ಮೂಲವ್ಯಾಧಿ ಕಾಡುತ್ತಿದೆಯೇ...? ಈ ಮನೆಮದ್ದುಗಳನ್ನು ಬಳಸಿ ನೋಡಿ

Update: 2018-03-28 11:23 GMT

 ಮೂಲವ್ಯಾಧಿ ತೀವ್ರ ಯಾತನೆಯನ್ನು ನೀಡುವುದರೊಂದಿಗೆ ರೋಗಿಗೆ ತೀವ್ರ ಮುಜುಗರವನ್ನುಂಟು ಮಾಡುವ ಅಸಹನೀಯ ರೋಗವಾಗಿದೆ. ಮೂಲವ್ಯಾಧಿಯಿಂದ ನರಳುತ್ತಿರುವ ಅದೆಷ್ಟೋ ಜನರು ನಾಚಿಕೆಯಿಂದ ವೈದ್ಯರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುವುದೇ ಇಲ್ಲ. ಮೂಲವ್ಯಾಧಿ ಯುಂಟಾದಾಗ ಗುದದ್ವಾರದೊಳಗೆ ಮತ್ತು ಸುತ್ತ ಮೊಳಕೆಗಳು ಕಾಣಿಸಿಕೊಳ್ಳುತ್ತವೆ. ಇವು ಗಂಭೀರ ಸಮಸ್ಯೆಯಲ್ಲ ಎಂದು ಪರಿಗಣಿಸಲಾಗಿದ್ದು, ಸಾಮಾನ್ಯವಾಗಿ ತಮ್ಮಷ್ಟಕ್ಕೆ ಮಾಯವಾಗು ತ್ತವೆಯಾದರೂ ತೀವ್ರ ಯಾತನೆಯನ್ನುಂಟು ಮಾಡುತ್ತವೆ. ಕೆಲವೊಮ್ಮೆ ಇವುಗಳನ್ನು ನಿವಾರಿಸಲು ಶಸ್ತ್ರಚಿಕಿತ್ಸೆಯೂ ಅಗತ್ಯವಾಗುತ್ತದೆ. ಮೂಲವ್ಯಾಧಿ ಸಾಮಾನ್ಯವಾಗಿ ವ್ಯಕ್ತಿಯ 45ರಿಂದ 65 ವರ್ಷ ಪ್ರಾಯದ ನಡುವೆ ಕಾಣಿಸಿಕೊಳ್ಳುತ್ತದೆ.

ಮೂಲವ್ಯಾಧಿಯು ಗುದದ್ವಾರ ಮತ್ತು ಗುದನಾಳದಲ್ಲಿಯ ರಕ್ತನಾಳಗಳು ಬಾತುಕೊಂಡು ಉರಿಯೂತಕ್ಕೆ ಗುರಿಯಾದಾಗ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ. ಕುಟುಂಬದ ಇತಿಹಾಸ, ಭಾರ ಎತ್ತುವಿಕೆ, ಮಲಬದ್ಧತೆ, ಆಹಾರದ ಅಲರ್ಜಿ, ಕಡಿಮೆ ನಾರಿರುವ ಆಹಾರ ಸೇವನೆ, ಬೊಜ್ಜು, ಗರ್ಭಧಾರಣೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ದೀರ್ಘಕಾಲ ಕುಳಿತುಕೊಂಡು ಅಥವಾ ನಿಂತುಕೊಂಡು ಕೆಲಸ ಮಾಡುವುದು ಇವು ಮೂಲವ್ಯಾಧಿಯನ್ನುಂಟು ಮಾಡಬಹುದು.

ವಂಶವಾಹಿ ಅಂಶಗಳೂ ಮೂಲವ್ಯಾಧಿಯೊಂದಿಗೆ ಗುರುತಿಸಿ ಕೊಂಡಿದ್ದು, ವ್ಯಕ್ತಿಯು ಬೆಳೆಯುತ್ತ ಹೋದಂತೆ ಮೂಲವ್ಯಾಧಿಯ ಅಪಾಯವೂ ಹೆಚ್ಚುತ್ತದೆ. ಗುದದ್ವಾರದ ಸುತ್ತ ರಕ್ತ ಹೆಪ್ಪುಗಟ್ಟುವಿಕೆ, ಮಲವಿಸರ್ಜನೆಯ ಹೊತ್ತಿಗೆ ರಕ್ತಸ್ರಾವ, ಗುದದ್ವಾರದ ಪ್ರದೇಶದಲ್ಲಿ ಕೆರಳುವಿಕೆ ಇತ್ಯಾದಿಗಳು ಮೂಲವ್ಯಾಧಿಯ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಮೂಲವ್ಯಾಧಿಯಿಂದ ಪಾರಾಗಲು ನೈಸರ್ಗಿಕ ಮನೆಮದ್ದುಗಳನ್ನು ಬಳಸಬಹುದಾಗಿದ್ದು, ಅವುಗಳ ಮಾಹಿತಿಯಿಲ್ಲಿದೆ......

► ಅಲೊವೇರಾ

ಅಲೊವೇರಾ ಉರಿಯೂತ ನಿರೋಧಕ ಮತ್ತು ಚಿಕಿತ್ಸಾ ಗುಣಗಳನ್ನು ಹೊಂದಿದೆ. ಇದು ಮೊಳಕೆಗಳ ಕೆರಳುವಿಕೆಯನ್ನು ತಗ್ಗಿಸಲು ನೆರವಾಗುತ್ತದೆ. ಗುದದ್ವಾರದ ಭಾಗಕ್ಕೆ ಸ್ವಲ್ಪ ಅಲೊವೇರಾ ಜೆಲ್ ಅನ್ನು ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿಕೊಂಡರೆ ನೋವು ಮತ್ತು ಉರಿಯಿಂದ ಮುಕ್ತಿ ಪಡೆಯಬಹುದು.

► ಲಿಂಬೆರಸ

ಲಿಂಬೆರಸವು ಲೋಮನಾಳಗಳು ಮತ್ತುರಕ್ತನಾಳಗಳ ಭಿತ್ತಿಗಳನ್ನು ಬಲಗೊಳಿಸುವ ಮೂಲಕ ಮೂಲವ್ಯಾಧಿಯ ನೋವಿನಿಂದ ನೆಮ್ಮದಿಯನ್ನೊದಗಿಸುವ ವಿವಿಧ ಪೌಷ್ಟಿಕಾಂಶ ಗಳನ್ನು ಒಳಗೊಂಡಿದೆ. ಅರ್ಧ ಲಿಂಬೆ ಹಣ್ಣಿನ ರಸವನ್ನು ಒಂದು ಕಪ್ ಬಿಸಿನೀರಿಗೆ ಸೇರಿಸಿ ಪ್ರತಿ ಮೂರು ಗಂಟೆಗಳಿಗೊಮ್ಮೆ ಸೇವಿಸಿದರೆ ಉತ್ತಮ ಪರಿಣಾಮವನ್ನು ನೀಡುತ್ತದೆ.

► ಆಲಿವ್ ಎಣ್ಣೆ

 ಆಲಿವ್ ಎಣ್ಣೆಯು ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನೊಳಗೊಂಡಿದೆ. ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸರಳ ಮದ್ದಾಗಿರುವ ಇದು ತನ್ಮೂಲಕ ಉರಿಯೂತವನ್ನು ತಗ್ಗಿಸಲು ನೆರವಾಗುತ್ತದೆ. ಇದಕ್ಕಾಗಿ ಪ್ರತಿದಿನ ಒಂದು ಚಮಚ ಆಲಿವ್ ಎಣ್ಣೆಯನ್ನು ಸೇವಿಸಿ.

► ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ಅಂಗಾಂಶಗಳು ಆಳವಾಗಿ ಹೀರಿಕೊಳ್ಳುತ್ತವೆ ಮತ್ತು ಇದು ಮೂಲವ್ಯಾಧಿಗೆ ಉತ್ತಮ ಚಿಕಿತ್ಸೆಯಾಗಿದೆ. ಹತ್ತಿಯ ಉಂಡೆಯೊಂದನ್ನು ಬಾದಾಮಿ ಎಣ್ಣೆಯಲ್ಲಿ ನೆನೆಸಿ ಪೀಡಿತ ಭಾಗದಲ್ಲಿ ಹಚ್ಚಿ. ಇದನ್ನು ದಿನಕ್ಕೆ ಹಲವಾರು ಬಾರಿ ಮಾಡಬೇಕು.

► ಇಡಿಯ ಧಾನ್ಯಗಳು

ಇಡಿಯ ಧಾನ್ಯಗಳು ಅಧಿಕ ಪ್ರಮಾಣದಲ್ಲಿ ನಾರನ್ನು ಹೊಂದಿದ್ದು, ಇದು ಮೂಲವ್ಯಾಧಿಯ ಲಕ್ಷಣಗಳಿಂದ ಮತ್ತು ರಕ್ತಸ್ರಾವದಿಂದ ಪಾರಾಗುವಲ್ಲಿ ಪರಿಣಾಮಕಾರಿಯಾಗಿದೆ. ಓಟ್ಸ್, ಬಾರ್ಲಿ, ಮೆಕ್ಕೆ ಜೋಳ, ಕಂದು ಅಕ್ಕಿ, ಸಿರಿಧಾನ್ಯಗಳಂತಹ ನಾರು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ.

► ಆ್ಯಪಲ್ ಸಿಡರ್ ವಿನೆಗರ್

ಆ್ಯಪಲ್ ಸಿಡೆರ್ ವಿನೆಗರ್ ಸಂಕೋಚಕ ಗುಣಗಳನ್ನು ಹೊಂದಿದ್ದು, ಇದು ಬಾತುಕೊಂಡ ರಕ್ತನಾಳಗಳನ್ನು ಕುಗ್ಗಿಸಿ ಊತ ಮತ್ತು ಕೆರಳುವಿಕೆಯಿಂದ ಬಿಡುಗಡೆಗೊಳಿಸಲು ನೆರವಾಗುತ್ತದೆ. ಒಂದು ಚಮಚ ಆ್ಯಪಲ್ ಸಿಡರ್ ವಿನೆಗರ್‌ನ್ನು ಒಂದು ಗ್ಲಾಸ್ ನೀರಿಗೆ ಸೇರಿಸಿಕೊಂಡು ದಿನಕ್ಕೆರಡು ಬಾರಿ ಸೇವಿಸಿ.

► ತ್ರಿಫಲ ಚೂರ್ಣ

ಮೊಳಕೆಗಳ ಬೆಳವಣಿಗೆಯನ್ನು ತಡೆಯಲು ತ್ರಿಫಲ ಚೂರ್ಣವನ್ನು ನಿಯಮಿತವಾಗಿ ಸೇವಿಸಬೇಕು. ನಾಲ್ಕು ಗ್ರಾಂ ಚೂರ್ಣವನ್ನು ಒಂದು ಕಪ್ ಬಿಸಿನೀರಿಗೆ ಸೇರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸಿ.

► ಬ್ಲಾಕ್ ಟೀ ಬ್ಯಾಗ್

ಚಹಾ ನೈಸರ್ಗಿಕ ಸಂಕೋಚಕವಾಗಿರುವ ಟ್ಯಾನಿಕ್ ಆ್ಯಸಿಡ್‌ನ್ನು ಒಳಗೊಂಡಿದ್ದು, ಇದು ಮೂಲವ್ಯಾಧಿಯ ನೋವು ಮತ್ತು ಬಾವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಂದು ಬ್ಲಾಕ್ ಟೀ ಬ್ಯಾಗ್‌ನ್ನು ಬಿಸಿನೀರಿನಲ್ಲಿ ಮುಳುಗಿಸಿ ನಂತರ ಹೊರತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ಬೆಚ್ಚಗಿನ, ನೆನೆದ ಟೀ ಬ್ಯಾಗ್‌ನ್ನು 10 ನಿಮಿಷಗಳ ಕಾಲ ಬಾತುಕೊಂಡಿರುವ ರಕ್ತನಾಳಗಳ ಮೇಲಿರಿಸಿ. ಹೀಗೆ ದಿನಕ್ಕೆರಡು ಬಾರಿ ಮಾಡಿ.

► ನೀರು

ಆಂತರಿಕ ಅಥವಾ ಬಾಹ್ಯ ಮೊಳಕೆಗಳ ನೋವಿನಿಂದ ನರಳುತ್ತಿರುವಾಗ ಯಥೇಚ್ಛವಾಗಿ ನೀರನ್ನು ಸೇವಿಸಿ. ಪ್ರತಿದಿನ 8ರಿಂದ 10 ಗ್ಲಾಸ್ ನೀರನ್ನು ಸೇವಿಸಲು ಪ್ರಯತ್ನಿಸಿ. ಹೆಚ್ಚು ನೀರಿನ ಸೇವನೆ ಶರೀರದ ಆಂತರಿಕ ವ್ಯವಸ್ಥೆಯ್ನು ಶುದ್ಧೀಕರಿಸುವ ಜೊತೆಗೆ ಇಡೀ ಶರೀರವನ್ನು ಜಲೀಕರಿಸುತ್ತದೆ. ಅದು ಕರುಳಿನ ಚಲನವಲನಗಳಿಗೆ ನೆರವಾಗುವ ಜೊತೆಗೆ ಮಲವು ಗಟ್ಟಿಯಾಗಿರದಂತೆ ನೋಡಿಕೊಳ್ಳುತ್ತದೆ.

► ಎಪ್ಸಮ್ ಸಾಲ್ಟ್

ಎಪ್ಸಮ್ ಸಾಲ್ಟ್ ಬೆರೆತ ಬಿಸಿನೀರಿನ ಸ್ನಾನದಿಂದ ಮೊಳಕೆಗ ಳಿಂದಾಗುವ ಕೆರಳುವಿಕೆಯು ಶಮನಗೊಳ್ಳುತ್ತದೆ. ಅದು ಮ್ಯಾಗ್ನೀಷಿಯಂ ಸಲ್ಫೇಟ್‌ನ್ನು ಒಳಗೊಂಡಿರುವುದರಿಂದ ನೋವನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಪ್ರತಿ ಬಾರಿ ಮಲವಿಸರ್ಜನೆಯ ಬಳಿಕ 20 ನಿಮಿಷಗಳ ಕಾಲ ಈ ನೀರಿನಿಂದ ಸ್ನಾನ ಮಾಡಿದರೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News