ದತ್ತಾಂಶ ರಕ್ಷಣೆಗಾಗಿ ಕಠಿಣ ಕಾನೂನು ಜಾರಿ: ಆಧಾರ್ ಪ್ರಾಧಿಕಾರ

Update: 2018-03-27 18:16 GMT

ಹೊಸದಿಲ್ಲಿ, ಮಾ.27: ದತ್ತಾಂಶ ರಕ್ಷಣೆಗೆ ಕಠಿಣ ಕಾನೂನು ಮತ್ತು ಭದ್ರತೆ ಒದಗಿಸಲು ಪ್ರಾಧಿಕಾರವು ನ್ಯಾಯಾಧೀಶ ಶ್ರೀಕೃಷ್ಣ ಪೀಠದ ಜೊತೆ ಯೋಜನೆಯನ್ನು ರೂಪಿಸುತ್ತಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯ ಕಾರ್ಯಕಾರಿ ಅಧಿಕಾರಿ ಡಾ. ಅಜಯ್ ಭೂಷಣ್ ಪಾಂಡೆ ಮಂಗಳವಾರದಂದು ರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಎ.ಕೆ ಸಿಕ್ರಿ, ಎ.ಎಂ ಬನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಪೀಠದ ಮುಂದೆ ಎರಡೂವರೆ ಗಂಟೆಗಳ ಕಾಲ ಈ ಕುರಿತು ಪ್ರಾತ್ಯಕ್ಷಿಕೆ ನೀಡಿದ ಅಜಯ್ ಭೂಷಣ್, ಆಧಾರ್ ದತ್ತಾಂಶ ಸೋರಿಕೆ ಮತ್ತು ಭದ್ರತಾಲೋಪದ ಬಗ್ಗೆ ಉಂಟಾಗಿರುವ ವಿವಾದವು ಆಧಾರರಹಿತವಾಗಿದೆ ಎಂದು ತಿಳಿಸಿದ್ದಾರೆ.

ದತ್ತಾಂಶವು ಗೂಢಲಿಪೀಕರಣಗೊಂಡಿದ್ದು ಅದನ್ನು ಡೆಪಾಸಿಟರಿಯಲ್ಲಿ ಭದ್ರವಾಗಿಡಲಾಗಿದೆ. ಅದನ್ನು ಅಂತರ್ಜಾಲಕ್ಕೆ ಸಂಪರ್ಕಿಸಲಾಗಿಲ್ಲ. ಹಾಗಾಗಿ ದತ್ತಾಂಶ ಸೋರಿಕೆಯಾಗುವ ಅಥವಾ ಭದ್ರತೆಯನ್ನು ಉಲ್ಲಂಘಿಸುವ ಯಾವುದೇ ಸಾಧ್ಯತೆಗಳು ಇಲ್ಲ ಎಂದು ತಿಳಿಸಿರುವ ಭೂಷಣ್, ಕಳೆದ ಏಳು ವರ್ಷಗಳಲ್ಲಿ ಒಂದೇ ಒಂದು ದತ್ತಾಂಶ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಗ್ರಹಿಸಲಾಗುವ ದತ್ತಾಂಶಗಳನ್ನು ಅವುಗಳನ್ನು ಉಳಿಸುವುದಕ್ಕೂ (ಸೇವ್ ಮಾಡುವುದು) ಮೊದಲು ಆರ್ಥಿಕ ಲಾಭಕ್ಕಾಗಿ ಇತರರ ಜೊತೆ ಹಂಚಲು ಸಾಧ್ಯವೇ ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭೂಷಣ್, ದೃಢೀಕರಣ ಸಂಸ್ಥೆಗಳಿಗೆ ಪ್ರಾಧಿಕಾರವೇ ಸಾಫ್ಟ್‌ವೇರ್ ಒದಗಿಸುತ್ತದೆ. ದತ್ತಾಂಶವನ್ನು ಪಡೆದ ಕೂಡಲೇ ಅದನ್ನು ಗೂಢಲಿಪೀಕರಣ ಮಾಡಲಾಗುತ್ತದೆ. ಹಾಗಾಗಿ ಅದನ್ನು ಇತರ ಮೂಲಗಳಲ್ಲಿ ಸಂಗ್ರಹಿಸಿಡಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News