ಸಿಜೆಐ ಮಿಶ್ರಾ ವಿರುದ್ಧ ವಾಗ್ದಂಡನೆ: ಕಾಂಗ್ರೆಸ್ ಪ್ರಸ್ತಾವ

Update: 2018-03-27 18:08 GMT

ಹೊಸದಿಲ್ಲಿ,ಮಾ.27: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ವಾಗ್ದಂಡನೆಗಾಗಿ ಮಹಾಭಿಯೋಗ ಕಲಾಪಗಳಿಗೆ ಚಾಲನೆ ನೀಡಲು ಕಾಂಗ್ರೆಸ್ ಪಕ್ಷವು ಸಜ್ಜಾಗುತ್ತಿದೆ. ಅದು ಈಗಾಗಲೇ ನ್ಯಾ.ಮಿಶ್ರಾ ವಿರುದ್ಧ ಮಹಾಭಿಯೋಗ ಸೂಚನೆ ಯನ್ನು ಮಂಡಿಸಲು ಕರಡು ಪ್ರಸ್ತಾವವೊಂದನ್ನು ಪ್ರತಿಪಕ್ಷಗಳಿಗೆ ವಿತರಿಸಿದೆ.

ಹಿರಿಯ ಕಾಂಗ್ರೆಸ್ ನಾಯಕರು ಈಗಾಗಲೇ ಕರಡು ಮಹಾಭಿಯೋಗ ಸೂಚನೆಗೆ ಸಹಿ ಹಾಕಿದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ವು ಅದನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಎನ್‌ಸಿಪಿ ನಾಯಕ ಹಾಗೂ ಹಿರಿಯ ನ್ಯಾಯವಾದಿ ಮಜೀದ್ ಮೆಮನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮಹಾಭಿಯೋಗ ಸೂಚನೆಗೆ ಸಂಬಂಧಿಸಿದಂತೆ ಕಾರ್ಯತಂತ್ರ ವನ್ನು ರೂಪಿಸಲು ಕಾಂಗ್ರೆಸ್ ಪಕ್ಷವು ಹಲವಾರು ಆಂತರಿಕ ಸಭೆಗಳನ್ನು ನಡೆಸುತ್ತಿದೆ ಮತ್ತು ಸಮಾನ ಮನಸ್ಕ ರಾಜಕೀಯ ಪಕ್ಷಗಳ ಬೆಂಬಲವನ್ನು ಕೋರಿದೆ. ಕನಿಷ್ಠ 50 ಸಂಸದರ ಕಡ್ಡಾಯ ಸಹಿಗಳನ್ನು ಕ್ರೋಢೀಕರಿಸಲು ಕಾಂಗ್ರೆಸ್‌ಗೆ ಸಾಧ್ಯವಾದರೆ ಮುಂದಿನ ಕೆಲವು ದಿನಗಳಲ್ಲಿ ಎಡರಂಗ, ಎನ್‌ಸಿಪಿ, ಡಿಎಂಕೆ ಮತ್ತು ಇತರ ಪ್ರಾದೇಶಿಕ ಪಕ್ಷಗಳ ಬೆಂಬಲದೊಡನೆ ಸಂಸತ್ತಿನಲ್ಲಿ ಮಹಾಭಿಯೋಗ ಸೂಚನೆಯನ್ನು ಮಂಡಿಸಲು ಅದು ಸಜ್ಜಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿದವು.

 ಆಯ್ದ ನ್ಯಾಯಾಧೀಶರಿಗೆ ತನ್ನ ಸ್ವೇಚ್ಛಾನುಸಾರ ಪ್ರಕರಣಗಳನ್ನು ವಹಿಸಲು ಅಧಿಕಾರದ ದುರುಪಯೋಗವನ್ನು ನ್ಯಾ.ಮಿಶ್ರಾ ವಿರುದ್ಧ ಮಹಾಭಿಯೋಗ ಸೂಚನೆಯನ್ನು ಮಂಡಿಸಲು ಕಾರಣವೆಂದು ಕರಡು ಪ್ರಸ್ತಾವವು ಬಿಂಬಿಸಿದೆ.

ಮಂಗಳವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಜೆಪಿ ನಾಯಕ ನಳಿನ್ ಕೊಹ್ಲಿ ಅವರು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ಸೂಚನೆಯು ನ್ಯಾಯಾಂಗವನ್ನು ರಾಜಕೀಕರಿಸುವ ನೇರ ಮತ್ತು ಕೆಟ್ಟ ಕ್ರಮವಾಗಿದೆ. ಕರಡು ಪ್ರಸ್ತಾವವನ್ನು ಸಿದ್ಧಗೊಳಿಸಿರುವ ಸಮಯವನ್ನು ಪರಿಗಣಿಸಿದರೆ ಇದು 2019ರ ಲೋಕಸಭಾ ಚುನಾವಣೆಗಳಿಗೆ ಮುನ್ನ ರಾಜಕೀಯ ವಾಗಿ ಸಂವೇದನಾಶೀಲ ಪ್ರಕರಣಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನು ಹತ್ತಿಕ್ಕುವ ಕುತಂತ್ರವಾಗಿದೆ ಎಂದು ಆರೋಪಿಸಿದರು.

ಈ ವರ್ಷದ ಜನವರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಮಿಶ್ರಾ ವಿರುದ್ಧ ಬಂಡೆದಿದ್ದ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಅತ್ಯಂಂತ ಹಿರಿಯ ನ್ಯಾಯಾಧೀಶರು, ಅವರು ಮಹತ್ವದ ಪ್ರಕರಣಗಳನ್ನು ಆಯ್ದ ಕಿರಿಯ ನ್ಯಾಯಾಧೀಶರ ನೇತೃತ್ವದ ಪೀಠಗಳಿಗೆ ವಹಿಸುವ ಮುಲಕ ನಿರಂಕುಶತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News