ಜೂ.6ರಂದು ಅಮೆರಿಕ ವೀಸಾ ದಿನ
ಹೊಸದಿಲ್ಲಿ,ಮಾ.29: ಜೂನ್ 6 ಈ ವರ್ಷದ ವೀಸಾ ದಿನವಾಗಿರಲಿದೆ ಎಂದು ಗುರುವಾರ ಇಲ್ಲಿ ಪ್ರಕಟಿಸಿದ ಅಮೆರಿಕದ ಕಾನ್ಸುಲ್ ಜನರಲ್ ಜಾರ್ಜ್ ಎಚ್.ಹಾಗ್‌ಮನ್ ಅವರು, ವೀಸಾ ಸಂದರ್ಶನದ ಸಮಯ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳುವಂತೆ ಮತ್ತು ನಿಜವಾದ ಉತ್ತರಗಳನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೀಸಾ ದಿನದಂದು ದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮತ್ತು ಚೆನ್ನೈ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈಗಳಲ್ಲಿರುವ ಅದರ ದೂತಾವಾಸಗಳು ಅಮೆರಿಕದಲ್ಲಿ ಉನ್ನತ ವ್ಯಾಸಂಗವನ್ನು ನಡೆಸಲು ಆಕಾಂಕ್ಷಿಗಳಾಗಿರುವ ಭಾರತೀಯರ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲೆಂದೇ ತೆರೆದಿರುತ್ತವೆ.
ಸಂದರ್ಶನದ ಸಂದರ್ಭದಲ್ಲಿ ಯಾವುದನ್ನೂ ಬಚ್ಚಿಡದಿರುವುದು ವಿದ್ಯಾರ್ಥಿಗಳ ಯಶಸ್ಸಿನ ಗುಟ್ಟು ಆಗಿದೆ ಎಂದು ಹೇಳಿದ ಹಾಗ್‌ಮನ್, ವಿದ್ಯಾರ್ಥಿಗಳು ಆತಂಕಗೊಂಡಿರುತ್ತಾರೆ ಎನ್ನುವದು ನಮಗೆ ಗೊತ್ತು. ಆದರೆ ಆ ಬಗ್ಗೆ ಚಿಂತೆ ಬೇಡ. ಅಂತಹ ಹಲವಾರು ವಿದ್ಯಾರ್ಥಿಗಳಿಗೆ ನಾವು ವೀಸಾಗಳನ್ನು ನೀಡಿದ್ದೇವೆ ಎಂದರು.
ಇಂದು ಅಮೆರಿಕದಲ್ಲಿ ವ್ಯಾಸಂಗ ನಡೆಸುತ್ತಿರುವ ಪ್ರತಿ ಆರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಓರ್ವ ಭಾರತೀಯನಾಗಿದ್ದಾನೆ ಎಂದ ಅವರು, 1,86,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದಾರೆ ಮತ್ತು ಇದು ಈವರೆಗಿನ ದಾಖಲೆಯ ಸಂಖ್ಯೆಯಾಗಿದೆ ಎಂದು ಕಳೆದ ವರ್ಷದ ವರದಿಯೊಂದನ್ನು ಉಲ್ಲೇಖಿಸಿ ತಿಳಿಸಿದರು.
ಪ್ರತಿ ವಿದ್ಯಾರ್ಥಿಗೆ ಸಂದರ್ಶನವು ಸರಾಸರಿಯಾಗಿ ಸುಮಾರು 30 ನಿಮಿಷಗಳ ಕಾಲ ನಡೆಯಬಹುದು ಮತ್ತು ಆತ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ, ಆಯ್ಕೆ ಮಾಡಿಕೊಂಡಿರುವ ಕೋರ್ಸ್‌ನ ಕುರಿತು ವಿವರಗಳು ಮತ್ತು ಅದಕ್ಕಾಗಿ ಹಣಕಾಸಿನ ಯೋಜನೆ ಕುರಿತು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿವೆ ಎಂದು ಕಾನ್ಸುಲರ್ ತಂಡದ ಅಧಿಕಾರಿಯೋರ್ವರು ತಿಳಿಸಿದರು.
ವೀಸಾ ಕೊಡಿಸುವುದಾಗಿ ಆಮಿಷವನ್ನೊಡ್ಡುವ ವಂಚಕ ಏಜೆಂಟ್‌ಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆಯೂ ಈ ತಂಡವು ವಿದ್ಯಾರ್ಥಿಗಳಿಗೆ ಸೂಚಿಸಿದೆ.