ಆಸ್ಟ್ರೇಲಿಯ ಕೋಚ್ ಹುದ್ದೆಗೆ ಡರೆನ್ ಲೆಹ್ಮನ್ ರಾಜೀನಾಮೆ?

Update: 2018-03-27 05:07 GMT

ಸಿಡ್ನಿ, ಮಾ.27:ಚೆಂಡು ವಿರೂಪ ಪ್ರಕರಣ ದಿನದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಡರೆನ್ ಲೆಹ್ಮನ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಬ್ರಿಟನ್‌ನ ‘ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ.

ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡು ವಿರೂಪಗೊಳಿಸಲು ತಂಡದ ಹಿರಿಯ ಆಟಗಾರರು ಸಂಚು ರೂಪಿಸಿದ್ದರು ಎಂದು ನಾಯಕ ಸ್ಟೀವ್ ಸ್ಮಿತ್ ಶನಿವಾರ ತಪ್ಪೊಪ್ಪಿಕೊಂಡ ಬಳಿಕ ಆಸ್ಟ್ರೇಲಿಯ ತಂಡ ತೀವ್ರ ಮುಜುಗರಕ್ಕೀಡಾಗಿದೆ.

ಐಸಿಸಿ ಸ್ಮಿತ್‌ಗೆ ದಂಡದ ಜೊತೆಗೆ ನಾಲ್ಕನೇ ಟೆಸ್ಟ್ ಪಂದ್ಯದಿಂದ ಅಮಾನತುಗೊಳಿಸಿದೆ. ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕ್ರಮವಾಗಿ ನಾಯಕ ಹಾಗೂ ಉಪ ನಾಯಕನ ಸ್ಥಾನವನ್ನು ತ್ಯಜಿಸಿದ್ದು, ಕ್ರಿಕೆಟ್ ಆಸ್ಟ್ರೇಲಿಯ ತನಿಖೆಯನ್ನು ಮುಂದುವರಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯ ಮಂಗಳವಾರ ಸಂಜೆ ಜೋಹಾನ್ಸ್‌ಬರ್ಗ್‌ನಲ್ಲಿ ತನಿಖೆಯ ಫಲಿತಾಂಶವನ್ನು ಪ್ರಕಟಿಸಲಿದೆ. ಘಟನೆಯ ಬಳಿಕ ಕೋಚ್ ಲೆಹ್ಮನ್ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. 2019ರ ಆ್ಯಶಸ್ ಸರಣಿ ಬಳಿಕ ಕೋಚ್ ಹುದ್ದೆಯನ್ನು ತ್ಯಜಿಸುವ ಯೋಜನೆ ಹಾಕಿಕೊಂಡಿದ್ದ ಲೆಹ್ಮನ್ ಅದಕ್ಕೂ ಮೊದಲೇ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ‘ಡೈಲಿ ಟೆಲಿಗ್ರಾಫ್’ ತಿಳಿಸಿದೆ.

ಆಸ್ಟ್ರೇಲಿಯದ ಮಾಜಿ ಆಟಗಾರ ಲೆಹ್ಮನ್ 2013ರಲ್ಲಿ ದಕ್ಷಿಣ ಆಫ್ರಿಕ ಮಿಕ್ಕಿ ಅರ್ಥರ್‌ರಿಂದ ತೆರವಾದ ಸ್ಥಾನ ತುಂಬಿದ್ದರು. ಲೆಹ್ಮನ್ ಕೋಚ್ ಆದ ಬಳಿಕ 2015ರಲ್ಲಿ ಆಸ್ಟ್ರೇಲಿಯ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಸ್ವದೇಶದಲ್ಲಿ ನಡೆದ ಎರಡು ಟೆಸ್ಟ್ ಸರಣಿಯ್ನು 5-0 ಹಾಗೂ 4-0 ಅಂತರದಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News