ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ: ಜಿತು ರಾಯ್ ವಿಶ್ವಾಸ

Update: 2018-03-24 18:38 GMT

ಹೊಸದಿಲ್ಲಿ, ಮಾ.24: ಭಾರತದ ಖ್ಯಾತ ಶೂಟರ್ ಜಿತು ರಾಯ್ 2016ರ ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲಾಗಿರುವ ನಿರಾಸೆಯನ್ನು ಮರೆತು ಎ.4 ರಿಂದ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಲು ತಯಾರಿ ನಡೆಸುತ್ತಿದ್ದಾರೆ. ‘‘ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ನಿಟ್ಟಿನಲ್ಲಿ ಕಠಿಣ ಶ್ರಮಪಡುತ್ತಿದ್ದೇನೆ. ರಿಯೋ ಒಲಿಂಪಿಕ್ಸ್‌ನಲ್ಲಿ ನನ್ನ ಕನಸು ಭಗ್ನವಾಗಿತ್ತು. ಸಿಡಬ್ಲ್ಯುಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಉತ್ತಮ ತಯಾರಿ ನಡೆಸುತ್ತಿರುವೆ. ಎಲ್ಲ ಶೂಟರ್‌ಗಳು ಸಿಡಬ್ಲ್ಯುಜಿಗಾಗಿ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ವೈಯಕ್ತಿಕವಾಗಿ ನಾನು ಕೆಲವು ತಾಂತ್ರಿಕ ನ್ಯೂನತೆಯನ್ನು ನಿವಾರಿಸಿಕೊಳ್ಳಲು ಶ್ರಮಿಸುತ್ತಿರುವೆ. ಇದು ಆಸ್ಟ್ರೇಲಿಯದಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುವ ವಿಶ್ವಾಸವಿದೆ’’ ಎಂದು ನೇಪಾಳ ಮೂಲದ ಶೂಟರ್ ಹೇಳಿದ್ದಾರೆ.

 ‘‘ಪ್ರತಿಯೊಬ್ಬ ಶೂಟರ್ ವಿಭಿನ್ನ ಟೆಕ್ನಿಕ್ ಹೊಂದಿರುತ್ತಾನೆ. ಕೆಲವೊಬ್ಬರು 15 ಸೆಕೆಂಡ್ ಬಳಿಕ, ಇನ್ನು ಕೆಲವರು ಮತ್ತಷ್ಟು ವಿಳಂಬವಾಗಿ ಶೂಟ್ ಮಾಡುತ್ತಾರೆ. ನಾನು ನನ್ನದೇ ತಂತ್ರಗಾರಿಕೆ ಹೊಂದಿದ್ದು, ನನಗೆ ಲಯ ಅತ್ಯಂತ ಮುಖ್ಯ’’ ಎಂದು 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿರುವ ಜಿತು ಹೇಳಿದ್ದಾರೆ.

 ಜಿತು 2014ರಲ್ಲಿ ಇಂಚೋನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 50 ಮೀ.ಪಿಸ್ತೂಲ್ ಹಾಗೂ ಪುರುಷರ 10 ಮೀ.ಏರ್ ಪಿಸ್ತೂಲ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚು ಜಯಿಸಿದ್ದರು. 2022ರಲ್ಲಿ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್‌ನ್ನು ಕೈಬಿಡಲಾಗುವುದೆಂಬ ಮಾಧ್ಯಮ ವರದಿ ಬಗ್ಗೆ ಜಿತು ಚಿಂತಿತರಾಗಿದ್ದಾರೆ. ‘‘ಹೌದು, ಇದು ಭಾರತಕ್ಕೆ ದೊಡ್ಡ ನಷ್ಟ. ಏಕೆಂದರೆ, ಭಾರತ ಶೂಟಿಂಗ್ ಕ್ರೀಡೆಯಲ್ಲಿ ಬಹಳಷ್ಟು ಪದಕ ಜಯಿಸಿದೆ. 2022ರ ಗೇಮ್ಸ್‌ನಲ್ಲಿ ಶೂಟಿಂಗ್‌ನ್ನು ಕೈಬಿಡುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿ ವೈಯಕ್ತಿಕವಾಗಿ ತುಂಬಾ ಬೇಸರವಾಗಿದೆ’’ ಎಂದು 30ರ ಹರೆಯದ ಜಿತು ಹೇಳಿದ್ದಾರೆ. ‘‘ಶೂಟಿಂಗ್‌ನ್ನು ಖಾಯಂ ಆಗಿ ಅಥವಾ ನಿರಂತರವಾಗಿ ಕೈಬಿಡಲಾಗುವುದಿಲ್ಲ. ಸಿಡಬ್ಲ್ಯುಜಿ ಆಯೋಜಕರಿಗೆ ಶೂಟಿಂಗ್ ಒಂದು ಆಯ್ಕೆಯಾಗಿರುತ್ತದೆ. ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ಕ್ರೀಡೆಯನ್ನು ಉಳಿಸಿಕೊಳ್ಳುವುದು ಆತಿಥೇಯ ರಾಷ್ಟ್ರವನ್ನು ಅವಲಂಬಿಸಿದೆ’’ ಎಂದರು.

ಒಂದು ವೇಳೆ ಶೂಟಿಂಗ್‌ನ್ನು ಕಾಮನ್‌ವೆಲ್ತ್ ಗೇಮ್ಸ್ ನಿಂದ ಕೈಬಿಟ್ಟರೆ ಭಾರತಕ್ಕೆ ತೀವ್ರ ಹಿನ್ನಡೆಯಾಗಲಿದೆ. ಕಾಮನ್‌ವೆಲ್ತ್‌ನಲ್ಲಿ ಭಾರತ ಈತನಕ 56 ಚಿನ್ನ ಸಹಿತ 118 ಪದಕಗಳನ್ನು ಜಯಿಸಿದ್ದು ಕಾಮನ್‌ವೆಲ್ತ್‌ನ ಸಾರ್ವಕಾಲಿಕ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News