ದೇಶಾದ್ಯಂತ ಬೀಸಲಿದೆ ಬಿಸಿಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ

Update: 2018-03-30 03:39 GMT

ಹೊಸದಿಲ್ಲಿ, ಮಾ.30: ರಾಜಧಾನಿ ಹಾಗೂ ಉತ್ತರ ಭಾರತದ ಜನ ಮುಂದಿನ ದಿನಗಳಲ್ಲಿ ಭೀಕರ ಬಿಸಿಗಾಳಿಯ ಬೇಗೆಯಿಂದ ಬಳಲುವ ಸಾಧ್ಯತೆ ಇದೆ. ಆದರೆ ಈ ಹವಾಮಾನ ವೈಪರೀತ್ಯ ಅಲ್ಪಾವಧಿಯದ್ದಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.

ಬಿಸಿಗಾಳಿಯ ಸ್ಥಿತಿ, ಹೊಸದಿಲ್ಲಿ ಕೇಂದ್ರಿತವಾಗಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಮತ್ತು ಈಶಾನ್ಯ ರಾಜಸ್ಥಾನ, ಉತ್ತರ ಮಧ್ಯಪ್ರದೇಶಗಳಲ್ಲಿ ರೂಪುಗೊಳ್ಲುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟನೆಯಲ್ಲಿ ಹೇಳಿದೆ.

ಸಾಮಾನ್ಯವಾಗಿ ಮಾಮೂಲಿ ಹವಾಮಾನ ಸ್ಥಿತಿಗಿಂತ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ದಾಖಲಾಗುವುದನ್ನು ಹವಾಮಾನ ಇಲಾಖೆ ಬಿಸಿಗಾಳಿ ಎಂದು ಪರಿಗಣಿಸಿ ಎಚ್ಚರಿಕೆ ನೀಡುತ್ತದೆ.

ಉತ್ತರ ರಾಜ್ಯಗಳಲ್ಲಿ ಈಗಾಗಲೇ ಮಾಮೂಲಿಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ಮಾರ್ಚ್‌ನಿಂದ ಮೇ ವರೆಗೆ ಇರುವ ಸರಾಸರಿ ಉಷ್ಣಾಂಶಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಬೆಟ್ಟ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಚಳಿಗಾಲದಲ್ಲಿ ಕಡಿಮೆ ಮಳೆ ಬಿದ್ದಿರುವುದು ಮತ್ತು ಕಳೆದ ತಿಂಗಳಲ್ಲಿ ಮಳೆಯಾಗದಿರುವುದು ಗರಿಷ್ಠ ಉಷ್ಣಾಂಶಕ್ಕೆ ಮೂಲ ಕಾರಣ ಎಂದು ಇಲಾಖೆಯ ವಿಜ್ಞಾನಿ ಕುಲದೀಪ್ ಶ್ರೀವಾಸ್ತವ ಹೇಳುತ್ತಾರೆ.

ದಿಲ್ಲಿಯ ಉಷ್ಣಾಂಶ ಮುಂದಿನ ಕೆಲ ದಿನಗಳವರೆಗೆ 35 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇರಲಿದೆ. ಎಪ್ರಿಲ್ 2ರ ಬಳಿಕ ಇದು ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಸ್ಕೈಮೆಟ್ ಎಂಬ ಖಾಸಗಿ ಹವಾಮಾನ ಮುನ್ಸೂಚನೆ ಏಜೆನ್ಸಿಯ ತಜ್ಞ ಮಹೇಶ್ ಪಲವಟ್ ಹೇಳುವಂತೆ, "ತೇವಾಂಶದಿಂದ ಕೂಡಿದ ಪೂರ್ವಮುಖಿ ಗಾಳಿಯಿಂದಾಗಿ ಉಷ್ಣಾಂಶ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೆ ಎಪ್ರಿಲ್ 3-4ರ ಬಳಿಕ ಗಾಳಿಯ ದಿಕ್ಕು ಬದಲಾಗುವುದರಿಂದ ಇದು ಹೆಚ್ಚಲಿದೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News