ಸಾಮಾಜಿಕ ಜಾಲತಾಣಗಳ ಅಪಬಳಕೆಯ ದಾರಿ ಮೊದಲು ಹುಡುಕಿದ್ದು ಮಿಲಿಟರಿ!

Update: 2018-03-27 18:33 GMT

ಭಾಗ-3

ಲಂಡನ್‌ನಿಂದ ಪ್ರಕಟವಾಗುವ ‘ದಿ ಗಾರ್ಡಿಯನ್’ ಪತ್ರಿಕೆ ಪ್ರಕಾರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ವರ್ತನೆಯಲ್ಲಿ ಬದಲಾವಣೆ ಮೂಡಿಸುವ ಸಾಧ್ಯತೆಗಳ ಕುರಿತು 2010ರಷ್ಟು ಹಿಂದೆಯೇ ಇಂಗ್ಲೆಂಡಿನ ರಕ್ಷಣಾ ಇಲಾಖೆ ಕೆಲಸ ಆರಂಭಿಸಿತ್ತು. ಈ ಕೆಲಸಕ್ಕೆ ಅದು ನೇಮಿಸಿಕೊಂಡಿದ್ದ ಕಂಪೆನಿಯೇ ಎಸ್.ಸಿ.ಎಲ್. ಇದು ಕೇಂಬ್ರಿಡ್ಜ್ ಅನಲಿಟಿಕಾದ ಮಾತೃ ಕಂಪೆನಿಯಾಗಿದೆ

ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಯು ಫೇಸ್‌ಬುಕ್ ಬಳಕೆದಾರರ ವಿವರಗಳನ್ನು ಬಳಸಿಕೊಂಡು ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಟ್ರಂಪ್ ಪರವಾಗಿ ಇರುವಂತೆ ಪ್ರಭಾವಿಸಿದ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕೆಲವು ಕಹಿ ಸತ್ಯಗಳು ಹೊರಬೀಳತೊಡಗಿವೆ. ಲಂಡನ್‌ನಿಂದ ಪ್ರಕಟವಾಗುವ ‘ದಿ ಗಾರ್ಡಿಯನ್’ ಪತ್ರಿಕೆ ಪ್ರಕಾರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ವರ್ತನೆಯಲ್ಲಿ ಬದಲಾವಣೆ ಮೂಡಿಸುವ ಸಾಧ್ಯತೆಗಳ ಕುರಿತು 2010ರಷ್ಟು ಹಿಂದೆಯೇ ಇಂಗ್ಲೆಂಡಿನ ರಕ್ಷಣಾ ಇಲಾಖೆ ಕೆಲಸ ಆರಂಭಿಸಿತ್ತು. ಈ ಕೆಲಸಕ್ಕೆ ಅದು ನೇಮಿಸಿಕೊಂಡಿದ್ದ ಕಂಪೆನಿಯೇ ಎಸ್.ಸಿ.ಎಲ್. ಇದು ಕೇಂಬ್ರಿಡ್ಜ್ ಅನಲಿಟಿಕಾದ ಮಾತೃ ಕಂಪೆನಿಯಾಗಿದೆ ಮತ್ತು ಈ ಕಾರ್ಯಕ್ಕಾಗಿ ಇಂಗ್ಲೆಂಡ್‌ನ ಸರಕಾರ ಸುಮಾರು ಎರಡು ಲಕ್ಷ ಪೌಂಡಗಳನ್ನು ಎಸ್.ಸಿ.ಎಲ್. ಕಂಪೆನಿಗೆ ಶುಲ್ಕವಾಗಿ ನೀಡಿತ್ತೆಂದು ಗಾರ್ಡಿಯನ್ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ. (ನೋಡಿ: ದಿ ಗಾರ್ಡಿಯನ್, 23/03/2018)

ಅಂದರೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಜೆಗಳ ಯೋಚನೆಗಳ ಮೇಲೆ ಹಿಡಿತ ಸಾಧಿಸುವ ತಂತ್ರದ ಸಾಧ್ಯತೆಗಳನ್ನು ಸರಕಾರವೇ ಮೊದಲು ಪರೀಕ್ಷಿಸಿತ್ತು ಎಂದಾಯಿತು. ‘ಪ್ರಾಜೆಕ್ಟ್ ಡ್ಯೂಕ್’ ಎಂಬ ಹೆಸರಿನ ಈ ಕೆಲಸವನ್ನು ಇಂಗ್ಲೆಂಡಿನ ರಕ್ಷಣಾ ಇಲಾಖೆ ತನ್ನ ಅಧೀನದಲ್ಲಿರುವ ಡಿಫೆನ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಲ್ಯಾಬ್‌ನಲ್ಲಿ ಎಸ್.ಸಿ.ಎಲ್. ಕಂಪೆನಿಯ ಸಹಭಾಗಿತ್ವದಲ್ಲಿ 2010ರ ಸುಮಾರಿಗೆ ಆರಂಭಿಸಿತ್ತು. ಜೊತೆಗೆ ನ್ಯಾಟೋ ಮಿಲಿಟಿರಿ ಅಧಿಕಾರಿಗಳಿಗೆ ಈ ತಂತ್ರದ ಕುರಿತ ತರಬೇತಿ ನೀಡುವ ಹೊಣೆಯನ್ನು ಇದೇ ಕಂಪೆನಿಗೆ ನೀಡಿತ್ತೆಂದು ವರದಿ ಹೇಳುತ್ತದೆ. 2014ರ ಹೊತ್ತಿಗೆ ಈ ಕೆಲಸದಿಂದ ಎಸ್.ಸಿ.ಎಲ್. ಕಂಪೆನಿಯನ್ನು ರಕ್ಷಣಾ ಇಲಾಖೆ ಕಿತ್ತುಹಾಕಿತ್ತು. ಏಕೆ ಗೊತ್ತೆ? ಸರಕಾರ ಸಂಶೋಧನೆಯ ಉದ್ದೇಶಕ್ಕಾಗಿ ನೀಡಿದ ರಹಸ್ಯ ಮಾಹಿತಿಯ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಕಂಪೆನಿಯು ವಿಫಲವಾಗಿತ್ತು!

ಕೇಂಬ್ರಿಡ್ಜ್ ಅನಲಿಟಿಕಾದ ಹಗರಣ ಹೊರಬರುತ್ತಿದ್ದಂತೆ, ಇಂಗ್ಲೆಂಡಿನ ಜನಪ್ರತಿನಿಧಿಗಳು ಎಸ್.ಸಿ.ಎಲ್. ಕಂಪೆನಿಯನ್ನು ತನಿಖೆಗೆ ಒಳಪಡಿಸುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಜೊತೆಗೆ ಇತ್ತೀಚೆಗೆ ನಡೆದ ಬ್ರೆಕ್ಸಿಟ್ ಮತದಾನ ಪ್ರಕ್ರಿಯೆಯಲ್ಲಿ ಎಸ್.ಸಿ.ಎಲ್. ಇಲ್ಲವೇ ಕೇಂಬ್ರಿಡ್ಜ್ ಅನಲಿಟಿಕಾ ಯಾವ ರೀತಿಯ ಪಾತ್ರ ನಿರ್ವಹಿಸಿತ್ತು ಎಂಬುದನ್ನು ಪರಿಶೀಲಿಸಿಬೇಕೆಂಬ ಧ್ವನಿಯು ಕೇಳಿಬರುತ್ತಿದೆ.

ಹಗರಣದೊಂದಿಗೆ ಹೊರಬಂದಿರುವ ಮಿಲಿಟರಿಯ ಈ ಯೋಜನೆಯ ಸುದ್ದಿಯು, ಆಧುನಿಕ ಬದುಕಿನ ಸಂಕೀರ್ಣತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ. ಪ್ರಾಜೆಕ್ಟ್ ಡ್ಯೂಕ್‌ನಲ್ಲಿ ಮನೋವಿಜ್ಞಾನಿಗಳು ಮತ್ತು ವರ್ತನಾ ವಿಶ್ಲೇಷಕರು ಭಾಗಿದಾರರಾಗಿದ್ದರು. ಯಾವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಅವರಿಗೆ ಅರಿವಿಲ್ಲದಂತೆ ಉದ್ದೇಶಿತ ರೀತಿಯಲ್ಲಿ ಪ್ರಭಾವಿತಗೊಳಿಸಬಹುದೆಂಬ ದಾರಿಗಳ ಹುಡುಕಾಟದಲ್ಲಿ ಪ್ರಾಜೆಕ್ಟ್ ಡ್ಯೂಕ್ ಮಗ್ನವಾಗಿತ್ತು. ಚಾಲ್ತಿಯಲ್ಲಿರುವ ಸುದ್ದಿಗಳ ಪ್ರಕಾರ ಈಗಲೂ ಈ ಕಾರ್ಯ ಮತ್ತೊಂದು ಸ್ವರೂಪದಲ್ಲಿ ಮುಂದುವರಿದಿದೆಯಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತವಾದ ಸರಕಾರವೇ ತನ್ನ ಆಲೋಚನೆಗಳನ್ನು ಹಿಂಬಾಗಿಲ ಮೂಲಕ ಪ್ರಜೆಗಳ ಮೇಲೆ ಹೇರುವ ಪ್ರಯತ್ನದಲ್ಲಿ ತೊಡಗಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಕೃತ್ಯದಲ್ಲಿ ಪ್ರಭುತ್ವ ತೊಡಗಿಕೊಳ್ಳುವ ಅನೇಕ ನಿದರ್ಶನಗಳು ನಮಗೆ ಇತಿಹಾಸದಲ್ಲಿ ದೊರೆಯುತ್ತವೆ.

ಹಿಂದೆ ಬಳಕೆಯಾಗುತ್ತಿದ್ದ ಇಂತಹ (ಕು)ತಂತ್ರಗಳು ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಏನೇನು ಅಲ್ಲ ಎನ್ನಬಹುದು. ಫೇಸ್‌ಬುಕ್‌ನಂತಹ ಜಾಲತಾಣಗಳು ಬಳಕೆದಾರನ ಮೇಲೆ ಎಲ್ಲ ರೀತಿಯಲ್ಲೂ ಪ್ರಭಾವಿತಗೊಳಿಸುವ ಅವಕಾಶ ನೀಡುತ್ತವೆ. ದೃಶ್ಯ ಮತ್ತು ಶ್ರಾವ್ಯ ಎರಡನ್ನು ಬಳಸಿ ಹೊಸದೊಂದು ಸತ್ಯವನ್ನೇ ಸೃಷ್ಟಿಸಿಬಿಡಬಹುದು. ಸುಳ್ಳೇ ಸತ್ಯವಾಗುವುದರ ಜೊತೆಗೆ, ಎಷ್ಟೇ ಪ್ರಯತ್ನಿಸಿದರೂ ಸತ್ಯಾಸತ್ಯೆಗಳನ್ನು ಪರಿಶೀಲಿಸುವ ಅವಕಾಶವೇ ಇಲ್ಲವಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ, ತೀರ ಇತ್ತೀಚೆಗೆ ಇಂತಹ ತಂತ್ರಜ್ಞಾನಗಳಿಗೆ ಜನರು ತೆರೆದುಕೊಳ್ಳುತ್ತಿರುವುದರಿಂದ, ಇವುಗಳ ಕುರಿತಾದ ವಿವೇಚನಾ ಸಾಮರ್ಥ್ಯ ಇನ್ನೂ ಪೂರ್ಣವಾಗಿ ಅವರಲ್ಲಿ ಬೆಳೆದಿಲ್ಲ.

ಶತಮಾನದ ಹಿಂದೆ ಸಿನೆಮಾ ಮಾಧ್ಯಮ ಚಾಲ್ತಿಗೆ ಬಂದಾಗ ಇಂತಹುದೇ ಪರಿಸ್ಥಿತಿ ಇರುತ್ತಿತ್ತು. ತೆರೆಯ ಮೇಲೆ ಕಾಣಿಸುವ ವ್ಯಕ್ತಿಗಳು ನೈಜವಲ್ಲ ಎಂದು ಅರಿಯದ ನೋಡುಗರು, ತೆರೆಯ ಮೇಲಿರುವವರನ್ನು ಮುಟ್ಟಲು ಹೋಗುವುದು ಮುಂತಾದ ಪ್ರಯತ್ನಗಳಲ್ಲಿ ತೊಡಗುತ್ತಿದ್ದರಂತೆ! ಪರದೆಯ ಮೇಲಿನ ಮಿಥ್ಯಾವಾಸ್ತವ ಪರಿಕಲ್ಪನೆ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಲು ದಶಕಗಳೇ ಬೇಕಾದಂತೆ, ಸಾಮಾಜಿಕ ಜಾಲತಾಣಗಳ ಮಿಥ್ಯಾವಾಸ್ತವದ ಅರಿವು ಮೂಡಲು ಇ್ನಷ್ಟು ಕಾಲಾವಕಾಶ ಬೇಕಿರುತ್ತದೆ.

ಮುಂದುವರಿದ ತಂತ್ರಜಾನವು, ಜನರ ಆಲೋಚನೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳನ್ನು ಮೊದಲಿಗಿಂತಲೂ ಸಾಕಷ್ಟು ವಿಸ್ತರಿಸಿದೆ. ಈಗ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲಿದೆ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಸ್ಮಾರ್ಟ್ ಫೋನ್‌ಗಳಲ್ಲಿ ಬಳಕೆಯಾಗುವಂತೆ ಮಾಡಲು ಬ್ರಾಡ್‌ಬ್ಯಾಂಡ್ ಸೌಲಭ್ಯ ಲಭ್ಯವಿದೆ. ಪರಿಣಾಮ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಸಾಧ್ಯತೆಗಳು ವಿಫುಲವಾಗಿವೆ. ಹಾಗಾಗಿ ಸರಕಾರ ಮೊದಲು ಯೋಚಿಸಿದ ತಂತ್ರವನ್ನೇ ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿ ಹಣಕ್ಕಾಗಿ ಯಾರಿಗೆ ಬೇಕಾದರೂ ಮಾರಲು ಮುಂದಾಗಿದೆ. ಎಲ್ಲಿಯವರೆಗೆ ಎಂದರೆ, ಭಾರತದಲ್ಲೂ ಇದು ತನ್ನ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಲು ಆರಂಭಿಸಿ ವರ್ಷಗಳೇ ಕಳೆದಿವೆ! ಇಲ್ಲಿ ಅದು ಯಾವ ಯಾವ ರೀತಿಯ ವ್ಯವಹಾರವನ್ನು ನಡೆಸಿದೆ ಎಂದು ಇನ್ನಷ್ಟೇ ಗೊತ್ತಾಗ ಬೇಕಿದೆ.

Writer - ಸದಾನಂದ ಆರ್.

contributor

Editor - ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ