ಶನಿವಾರ ರಾತ್ರಿ ಕತ್ತಲಲ್ಲಿ ಮುಳುಗಿದ ವಿಶ್ವದ ಬೃಹತ್ ನಗರಗಳು: ಕಾರಣವೇನು?

Update: 2018-03-25 17:29 GMT

 ಪ್ಯಾರಿಸ್,ಮಾ.25: ಜಗತ್ಪ್ರಸಿದ್ಧ ಹೆಗ್ಗುರುತುಗಳಾದ ಸಿಡ್ನಿಯ ಅಪೇರಾ ಹೌಸ್, ಮಾಸ್ಕೊದ ರೆಡ್‌ಸ್ಕ್ವಾರ್ ಹಾಗೂ ಫ್ರಾನ್ಸ್‌ನ ಐಫೆಲ್ ಗೋಪುರಗಳು ಶನಿವಾರ ರಾತ್ರಿ ಸಂಪೂರ್ಣವಾಗಿ ಕತ್ತಲಿನಲ್ಲಿ ಮುಳುಗಿದವು. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಜಾಗತಿಕ ಅಭಿಯಾನ ‘ಅರ್ಥ್ ಅವರ್’ (ಜಗತ್ತಿನ ಗಂಟೆ)ಅಂಗವಾಗಿ ಈ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು.

‘ಅರ್ಥ್ ಅವರ್’ ಅಭಿಯಾನದ ಅಂಗವಾಗಿ ಜಗತ್ತಿನಾದ್ಯಂತದ 187 ರಾಷ್ಟ್ರಗಳಲ್ಲಿ ಶನಿವಾರ ರಾತ್ರಿ ಸ್ಥಳೀಯ ಕಾಲಮಾನ 8:30ರ ವೇಳೆಗೆ ಪರಿಸರವಾದಿಗಳು ದೀಪಗಳನ್ನು ಆರಿಸಿದರು.

 ಈ ಅಭಿಯಾನವು ಪರಿಸರ ಹಾಗೂ ವನ್ಯಜೀವಿಗಳ ರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸುವ ಗುರಿಯನ್ನು ಹೊಂದಿದೆಯೆಂದು ಆರ್ಥ್ ಅವರ್‌ನ ಸಂಘಟಕರಾದ ವಿಶ್ವವನ್ಯಜೀವಿ ನಿಧಿಯ ಆಸ್ಟ್ರೇಲಿಯ ವಿಭಾಗದ ವರಿಷ್ಠ ಡೆರ್ಮಟ್ ಓ ಗೊರ್ಮನ್ ತಿಳಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಸ್ಥಳೀಯ ಕಾಲಮಾನ 8:30ಕ್ಕೆ ಸರಿಯಾಗಿ ವಿಶ್ವವಿಖ್ಯಾತ ಐಫೆಲ್ ಗೋಪುರದ ಎಲ್ಲಾ ದೀಪಗಳನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೊನ್ ಅವರು ಪರಿಸರಕ್ಕಾಗಿ ಹೋರಾಡುವ ಪ್ರಯತ್ನದಲ್ಲಿ ಕೈಜೋಡಿಸುವಂತೆ ಜನತೆಗೆ , ಟ್ವಿಟ್ಟರ್‌ನಲ್ಲಿ ಕರೆ ನೀಡಿದರು. ‘‘ ಇನ್ನು ತಡಮಾಡುವ ಹಾಗಿಲ್ಲ. ನಾವು ಹವಾಮಾನ ಬದಲಾವಣೆಯ ವಿರುದ್ಧದ ಸಮರದಲ್ಲಿ ಸೋಲುತ್ತಿದ್ದೇವೆ ಮಾತ್ರವಲ್ಲ ಜೀವವೈವಿಧ್ಯತೆಯ ವಿನಾಶದ ಸಮರದಲ್ಲಿ ಸೋಲುತ್ತಿದ್ದೇವೆ’’ ಎಂದವರು ಟ್ವೀಟಿಸಿದ್ದಾರೆ.

ಇತ್ತ ರಶ್ಯದಲ್ಲಿ ಜಗತ್ಪ್ರಸಿದ್ಧ ಕೆಂಪು ಚೌಕ (ರೆಡ್‌ಸ್ಕ್ವಾರ್)ವನ್ನು ಕೂಡಾ ಕತ್ತಲು ಆವರಿಸಿತು. ಅಷ್ಟೇ ಅಲ್ಲದೆ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರ ಅಂತರಿಕ್ಷ ನಿಲ್ದಾಣದಲ್ಲಿನ ರಶ್ಯದ ವಿಭಾಗ ಕೂಡಾ ದೀಪಗಳನ್ನು ಆರಿಸುವ ಮೂಲಕ ‘ಆರ್ಥ್ ಆವರ್’ ಚಳವಳಿಗೆ ಬೆಂಬಲವನ್ನು ವ್ಯಕ್ತಪಡಿಸಿದೆಯೆಂದು ರಿಯಾ ನೊವಿಸ್ತಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಲೇಶ್ಯ ರಾಜಧಾನಿ ಕೌಲಾಲಂಪುರದ ಪೆಟ್ರೊನಾಸ್ ಟವರ್, ಹಾಂಕಾಂಗ್ ಹಾಗೂ ಸಿಂಗಾಪುರದ ಪ್ರಸಿದ್ಧ ಬಂದರುಪ್ರದೇಶಗಳೂ ಕೂಡಾ ಸಂಪೂರ್ಣವಾಗಿ ಕತ್ತಲಿನಿಂದ ಆವೃತವಾದವು. ನ್ಯೂಯಾರ್ಕ್‌ನ ಎಂಪೈರ್‌ಸ್ಟೇಟ್ ಕಟ್ಟಡದಲ್ಲಿ ದೀಪಗಳು ಕ್ಷೀಣವಾದ ಪ್ರಕಾಶವನ್ನು ಬೀರಿದವು. ಮೆಕ್ಸಿಕೊ ಸಿಟಿಯ ಆ್ಯಂಜೆಲ್ ಆಫ್ ಇಂಡಿಪೆಂಡೆನ್ಸ್ ಸ್ಮಾರಕದಲ್ಲೂ ದೀಪಗಳನ್ನು ಆರಿಸಲಾಯಿತು.

  ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗ್ಯುಟೆರಸ್ ಈ ಸಂದರ್ಭದಲ್ಲಿ ವಿಶ್ವದ ಜನತೆಗೆ ನೀಡಿದ ಸಂದೇಶವೊಂದನ್ನು ನೀಡಿದ್ದು, ‘‘ ಜಗತ್ತಿನಾದ್ಯಂತ ಸಂಪನ್ಮೂಲಗಳು ಹಾಗೂ ಪರಿಸರ ವ್ಯವಸ್ಥೆಗಳು ಆಘಾತಕ್ಕೀಡಾಗಿವೆ. ಅದನ್ನು ಬದಲಾಯಿಸುವ ನಮ್ಮ ದೃಢನಿರ್ಧಾರವನ್ನು ಪ್ರದರ್ಶಿಸಲು ಅರ್ಥ್ ಆವರ್ ಒಂದು ಸದವಕಾಶವಾಗಿದೆ ’’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News