ಕೆನಡ: ಸಂಸತ್ತಿಗೆ ಎನ್‌ಎಸ್‌ಎ ಕರೆಸುವ ಪ್ರತಿಪಕ್ಷಗಳ ಮಸೂದೆಗೆ ಸೋಲು

Update: 2018-03-24 17:18 GMT
ಡೇನಿಯಲ್ ಜೀನ್

 ಟೊರಾಂಟೊ, ಮಾ. 24: ‘ಭಾರತ ಸರಕಾರದಲ್ಲಿರುವ ದುಷ್ಟ ಶಕ್ತಿಗಳ’ ಬಗ್ಗೆ ನೀಡಿರುವ ಹೇಳಿಕೆಗೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಡೇನಿಯಲ್ ಜೀನ್ ಸಂಸತ್ತಿಗೆ ವಿವರಣೆ ನೀಡಬೇಕು ಎಂದು ಕೋರಿ ಕೆನಡದ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರತಿಪಕ್ಷ ಮಂಡಿಸಿರುವ ನಿರ್ಣಯವನ್ನು ಆಡಳಿತಾರೂಢ ಲಿಬರಲ್ ಪಾರ್ಟಿ ಸೋಲಿಸಿದೆ.

 ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊರ ಇತ್ತೀಚಿನ ಭಾರತ ಭೇಟಿಯ ವೇಳೆ, ಅವರನ್ನು ಮುಜುಗರಕ್ಕೆ ಒಳಪಡಿಸುವುದಕ್ಕಾಗಿ ಭಾರತ ಸರಕಾರದಲ್ಲಿರುವ ‘ದುಷ್ಟ ಶಕ್ತಿಗಳು’ ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್ ಅತ್ವಾಲ್‌ನನ್ನು ಅವರ ಕಾರ್ಯಕ್ರಮದಲ್ಲಿ ತಂದು ನಿಲ್ಲಿಸಿವೆ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಡೇನಿಯಲ್ ಜೀನ್ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

 ಈ ಹೇಳಿಕೆಗೆ ಸಂಬಂಧಿಸಿ ಜೀನ್, ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಮೇಲಿನ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಬೇಕು ಎಂಬುದಾಗಿ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಹೊಸದಿಲ್ಲಿಯಲ್ಲಿ ಕೆನಡ ರಾಯಭಾರಿಯು ಟ್ರೂಡೊರಿಗಾಗಿ ಏರ್ಪಡಿಸಿದ ಔತಣಕೂಟಕ್ಕೆ, ಶಿಕ್ಷೆಗೆ ಒಳಗಾಗಿರುವ ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್ ಅತ್ವಾಲ್‌ಗೆ ಆಮಂತ್ರಣ ನೀಡಿರುವ ಬಗ್ಗೆ ಅವರು ವಿವರಣೆ ನೀಡಬೇಕು ಎಂಬುದಾಗಿಯೂ ಅವು ಆಗ್ರಹಿಸಿದ್ದವು.

ನಿರ್ಣಯದ ಪರವಾಗಿ 111 ಮತಗಳು ಬಿದ್ದರೆ, ವಿರೋಧಿಸಿ 161 ಸಂಸದರು ವಿರೋಧಿಸಿದರು.

ಪಂಜಾಬ್ ರಾಜ್ಯದ ಸಚಿವರೊಬ್ಬರು 1986ರಲ್ಲಿ ಕೆನಡಕ್ಕೆ ಭೇಟಿ ನೀಡಿದ್ದಾಗ ಅವರನ್ನು ಕೊಲ್ಲಲು ಪ್ರಯತ್ನ ನಡೆಸಿದ ಪ್ರಕರಣದಲ್ಲಿ, ಅತ್ವಾಲ್ ದೋಷಿಯಾಗಿದ್ದಾನೆ ಎಂಬುದಾಗಿ 1987ರಲ್ಲಿ ನ್ಯಾಯಾಲಯವೊಂದು ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News