ಅಣ್ಣಾ ಹಝಾರೆಯವರ ಎರಡನೇ ಸುತ್ತಿನ ಹೋರಾಟದ ಹಿಂದಿನ ಹತಾಶೆ!

Update: 2018-03-27 18:33 GMT

 ಅಷ್ಟೊಂದು ದೊಡ್ಡ ಹೋರಾಟ ಮಾಡಿ ಭಾಜಪಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದ ಹಝಾರೆಯವರು ಮನಸ್ಸು ಮಾಡಿದ್ದರೆ ಭಾಜಪದ ಕೇಂದ್ರ ಸರಕಾರವನ್ನು ಜುಟ್ಟು ಹಿಡಿದು ಕೇಳಬಹುದಿತ್ತು. ಆದರೆ ಹಝಾರೆಯವರು ಮೊನ್ನೆಯವರೆಗೂ ಮಾತಾಡಲಿಲ್ಲ. ಇದೀಗ ಭಾಜಪದ ಅಧಿಕಾರದ ಕೊನೆಯ ವರ್ಷದಲ್ಲಿ ಮತ್ತೆ ಲೋಕಪಾಲ್ ವಿಷಯವನ್ನಿಟ್ಟುಕೊಂಡು ರಾಮಲೀಲಾ ಮೈದಾನದಲ್ಲಿ ಉಪವಾಸ ಕೂತಿದ್ದಾರೆ.

2011ರಂತೆ ಈ ಬಾರಿಯ ನಮ್ಮ ಆಂದೋಲನಕ್ಕೆ ಮಾಧ್ಯಮಗಳು ಸೂಕ್ತ ಪ್ರಚಾರ ನೀಡುತ್ತಿಲ್ಲ

-ಅಣ್ಣಾ ಹಝಾರೆ!

 ಅಣ್ಣಾ ಹಝಾರೆಯವರ ಇದೊಂದು ಹೇಳಿಕೆ 2011ರಲ್ಲಿ ಅವರು ನಡೆಸಿದ ಅವರ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಮಾಧ್ಯಮಗಳು ತಮ್ಮ ಪ್ರಭುಗಳ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಲು ಹೇಗೆ ಬಳಸಿಕೊಂಡರೆಂಬ ಸತ್ಯವನ್ನು ತೆರೆದಿಟ್ಟಿದೆ.
 ಇದೇ ತಿಂಗಳ 23ನೇ ತಾರೀಕಿನಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಜನಲೋಕಪಾಲ್ ಮಸೂದೆಯ ಪ್ರಕಾರ ಲೋಕ್‌ಪಾಲರನ್ನು ನೇಮಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಮತ್ತೊಮ್ಮೆ ಪ್ರಾರಂಭಿಸಿರುವ ಹಝಾರೆಯವರಿಗೆ ಕೇವಲ ಮೂರು ದಿನಗಳಲ್ಲೇ ಸತ್ಯ ದರ್ಶನವಾದಂತಿದೆ. ಕೇವಲ 277ರ ಜನರ ತಂಡ ಮಾತ್ರ ಇವತ್ತು ಅವರ ಜೊತೆ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದು, ಸಾರ್ವಜನಿಕರು ಯಾರೂ ಅತ್ತ ತಲೆ ಹಾಕುತ್ತಿಲ್ಲ. ಇನ್ನು ಮಾಧ್ಯಮಗಳಂತೂ ಅಣ್ಣಾ ಹಝಾರೆಯವರ ಬಗ್ಗೆ ದಿವ್ಯನಿರ್ಲಕ್ಷ್ಯ ತೋರಿಸುತ್ತಿವೆ. ಏಳು ವರ್ಷಗಳ ಹಿಂದೆ ಹಝಾರೆಯವರ ಭ್ರಷ್ಟ್ಟಾಚಾರ ವಿರೋಧಿ ಆಂದೋಲನಕ್ಕೆ ಸಿಕ್ಕ ಪ್ರಚಾರವಾಗಲಿ-ಜನಬೆಂಬಲವಾಗಲಿ ಇಂದು ದೊರೆಯುತ್ತಿಲ್ಲವೆಂಬುದರ ಬಗ್ಗೆ ಹಝಾರೆಯವರು ಹತಾಶೆಯಿಂದ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ.
2011ರಲ್ಲಿ ಹಝಾರೆಯವರು ಜನಲೋಕಪಾಲ್ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರಾರಂಭಿಸಿದ ಹೋರಾಟಕ್ಕೆ ಆವತ್ತು ಮಾಧ್ಯಮಗಳು ಭರ್ಜರಿಯಾಗಿ ಪ್ರಚಾರ ನೀಡಿದ್ದವು. ಜೊತೆಗೆ ವಿರೋಧ ಪಕ್ಷ ಭಾಜಪ ಸಹ ತನ್ನ ಬೇಷರತ್ ಬೆಂಬಲ ಘೋಷಿಸಿ, ತಾನು ಭ್ರಷ್ಟಾಚಾರ ವಿರೋಧಿ ಪಕ್ಷವೆಂಬ ಭಾವನೆಯನ್ನು ಜನರಲ್ಲಿ ಮೂಡಿ ಸಲು ಪ್ರಯತ್ನಿಸಿತ್ತು. ಅವತ್ತು ಹಝಾರೆಯವರ ಬೆನ್ನಿಗೆ ನಿಂತಿದ್ದ ಬಹುತೇಕ ಮಾಧ್ಯಮಗಳೇನೂ ಹಝಾರೆಯವರ ಸಿದ್ಧ್ದಾಂತಗಳ ಬೆಂಬಲಕ್ಕೆ ನಿಂತಿರಲಿಲ್ಲ. ಬದಲಾಗಿ ಭಾಜಪದ ಬಲಪಂಥೀಯ ರಾಜಕೀಯಕ್ಕೆ ಶಕ್ತಿ ತುಂಬಲು ಮತ್ತು ಸ್ವದೇಶಿ ಕಾರ್ಪೊರೇಟ್ ಕಂಪೆನಿಗಳ ಮಾಲಕರ ಹಿತ ಕಾಯಲು, ತಮ್ಮ ದಣಿಗಳ ಆದೇಶದಂತೆ ಹಝಾರೆ ಯವರ ಹೋರಾಟವನ್ನು ಪ್ರಮುಖ ಸುದ್ದಿಯನ್ನಾಗಿಸಿ, ಅಂದಿನ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ವಿರುದ್ಧ ಜನಾಭಿಪ್ರಾಯ ಮೂಡಿಸಲು ಉತ್ಸುಕವಾಗಿದ್ದವು. ಹೀಗಾಗಿ ಅವತ್ತು ರಾಮಲೀಲಾ ಮೈದಾನವನ್ನೇ ತಮ್ಮ ತಾತ್ಕಾಲಿಕ ಸ್ಟುಡಿಯೋಗಳನ್ನಾಗಿ ಮಾಡಿಕೊಂಡ ಬಹುತೇಕ ಮಾಧ್ಯಮಗಳು ಹಝಾರೆಯವರನ್ನು ಹೀರೊ ಮಾಡಿದ್ದಲ್ಲದೆ ಅವರೊಂದಿಗಿದ್ದ ಅರವಿಂದ ಕೇಜ್ರಿವಾಲ್ ರನ್ನು, ಕಿರಣ್ ಬೇಡಿಯವರನ್ನು, ಬಾಬಾ ರಾಮದೇವ್ ಅವರನ್ನು ನೇತಾರರನ್ನಾಗಿ ಮಾಡಿ ಹಾಡಿಹೊಗಳಿದ್ದವು.
 ಆದರೆ ಇವತ್ತಿಗೆ ಆ ಹೋರಾಟ ಮುಗಿದು ಸರಿಸುಮಾರು ಏಳು ವರುಷಗಳಾಗಿವೆ. ಆ ಹೋರಾಟದ ನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತು, ಭಾಜಪಕ್ಕೆ ಜಾಗ ಬಿಟ್ಟುಕೊಡಬೇಕಾಯಿತು. ತನ್ನ ಮತೀಯವಾದದ ಮೂಲಕ ಮತ್ತು ಹಝಾರೆಯವರ ಆಂದೋಲನದ ಮೂಲಕ ಭ್ರಷ್ಟ್ಟಾಚಾರದ ವಿರುದ್ಧ ಮೂಡಿದ ಸಾರ್ವತ್ರಿಕ ಜನಾಭಿಪ್ರಾಯವನ್ನು ತನ್ನ ಪರವಾದ ಮತಗಳನ್ನಾಗಿ ಪರಿವರ್ತಿಸಿಕೊಂಡ ಭಾಜಪ ದಿಲ್ಲಿಯ ಅಧಿಕಾರದ ಗದ್ದುಗೆಯನ್ನು ಹಿಡಿಯಿತು. ತಿಂಗಳು ಗಟ್ಟಲೆ ಹೋರಾಟ ನಡೆಸಿದ ಹಝಾರೆಯವರು ತವರಿಗೆ ಮರಳಿದ ನಂತರ ದಿಲ್ಲಿಯಲ್ಲಿ ಭಾರೀ ಬದಲಾವಣೆಗಳು ನಡೆದು ಹೋದವು. ಅವರ ಜೊತೆ ಕೈಜೋಡಿಸಿದ್ದ ಕೇಜ್ರಿವಾಲ್‌ರು ತಮ್ಮದೇ ಆದ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿಕೊಂಡು ದಿಲ್ಲಿಯ ಮುಖ್ಯಮಂತ್ರಿಯಾದರು. ಕಿರಣ್‌ಬೇಡಿ ಭಾಜಪ ಸೇರಿ ಪುದುಚೇರಿಯ ರಾಜ್ಯಪಾಲೆಯಾದರು. ಇನ್ನು ಯೋಗ ಗುರು ಬಾಬಾ ರಾಮ್‌ದೇವ್ ಪತಂಜಲಿ ಸಂಸ್ಥೆಯ ಮೂಲಕ ಬಹುರಾಷ್ಟ್ರೀಯ ಕಂಪೆನಿ ಸ್ಥಾಪಿಸಿಕೊಂಡು ಭಾಜಪ ಸರಕಾರದ ಕೃಪಾಕಟಾಕ್ಷದಲ್ಲಿ ಉದ್ಯಮದಾರನಾಗಿ ಬೆಳೆಯುತ್ತ ಹೋದರು. ಹಝಾರೆಯವರ ಬೆನ್ನಿಗೆ ನಿಂತಿದ್ದ ಲಕ್ಷಾಂತರ ಹೋರಾಟಗಾರರು ಇನ್ನೇನು ಭಾಜಪ ಅದಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿದ್ದರಿಂದ ಈ ದೇಶ ಭ್ರಷ್ಟಾಚಾರ ಮುಕ್ತವಾಗಿ ಸ್ವರ್ಗವಾಗಿಬಿಡುತ್ತದೆಯೆಂಬ ನಂಬಿಕೆಯಿಂದ ಕಾಯುತ್ತ ಕೂತರು.
ಅಲ್ಲಿಂದಿಲ್ಲಿಗೆ ನಾಲ್ಕು ವರ್ಷಗಳು ಕಳೆದು ಹೋದವು. ಲೋಕಪಾಲರ ನೇಮಕದ ಬಗ್ಗೆ ಇವತ್ತಿಗೂ ಕೇಂದ್ರ ಸರಕಾರ ತುಟಿಬಿಚ್ಚಿಲ್ಲ. ಅಧಿಕಾರಕ್ಕೆ ಬಂದ ಮೂವತ್ತು ದಿನಗಳಲ್ಲಿ ಕಪ್ಪುಹಣ ತರುತ್ತೇನೆಂದು ಹೇಳಿದ ಪ್ರಧಾನಿಗೆ ಹತ್ತು ರೂಪಾಯಿಯನ್ನೂ ತರಲಾಗಲಿಲ್ಲ. ಹೊಸ ಉದ್ಯೋಗಗಳು ಸೃಷ್ಟಿಯಾಗಲಿಲ್ಲ. ಬದಲಿಗೆ ನೋಟು ಅಮಾನ್ಯ ಮತ್ತು ಜಿಎಸ್‌ಟಿಯಂತಹ ಕಾಯ್ದೆಗಳಿಂದ ಇದ್ದ ಉದ್ಯೋಗಗಳೂ ಜನರ ಕೈ ತಪ್ಪಿದವು. ಉದ್ಯೋಗ ರಹಿತರ ಸಂಖ್ಯೆ ಹೆಚ್ಚಾಗುತ್ತ ತಲಾ ಆದಾಯ ಪಾತಾಳಕ್ಕಿಳಿದು ಸಾಮಾನ್ಯಜನರ ಜೀವನ ನಿರ್ವಹಣೆ ದುಸ್ತರವಾಗುತ್ತ ಹೋಗುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ಇಂಡಿಯಾ ಐವತ್ತು ವರ್ಷಗಳ ಹಿಂದಕ್ಕೆ ಪ್ರಯಾಣ ಮಾಡಿದಂತೆ ಕಾಣುತ್ತಿದೆ. ನಮ್ಮ ರೈತರು ಆತ್ಮಹತ್ಯೆ ದಾರಿ ಹಿಡಿದು ಸಾಲಮನ್ನಾಕ್ಕೆ ಬೇಡಿಕೊಳ್ಳುತ್ತಿದ್ದರೆ, ಸರಕಾರ ದೊಡ್ಡ ಉದ್ಯಮಿಗಳ ನೂರಾರು ಲಕ್ಷ ಕೋಟಿಗಳ ಸಾಲಮನ್ನಾ ಮಾಡಿದೆ. ಈ ನಡುವೆ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ.
 ಆದರೆ ಈ ಅವಧಿಯಲ್ಲಿ ಅಣ್ಣಾ ಹಝಾರೆಯವರ ಬಾಯಿಂದ ಒಂದೇ ಒಂದು ಮಾತು ಬರಲಿಲ್ಲ. ಅಷ್ಟೊಂದು ದೊಡ್ಡ ಹೋರಾಟ ಮಾಡಿ ಭಾಜಪಕ್ಕೆ ಪರೋಕ್ಷವಾಗಿ ಸಹಾಯ ಮಾಡಿದ್ದ ಹಝಾರೆಯವರು ಮನಸ್ಸು ಮಾಡಿದ್ದರೆ ಭಾಜಪದ ಕೇಂದ್ರ ಸರಕಾರವನ್ನು ಜುಟ್ಟು ಹಿಡಿದು ಕೇಳಬಹುದಿತ್ತು. ಆದರೆ ಹಝಾರೆಯವರು ಮೊನ್ನೆಯವರೆಗೂ ಮಾತಾಡಲಿಲ್ಲ. ಇದೀಗ ಭಾಜಪದ ಅಧಿಕಾರದ ಕೊನೆಯ ವರ್ಷದಲ್ಲಿ ಮತ್ತೆ ಲೋಕಪಾಲ್ ವಿಷಯವನ್ನಿಟ್ಟುಕೊಂಡು ರಾಮಲೀಲಾ ಮೈದಾನದಲ್ಲಿ ಉಪವಾಸ ಕೂತಿದ್ದಾರೆ. ಮಾಧ್ಯಮಗಳು ಮೊದಲಿನ ಹಾಗೆ ತಮ್ಮ ಹೋರಾಟವನ್ನು ಮುಖ್ಯ ಸುದ್ದಿಯನ್ನಾಗಿ ನೋಡುತ್ತಿಲ್ಲ, ಮಾಡುತ್ತಿಲ್ಲವೆಂದು ಕೋಪಗೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಜನತೆ ಸಹ ಹಿಂದಿನ ಹಾಗೆ ಹೋರಾಟದಲ್ಲಿ ಭಾಗವಹಿಸುತ್ತಿಲ್ಲವೆಂದು ನೊಂದು ಕೊಂಡು ಮಾತಾಡಿದ್ದಾರೆ. ನಿಜ ಹಝಾರೆಯರ ಹತಾಶೆ ನ್ಯಾಯಯುತವಾದುದೇ. ಆದರೆ ಅದಕ್ಕೆ ಕಾರಣಗಳಿವೆ ಅವನ್ನು ಹಝಾರೆಯವರು ಅರ್ಥ ಮಾಡಿಕೊಳ್ಳಬೇಕು. ಕೆಲಮಟ್ಟಿಗೆ ಅದರಲ್ಲಿ ಅವರ ಪಾಲೂ ಇದೆ.
 ಮೊದಲನೆಯದಾಗಿ ಮಾಧ್ಯಮಗಳ ವಿಷಯ ನೋಡೋಣ: ಅವತ್ತು ಸಹ ಮಾಧ್ಯಮಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಕೈಲಿದ್ದು, ತಮ್ಮ ಮಾಲಕರ ಹಿತಾಸಕ್ತಿಗಳನ್ನು ಕಾಯಬಲ್ಲ ರಾಜಕೀಯ ಶಕ್ತಿಯೊಂದು ಅವರಿಗೆ ಬೇಕಿತ್ತು. ಮತೀಯವಾದಿ ಭಾಜಪ ಈ ಸ್ವದೇಶಿ ಬಂಡವಾಳ ಶಾಹಿಗಳ ಪರವಾಗಿತ್ತು. ಕಾಂಗ್ರೆಸ್‌ಗೆ ಪರ್ಯಾಯವಾಗಿ ಭಾಜಪಕ್ಕೆ ಶಕ್ತಿ ತುಂಬುವುದು ಅವತ್ತಿನ ಮಾಧ್ಯಮಗಳ ಅನಿವಾರ್ಯವಾಗಿತ್ತು. ಹೀಗಾಗಿ ಹಝಾರೆಯವರ ಹೋರಾಟಕ್ಕೆ ವ್ಯಾಪಕ ಪ್ರಚಾರವನ್ನು, ಅಂದಿನ ಕೆಂದ್ರ ಸರಕಾರದ ವಿರುದ್ಧದ ಅಪಪ್ರಚಾರವನ್ನು ಸಲೀಸಾಗಿ ಮಾಡುತ್ತ ಹೋದ ಮಧ್ಯಮಗಳು ಸಿನಿಕರಾಗುತ್ತಿದ್ದ ಜನತೆಯ ಗಮನವನ್ನು ಈ ಹೋರಾಟದ ಕಡೆ ಹರಿಯುವಂತೆ ಮಾಡಿ ಜನ ಸೇರಿಸುವಲ್ಲಿ ಯಶಸ್ವಿಯಾ ಗಿದ್ದವು. ಹೀಗಾಗಿ ಹಝಾರೆಯವರ 2011ರ ಹೋರಾಟ ಮಿತಿಮೀರಿದ ಪ್ರಚಾರವನ್ನು ಗಿಟ್ಟಿಸಿಕೊಂಡಿತು.
ನಂತರದಲ್ಲಿ ಭಾಜಪ ಅಧಿಕಾರಕ್ಕೆ ಏರಿದ ಬಳಿಕ ಹೋರಾಟದ ಅಗತ್ಯ ಭಾಜಪಕ್ಕಾಗಲಿ, ಬಂಡವಾಳಶಾಹಿ ಗಳಿಗಾಗಲಿ ಇರಲಿಲ್ಲ. ಇನ್ನು ಮಾಧ್ಯಮಗಳಿಗೇನು? ಮಾರುಕಟ್ಟೆ ಖಾಲಿಯಾದ ಕಡೆ ಕೂತರೆ ಕಸ ಹೊಡೆಯಬೇಕಾಗುತ್ತದೆಯೆಂಬ ಅರಿವಿನೊಂದಿಗೆ ಮೋದಿಯವರ ಭಜನೆ ಶುರು ಹಚ್ಚಿಕೊಂಡು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳತೊಡಗಿದವು.
ಇಂಡಿಯಾದ ಜನತೆ ಎಂದಿನ ತಮ್ಮ ಸಹನೆಯೊಂದಿಗೆ ದಿಲ್ಲಿಯತ್ತ ಕಣ್ಣು ನೆಟ್ಟು ಒಳ್ಳೆಯ ದಿನಗಳಿಗಾಗಿ ಕಾಯ ಹತ್ತಿದರು. ನಾಲ್ಕು ವರ್ಷಗಳ ತರುವಾಯವೂ ಜನ ಕಾಯುತ್ತಲೇ ಇದ್ದರೆ ಅದಕ್ಕೆ ಕಾರಣ ಮತ್ತೆ ಮಾಧ್ಯಮದವರೇ. ಸರಕಾರದ ಪ್ರತೀ ವೈಫಲ್ಯಕ್ಕೂ ಒಂದೊಂದು ಕಾರಣಗಳನ್ನು ನೀಡುತ್ತ ಕೇಂದ್ರ ಸರಕಾರವನ್ನು ರಕ್ಷಿಸುತ್ತ ಬರುತ್ತಿದ್ದಾರೆ. ಇದೀಗ ಜನರ ಸಹನೆ ಮುಗಿಯುತ್ತಿರುವಂತೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಹಝಾರೆಯವರು ದಿಲ್ಲಿಗೆ ಬಂದು ಸತ್ಯಾಗ್ರಹಕ್ಕೆ ಕೂತಿದ್ದಾರೆ. ಹಿಂದಿನ ಹೋರಾಟದ ಫಲಶೃತಿಗಳನ್ನು ಕಂಡಿರುವ ಜನತೆ ದೂರವೇ ನಿಂತು ನೋಡುತ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಮತ್ತೆ ಮೂರ್ಖರಾಗಲು ಅವರು ತಯಾರಿದ್ದಂತೆ ಕಾಣುತ್ತಿಲ್ಲ. ಇನ್ನು ಉನ್ನತ ಶಿಕ್ಷಣ ಮುಗಿಸಿದ ಹಲವು ಮೇಲ್ವರ್ಗದ ಯುವಪೀಳಿಗೆ 2011ರಲ್ಲಿ ಬಹಳ ಸಕ್ರಿಯವಾಗಿ ಹೋರಾಟದಲ್ಲಿ ಭಾಗವಹಿಸಿತ್ತು. ಆ ವರ್ಗಕ್ಕೂ ಬೇಕಿದ್ದು ಬಲಪಂಥೀಯ ಭಾಜಪವನ್ನು ಅಧಿಕಾರಕ್ಕೆ ತರಬೇಕೆಂಬುದೇ ಆಗಿತ್ತು. ಹಾಗಾಗಿ ಈಗ ಆ ವರ್ಗವೂ ಮೌನವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದ ಅಥವಾ ಅರ್ಥವಾದರೂ ಅರ್ಥವಾದಂತೆ ತೋರಿಸಿಕೊಳ್ಳದ ಅಣ್ಣಾ ಹಝಾರೆಯವರು ಹತಾಶೆಯ ಮಾತುಗಳನ್ನು ಆಡುತ್ತಿದ್ದಾರೆ. ಅವರ ಈ ಇಳಿವಯಸ್ಸಿನ ಹತಾಶೆಯಲ್ಲಿ ನ್ಯಾಯವಿದೆಯಾದರೂ, ಇವತ್ತಿನ ಹೋರಾಟದ ಉದ್ದೇಶಗಳೇ ಬೇರೆ ಇವೆ ಮತ್ತು ಹೋರಾಟ ಹುಟ್ಟಬೇಕಾದ ಮೂಲವೂ ಬೇರೆಯದೇ ಇದೆ. ಪ್ರಭುತ್ವದ ವಿರುದ್ಧ ಅಂತಹ ಹೋರಾಟ ಸಮಾಜದ ಕೆಳಸ್ತರಗಳಿಂದ ಮಾತ್ರ ಹುಟ್ಟಲು ಸಾಧ್ಯ!

Writer - ಕು.ಸ.ಮದುಸೂಧನ ನಾಯರ್

contributor

Editor - ಕು.ಸ.ಮದುಸೂಧನ ನಾಯರ್

contributor

Similar News

ಜಗದಗಲ
ಜಗ ದಗಲ