‘ಸ್ವತಂತ್ರ ಬಲೂಚಿಸ್ತಾನ’ಕ್ಕೆ ಭಾರತದ ಸ್ಥಿರ ಬೆಂಬಲ: ಬಲೂಚ್ ಕಾರ್ಯಕರ್ತರ ಕೋರಿಕೆ

Update: 2018-03-28 17:53 GMT

 ಟೊರಾಂಟೊ (ಕೆನಡ), ಮಾ. 28: ಸ್ವತಂತ್ರ ಬಲೂಚಿಸ್ತಾನ ಆಂದೋಲನಕ್ಕೆ ಭಾರತ ಸ್ಥಿರ ಬೆಂಬಲ ನೀಡಬೇಕೇ ಹೊರತು, ಅದನ್ನು ಕಾಶ್ಮೀರದ ಗಾಜಿನಿಂದ ನೋಡಬಾರದು ಅಥವಾ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಪ್ರಯತ್ನಗಳನ್ನು ಎದುರಿಸುವ ವಿಧಾನವಾಗಿ ಪರಿಗಣಿಸಬಾರದು ಎಂದು ಸ್ವತಂತ್ರ ಬಲೂಚಿಸ್ತಾನ ಕಾರ್ಯಕರ್ತರು ಹೇಳಿದ್ದಾರೆ.

ಬಲೂಚಿಸ್ತಾನ ಪ್ರಾಂತವನ್ನು ಪಾಕಿಸ್ತಾನ ‘ಅಕ್ರಮವಾಗಿ ಆಕ್ರಮಿಸಿದ’ 70ನೇ ವಾರ್ಷಿಕ ದಿನವನ್ನು ಆಚರಿಸಲು ‘ಬಲೂಚ್ ಕೆನಡಿಯನ್ಸ್’ ಮಂಗಳವಾರ ಕೆನಡದ ಟೊರಾಂಟೊದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.

ಸ್ವತಂತ್ರ ದೇಶವಾಗಬೇಕಾಗಿದ್ದ ಬಲೂಚಿಸ್ತಾನವನ್ನು ಪಾಕಿಸ್ತಾನ 1948 ಮಾರ್ಚ್ 27ರಂದು ಬಲ ಪ್ರಯೋಗಿಸಿ ವಶಪಡಿಸಿಕೊಂಡಿತು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೇಳಿದರು.

ಬಲೂಚಿಸ್ತಾನ ವಿವಾದದ ಘನತೆಯನ್ನು ಹೆಚ್ಚಿಸಲು ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಮಾಡಿರುವ ಪ್ರಯತ್ನಗಳನ್ನು ಬಲೂಚ್ ಕಾರ್ಯಕರ್ತರು ಶ್ಲಾಘಿಸಿದರು.

ಜಿನೇವದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಈ ವಿಷಯವನ್ನು ಭಾರತ ಪ್ರಸ್ತಾಪಿಸಿರುವುದನ್ನು ಅವರು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News