ಈಜಿಪ್ಟ್: ಅಧ್ಯಕ್ಷರಾಗಿ ಸಿಸಿ ಪುನರಾಯ್ಕೆ
Update: 2018-03-29 23:15 IST
ಕೈರೋ (ಈಜಿಪ್ಟ್), ಮಾ. 29: ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್-ಸಿಸಿ 92 ಶೇಕಡ ಮತಗಳೊಂದಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಗುರುವಾರ ಪ್ರಾಥಮಿಕ ಫಲಿತಾಂಶಗಳು ತಿಳಿಸಿವೆ.
ಆದಾಗ್ಯೂ, ಕೇವಲ 40 ಶೇಕಡ ಮತದಾನವಾಗಿರುವುದು ಅವರ ವಿಜಯದ ಘನತೆಯನ್ನು ಕುಂದಿಸಿದೆ.
ಸೋಮವಾರದಿಂದ ಬುಧವಾರದವರೆಗೆ ನಡೆದ ಮೂರು ದಿನಗಳ ಮತದಾನದ ವೇಳೆ, 6 ಕೋಟಿ ನೋಂದಾಯಿತ ಮತದಾರರ ಪೈಕಿ ಕೇವಲ 2.3 ಕೋಟಿ ಮತದಾರರು ತಮ್ಮ ಮತಾಧಿಕಾರ ಚಲಾಯಿಸಿದ್ದಾರೆ.
ಅಧ್ಯಕ್ಷ ಹುದ್ದೆಗಾಗಿ ಸಿಸಿ ವಿರುದ್ಧ ಸ್ಪರ್ಧಿಸಿದ ಏಕೈಕ ಅಭ್ಯರ್ಥಿಯೆಂದರೆ ಮೂಸಾ ಮುಸ್ತಾಫ ಮೂಸಾ. ಸ್ವತಃ ಮೂಸಾ ಕೂಡ ಅಧ್ಯಕ್ಷ ಸಿಸಿಯ ಬೆಂಬಲಿಗರು. ಏಕ ಅಭ್ಯರ್ಥಿಯ ಚುನಾವಣೆಯಾಗುವುದನ್ನು ತಪ್ಪಿಸುವುದಕ್ಕಾಗಿ ಅವರು ಕೊನೆಯ ಕ್ಷಣದಲ್ಲಿ ಕಣಕ್ಕಿಳಿದವರು.
ಇತರ ಸಮರ್ಥ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ, ಬಂಧಿಸಲಾಗಿದೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲಾಗಿದೆ.