ಬಳಕೆದಾರರ ಮಾಹಿತಿ ಸಂಗ್ರಹ ಪರಿಶೀಲನೆ: ಚುನಾವಣಾ ಆಯೋಗ
Update: 2018-03-27 23:34 IST
ಹೊಸದಿಲ್ಲಿ, ಮಾ. 27: ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳ ಮೊಬೈಲ್ ಆ್ಯಪ್ ಮೂಲಕ ಬಳಕೆದಾರರ ಮಾಹಿತಿ ಸಂಗ್ರಹಿಸುವ ಯಾವುದೇ ಆರೋಪಗಳನ್ನು ಭಾರತದ ಚುನಾವಣಾ ಆಯೋಗ ಪರಿಗಣಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಮಂಗಳವಾರ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಿಸಿರುವ ರಾವತ್, ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣದ ಕೇಂದ್ರ ಈ ಆರೋಪಗಳನ್ನು ಪರಿಶೀಲಿಸಲಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಆ್ಯಪ್ ಅಥವಾ ಕಾಂಗ್ರೆಸ್ ಆ್ಯಪ್‌ನಲ್ಲಿ ವ್ಯಕ್ತಿ ವಿವರ ರೂಪಿಸಿದರೆ ಬಳಕೆದಾರರ ಮಾಹಿತಿ ಅವರ ಅನುಮತಿ ಇಲ್ಲದೆ ಮೂರನೇ ವ್ಯಕ್ತಿಗೆ ರವಾನೆಯಾಗುತ್ತಿರುವುದನ್ನು ಟ್ವಿಟರ್ ಬಳಕೆದಾರ ಹಾಗೂ ಫ್ರೆಂಚ್ ಭದ್ರತಾ ಸಂಶೋಧಕ ಎಲಿಯಟ್ ಅಲ್ಡರ್‌ಸನ್ ಹೇಳಿದ್ದರು.
ನರೇಂದ್ರ ಮೋದಿ ಅವರ ಆ್ಯಪ್ ತನ್ನ ಬಳಕೆದಾರರಿಗೆ ಸೂಚನೆ ನೀಡದೆ ತನ್ನ ಖಾಸಗಿ ನೀತಿ ಬದಲಾಯಿಸಿದೆ ಎಂದು ಕೂಡ ಅಲ್ಡರ್‌ಸನ್ ಟ್ವೀಟ್ ಮಾಡಿದ್ದರು.