ಕಾಣೆಯಾಗಿರುವ ಮತದಾರರು!

Update: 2018-03-27 05:27 GMT

ರಾಜ್ಯ ವಿಧಾನಸಭಾ ಚುನಾವಣೆ ನಿಧಾನಕ್ಕೆ ಕಾವು ಪಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸನ್ನು ಎದುರಿಸುವುದಕ್ಕೆ ಕೇಂದ್ರದ ಬಿಜೆಪಿ ಮುಖಂಡರು ಸರದಿಯಲ್ಲಿ ಕರ್ನಾಟಕಕ್ಕೆ ಬಂದಿಳಿಯುತ್ತಿದ್ದಾರೆ. ಇದು ನೇರವಾಗಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯ ನಡುವಿನ ಸ್ಪರ್ಧೆ ಎಂಬಂತೆ ಮಾಧ್ಯಮಗಳಲ್ಲಿ ವಿಶ್ಲೇಷಣೆಗೆ ಒಳಗಾಗುತ್ತಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ, ಮತದಾರರನ್ನು ಸೆಳೆಯುವ ಕಾರ್ಯ ಬಿರುಸಿನಿಂದ ನಡೆಯುತ್ತಿವೆ. ಈಗಾಗಲೇ ಸರಕಾರೇತರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಲಿಂಗಾಯತರು, ದಲಿತರು, ಅಲ್ಪಸಂಖ್ಯಾತರು ಗುರುತಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜ್ಯ ಬಿಜೆಪಿ ನಾಯಕರ ಪೇಲವ ಹೆಜ್ಜೆಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ನೊಳಗೆ ಅತಿ ಆತ್ಮವಿಶ್ವಾಸವನ್ನೂ ಹುಟ್ಟಿಸಿದೆ. ಆದರೆ ಈ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಮುಳುವಾದರೆ ಅಚ್ಚರಿಯೇನೂ ಇಲ್ಲ. ನಿಜ. ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ಸಮುದಾಯ ಸಿದ್ದರಾಮಯ್ಯ ಪರವಾಗಿ ಒಲವನ್ನು ಹೊಂದಿವೆ. ಆದರೆ ಈ ಒಲವು ನೇರವಾಗಿ ಮತವಾಗಿ ಪರಿವರ್ತನೆಯಾಗುವುದಿಲ್ಲ.

ಈ ಬಾರಿ 60 ಲಕ್ಷಕ್ಕೂ ಅಧಿಕ ಹೊಸ ಯುವ ಮತದಾರರು ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಇವರಲ್ಲಿ ದಲಿತರು, ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಶೋಷಿತ ಸಮುದಾಯದಿಂದ ಬರುವ ಹೊಸ ಮತದಾರರು ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸುವುದಕ್ಕೇ ಸಾಕಷ್ಟು ತಿಣುಕಾಡುತ್ತಿದ್ದಾರೆ. ಒಂದೆಡೆ, ಮೇಲ್ವರ್ಗದ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲು ಭಾರೀ ಸಂಘಟನಾತ್ಮಕವಾದ ಕೆಲಸ ನಡೆಯುತ್ತಿದೆ. ಆರೆಸ್ಸೆಸ್ ನೇತೃತ್ವದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇಂತಹ ಕಾರ್ಯಗಳು ನಡೆಯುತ್ತಿವೆ. ಹಿಂದುತ್ವದ ಮತಗಳನ್ನು ಗುರುತಿಸಿ ಅವರ ಹೆಸರನ್ನು ಸೇರ್ಪಡೆಗೊಳಿಸುವ ಹೊಣೆಗಾರಿಕೆಯನ್ನು ಆರೆಸ್ಸೆಸ್‌ನ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ದಲಿತರು, ಅಲ್ಪಸಂಖ್ಯಾತರ ಹೆಸರುಗಳನ್ನು ಇದೇ ಆಸಕ್ತಿಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಹೊಣೆಗಾರಿಕೆಯನ್ನು ಯಾರಾದರೂ ಹೊತ್ತುಕೊಂಡಿದ್ದಾರೆಯೇ ಎಂದು ಪರಿಶೀಲಿಸಿದಾಗ ನಿರಾಶೆಯಾಗುತ್ತದೆ. ದಿಲ್ಲಿ ಮೂಲದ ನೀತಿ ಅಭಿವೃದ್ಧಿ ಸಂಶೋಧನೆ ಮತ್ತು ಸಮಾಲೋಚನೆ ಕೇಂದ್ರವು ನಡೆಸಿದ ಅಧ್ಯಯನದ ವರದಿಯೊಂದು ಆಘಾತಕಾರಿ ಅಂಶಗಳನ್ನು ಬೆಳಕಿಗೆ ತಂದಿದೆ. ಕರ್ನಾಟಕದಲ್ಲಿ ಮತ ಚಲಾಯಿಸಲು ಅರ್ಹರಾದ ಹದಿನೈದು ಲಕ್ಷಕ್ಕೂ ಅಧಿಕ ಮುಸ್ಲಿಮರ ಹೆಸರುಗಳು ಇನ್ನೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎನ್ನುವುದನ್ನು ಈ ಸಂಸ್ಥೆ ವಿವರವಾಗಿ ಮಂಡಿಸಿದೆ.

ಸಂಸ್ಥೆಯು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯಲ್ಲಿ ಹದಿನೈದು ಲಕ್ಷಕ್ಕೂ ಅಧಿಕ ಅರ್ಹ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ ಮತ್ತು ಅವರ ಬಳಿ ಮತದಾರರ ಗುರುತಿನ ಚೀಟಿ ಕೂಡ ಇಲ್ಲ ಎನ್ನುವುದನ್ನು ಅದು ಬಹಿರಂಗಪಡಿಸಿದೆ. ಒಂದೆಡೆ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು ತನ್ನ ಜೊತೆಗಿದ್ದಾರೆ ಎಂದು ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ಅಲ್ಪಸಂಖ್ಯಾತ ಮತದಾರರು ಪಕ್ಷವನ್ನು ಬೆಂಬಲಿಸಿದರೆ ಸಾಕೇ? ಅವರ ಬೆಂಬಲ ಮತವಾಗಿ ಪರಿವರ್ತನೆಯಾಗಬೇಕಾದರೆ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ ಬೇಡವೇ? ಎಲ್ಲಕ್ಕೂ ಮುಖ್ಯವಾಗಿ, ಶೋಷಿತ ಸಮುದಾಯದ ಮತದಾರರ ಹೆಸರುಗಳು ಪಟ್ಟಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಸರಕಾರದ ಹೊಣೆಗಾರಿಕೆ ಅಲ್ಲವೇ? ಅಭಿವೃದ್ಧಿಯಲ್ಲಿ ತನ್ನಪಾಲನ್ನು ಪಡೆಯಬೇಕಾದರೆ, ಆ ಸಮುದಾಯ ಮತದಾನದಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸಬೇಕು. ಇದೀಗ 15 ಲಕ್ಷಕ್ಕೂ ಅಧಿಕ ಮುಸ್ಲಿಮರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ ಎಂದರೆ ಅದಕ್ಕೆ ಯಾರು ಹೊಣೆಗಾರರು?

ಇಂದಿಗೂ ದಲಿತ ಮತ್ತು ಮುಸ್ಲಿಮ್ ಸಮುದಾಯದ ಮತದಾರರಿಗೆ ಮತ ಚಲಾವಣೆಯ ಮಹತ್ವ ತಿಳಿದಿಲ್ಲ. ರೇಷನ್‌ಕಾರ್ಡ್‌ಗಿಂತಲೂ ಅತ್ಯಗತ್ಯವಾದುದು ವೋಟರ್ ಐಡಿ ಎನ್ನುವುದು ಗೊತ್ತಿಲ್ಲ. ಮತ ಹಾಕುವುದರಿಂದ ತಕ್ಷಣಕ್ಕೆ ಪ್ರತ್ಯಕ್ಷ ಲಾಭವೂ ಇಲ್ಲ ಎನ್ನುವ ಕಾರಣಕ್ಕಾಗಿ ಅವರು ಈ ಕುರಿತಂತೆ ನಿರ್ಲಕ್ಷವನ್ನು ಹೊಂದಿರಬಹುದು. ಇವರ ನಿರ್ಲಕ್ಷವನ್ನು ಹಿತಾಸಕ್ತಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ. ಇಂದು ಬಿಜೆಪಿ ಒಲವುಳ್ಳ ಸಿಬ್ಬಂದಿಗಳು ಚುನಾವಾಣಾ ಆಯೋಗದೊಳಗೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ದುರ್ಬಲ ವರ್ಗದ ಜನರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಮುಂದಾಗುವಾಗ ಅದಕ್ಕೆ ಸಾವಿರ ಅಡೆತಡೆಗಳನ್ನು ಒಡ್ಡುತ್ತಾರೆ. ಇವಿಎಂ ಕುರಿತಂತೆ ಪದೇ ಪದೇ ಕಾಂಗ್ರೆಸ್ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಾ ಬಂದಿದೆ. ತನ್ನ ಅನುಮಾನವನ್ನು ಬಹಿರಂಗವಾಗಿ ಹೇಳಿಕೊಂಡಿದೆ. ಮತ ಹಾಕುವ ಮತದಾರರ ಹೆಸರುಗಳು ಪಟ್ಟಿಯಲ್ಲೇ ಇಲ್ಲದಿದ್ದ ಮೇಲೆ ಇವಿಎಂ ಸರಿಯಾಗಿ ಕೆಲಸ ಮಾಡಿದರೂ ಅದರಿಂದ ಏನು ಪ್ರಯೋಜನ?

   ಸದ್ಯಕ್ಕೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವಿದೆ. ಅಲ್ಪಸಂಖ್ಯಾತರ ಪರವಾಗಿ ಸಾರ್ವಜನಿಕವಾಗಿ ಭಾರೀ ಹೇಳಿಕೆಗಳನ್ನು ನೀಡುತ್ತಿದೆ. ಹೀಗಿದ್ದೂ, ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಮತದಾರರು ಪಟ್ಟಿಯಿಂದ ಹೊರಗುಳಿಯಲು ಹೇಗೆ ಸಾಧ್ಯ? ಇದು ಆಕಸ್ಮಿಕವೇ? ಅಥವಾ ಸಂಘಟನಾತ್ಮಕವಾದ ಪ್ರಯತ್ನದ ಫಲವಾಗಿ ಇವರು ಹೊರಗುಳಿದಿದ್ದಾರೆಯೇ? ಇದರ ಪರಿಣಾಮ ಏನು ಎನ್ನುವುದನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಮತಯಾಚನೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಮೊಸಳೆ ಕಣ್ಣೀರು ಸುರಿಸುವ ಇತರ ಪಕ್ಷಗಳು ಹಾಗೂ ಮುಸ್ಲಿಮ್ ಸಂಘಟನೆಗಳ ಗಮನಕ್ಕೆ ಇದು ಬಾರದಿರುವುದು ವಿಷಾದನೀಯವಾಗಿದೆ. ತಮ್ಮ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಅಳೆದು ತೂಗಿ ಕೆಲಸ ಮಾಡುವ ಈ ಸಂಘಟನೆಗಳಿಗೆ ಮತದಾರರ ಪಟ್ಟಿಯಲ್ಲಿ 15 ಲಕ್ಷಕ್ಕೂ ಅಧಿಕ ಜನರ ಹೆಸರಿಲ್ಲದೇ ಇರುವುದು ಸಮುದಾಯಕ್ಕಾದ ಹಿನ್ನಡೆ ಎಂದು ಅನಿಸಿಲ್ಲ. ಎಲ್ಲಿ ತಮ್ಮ ಪಕ್ಷ ಪ್ರಬಲವಾಗಿದೆಯೋ ಅಲ್ಲಿಗಷ್ಟೇ ಇವರ ಹೋರಾಟ, ಸಂಘಟನೆಗಳು ಸೀಮಿತವಾಗಿದೆ. ಉಳಿದಂತೆ, ಇತರೆಡೆ ಮತದಾರರನ್ನು ಸಂಘಟಿಸಿದರೆ ಬೇರೆ ಪಕ್ಷಗಳಿಗೆ ಅನುಕೂಲವಾಗಿ ಬಿಡುತ್ತದೆಯೋ ಎನ್ನುವ ಭಯ. ದಲಿತ ವರ್ಗದ ಮತದಾರರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇವಿಎಂನ ಕುರಿತಂತೆ ಬೊಬ್ಬೆ ಹೊಡೆಯುವ ಪಕ್ಷಗಳು, ಸಂಘಟನೆಗಳು ಅದಕ್ಕೂ ಮೊದಲು ಮತದಾರರ ಪಟ್ಟಿಯ ಕಡೆಗೆ ಕಣ್ಣಾಯಿಸಬೇಕಾಗಿದೆ. ನಾಪತ್ತೆಯಾಗಿರುವ ಹೆಸರನ್ನು ಗುರುತಿಸಿ ಅವರನ್ನು ಪಟ್ಟಿಯೊಳಗಡೆ ಸೇರ್ಪಡೆ ಮಾಡುವುದಕ್ಕಾಗಿ ಒಂದು ಪುಟ್ಟ ಆಂದೋಲನದ ಅಗತ್ಯವಿದೆ. ಇಲ್ಲವಾದರೆ, ಈ ಹೊರಗಿರುವ 15 ಲಕ್ಷ ಮತಗಳೇ ಒಂದು ಕೆಟ್ಟ ಸರಕಾರ ಆಡಳಿತಕ್ಕೆ ಬರಲು ಕಾರಣವಾಗಬಹುದು. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News