ಬಳಕೆದಾರರ ಮಾಹಿತಿಯನ್ನು ಚೀನಾ ಸಂಸ್ಥೆಯೊಂದಿಗೆ ಹಂಚುತ್ತಿದೆಯೇ ಪೇಟಿಎಂ?

Update: 2018-03-29 13:45 GMT

 ಹೈದರಾಬಾದ್, ಮಾ.29: ಆಧಾರ್ ದತ್ತಾಂಶ ಸೋರಿಕೆ ಪ್ರಕರಣವು ಈಗಾಗಲೇ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಬಹುತೇಕ ಎಲ್ಲ ಸರಕಾರಿ ಸೇವೆಗಳು ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಕೂಡಾ ಗ್ರಾಹಕರಲ್ಲಿ ಆಧಾರ್ ಸಂಖ್ಯೆಯನ್ನು ಕೇಳುವುದು ಹೆಚ್ಚಾಗುತ್ತಿದ್ದಂತೆ ಗ್ರಾಹಕನ ಖಾಸಗಿ ಮಾಹಿತಿ ಸೋರಿಕೆಯಾಗುವ ಭೀತಿ ಕೂಡಾ ಹೆಚ್ಚಾಗಿದೆ. ಏತನ್ಮಧ್ಯೆ, ಡಿಜಿಟಲ್ ಪಾವತಿ ಆ್ಯಪ್ ಪೇಟಿಎಂ ತನ್ನ ಗ್ರಾಹಕರಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸುವಂತೆ ಆಗ್ರಹಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪೇಟಿಎಂ ಆ್ಯಪ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿ ತಿಳಿಸಲಾಗಿರುವ ಒಂದು ನಿಬಂಧನೆ ಇದೀಗ ವ್ಯಾಪಕ ಚರ್ಚೆಗೆ ಒಳಗಾಗಿದೆ. ಪೇಟಿಎಂ ಬಳಕೆದಾರರು ತಮ್ಮ ಮಾಹಿತಿಯನ್ನು ಈ ಸಂಸ್ಥೆಯ ಮಾತೃಸಂಸ್ಥೆಯಾದ ಒನ್97ಜೊತೆ ಮತ್ತು ಅದರ ಜೊತೆಗಾರರು ಹಾಗೂ ಸೇವೆಯನ್ನು ಒದಗಿಸುವವರ ಜೊತೆ ಹಂಚಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಹೀಗೆ ಪಡೆದ ಮಾಹಿತಿಯನ್ನು ಭಾರತದ ಒಳಗೆ ಅಥವಾ ಹೊರಗೆ ಸಂಸ್ಕರಿಸಲು ಮತ್ತು ಸಂಗ್ರಹಿಸಿಡಲು ಕೂಡಾ ಅನುಮತಿಯನ್ನು ಕೇಳುತ್ತದೆ. ಹಾಗಾದರೆ ಈ ಜೊತೆಗಾರ ಸಂಸ್ಥೆಗಳು ಯಾವುದು? ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಸಂಸ್ಥೆಯ ಅಧಿಕೃತ ವಕ್ತಾರ ನಿರಾಕರಿಸಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಚೀನಾದ ದೈತ್ಯ ಆನ್‌ಲೈನ್ ಸಂಸ್ಥೆ ಅಲಿಬಾಬಾ ಸಮೂಹದ ಜೊತೆಗಾರನಾಗಿರುವ ಆ್ಯಂಟ್ ಫೈನಾನ್ಶಿಯಲ್, ಪೇಟಿಎಂನಲ್ಲಿ ಶೇ. 40 ಪಾಲುದಾರಿಕೆಯನ್ನು ಹೊಂದಿದೆ. ಹಾಗಾಗಿ ಭಾರತೀಯ ಗ್ರಾಹಕರ ದತ್ತಾಂಶಗಳನ್ನು ಚೀನಾದ ಸಂಸ್ಥೆಯೊಂದಿಗೆ ಹಂಚಲಾಗುತ್ತಿದೆ ಎಂಬ ಅನುಮಾನ ಮೂಡುತ್ತದೆ ಎಂದು ಆಂಗ್ಲ ಪತ್ರಿಕೆಯೊಂದರ ವರದಿ ತಿಳಿಸಿದೆ.

ಕಾನೂನಾತ್ಮಕವಾಗಿ, ಪೇಟಿಎಂ ಭಾರತದಿಂದ ಹೊರಗೆ ಗ್ರಾಹಕರ ದತ್ತಾಂಶಗಳನ್ನು ಶೇಖರಿಸದಂತೆ ಮಾಡಲು ಯಾವುದೇ ಅವಕಾಶವಿಲ್ಲ. ಆದರೂ ಅದು 2011ರ ಐಟಿ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳುತ್ತಾರೆ ಸರ್ವೋಚ್ಚ ನ್ಯಾಯಾಲಯದ ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ನೀರಜ್ ಅರೋರಾ ತಿಳಿಸಿದ್ದಾರೆ.

ಆಧಾರ್ ಮಾಹಿತಿ ನೀಡಿದವರಿಗೆ 200 ರೂ. ಉಡುಗೊರೆ!

ಆಸಕ್ತಿದಾಯಕ ಅಂಶವೆಂದರೆ ಪೇಟಿಎಂನ ಕೆವೈಸಿ ದೃಢೀಕರಣದ ವೇಳೆ ಆಧಾರ್ ಸಂಖ್ಯೆಯನ್ನು ನಮೂದಿಸಿದ ಬಳಕೆದಾರರಿಗೆ ಸಂಸ್ಥೆಯು 200 ರೂ. ಕ್ಯಾಶ್‌ಬ್ಯಾಕ್ ನೀಡುತ್ತದೆ. ಆದರೆ ಇತರ ಗುರುತಿನ ಚೀಟಿ ನೀಡಿ ದೃಢೀಕರಣ ಪ್ರಕ್ರಿಯೆ ಪೂರ್ತಿಗೊಳಿಸುವವರಿಗೆ ಈ ಸೌಲಭ್ಯವಿಲ್ಲ. ಇಂಥ ಆಫರ್‌ಗಳನ್ನು ಇತರ ಪಾವತಿ ಆ್ಯಪ್‌ಗಳು ನೀಡಿದರೂ ಅದು ಕೇವಲ ಆಧಾರ್ ಸಂಖ್ಯೆಯ ಬದಲಾಗಿಯಲ್ಲ ಎಂಬುದು ಗಮನಾರ್ಹವಾಗಿದೆ. ಪಾವತಿ ಮತ್ತು ಒಪ್ಪಂದ ಕಾಯ್ದೆಯಡಿ ಪೇಟಿಎಂಗೆ ಬ್ಯಾಂಕ್ ಮಾನ್ಯತೆಯನ್ನು ನೀಡಲಾಗಿದೆ. ಅವರು ಸಂಗ್ರಹಿಸುತ್ತಿರುವ ದತ್ತಾಂಶ ಕಾನೂನುಬಾಹಿರವಾಗಿದೆ. ಫೇಸ್‌ಬುಕ್ ಮತ್ತು ಪೇಟಿಎಂ ಮಾಡುತ್ತಿರುವ ಉಲ್ಲಂಘನೆ ಒಂದೇ ರೀತಿಯದ್ದಾಗಿದೆ. ಎರಡೂ ಸಂಸ್ಥೆಗಳು ಅಗತ್ಯಕ್ಕಿಂತಲೂ ಹೆಚ್ಚಿನ ದತ್ತಾಂಶಗಳನ್ನು ಕಲೆ ಹಾಕುತ್ತಿವೆ. ಅದು ಕಾನೂನುಬಾಹಿರವಾಗಿದ್ದು ಅವುಗಳನ್ನು ಈ ಸಂಸ್ಥೆಗಳು ತಮ್ಮ ಅಂಗಸಂಸ್ಥೆಗಳ ಜೊತೆ ಹಂಚಿಕೊಳ್ಳುವಂತಿಲ್ಲ. ದತ್ತಾಂಶ ಸಂಗ್ರಹಕ್ಕೆ ನಾವು ಮಿತಿಯನ್ನು ಹೇರುವ ಅಗತ್ಯವಿದೆ ಎಂದು ಹೇಳುತ್ತಾರೆ ನೀರಜ್ ಅರೋರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News