ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ದಾಳಿ ಮತ್ತು ಅಲ್ಪಸಂಖ್ಯಾತ ವಿರೋಧಿ ಕಾರ್ಯಸೂಚಿ

Update: 2018-03-25 18:47 GMT

ಕ್ರಿಶ್ಚಿಯನ್ ಮಿಶನರಿಗಳು ತ್ವರಿತ ಗತಿಯಲ್ಲಿ ಜನರನ್ನು ಮತಾಂತರಿಸುತ್ತಿದ್ದಾರೆ ಎಂದು ಪ್ರಚಾರ ಮಾಡುವ ಕರಪತ್ರಗಳು, ಹಾಗೂ ಇತರ ಪ್ರಚಾರ ಸಾಮಗ್ರಿಗಳು ಕಳೆದ ಕೆಲವು ದಶಕಗಳಲ್ಲಿ ಕಾಣಿಸಿಕೊಂಡಿವೆ. ಇದಕ್ಕೆ ಹೆಚ್ಚಾಗಿ ಉದಾಹರಣೆ ನೀಡುವುದು ಈಶಾನ್ಯ ರಾಜ್ಯಗಳನ್ನು. ಈ ಪ್ರಚಾರವನ್ನು ಅಖಿಲ ಭಾರತ ಮಟ್ಟದಲ್ಲಿ, ವಿಶೇಷವಾಗಿ ಚುನಾವಣಾ ಪೂರ್ವದಲ್ಲಿ, ಹೆಚ್ಚಿನ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಕ್ರಿಶ್ಚಿಯನ್ನರ ವಿರುದ್ಧ ಹುಟ್ಟುಹಾಕಲಾದ ದ್ವೇಷದ ಬುನಾದಿ ಇದೇ ಪ್ರಚಾರವಾಗಿದೆ. ಈ ದ್ವೇಷದ ಪರಿಣಾಮವಾಗಿ ನಾವು ಪಾದ್ರಿ ಗ್ರಹಾಂ ಸ್ಟೂವರ್ಟ್ ಸ್ಟೆಯ್‌ನ್ಸ್, ಭಯಾನಕವಾದ ಖಂಡಮಾಲ್ ಹಿಂಸೆ, ಹಾಗೂ ಸಾಮಾನ್ಯ ತೀವ್ರತೆಯ ಕ್ರಿಶ್ಚಿಯನ್ ವಿರೋಧಿ ಹಿಂಸೆ, ಮತ್ತು ದೇಶದ ವಿವಿಧ ಭಾಗಗಳಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಗಳನ್ನು ನೋಡಿದ್ದೇವೆ. ಹೀಗಿರುತ್ತ, ಕ್ರಿಶ್ಚಿಯನ್ ಧರ್ಮವೇ ಪ್ರಧಾನವಾಗಿರುವ ಹಲವು ರಾಜ್ಯಗಳಲ್ಲಿ ರಾಮ ಮಂದಿರ, ಗೋಮಾತೆ ಹಾಗೂ ಹಿಂದೂ ರಾಷ್ಟ್ರೀಯತೆಯನ್ನೇ ತನ್ನ ಪ್ರಮುಖ ಕಾರ್ಯಕ್ರಮ ಮಾಡಿಕೊಂಡಿರುವ ಬಿಜೆಪಿ ಹೇಗೆ ಪ್ರಬಲವಾಯಿತು? ಗೋಮಾಂಸ ಭಕ್ಷಣೆ ಜನರ ಆಹಾರ ಕ್ರಮವೇ ಆಗಿರುವ ಮತ್ತು ಪ್ರತ್ಯೇಕ ರಾಜ್ಯ ಬೇಕೆಂದು ಹಲವು ಬುಡಕಟ್ಟು ಜನಾಂಗಗಳು ಬೇಡಿಕೆ ಸಲ್ಲಿಸಿರುವ ಆ ರಾಜ್ಯಗಳಲ್ಲಿ ಬಿಜೆಪಿ ಹೇಗೆ ರಾಜಕೀಯ ಅಧಿಕಾರ ಹಿಡಿಯುವುದು ಸಾಧ್ಯವಾಯಿತು?
ಈಶಾನ್ಯ ರಾಜ್ಯಗಳಲ್ಲಿ ಪ್ರತಿಯೊಂದು ರಾಜ್ಯದ ಪರಿಸ್ಥಿತಿ ಭಿನ್ನವಾಗಿದ್ದರೂ, ಬಿಜೆಪಿಯ ಕಾರ್ಯತಂತ್ರದಲ್ಲಿ ಒಂದು ನಿಗದಿತ ಮಾದರಿ (ಪ್ಯಾಟರ್ನ್) ಇದೆ. ಉದಾಹರಣೆಗೆ, ಅಸ್ಸಾಂನಲ್ಲಿ ಅದು ಮುಖ್ಯವಾಗಿ ಬಾಂಗ್ಲಾದೇಶದ ವಲಸಿಗರು, ಮುಸ್ಲಿಮರು ರಾಜ್ಯದ ತುಂಬ ತುಂಬಿಕೊಳ್ಳುವುದು ಹಾಗೂ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆಂದು ಬೆದರಿಸುವುದನ್ನು ಮುಖ್ಯ ವಿಷಯವಾಗಿ ಮಾಡಿಕೊಂಡಿತು. ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೆ ಕೂಡ ಮೈತ್ರಿಮಾಡಿಕೊಳ್ಳುವ ಚಾಣಾಕ್ಷತನ ತೋರಿತು. ಅಲ್ಲಿಯ ಹೆಚ್ಚಿನ ಪ್ರಾದೇಶಿಕ ಸಂಘಟನೆಗಳು ಕಾಂಗ್ರೆಸ್ ಎಂದರೆ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡದ ಒಂದು ಪಕ್ಷ ಎಂದು ನೋಡುತ್ತವೆ. ತ್ರಿಪುರಾದ ಎಡಪಂಥಿಯ ಸರಕಾರ ಬುಡಕಟ್ಟು ಜನರನ್ನು ಹಾಗೂ ಇತರ ಹಿಂದುಳಿದ ವರ್ಗಗಳನ್ನು ಮೀಸಲಾತಿ ವಿಷಯದಲ್ಲಿ ನಿರಾಸೆಗೊಳಿಸಿತು. ಯುವ ಜನತೆಗೆ ನೌಕರಿಯ ಅವಕಾಶಗಳನ್ನು ಸೃಷ್ಟಿಸುವುದರಲ್ಲೂ ಅದು ಶೋಚನೀಯವಾಗಿ ಸೋತಿತು. ಇದು ಬಿಜೆಪಿಗೆ ಅಭಿವೃದ್ಧಿಯ ಆಶ್ವಾಸನೆ ಹಾಗೂ ಭ್ರಮೆಯನ್ನು ಸೃಷ್ಟಿಸಲು ಒಂದು ಒಳ್ಳೆಯ ಅವಕಾಶ ಒದಗಿಸಿತು.
ತ್ರಿಪುರಾದಲ್ಲಿ ಬಿಜೆಪಿ ಎರಡು ಮುಖ್ಯ ವಿಷಯಗಳನ್ನೇ ಪುನಃ ಪುನಃ ಒತ್ತಿ ಹೇಳಿತು. ಒಂದು, ಅಭಿವೃದ್ಧಿಯ ಆಶ್ವಾಸನೆ. ಹೊಸ ವೇತನ ಆಯೋಗಗಳ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಲು ಮಾಣಿಕ್ ಸರ್ಕಾರ್ ವಿಫಲವಾದ್ದರಿಂದ ಬಹಳಷ್ಟು ಮಂದಿ ನೊಂದುಕೊಂಡರು. ಕೇಂದ್ರದಲ್ಲಿ ಏಳನೆಯ ವೇತನ ಆಯೋಗದ ಮಾತು ಕೇಳಿ ಬರುತ್ತಿರುವಾಗ ತ್ರಿಪುರಾ ಇನ್ನೂ ನಾಲ್ಕನೆಯ ವೇತನ ಆಯೋಗದಲ್ಲೆ ನಿಂತುಬಿಟ್ಟಿದೆ. ಎರಡನೆಯದಾಗಿ, ತ್ರಿಪುರಾದಲ್ಲಿ ಹಿಂದೂಗಳು ನಿರಾಶ್ರಿತರು ಎಂಬ ಪ್ರಚಾರ ಹಾಗೂ ಮುಸ್ಲಿಮ್ ವಲಸಿಗರ ಪ್ರಶ್ನೆ ಬಂಗಾಲಿ ಹಿಂದೂ ಮತಗಳ ಮೇಲೆ ಪ್ರಭಾವ ಬೀರಿತು. ಗೋಮಾಂಸದ ವಿಷಯದಲ್ಲಿ ಬಿಜೆಪಿಯು ತನ್ನ ಸೋಗಲಾಡಿತನವನ್ನು ಮುಕ್ತವಾಗಿಯೇ ಪ್ರದರ್ಶಿಸಿತು. ದೇಶದ ವಿವಿಧ ಭಾಗಗಳಲ್ಲಿ ಗೋವುಗಳ ವಧೆ ಮತ್ತು ಗೋಮಾಂಸದ ಮೇಲೆ ಬಿಜೆಪಿ ಸರಕಾರ ಹೇರಿರುವ ನಿಷೇಧವನ್ನು ಈಶಾನ್ಯ ರಾಜ್ಯಗಳಲ್ಲಿ ಹೇರಲಾಗುವುದಿಲ್ಲ ಎಂದು ಅದು ಘೋಷಿಸಿತು. ಅದರ ಕೈಯಲ್ಲಿ ಪವಿತ್ರ ಗೋವು ಸಮಾಜವನ್ನು ವಿಭಜಿಸಲು ಒಂದು ರಾಜಕೀಯ ಅಸ್ತ್ರ-ಗೋಮಾಂಸ ಮತ್ತು ಗೋಹತ್ಯೆ ವಿಷಯದಲ್ಲಿ ಕೇರಳ ಮತ್ತು ಗೋವಾದಲ್ಲಿ ಮಾಡಿದಂತೆ , ರಾಜಕೀಯ ಲಾಭಕ್ಕಾಗಿ ತಮಗೆ ಬೇಕಾದಾಗ ಬಿಜೆಪಿ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತದೆ.


ಕ್ರಿಶ್ಚಿಯನ್ ಮತದಾರರ ಮುಂದೆ, ಏರಿದ ಸ್ವರದಲ್ಲಿ ಮೋದಿಯವರು ಇರಾಕ್‌ನಲ್ಲಿ ಐಸಿಸ್ ಉಗ್ರರ ವಶದಲ್ಲಿದ್ದ 46 ದಾದಿ (ನರ್ಸ್)ಯರನ್ನು ಪಾರು ಮಾಡಿದ್ದು ಹಾಗೂ ತಾಲಿಬಾನ್‌ಗಳ ಬಂಧನದಲ್ಲಿದ್ದ ಪಾದ್ರಿ ಅಲೆಕ್ಸ್ ಪ್ರೇಮ್ ಕುಮಾರ್‌ರವರನ್ನು ರಕ್ಷಿಸಿದ ಬಗ್ಗೆ ಮಾತನಾಡಿದರು. ಈ ಬಗ್ಗೆ ಏನು ಹೇಳೋಣ? ಅವರನ್ನು ರಕ್ಷಿಸಿದ್ದು ಭಾರತೀಯರು ಎಂಬ ಕಾರಣಕ್ಕಾಗಿಯೇ ಅಥವಾ ಅವರು ಬಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕಾಗಿಯೇ?.
ಮೇಘಾಲಯದ ಪರಿಸ್ಥಿತಿ ಬೇರೆಯೇ ಆಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಮತ ಗಳಿಸಿದ ಏಕೈಕ ಪಕ್ಷವಾಗಿ ಹೊರಹೊಮ್ಮಿತಾದರೂ ಮತ್ತು ತಾರ್ಕಿಕವಾಗಿ ಸರಕಾರ ರಚಿಸುವ ಅವಕಾಶವನ್ನು ಅದಕ್ಕೆ ನೀಡಲೇಬೇಕಿತ್ತಾದರೂ, ಅಲ್ಲಿಯ ಹಿಂದೂ ರಾಷ್ಟ್ರೀಯವಾದಿ ರಾಜ್ಯಪಾಲರು ಹಾಗೆ ಮಾಡಲಿಲ್ಲ. ಬದಲಾಗಿ, ದ್ವಿತೀಯ ಅತ್ಯಂತ ದೊಡ್ಡ ಪಕ್ಷಕ್ಕೆ, ಬಿಜೆಪಿಯನ್ನು ಒಳಗೊಂಡು, ಸರಕಾರ ರಚಿಸುವ ಅವಕಾಶ ಮಾಡಿಕೊಟ್ಟರು. ಬಿಜೆಪಿಯ ಈ ಯಶಸ್ಸಿನ ಹಿಂದೆ ಹಣ ಮತ್ತು ತೋಳ್ಬಲದೊಂದಿಗೆ ಅದು ವಹಿಸಿದ ಪಾತ್ರದ ಒಳ ಪ್ರವಾಹವೂ ಇದೆ.
ತ್ರಿಪುರಾದಲ್ಲಿ ಎಡ ಪಕ್ಷ ಹಲವು ಪಾಠಗಳನ್ನು ಕಲಿಯಲಿಕ್ಕೆ ಇದೆ. ಇವುಗಳಲ್ಲಿ ಯುವ ಜನರ, ಬುಡಕಟ್ಟು ಮತ್ತು ಒಬಿಸಿಗಳ ಸಮಸ್ಯೆಗಳು ಬಹಳ ಮುಖ್ಯವಾಗಿವೆ. ಅಲ್ಲದೇ ‘ಕಾರಟ್‌ಲೈನ್’ ಅಂದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂಬ ಎಡಪಕ್ಷಗಳ ಹಠಮಾರಿತನ, ಭವಿಷ್ಯದಲ್ಲಿ ಎಡಪಕ್ಷವನ್ನೇ ನಿರ್ನಾಮ ಮಾಡಬಹುದು. ಯಾಕೆಂದರೆ, ಈ ಹಠಮಾರಿತನದ ನಿಲುವು ಬಿಜೆಪಿ-ಆರೆಸ್ಸೆಸ್‌ನ ಸಾಮರ್ಥ್ಯ ಮತ್ತು ತುಂಬ ಆಳದಲ್ಲಿರುವ ಅದರ ಅಜೆಂಡಾವನ್ನು ಕೀಳಂದಾಜು ಮಾಡುತ್ತದೆ. ಸಾಕಷ್ಟು ಸಮಯದಿಂದ ಬಿಜೆಪಿ ನಿರ್ಮಿಸಿಕೊಂಡಿರುವ ಬಲಿಷ್ಠವಾದ ಚುನಾವಣಾ ಯಂತ್ರ ಒಡ್ಡುವ ಬೆದರಿಕೆಯನ್ನು ಕಾರಟ್‌ಲೈನ್ ಕಡೆಗಣಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಗೋಮಾಂಸ ಮತ್ತು ಮತಾಂತರದಂತಹ ಪ್ರಶ್ನೆಗಳನ್ನು ತನಗೆ ಬೇಕಾದಂತೆ ಬದಲಿಸಿಕೊಳ್ಳುವ, ಒಂದಕ್ಕೊಂದು ವಿರುದ್ಧವಾದ ನಿಲುವನ್ನು ತೆಗೆದುಕೊಂಡು ಅದರಿಂದ ಪಾರಾಗಿ ಹೋಗುವ ಬಿಜೆಪಿಯ ಸಾಮರ್ಥ್ಯವನ್ನು ‘ಕಾರಟ್‌ಲೈನ್’ ಕಡೆಗಣಿಸುತ್ತದೆ!
ಲಿನಿನ್ ಪ್ರತಿಮೆಯ ಮೇಲೆ ಮತ್ತು ಸಿಪಿಎಂ ಕಾರ್ಯಕರ್ತರ ಮೇಲೆ ದಾಳಿಯ ರೂಪದಲ್ಲಿ ಕಂಡು ಬರುವ ಬಿಜೆಪಿ-ಆರೆಸ್ಸೆಸ್‌ನ ಭಾವನಾತ್ಮಕ ರಾಜಕಾರಣವನ್ನು ಕೂಡ ನಾವು ಗಮನಿಸಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಿ ಎದ್ದು ನಿಲ್ಲದಿದ್ದಲ್ಲಿ ಭವಿಷ್ಯದಲ್ಲಿ ಈಶಾನ್ಯ ರಾಜ್ಯಗಳಿಗೆ ಏನು ಗತಿ ಕಾದಿದೆಯೋ.!

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ