'ಅದ್ಭುತ ಪಾನೀಯ' ಸೀಯಾಳದ ಅಡ್ಡಪರಿಣಾಮಗಳು ಏನೇನು ಗೊತ್ತಾ?

Update: 2018-03-29 10:32 GMT

ಸೀಯಾಳದ ನೀರಿನ ಆರೋಗ್ಯಲಾಭಗಳ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತು, ಆದರೆ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿದರೆ ನೀವು ಖಂಡಿತ ದಿಗ್ಭ್ರಮೆಗೊಳ್ಳುತ್ತೀರಿ.

ಪೆಸಿಫಿಕ್ ದ್ವೀಪದ ಮೂಲನಿವಾಸಿಗಳು ಸಾಂಪ್ರದಾಯಿಕವಾಗಿ ಸೀಯಾಳವನ್ನು ಕುಡಿಯುವ ನೀರನ್ನಾಗಿ ಬಳಸುತ್ತಿದ್ದರು ಎನ್ನುವುದು ನಿಮಗೆ ಗೊತ್ತೇ? ಇಂದು ಸೀಯಾಳದ ನೀರನ್ನು ಕ್ರೀಡಾಪಟುಗಳೂ ಬಳಸುತ್ತಿದ್ದಾರೆ, ಅದು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೈಸರ್ಗಿಕ ಜೀರ್ಣಕಾರಕ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ.

 ಸೀಯಾಳದ ನೀರು ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಫೊಲೇಟ್, ಸಿಲೆನಿಯಂ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್‌ಗಳ ಸಮೃದ್ಧ ಮೂಲವಾಗಿದೆ. ಜೊತೆಗೆ ಶರೀರಕ್ಕೆ ಶಕ್ತಿಯನ್ನು ಒದಗಿಸುವ ಎಲೆಕ್ಟ್ರೋಲೈಟ್‌ಗಳನ್ನೂ ಒಳಗೊಂಡಿದೆ.

ಸೀಯಾಳದ ನೀರನ್ನು ಅದ್ಭುತ ಪಾನೀಯವೆಂಂದು ಪರಿಗಣಿಸಲಾಗಿದೆಯಾದರೂ ಅದನ್ನು ಕುಡಿಯುವ ಮುನ್ನ ನಾವು ಪರಿಗಣಿಸಲೇಬೇಕಾದ ಕೆಲವು ವಿಷಯಗಳಿವೆ.

ಇಲ್ಲಿದೆ ಸೀಯಾಳದ ನೀರಿನ ಕೆಲವು ಅಡ್ಡಪರಿಣಾಮಗಳ ಕುರಿತು ಮಾಹಿತಿ....

► ಅದು ಸೋಡಿಯಂ ಮಟ್ಟವನ್ನು ವ್ಯತ್ಯಯಗೊಳಿಸುತ್ತದೆ

ಒಂದು ಕಪ್ ತಾಜಾ ಸೀಯಾಳದ ನೀರು 252 ಮಿ.ಗ್ರಾಂ ಸೋಡಿಯಂ ಅನ್ನು ಒಳಗೊಂಡಿರುತ್ತದೆ. ಹೆಚ್ಚಿನವರಿಗೆ ಇದರಿಂದ ಯಾವುದೇ ಸಮಸ್ಯೆಯಾಗದಿರಬಹುದು, ಆದರೆ ಹೆಚ್ಚಿನ ರಕ್ತದೊತ್ತಡ ಅಥವಾ ಹೃದ್ರೋಗವಿರುವವರು ಸೀಯಾಳದ ನೀರಿನಿಂದ ದೂರವಿರಬೇಕು ಅಥವಾ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

► ಅಲರ್ಜಿಯಿರುವವರಿಗೆ ಒಳ್ಳೆಯದಲ್ಲ

ಕೆಲವು ಜನರಿಗೆ ಕೆಲವು ಆಹಾರಗಳು ಮತ್ತು ಪಾನೀಯಗಳು ಅಲರ್ಜಿಯನ್ನುಂಟು ಮಾಡುತ್ತವೆ. ಸೀಯಾಳದ ನೀರು ಕೂಡ ಕೆಲವರಿಗೆ ಅಲರ್ಜಿಯನ್ನುಂಟು ಮಾಡಬಹುದು.

► ಅದು ಮೂತ್ರವರ್ಧಕ ಗುಣವನ್ನು ಹೊಂದಿದೆ

ಅತಿಯಾಗಿ ಸೀಯಾಳದ ನೀರನ್ನು ಸೇವಿಸುವುದರಿಂದ ಆಗಾಗ್ಗೆ ಮೂತ್ರ ವಿಸರ್ಜನೆಗೆ ಧಾವಿಸಬೇಕಾಗುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ನೈಸರ್ಗಿಕ ಮೂತ್ರವರ್ಧಕವಾಗಿದ್ದು, ಶರೀರದಿಂದ ನೀರನ್ನು ಹೊರಹಾಕಲು ಮೂತ್ರಪಿಂಡಗಳಿಗೆ ನೆರವಾಗುತ್ತದೆ. ಅತಿಯಾದ ಸೀಯಾಳದ ನೀರಿನ ಸೇವನೆಯಿಂದಾಗಿ ಹೆಚ್ಚುವರಿ ನೀರನ್ನು ಹೊರಗೆ ಹಾಕಲು ಮೂತ್ರಪಿಂಡಗಳು ಹೆಚ್ಚು ಶ್ರಮಿಸಬೇಕಾಗುತ್ತದೆ.

► ಅಧಿಕ ಸಕ್ಕರೆ

ಸೀಯಾಳದ ನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿದೆ ಎಂದು ಜನರು ಭಾವಿಸಿರುವುದರಿಂದ ಇತರ ರಸಗಳಿಗೆ ಬದಲಾಗಿ ಅದನ್ನು ಸೇವಿಸುತ್ತಾರೆ. ಒಂದು ಕಪ್ ಸೀಯಾಳದ ನೀರಿನಲ್ಲಿ 6.26 ಗ್ರಾಂ ಸಕ್ಕರೆ ಇರುತ್ತದೆ. ಹೀಗಾಗಿ ಮಧುಮೇಹಿಗಳು ಅದನ್ನು ಸೇವಿಸುವ ಗೋಜಿಗೆ ಹೋಗಬಾರದು.

► ಅದು ವಿರೇಚಕವೂ ಆಗಬಹುದು

ಅತಿಯಾಗಿ ಸೀಯಾಳದ ನೀರಿನ ಸೇವನೆ ಅಪಾಯಕಾರಿಯಾಗಬಹುದು. ಅದು ನೈಸರ್ಗಿಕ ವಿರೇಚಕವಾಗಿರುವುದರಿಂದ ನಿಮ್ಮ ಜೀರ್ಣ ವ್ಯವಸ್ಥೆಯ ಮೇಲೆ ವಿರೇಚಕ ಪರಿಣಾಮಗಳನ್ನು ಬೀರಬಹುದು. ಮಲ ವಿಸರ್ಜನೆಯ ಒತ್ತಡವನ್ನು ನಿಯಂತ್ರಿಸಲಾ ಗದವರು ಹೆಚ್ಚು ಸೀಯಾಳದ ನೀರನ್ನು ಸೇವಿಸಬಾರದು.

► ಅದು ರಕ್ತದೊತ್ತಡವನ್ನು ತಗ್ಗಿಸಬಹುದು

ಅತಿಯಾಗಿ ಸೀಯಾಳದ ನೀರಿನ ಸೇವನೆ ರಕ್ತದೊತ್ತಡವನ್ನು ತಗ್ಗಿಸಬಹುದು. ಹೀಗಾಗಿ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ಸೀಯಾಳದ ನೀರಿನ ಸೇವನೆಯ ವಿಷಯದಲ್ಲಿ ಜಾಗರೂಕರಾಗಿರಬೇಕು.

► ಎಲೆಕ್ಟ್ರೋಲೈಟ್ ಅಸಮತೋಲನದ ಅಪಾಯ

ಅತಿಯಾದ ಸೀಯಾಳದ ನೀರಿನ ಸೇವನೆಯು ಹೈಪರ್‌ಕಲೇಮಿಯಾಕ್ಕೆ ಅಂದರೆ ಶರೀರದಲ್ಲಿನ ಪೊಟ್ಯಾಷಿಯಂ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಲು ಕಾರಣವಾಗು ವುದರಿಂದ ಮಾರಣಾಂತಿಕವೂ ಆಗಬಹುದು. ಹೈಪರ್‌ಕಲೇಮಿಯಾ ನಿಶ್ಶಕ್ತಿ, ತಲೆ ಸುತ್ತುವಿಕೆ ಮತ್ತು ಪ್ರಜ್ಞೆ ತಪ್ಪುವುದಕ್ಕೆ ಕಾರಣವಾಗುತ್ತದೆ. ನೀವು ಶ್ರಮದ ಕೆಲಸದ ಅಥವಾ ವ್ಯಾಯಾಮದ ಬಳಿಕ ಸೀಯಾಳದ ನೀರನ್ನು ಕುಡಿಯುವವರಾದರೆ ಅದರ ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

► ಪ್ಯಾಕೇಜ್ಡ್ ನೀರಿನಲ್ಲಿ ಹೆಚ್ಚಿನ ಕ್ಯಾಲೊರಿಗಳು

ಪ್ಯಾಕೇಜ್ಡ್ ಸೀಯಾಳದ ನೀರಿಗೆ ಹೋಲಿಸಿದರೆ ತಾಜಾ ಸೀಯಾಳದ ನೀರು ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಪ್ರತಿ ಕಪ್ ಸೀಯಾಳದ ನೀರಿನಲ್ಲಿ 46 ಕ್ಯಾಲೊರಿ ರುತ್ತವೆ. ಆದರೆ ಪ್ಯಾಕೇಜ್ಡ್ ಅಥವಾ ಸೀಲ್ಡ್ ಬಾಟ್ಲಿಗಳಲ್ಲಿರುವ ಸಂಸ್ಕರಿತ ಸೀಯಾಳದ ನೀರು ಪ್ರತಿ ಕಪ್‌ನಲ್ಲಿ 92 ಕ್ಯಾಲೊರಿಗಳನ್ನು ಒಳಗೊಂಡಿದ್ದು, ಇದು ಶರೀರದ ತೂಕ ಹೆಚ್ಚಾಗಲು ನೆರವಾಗುತ್ತದೆ. ಹೀಗಾಗಿ ಪ್ಯಾಕೇಜ್ಡ್ ಸೀಯಾಳದ ನೀರಿಗಿಂತ ತಾಜಾ ಸೀಯಾಳದ ನೀರನ್ನೇ ಸೇವಿಸಿ.

► ಅಥ್ಲಿಟ್‌ಗಳಿಗೆ ಒಳ್ಳೆಯದಲ್ಲ

ಸೀಯಾಳದ ನೀರು ಅಥ್ಲಿಟ್‌ಗಳಿಗೆ ಸೂಕ್ತವಾಗಿರುವ ಕ್ರೀಡಾಪಾನೀಯವಾಗಿದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಸೀಯಾಳದ ನೀರನ್ನು ಅಥ್ಲಿಟ್‌ಗಳಿಗೆ ಅಗತ್ಯವಾಗಿರುವ ಶಕ್ತಿವರ್ಧಕ ಪಾನೀಯಗಳೊಂದಿಗೆ ಹೋಲಿಸುವಂತಿಲ್ಲ. ಏಕೆಂದರೆ ಸೀಯಾಳದ ನೀರು ಕಡಿಮೆ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತದೆ.

► ತಾಜಾ ಆಗಿಯೇ ಸೇವಿಸಬೇಕು

ಸೀಯಾಳಕ್ಕೆ ರಂಧ್ರ ಮಾಡಿದ ಬಳಿಕ ನೀರನ್ನು ತಕ್ಷಣವೇ ಸೇವಿಸಿ. ಅದನ್ನು ಬಹಳ ಹೊತ್ತು ಹಾಗೆಯೇ ಇಡಬೇಡಿ. ಇದರಿಂದಾಗಿ ಅದರಲ್ಲಿಯ ಎಲ್ಲ ಅಗತ್ಯ ಪೌಷ್ಟಿಕಾಂಶಗಳು ನಷ್ಟವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News