ ಉದ್ಯಮಿಯಾಗಿ ಕಂಡರು. (ಶರ್ಮಾ ನೋಯ್ಡಾದಲ್ಲಿ ಆಸ್ಪತ್ರೆ ಹೊಂದಿದ್ದು, ಇದೀಗ ಈ ಆಸ್ಪತ್ರೆ ಇಡೀ ಉತ್ತರ ಭಾರತದಲ್ಲಿ ಸರಣಿ ಆಸ್ಪತ್ರೆಯಾಗಿ ಬೆಳೆದಿದೆ). ಜನರಿಗೆ ಯಾವುದೇ ಅಭಿವೃದ್ಧಿ ಕನಸು ಪ್ರದರ್ಶಿಸಲು ಶರ್ಮಾ ವಿಫಲರಾದರು ಹಾಗೂ ಯಾವುದೇ ನಿರ್ದಿಷ್ಟ ಆಶ್ವಾಸನೆಗಳನ್ನು ನೀಡಲೂ ಸಾಧ್ಯವಾಗದೇ, ನಿಮ್ಮ ಸೇವೆ ಮಾಡುತ್ತೇನೆ ಎಂದಷ್ಟೇ ಗೊಂದಲಮಯವಾಗಿ ಹೇಳಿದ್ದರು.

ಶರ್ಮಾ ಅವರಿಗೆ ಒಬ್ಬ ಸಹಚರ ಇದ್ದ. ಈತ ಕೂಡಾ ಶರ್ಮಾ ಅವರಂತೆ ಬ್ರಾಹ್ಮಣ. ಆದರೆ ಆತನನ್ನು ಒಂದು ನಿರ್ದಿಷ್ಟ ಕ್ಷೇತ್ರದ ಬ್ರಾಹ್ಮಣರು ಇಷ್ಟಪಡುತ್ತಿರಲಿಲ್ಲ. ಆದ್ದರಿಂದ ಅವರು ಸಹಚರನಿಗೆ ಬುದ್ಧಿ ಕಲಿಸುವ ಸಲುವಾಗಿ ಬಿಎಸ್ಪಿ ಅಭ್ಯರ್ಥಿಯ ಪರ ಮತ ಚಲಾಯಿಸಲು ನಿರ್ಧರಿಸಿದರು. ಶರ್ಮಾ ಅವರ ಗೆಲುವು ಖಚಿತ ಎಂದು ಬ್ರಾಹ್ಮಣ ಮತದಾರರು ದೊಡ್ಡ ಸದ್ದು ಮಾಡಿದ್ದರು. ಇದರಿಂದ ಇತರ ಜಾತಿ ಮತಗಳು ಅವರ ವಿರುದ್ಧವಾಗಿ ಕ್ರೋಢೀಕರಣಗೊಂಡವು. ಬಿಜೆಪಿ ಕಾರ್ಯಕರ್ತರ ಪ್ರಚಾರ ವಿಧಾನದಲ್ಲೂ ದೋಷಗಳು ಕಂಡುಬಂದವು. ಶರ್ಮಾ ಅವರ ಮನೆ ಮನೆ ಪ್ರಚಾರ ದುರ್ಬಲವಾಗಿತ್ತು.
ಲಂಡನ್ ತಂಡದ ವಿಧಾನಗಳ ಬಗ್ಗೆ ರಾಯ್ ಪ್ರಭಾವಿತರಾದರು. ಭಾರತದಲ್ಲಿ ಇನ್ನಷ್ಟು ಕಾರ್ಯನಿರ್ವಹಿಸಲು ಉತ್ಸುಕರಾಗಿರುವುದಾಗಿ ಮುರ್ಸೆನ್ ಹೇಳಿದರು. ಈ ಸಂವಾದ ಮುಂದುವರಿಸಲು ಅವರು ನಿರ್ಧರಿಸಿದರು.

ಭಾರತಕ್ಕೆ ಬಂದ ನಿಕ್ಸ್

2010ರಲ್ಲಿ ರಾಯ್ ಹೇಳುವಂತೆ ಅವರು ಬಿಹಾರದಲ್ಲಿ ಕೆಲ ಅಭ್ಯರ್ಥಿಗಳ ಪರವಾಗಿ ಕಾರ್ಯ ನಿರ್ವಹಿಸಿದರು. ಚುನಾವಣೆಯ ತುರ್ತು ಇಲ್ಲದಾಗ, ರಾಯ್ ತಮ್ಮ ಕುಟುಂಬ ಸ್ನೇಹಿತ ಅಮ್ರೀಶ್ ತ್ಯಾಗಿ ಜತೆ ವಹಿವಾಟು ಬೇಹುಗಾರಿಕೆ ಕಾರ್ಯ ನಿರ್ವಹಿಸುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಔಷಧ ಕಂಪನಿಗಳು ನಕಲಿ ಔಷಧಗಳನ್ನು ಪತ್ತೆ ಮಾಡಿಕೊಡುವ ಕಾರ್ಯ ಮಾಡುತ್ತಿದ್ದರು. ಒಂದು ದಿನ ಮುರ್ಸೆನ್ ಅಲೆಗ್ಸಾಂಡರ್ ನಿಕ್ಸ್ ಜತೆಗೆ ದಿಲ್ಲಿಗೆ ಬಂದು ರಾಯ್ ಅವರನ್ನು ಒವ್ವೆನೊ ಬ್ಯುಸಿನೆಸ್ ಇಂಟೆಲಿಜೆನ್ಸ್ ಕಚೇರಿಯಲ್ಲಿ ಭೇಟಿಯಾದರು. ತ್ಯಾಗಿ ಕೂಡಾ ಹಾಜರಿದ್ದು, ಸಂವಾದದಲ್ಲಿ ಭಾಗವಹಿಸಿದ್ದರು. ರಾಯ್ ಅವರು ಹಲವು ರಾಜ್ಯಗಳ ಕುಟುಂಬಗಳ ಮಾಹಿತಿಯ ಡಾಟಾಬೇಸ್ ಸೃಷ್ಟಿಸುವಲ್ಲಿ ನಿರತರಾಗಿದ್ದುದು ಮಾರ್ಸೆನ್‍ಗೆ ಗೊತ್ತಿತ್ತು. ಅವರ ಜಾತಿ, ರಾಜಕೀಯ ಆದ್ಯತೆ ಮತ್ತಿತರ ವಿವರಗಳನ್ನು ಅವರು ಕ್ರೋಢೀಕರಿಸುತ್ತಿದ್ದರು. ಇಂತಹ ಮಾಹಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿನ್ನದ ಗಣಿಯಂತೆ.

ಮಾರ್ಸೆನ್ ಹಾಗೂ ಅವರ ತಂಡ ತನ್ನ ಯೋಜನೆಯನ್ನು ವಿಸ್ತರಿಸಲು ಮತ್ತು 2014ರ ಲೋಕಸಭಾ ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಗೆ ಮಾರಾಟ ಮಾಡಲು 28 ಕ್ಷೇತ್ರಗಳ ಡಾಟಾಬೇಸ್ ಸೃಷ್ಟಿಸಲು ಮುಂದಾಯಿತು. ಚುನಾವಣೆಗೆ ಇನ್ನೂ ನಾಲ್ಕು ವರ್ಷ ಬಾಕಿ ಇತ್ತು. ಕಕ್ಷಿದಾರರಿಗೆ ಈ ಮಾಹಿತಿಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮೊಬೈಲ್ ಅಪ್ಲಿಕೇಶನ್ ಸೃಷ್ಟಿಸುವ ಪ್ರಸ್ತಾಪ ರಾಯ್ ಮುಂದಿಟ್ಟರು.

ರಾಯ್ ಹೇಳುವಂತೆ ಎಸ್‍ಸಿಎಲ್ ತಂಡ ಬಿಹಾರಕ್ಕೆ ಹೋಗಲೇ ಇಲ್ಲ ಅಥವಾ ಬಿಹಾರ ಚುನಾವಣೆಗಾಗಿ ಕೆಲಸ ಮಾಡಲಿಲ್ಲ. ರಾಯ್ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ವಿವಿಧ ಪಕ್ಷಗಳ 27 ಅಭ್ಯರ್ಥಿಗಳ ಜತೆ ಕಾರ್ಯ ನಿರ್ವಹಿಸಿದರು. 2010ರ ಬಿಹಾರ ಚುನಾವಣೆ, 2003ರ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಯಲ್ಲಿ ಕೆಲಸ ಮಾಡಿದ್ದಾಗಿ ಎಸ್‍ಸಿಎಲ್ ಪವರ್‍ಪಾಯಿಂಟ್ ಪ್ರಸ್ತುತಿಯಲ್ಲಿ ಹೇಳಿಕೊಂಡು ಮಾರಾಟಕ್ಕೆ ಪ್ರಬಲ ಪಿಚ್ ಸಿದ್ಧಪಡಿಸಿದೆವು. ಇಂಥ ಒಂದು ಪ್ರಸ್ತುತಿಯನ್ನು 'ದ ಪ್ರಿಂಟ್' ಜತೆಗೆ ಅವರು ಹಂಚಿಕೊಂಡಿದ್ದಾರೆ. ಇದು ರಾಯ್ ಅವರ ಸ್ವಂತ ಕೆಲಸ.

ಸರಿಸುಮಾರು ಇದೇ ವೇಳೆಗೆ 2010-11ರಲ್ಲಿ ಬ್ರಿಟನ್‍ನ ಎಸ್‍ಸಿಎಲ್ ಜತೆಗೆ ಘಾನಾದ ರಾಜಕೀಯ ಪಕ್ಷವೊಂದು ಚುನಾವಣಾ ಪ್ರಚಾರಕ್ಕಾಗಿ ಕರಾರು ಮಾಡಿಕೊಂಡಿತು. ಘಾನಾದ ಇಂಗ್ಲಿಷ್ ಮಾತನಾಡುವ ಜನರ ಸಮೀಕ್ಷೆಗಳು ಗಾಝಿಯಾಬಾದ್‍ನ ಇಂದ್ರಪುರಂನಲ್ಲಿರುವ ರಾಯ್ ಕಚೇರಿಗೆ ಬರುತ್ತಿದ್ದವು. ಓವ್ಲೆನೊ ಬ್ಯುಸಿನೆಸ್ ಇಂಟೆಲಿಜೆನ್ಸ್ ಮೂಲಕ, ರಾಯ್ ಹಾಗೂ ತ್ಯಾಗಿ ಅವರು ನಿಕ್ಸ್ ಕಂಪನಿ ಜತೆ ಕಾರ್ಯನಿರ್ವಹಿಸಲು ಆರಂಭಿಸಿದರು. ಈ ಸಮೀಕ್ಷೆ ಮಾಹಿತಿಯನ್ನು ಗಾಝಿಯಾಬಾದ್‍ನ ಒಂದು ತಂಡ ವಿಶ್ಲೇಷಿಸಿ, ಘಾನಾದಲ್ಲಿ ಆ ನಿರ್ದಿಷ್ಟ ಪಕ್ಷ ಅನುಸರಿಸಬೇಕಾದ ಪ್ರಚಾರ ತಂತ್ರಗಳ ಬಗ್ಗೆ ಸಲಹೆ ನೀಡಬೇಕಿತ್ತು.

ಕಕ್ಷಿದಾರರಿಗೆ ಹುಡುಕಾಟ
ಈ ಪ್ರಾಜೆಕ್ಟ್ ಕೆಲಸ 2011ರಲ್ಲಿ ಆರಂಭವಾಯಿತು. ನಿಕ್ಸ್ ಹಾಗೂ ಮುರ್ಸನ್, ಆಗಾಗ ದಿಲ್ಲಿಗೆ ಬರುತ್ತಿದ್ದರು. ಅವರ ಲಂಡನ್ ಸಿಬ್ಬಂದಿ ಕೂಡಾ ಬರುತ್ತಿದ್ದರು. ಸಿಬ್ಬಂದಿಗಾಗಿ ಇಂದ್ರಪುರಂನ ಶಿಪ್ರಾ ಸನ್ ಸಿಟಿಯಲ್ಲಿ ಮನೆ ಬಾಡಿಗೆಗೆ ಪಡೆಯಲಾಯಿತು. ನಿಕ್ಸ್, ಮುರ್ಸೆನ್, ರಾಯ್ ಹಾಗೂ ತ್ಯಾಗಿ ರಾಜಕಾರಣಿಗಳನ್ನು ಭೇಟಿ ಮಾಡಿ, ತಮ್ಮ ಸೇವೆಗಳನ್ನು ಮಾರಾಟ ಮಾಡಲು ಮುಂದಾದರು.

ಏನೇನು ಸೇವೆ ನೀಡುತ್ತಿದ್ದರು?
- ಸ್ಥಳೀಯ ಜ್ಞಾನ ಹಾಗೂ ಜಾಗತಿಕ ಪರಿಣತಿ
- ಜಾಗತಿಕ ಮನ್ನಣೆ ಹಾಗೂ ಅನುಭವ- ವಿಶ್ವಾಸಾರ್ಹತೆ
- ರಾಜಕೀಯ ಗೂಢಚರ್ಯ & ಚುನಾವಣಾ ನಿರ್ವಹಣೆಗೆ ಸಾಫ್ಟ್ ವೇರ್
- ಸಂಘಟನೆ ಮತ್ತು ಚುನಾವಣಾ ನಿರ್ವಹಣೆಗಾಗಿ ಆಂಡ್ರಾಯ್ಡ್ ಅಪ್ಲಿಕೇಶನ್. ಇದರಲ್ಲಿ ಮಾಹಿತಿಗಳನ್ನು ತಕ್ಷಣ ಮೊಬೈಲ್ ಮೂಲಕ ಅಪ್‍ಲೋಡ್ ಮಾಡಬಹುದಿತ್ತು.
- ಭಾರತದಲ್ಲಿ ಅತ್ಯುತ್ಕೃಷ್ಟ ನಡವಳಿಕೆ ಬದಲಾವಣೆ ಸಂವಹನ ಕಾರ್ಯವಿಧಾನ ಮಾಹಿತಿ ಲಭ್ಯತೆ
- ಚುನಾವಣಾ ನಿರ್ವಹಣೆ ಸೇವೆಯಲ್ಲಿ ಎ ಟೂ ಝೆಡ್ ಸಮಗ್ರ ಪ್ಯಾಕೇಜ್
* ಜಾತಿ ಸಂಶೋಧನೆ
* ಮತದಾರರ ಜನಸಂಖ್ಯಾ ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆ
* ಮತದಾನದ ವೇಳೆ ನಡವಳಿಕೆ
* ಮಾಧ್ಯಮ ಕಣ್ಗಾವಲು
* ಗುರಿನಿರ್ದೇಶಿತ ಪ್ರೇಕ್ಷಕ ವಿಶ್ಲೇಷಣೆ- ಪ್ರಚಾರ ಕಾರ್ಯತಂತ್ರ
* ಪ್ರಚಾರ ಸಲಹೆ- ಕಾರ್ಯತಂತ್ರ ಹಾಗೂ ಹಸ್ತಕ್ಷೇಪ ನಿರ್ವಹಣೆ
* ಚುನಾವಣಾ ಯೋಜನೆ & ನಿರ್ವಹಣೆ

ರಾಯ್ ಹೇಳವಂತೆ ಈ ತಂಡ ಕಾಂಗ್ರೆಸ್ ಹಾಗೂ ಬಿಜೆಪಿಯ ಅಗ್ರಗಣ್ಯ ನಾಯಕರನ್ನು ಭೇಟಿ ಮಾಡಿತು. ಆದರೆ ಹೆಸರುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಪ್ರಮುಖ ಅಂಶವೆಂದರೆ, ಕಾಂಗ್ರೆಸ್ ಪಕ್ಷವನ್ನು ಕಕ್ಷಿದಾರನಾಗಿ ಆಯ್ಕೆ ಮಾಡಿಕೊಳ್ಳಲು ನಿಕ್ಸ್ ಒತ್ತಾಯಪಡಿಸಿದರು. ಇದು ಆಡಳಿತ ಪಕ್ಷವಾಗಿರುವುದರಿಂದ ಹೆಚ್ಚು ಹಣ ಪಡೆಯಬಹುದು ಎನ್ನುವುದು ಅವರ ವಾದವಾಗಿತ್ತು.

ಕಾಂಗ್ರೆಸ್ ನಾಯಕರು ಆಸಕ್ತಿ ತೋರಿದರು. ಆದರೆ ಯಾವುದೇ ಕೆಲಸ ನಿಯೋಜಿಸಲಿಲ್ಲ ಅಥವಾ ಗುತ್ತಿಗೆಗೆ ಸಹಿ ಮಾಡಲಿಲ್ಲ. ಎಸ್‍ಸಿಎಲ್ ತಂಡ ಮೊದಲು ತಮ್ಮ ಸಾಮರ್ಥ್ಯ ಏನು ಎಂದು ತೋರಿಸಲು ನಿರ್ಧರಿಸಿತು. ಅಮೇಥಿ, ರಾಯಬರೇಲಿ, ಜೈಪುರ ಗ್ರಾಮೀಣ ಮತ್ತು ಮಧುಬಾನಿ ಹೀಗೆ ನಾಲ್ಕು ಕ್ಷೇತ್ರಗಳ ಡಾಟಾಬೇಸ್ ಸೃಷ್ಟಿಸಿ, ರಾಹುಲ್ ಗಾಂಧಿಯವರಿಗೆ ಉಚಿತವಾಗಿ ನೀಡಲು ನಿರ್ಧರಿಸಿತು.

ನಿಕ್ಸ್ ಬಿಜೆಪಿ ಪ್ರಮುಖ ನಾಯಕರೊಬ್ಬರನ್ನೂ ಭೇಟಿ ಮಾಡಿದರು. ಆದರೆ ಅವರು ಪ್ರಸ್ತುತಿಯ ಅವಧಿಯಲ್ಲೇ ನಿದ್ದೆ ಹೋದರು. "ನಿಕ್ಸ್ ಗೆ ಕಾಂಗ್ರೆಸ್ ಬಗೆಗಿನ ಗೀಳು ಹೆಚ್ಚಾಗಿತ್ತು. ಬಿಜೆಪಿಯಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ. ಕಾಂಗ್ರೆಸ್ ಮುಖಂಡರ ಸಂಪರ್ಕ ಪಡೆದು ಪ್ರತಿಯೊಬ್ಬರನ್ನೂ ಭೇಟಿ ಮಾಡಲು ಬಯಸಿದರು ಹಾಗೂ ನಮ್ಮ ಪ್ರಸ್ತುತಿಯನ್ನು ಪ್ರದರ್ಶಿಸಲು ಮುಂದಾದರು" ಎಂದು ರಾಯ್ ಹೇಳಿದ್ದಾರೆ.

ಇಂದ್ರಪುರಂನಲ್ಲಿ ಕೆಲಸ ಆರಂಭವಾಯಿತು. ಮೊದಲ 2-3 ತಿಂಗಳು, ಬ್ರಿಟನ್‍ನ ಎಸ್‍ಸಿಎಲ್ ತಂಡ ಭಾರತೀಯ ಕ್ಷೇತ್ರ ಸಮೀಕ್ಷೆದಾರರಿಗೆ ತರಬೇತಿ ನೀಡಿತು. ಮತದಾರರನ್ನು ಏನು ಕೇಳಬೇಕು ಹಾಗೂ ಮೊಬೈಲ್ ಅಪ್ಲಿಕೇಶನ್‍ಗೆ ಉತ್ತರವನ್ನು ಹೇಗೆ ನೇರವಾಗಿ ಕಳುಹಿಸಬೇಕು ಎನ್ನುವ ತರಬೇತಿ ನೀಡಿತು. ಜನಸಂಖ್ಯಾ ವಿವರಗಳು ಸರಳ. ಆದರೆ ಅವರ ರಾಜಕೀಯ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ಸಂಕೀರ್ಣ.

ಎಲ್ಲವೂ ಸುಸೂತ್ರವಾಗಲಿಲ್ಲ
ತರಬೇತಿಯ ಅವಧಿಯಲ್ಲಿ ರಾಯ್ ಕೆಲ ವೈಚಿತ್ರಗಳನ್ನು ಗಮನಿಸಿದರು. ಸಮೀಕ್ಷೆದಾರರಿಗೆ ಪ್ರಶ್ನೆಗಳನ್ನು ಕೇಳಲು ನೀಡಿದ ತರಬೇತಿಯ ಅವಧಿಯಲ್ಲಿ, ತಿಳಿಸಿದ ಪ್ರಶ್ನೆಗಳು ಕಾಂಗ್ರೆಸ್ ವಿರೋಧಿ ಪ್ರಚಾರ ತಂತ್ರದಂತೆ ಕಂಡುಬಂದವು. "ಮತದಾರರು ಯಾರಿಗೆ ಮತ ಚಲಾಯಿಸಲು ಬಯಸಿದ್ದಾರೆ ಎಂದು ಸರಳವಾಗಿ ಕೇಳುವ ಬದಲು, ಕಾಂಗ್ರೆಸ್ ಪಕ್ಷವನ್ನು ಇಷ್ಟಪಡದಿರುವಂತೆ ಪ್ರಶ್ನೆಗಳನ್ನು ರೂಪಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಗುತ್ತಿಗೆ ಪಡೆಯಲು ಅವರು ಮುಂದಾಗಿದ್ದಾರೆ. ಆದರೆ ವಾಸ್ತವವಾಗಿ ಪಕ್ಷದ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎನಿಸಿತು" ಎಂಬುದಾಗಿ ರಾಯ್ ವಿವರಿಸಿದರು.

ಒಂದು ದಿನ ನಿಕ್ಸ್ ಅಮೆರಿಕದಿಂದ ಹೊಸ ಸ್ಮಾರ್ಟ್‍ಫೋನ್‍ನೊಂದಿಗೆ ಆಗಮಿಸಿದರು. ಇತರರು ವಿನ್ಯಾಸಗೊಳಿಸಿದ್ದ ಮೊಬೈಲ್ ಅಪ್ಲಿಕೇಶನ್ ಅದರಲ್ಲಿತ್ತು. ಈ ಮೊಬೈಲ್ ಆ್ಯಪ್ ರಾಯ್ ಭಾರತದಲ್ಲಿ ವಿನ್ಯಾಸಗೊಳಿಸಿ ಸೃಷ್ಟಿಸಿದ ಆ್ಯಪ್ ಗಿಂತ ಉತ್ತಮ ಹಾಗೂ ಅಗ್ಗ ಎಂದು ಹೇಳಿದರು. ಹೊಸ ಆ್ಯಪ್ನೊಂದಿಗೆ ಕೆಲಸ ಆರಂಭವಾಯಿತು. ಕ್ರಮೇಣ ಅಮೇಥಿ ಮತ್ತು ರಾಯಬರೇಲಿಯನ್ನು ಮ್ಯಾಪ್ ಮಾಡಲಾಯಿತು.

ವಾಸ್ತವದ ಅರಿವು
ಒಂದು ದಿನ ಭಾರತದ ಗುಜರಾತ್ ಮೂಲದ ಅಮೆರಿಕನ್ ಪ್ರಜೆ ಈ ಯೋಜನೆಯನ್ನು ನೋಡಲು ಬಂದರು. ಆಕೆಯ ಹೆಸರು ರಾಯ್‍ಗೆ ನೆನಪಿಲ್ಲ. ಆದರೆ ಅವರ ಸಂಶೋಧಕರಲ್ಲೊಬ್ಬರು ಅವರನ್ನು ಬಿಹೇವಿಯರಲ್ ಡೈನಾಮಿಕ್ಸ್ ಇನ್‍ಸ್ಟಿಟ್ಯೂಟ್‍ನಿಂದ ಆಗಮಿಸಿದ್ದೇ ಅಥವಾ ಎಸ್‍ಸಿಎಲ್‍ನಿಂದಲೇ ಎಂದು ಕೇಳಿದಾಗ, "ನಾನು ಕಕ್ಷಿದಾರರ ಕಡೆಯಿಂದ ಬಂದಿದ್ದೇನೆ" ಎಂದು ಉತ್ತರಿಸಿದರು.

ಆಗ ವಾಸ್ತವ ಅರಿವಿಗೆ ಬಂತು: ಈಗಾಗಲೇ ಕಕ್ಷಿದಾರರು ಇದ್ದಾರೆ; ಅದು ಕಾಂಗ್ರೆಸ್ ಅಲ್ಲ.

ಕಕ್ಷಿದಾರ ಯಾರು? ಗುಜರಾತಿ ಅಮೆರಿಕನ್ ಮಹಿಳೆ ಹೇಳಿದ ಪ್ರಕಾರ, ಕಕ್ಷಿದಾರ ಒಬ್ಬ ಅಮೆರಿಕನ್ ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಆತ ಬಯಸಿದ್ದ. ಆತನ ಹೆಸರು ಬಹಿರಂಗಪಡಿಸಲು ಆಕೆ ನಿರಾಕರಿಸಿದರು. ಈ ವಿಷಯದ ಬಗ್ಗೆ ರಾಯ್, ನಿಕ್ಸ್ ಜತೆ ತಗಾದೆ ತೆಗೆದರು. "ನೀವು ಕಾಂಗ್ರೆಸ್ ಸೋಲಿಸಲು ಬಯಸುವ ಕಕ್ಷಿದಾರರನ್ನು ಹೊಂದಿದ್ದರೆ, ಆ ಬಗ್ಗೆ ಕೆಲಸ ಮಾಡಲು ನಾನು ಸಿದ್ಧ. ನನಗೆ ಯಾವುದೇ ಪಕ್ಷದ ಜತೆ ಸಂಬಂಧವೂ ಇಲ್ಲ; ಅಥವಾ ಸೈದ್ಧಾಂತಿಕ ಒಲವೂ ಇಲ್ಲ. ಆದರೆ ಕೆಲಸ ಮತ್ತು ಹಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಕೇಳಿ, ಅದೇ ಪ್ರಾಜೆಕ್ಟ್ ಮೂಲಕ ಅವರನ್ನೇ ಸೋಲಿಸುವುದು ಸ್ವೀಕಾರಾರ್ಹವಲ್ಲ ಹಾಗೂ ಅನೈತಿಕ ಎಂದು ನಾನು ಹೇಳಿದೆ"
ಅವರ ಸಂಚು ಬಹಿರಂಗವಾದಾಗ ನಿಕ್ಸ್ ನೇರವಾಗಿ, "ನಾನು ಇಲ್ಲಿ ಬಂದಿರುವುದು ಹಣಕ್ಕಾಗಿ" ಎಂದು ಉತ್ತರಿಸಿದರು.

ರಾಯ್ ಆಗ ನಿಕ್ಸ್ ತಂದ ಮೊಬೈಲ್ ಅಪ್ಲಿಕೇಶನ್‍ನ ಕಚ್ಚಾ ಸಂಕೇತವನ್ನು ನೀಡುವಂತೆ ಆಗ್ರಹಿಸಿದರು. "ನಾವು ಕೆಲಸ ಆರಂಭಿಸುವ ಮುನ್ನವೇ ಡಾಟಾಬೇಸ್ ಭಾರತೀಯ ಸರ್ವರ್ ಗಳಲ್ಲೇ ಉಳಿಯುತ್ತದೆ ಎಂದು ನಾವು ಒಪ್ಪಿಕೊಂಡಿದ್ದೆವು. ಸಂಕೇತವನ್ನು ನಾನು ನೋಡಲು ಬಯಸುತ್ತೇನೆ ಹಾಗೂ ಅಮೆರಿಕದ ಸರ್ವರ್ ಗಳಲ್ಲಿ ಇದು ದಾಸ್ತಾನು ಆಗುವುದಿಲ್ಲ ಎನ್ನುವುದು ಖಾತ್ರಿಪಡಿಸಿಕೊಳ್ಳಲು ಮುಂದಾದೆ" ಎಂದು ಹೇಳಿದರು. ಸರ್ವರ್ ಗಳು ಅಮೆರಿಕ ಮೂಲದ್ದಾಗಿದ್ದುದು ಅಚ್ಚರಿ ತರಲಿಲ್ಲ. ಆ ಬಳಿಕ ಕಚ್ಚಾ ಮಾಹಿತಿಯನ್ನು ಸ್ಮಾರ್ಟ್‍ಫೋನ್‍ನಲ್ಲಿ ಲಂಡನ್‍ಗೆ ಒಯ್ಯಲು ನಿಕ್ಸ್ ಬಯಸಿದ್ದರು. ಆದರೆ ರಾಯ್ ಇದಕ್ಕೆ ಅವಕಾಶ ನೀಡಲು ನಿರಾಕರಿಸಿದರು.

ಕೀನ್ಯಾದಲ್ಲಿ ಸಾವು

"ನಾನು ಪಾರದರ್ಶಕತೆ ಬಯಸಿದ್ದರಿಂದ, ಕೆಲ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳುವ ಸಲುವಾಗಿ ಒಡಂಬಡಿಕೆ ಪತ್ರ ಮಾಡಿಕೊಳ್ಳುವಂತೆ ಒತ್ತಾಯಿಸಿದೆ" ಎಂದು ರಾಯ್ ಹೇಳಿದರು. ಆದರೆ ಮುರ್ಸೆನ್ ದಿಲ್ಲಿಯಲ್ಲಿರಬೇಕು. ಅವರ ಬಗ್ಗೆ ನನಗೆ ವಿಶ್ವಾಸವಿದೆ ಎನ್ನುವುದು ನಿಕ್ಸ್ ವಾದವಾಗಿತ್ತು. ಈ ಮಧ್ಯೆ ಯೋಜನೆ ನನೆಗುದಿಗೆ ಬಿತ್ತು. ಮುರ್ಸೆನ್, ಉಪಪ್ರಧಾನಿ ಉಹುರು ಕೆನ್ಯಟ್ಟಾ ಪರ ಪ್ರಚಾರ ಕಾರ್ಯಕ್ಕಾಗಿ ಕೀನ್ಯಾಗೆ ತೆರಳಿದ್ದರು. ಎಸ್‍ಸಿಎಲ್ ನೆರವಿನೊಂದಿಗೆ ಅವರು 2013ರಲ್ಲಿ ಮತ್ತೆ ಪ್ರಧಾನಿಯಾದರು. ಕೇಂಬ್ರಿಜ್ ಅನಾಲಿಟಿಕಾ ಕೆಲಸ ವಿವಾದಾತ್ಮಕವಾಗುವ ವೇಳೆಗೆ ಅಂದರೆ 2017ರಲ್ಲಿ ಅದೇ ಹುದ್ದೆಗೆ ಅವರು ಮರು ಆಯ್ಕೆಯಾದರು.

ರಾಯ್ ಸ್ವತಂತ್ರವಾಗಿ ವೈಯಕ್ತಿಕ ರಾಜಕಾರಣಿಗಳ ಪರ 2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದರಿಂದ ಕೆಲಸ ನಿಧಾನವಾಯಿತು. 2012ರಲ್ಲಿ ಎರಡೂ ಕಡೆಗಳ ನಡುವೆ ಸಂಧಾನ ಮಾತುಕತೆಗಳು ನಡೆದವು. ಇಂದ್ರಪುರಂನಲ್ಲಿ ಮುರ್ಸೆನ್ ತಮ್ಮ ಜತೆ ಸೇರಿಕೊಂಡರೆ ಮಾತ್ರ ಕೆಲಸ ವೇಗ ಪಡೆಯುತ್ತದೆ ಎಂದು ರಾಯ್ ಸ್ಪಷ್ಟಪಡಿಸಿದರು.

ಒಂದು ದಿನ ಕೀನ್ಯಾದಿಂದ ಕೆಟ್ಟ ಸುದ್ದಿ ಬಂತು. ಮುರ್ಸೆನ್ ಹೋಟೆಲ್ ಕೊಠಡಿಯಲ್ಲಿ ಸತ್ತಿರುವುದು ತಿಳಿದುಬಂತು. ಸಾರ್ವಜನಿಕರು ಹೇಳುವಂತೆ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ ಬ್ರಿಟನ್ ಎಸ್‍ಸಿಎಲ್ ಸಿಬ್ಬಂದಿಯಿಂದ ತಿಳಿದುಬಂದಂತೆ ಅವರನ್ನು ಹತ್ಯೆ ಮಾಡಲಾಗಿದೆ. "ತಕ್ಷಣ ನನ್ನ ಮನಸ್ಸಿಗೆ ಬಂದದ್ದು, ನಿಕ್ಸ್ ಕಾಂಗ್ರೆಸ್ ಪಕ್ಷದಿಂದ ಹಣ ಮಾಡಲು ಬಯಸಿದ್ದರೂ, ಈಗಾಗಲೇ ಕಾಂಗ್ರೆಸ್ ವಿರೋಧಿ ಕಕ್ಷಿದಾರರ ಕೈಯಿಂದ ಹಣ ತೆಗೆದುಕೊಂಡಂತೆ ಅಲ್ಲೂ ಅವರು ಇಬ್ಬಂದಿತನ ತೋರಿದ್ದಾರೆ".

(ಮುರ್ಸೆನ್ ಸಾವಿನ ಬಳಿಕ ಅವರ ಕೆಲಸಕ್ಕೆ ಕ್ರಿಸ್ಟೋಫರ್ ವೈಲಿ ಎಂಬ ಯುವಕ ಆ ಹುದ್ದೆಗೆ ಬಂದ. ಈತ ಇದೀಗ ಕೇಂಬ್ರಿಜ್ ಅನಾಲಿಟಿಕಾ ಮತ್ತು ಫೇಸ್‍ಬುಕ್ ವಿವಾದದ ಕೇಂದ್ರ ಬಿಂದು. ವೈಲಿ ರಹಸ್ಯ ಮಾಹಿತಿದಾರನಾದ ಮತ್ತು ಮುರ್ಸೆನ್ ಹತ್ಯೆಗೀಡಾಗಿದ್ದರ ಬಗ್ಗೆ ಅಚ್ಚರ ವ್ಯಕ್ತಪಡಿಸಿದ್ದರು)

ಈ ವೇಳೆಗಾಗಲೇ ಪ್ರಾಜೆಕ್ಟ್ ಹಳ್ಳಹಿಡಿದಿತ್ತು. ಭಾರತ ಮೂಲದ ಅಮೆರಿಕನ್ ಕಕ್ಷಿದಾರ, ರಾಯ್ ಅವರಿಂದ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಸ್‍ಸಿಎಲ್‍ನಿಂದ ವಾಪಸ್ಸಾದರು. ಈ ಮಧ್ಯೆ ನಿಕ್ಸ್ ತನ್ನ ಗಮನವನ್ನು ದೊಡ್ಡ ವಿಷಯಗಳ ಬಗ್ಗೆ ಹರಿಸಲು ಆರಂಭಿಸಿದ ಬಳಿಕ, ಎಸ್‍ಸಿಎಲ್‍ನ ಚುನಾವಣಾ ಶಾಖೆಯನ್ನು ಕೇಂಬ್ರಿಜ್ ಅನಾಲಿಟಿಕಾ ಆಗಿ ಪರಿವರ್ತಿಸಿದರು. ಇದು ಅಮೆರಿಕದ ಮಾರುಕಟ್ಟೆ ವಿಷಯದಲ್ಲಿ ಗಮನ ಹರಿಸುತ್ತಿತ್ತು.

ರಾಯ್ ಹಾಗೂ ತ್ಯಾಗಿ ತಮ್ಮದೇ ಮಾರ್ಗದಲ್ಲಿ ವೃತ್ತಿಪರವಾಗಿ ಮುಂದುವರಿದರು. ರಾಯ್ ಈಗ ಕೂಡಾ ಮತದಾರರ ಮಾಹಿತಿ ಕಲೆ ಹಾಕುತ್ತಿದ್ದರೆ, ತ್ಯಾಗಿ ಹಾಗೂ ಅವರ ಓಲ್ವೆನೊ ಬ್ಯುಸಿನೆಸ್ ಇಂಟೆಲಿಜೆನ್ಸ್, ನಿಕ್ಸ್ ಅವರ ಕೇಂಬ್ರಿಜ್ ಅನಾಲಿಟಿಕಾ ಜತೆ ಅನಿವಾರ್ಯವಾಗಿ ಕಾರ್ಯನಿರ್ವಹಿಸುತ್ತಿದೆ. 

'ದ ಪ್ರಿಂಟ್', ಮಹೇಶ್ ಶರ್ಮಾ, ಅಮ್ರೀಶ್ ತ್ಯಾಗಿ ಮತ್ತು ಅಲೆಗ್ಸಾಂಡರ್ ನಿಕ್ಸ್ ಅವರನ್ನು ಭೇಟಿ ಮಾಡಿ, ಅವರ ಅಭಿಪ್ರಾಯ ಪಡೆಯಲು ಮುಂದಾದರೂ ಇದು ಪ್ರಕಟವಾಗುವವರೆಗೂ ಅವರ ಕಡೆಯಿಂದ ಪ್ರತಿಕ್ರಿಯ�

Writer - ಶಿವಂ ವಿಜ್, theprint.in

contributor

Editor - ಶಿವಂ ವಿಜ್, theprint.in

contributor

Similar News