ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ: ಉತ್ತರಗಳಿಲ್ಲದ ಪ್ರಶ್ನೆಗಳು

Update: 2018-03-30 04:19 GMT

‘‘ತನ್ನನ್ನು ಪ್ರಧಾನಿಯಾಗಿ ಆರಿಸಬೇಡಿ, ಓರ್ವ ‘ಕಾವಲುಗಾರ’ನಾಗಿ ಆರಿಸಿ’’ ಎಂಬಂತಹ ಭಾವನಾತ್ಮಕ ಮಾತುಗಳಿಂದ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾದವರು ನರೇಂದ್ರ ಮೋದಿ. ಇವರು ಪ್ರಧಾನಿಯಾಗಿ ಆಯ್ಕೆಯಾದ ದಿನದಿಂದ, ಕಳ್ಳರೆಲ್ಲ ಒಬ್ಬೊಬ್ಬರಾಗಿ ದೇಶವನ್ನು ದೋಚಿ ವಿದೇಶಗಳಲ್ಲಿ ಅಡಗಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಸೋರಿಕೆಗಳು ಪ್ರತಿ ದಿನ ಮುಖ ಪುಟದ ಸುದ್ದಿಯಾಗುತ್ತಿವೆ. ನೋಟು ನಿಷೇಧ ತೀರ್ಮಾನವೇ ಈ ದೇಶದ ಬಹುದೊಡ್ಡ ಸೋರಿಕೆಯಾಗಿತ್ತು. ಇದರಿಂದಾಗಿ ನಡೆದಿರುವ ಅಕ್ರಮಗಳು ಇಂದು ದೇಶವನ್ನು ಆರ್ಥಿಕವಾಗಿ ತೀರಾ ತಳಮಟ್ಟಕ್ಕೆ ಒಯ್ದಿದೆ. ಇದರ ಜೊತೆಗೆ ಇವಿಎಂ ಸೋರಿಕೆ ದೇಶದ ಪ್ರಜಾಸತ್ತೆಯನ್ನೇ ಆತಂಕಕ್ಕೆ ದೂಡಿದೆ. ಇಂದಿಗೂ ಈ ದೇಶದ ಶೇ. 50ರಷ್ಟು ಜನ ಇವಿಎಂ ಕುರಿತಂತೆ ಭರವಸೆಯನ್ನು ಹೊಂದಿಲ್ಲ. ನೋಟು ನಿಷೇಧದ ಬಳಿಕ ‘ಡಿಜಿಟಲ್ ಬ್ಯಾಂಕಿಂಗ್’ ಬಗ್ಗೆ ನರೇಂದ್ರ ಮೋದಿ ಮಾತನಾಡ ತೊಡಗಿದರು. ಇದೀಗ ಆ್ಯಪ್‌ಗಳಲ್ಲಿರುವ ಮಾಹಿತಿಗಳೂ ಸೋರಿಕೆಯಾಗುತ್ತಿರುವುದು ಸುದ್ದಿಯಾಗುತ್ತಿವೆ. ಮೋದಿ ಆ್ಯಪ್‌ನ ಮಾಹಿತಿಗಳು ವಿದೇಶಕ್ಕೆ ಬಿಕರಿಯಾಗಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಬೆನ್ನಿಗೇ ಫೇಸ್‌ಬುಕ್ ಕೂಡ ಸೋರಿಕೆಗಾಗಿ ವಿಶ್ವಾದ್ಯಂತ ಸುದ್ದಿ ಮಾಡಿದೆ. ಆಧಾರ್ ಕಾರ್ಡ್‌ನ ಮಾಹಿತಿಗಳೂ ಅಪಾಯದಲ್ಲಿವೆ. ಒಂದು ರೀತಿಯಲ್ಲಿ ಪ್ರಜಾಸತ್ತೆಯ ಸೂರು ಎಲ್ಲೆಡೆಯಿಂದ ಸೋರ ತೊಡಗಿದೆ. ಇಷ್ಟೆಲ್ಲ ಸೋರಿಕೆಯಾಗುತ್ತಿದ್ದರೂ ಈ ದೇಶದ ‘ಕಾವಲುಗಾರ’ ಮಾತ್ರ ತುಟಿ ಬಿಚ್ಚುತ್ತಿಲ್ಲ. ಇದೀಗ ಇವೆಲ್ಲ ಸೋರಿಕೆಗಳ ನಡುವೆ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಮತ್ತೆ ಸೋರಿಕೆಯ ಕುರಿತಂತೆ ಜನಸಾಮಾನ್ಯರು ತಲೆಕೆಡಿಸುವಂತಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪಾಲಕರು ಈ ಸೋರಿಕೆಯಿಂದ ಕಂಗಾಲಾಗಿದ್ದು ಮುಂದೇನು? ಎಂಬ ಸ್ಥಿತಿಯಲ್ಲಿ ನಿಂತಿದ್ದಾರೆ.

 ಈ ಹಿಂದೆಲ್ಲ ರಾಜ್ಯ ನಡೆಸುವ ಪರೀಕ್ಷೆಗಳು ಸೋರಿಕೆಯಾಗಿ ವಿದ್ಯಾರ್ಥಿಗಳನ್ನು ಕಂಗಾಲುಗೊಳಿಸುತ್ತಿತ್ತು. ಈ ಹಿಂದೆ ಕರ್ನಾಟಕದಲ್ಲಿ ಎರಡೆರಡು ಬಾರಿ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಎರಡೆರಡು ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ ಇದೀಗ ದೇಶದಲ್ಲೇ ಮೊದಲ ಬಾರಿಗೆ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದುದರಿಂದ ಕೇಂದ್ರ ಸರಕಾರ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಈಗಾಗಲೇ 10 ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳಲ್ಲಿ ಮರು ಪರೀಕ್ಷೆ ನಡೆಸುವುದು ಅನಿವಾರ್ಯ ಎಂದು ಸಿಬಿಎಸ್‌ಇ ಹೇಳಿದೆ. ವೈಫಲ್ಯವನ್ನು ಸಿಬಿಎಸ್‌ಇಯ ಮುಖ್ಯಸ್ಥೆ ಅನಿತಾ ಕರ್ವಾಲ್ ಒಪ್ಪಿಕೊಂಡಿದ್ದಾರೆ. ಪರೀಕ್ಷೆ ನಡೆಸುವ ಎರಡು ದಿನ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ಮಂಡಳಿ ಮತ್ತು ಪೊಲೀಸರಿಗೆ ಅರಿವಿತ್ತು ಎನ್ನುವುದು ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ. ಅರ್ಥಶಾಸ್ತ್ರ ಪರೀಕ್ಷೆಯ ಎರಡು ದಿನಕ್ಕಿಂತ ಮುನ್ನ ಮಾರ್ಚ್ 23ರಂದು ಮಂಡಳಿ ಫ್ಯಾಕ್ಸ್ ಮೂಲಕ ಮಾಹಿತಿ ಸ್ವೀಕರಿಸಿತ್ತು. ವಿಪರ್ಯಾಸವೆಂದರೆ ಪರೀಕ್ಷೆಯನ್ನು ತಕ್ಷಣವೇ ಸಿಬಿಎಸ್‌ಇ ಹಿಂದೆಗೆದುಕೊಳ್ಳಬೇಕಾಗಿತ್ತು. ಆದರೆ ಹಾಗೆ ಮಾಡದೆ ಪರೀಕ್ಷೆ ನಡೆಸಿದ್ದೇ ಅಲ್ಲದೆ, ಪರೀಕ್ಷೆ ನಡೆದ ಒಂದು ದಿನದ ಬಳಿಕ ಮಾರ್ಚ್ 27ರಂದು ಪ್ರಕರಣ ದಾಖಲಿಸಿತು. ಮಂಡಳಿಯ ಈ ಬೇಜವಾಬ್ದಾರಿಯ ಫಲವಾಗಿ ವಿದ್ಯಾರ್ಥಿಗಳು ಇನ್ನೊಮ್ಮೆ ಪರೀಕ್ಷೆಯ ಒತ್ತಡವನ್ನು ಎದುರಿಸುವಂತಾಗಿದೆ. ಮಂಡಳಿಯೊಳಗಿರುವ ವ್ಯಕ್ತಿಗಳು ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಕೈವಾಡ ಇದರಲ್ಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಹುಶಃ ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡದೇ ಇದ್ದಿದ್ದರೆ ಈ ಲೋಪವನ್ನು ಮುಚ್ಚಿ ಹಾಕಿ, ಮಂಡಳಿ ಪರೀಕ್ಷೆಯನ್ನು ಮುಗಿಸಿ ಬಿಡುತ್ತಿತ್ತೋ ಏನೋ? ಹಾಗಾದರೆ ಮಂಡಳಿ ಯಾರನ್ನು ರಕ್ಷಿಸುವುದಕ್ಕಾಗಿ ಸೋರಿಕೆಯನ್ನು ಮುಚ್ಚಿಡಲು ಪ್ರಯತ್ನಿಸಿತು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮಂಡಳಿಯ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತ್ಯಗತ್ಯ.

 ಸಿಬಿಎಸ್‌ಇ ಪಠ್ಯಕ್ರಮಗಳು ಅತಿ ಕ್ಲಿಷ್ಟ ಮತ್ತು ವಿದ್ಯಾರ್ಥಿಗಳಿಗೆ ಅತ್ಯಧಿಕ ಒತ್ತಡಗಳನ್ನು ಹೇರುತ್ತವೆ ಎಂಬ ಆರೋಪಗಳಿವೆ. ಪರೀಕ್ಷೆ ಎದುರಾಗುವಾಗ ವಿದ್ಯಾರ್ಥಿಗಳು ತಮ್ಮೆಲ್ಲ ಮಾನಸಿಕ ಶ್ರಮವನ್ನು ಹಾಕಿ ಸಿದ್ಧರಾಗುತ್ತಾರೆ. ಪರೀಕ್ಷೆ ಬರೆದಾಕ್ಷಣ ಅವರು ಒಮ್ಮೆಲೇ ಹಗುರಾಗುತ್ತಾರೆ. ಪರೀಕ್ಷೆಯ ಒತ್ತಡದಿಂದ ಹೊರಬಂದು ಸಡಿಲಾಗುತ್ತಾರೆ. ಆದರೆ ಇವರೆಲ್ಲ ಶ್ರಮವನ್ನು ಕಾಲಕಸಗೊಳಿಸಿ ಮಂಡಳಿ ಇನ್ನೊಂದು ಪರೀಕ್ಷೆಯನ್ನು ಘೋಷಿಸಿದರೆ ಅವರ ಸ್ಥಿತಿ ಏನಾಗಬೇಕು? ಒಂದು ಪರೀಕ್ಷೆಯನ್ನು ಬರೆದ ಬಳಿಕವೂ ವಿದ್ಯಾರ್ಥಿಗಳು ನಿರಾಳವಾಗಿರುವುದಕ್ಕೆ ಸಾಧ್ಯವಿಲ್ಲ ಎನ್ನುವಂತಹ ಸನ್ನಿವೇಶ ಇದರಿಂದ ನಿರ್ಮಾಣವಾಗಿದೆ. ಇದೀಗ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಇನ್ನೂ ಕೆಲವು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಆದುದರಿಂದ ಎಲ್ಲ ಪರೀಕ್ಷೆಗಳನ್ನು ಮತ್ತೆ ನಡೆಸಬೇಕು ಎಂದು ಕೆಲವರು ಒತ್ತಾಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತೆ ಎಲ್ಲ ಪರೀಕ್ಷೆಗಳಿಗೆ ಓದಬೇಕಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಉಳಿದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಬೆಳಕಿಗೆ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಸೋರಿಕೆಯಾಗಿಲ್ಲ ಎಂದು ಹೇಳುವಂತಿಲ್ಲ. ಕೆಲವೊಮ್ಮೆ ಗುಟ್ಟಾಗಿ ಸೋರಿಕೆಯಾಗಿದ್ದು ಅದು ಬಾಹ್ಯ ಜಗತ್ತಿಗೆ ತಿಳಿಯದಿರಬಹುದು. ಇದರಿಂದಲೂ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಹೀಗಿರುವಾಗ, ಉಳಿದ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆಯೇ? ಇಲ್ಲವೇ? ಎನ್ನುವುದರ ಬಗ್ಗೆ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಇಂತಹ ಸೋರಿಕೆಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಅಸಹಾಯಕರಾಗಬೇಕಾಗುತ್ತದೆ. ಅತ್ಯಂತ ಶ್ರಮವಹಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತದೆ. ಇದರ ಜೊತೆ ಜೊತೆಗೆ ಎರಡೆರಡು ಬಾರಿ ಪರೀಕ್ಷೆ ಬರೆಯುವ ಶಿಕ್ಷೆ ಬೇರೆ.

ಪ್ರಕರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಸೋರಿಕೆಯಲ್ಲಿ ಮಂಡಳಿಯ ಹಿರಿಯ ಅಧಿಕಾರಿಗಳು ಪಾಲುದಾರರಾಗಿರುವ ಬಗ್ಗೆ ಈಗಾಗಲೇ ಮಾತುಗಳು ಕೇಳಿ ಬರುತ್ತಿವೆ. ರಾಜಕಾರಣಿಗಳ ಭಾಗೀದಾರಿಕೆಯನ್ನು ಅಲ್ಲಗಳೆಯುವಂತಿಲ್ಲ. ಆದುದರಿಂದ, ಉನ್ನತ ತನಿಖಾ ಸಂಸ್ಥೆಯಿಂದ ತನಿಖೆಯೊಂದು ನಡೆಯುವ ಅಗತ್ಯವಿದೆ. ಇದರ ಹಿಂದಿರುವ ಕಾಣದ ಕೈಗಳನ್ನು ಗುರುತಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಈ ಸೋರಿಕೆ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡಬಹುದು. ಅದು ಶಿಕ್ಷಣ ವ್ಯವಸ್ಥೆಯನ್ನೇ ಕುಲಗೆಡಿಸುವ ಮಟ್ಟಕ್ಕೆ ತಲುಪಬಹುದು. ಆದುದರಿಂದ ಸೋರಿಕೆಯಾದ ಜಾಗವನ್ನು ಗುರುತಿಸಿ ಅದನ್ನು ತಕ್ಷಣ ಸರಿಪಡಿಸುವುದಲ್ಲದೆ, ಮುಂದೆ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕ್ರಮ ತೆಗೆದುಕೊಳ್ಳುವುದು ಸಿಬಿಎಸ್‌ಇ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News